ಎನ್‌ಡಿಎ ಒಕ್ಕೂಟಕ್ಕೆ ಅನುಕೂಲಕರ ಪರಿಸ್ಥಿತಿಯಿದ್ದರೂ, ಬೆಲೆ ಏರಿಕೆ, ನಿರುದ್ಯೋಗ ಮತ್ತು ಇಳಿಯುತ್ತಿರುವ ಆದಾಯದ ಪ್ರಮಾಣದಂತಹ ಅಂಶಗಳು ಅದಕ್ಕೆ ಸವಾಲಾಗಲಿವೆ ಎನ್ನುವ ಅಂಶ ಆರ್‍ಬಿಐ ನಡೆಸಿದ ಸಮೀಕ್ಷೆಯಿಂದಲೂ ಬಹಿರಂಗವಾಗಿದೆ…
ಜೀವನೋಪಾಯದ ಪ್ರಶ್ನೆ 2024ರ ಚುನಾವಣೆಯ ಬಹುಮುಖ್ಯವಾದ ವಿಚಾರವಾಗಲಿದೆ ಎಂದಿದ್ದ ಸಿಎಸ್‌ಡಿಎಸ್-ಲೋಕನೀತಿ ಚುನಾವಣಾಪೂರ್ವ ಸಮೀಕ್ಷೆಯ ವರದಿಯನ್ನು ಆರ್‌ಬಿಐ 2024ರ ಮಾರ್ಚ್ ತಿಂಗಳಲ್ಲಿ ನಡೆಸಿದ ಬಳಕೆದಾರರ ಆತ್ಮವಿಶ್ವಾಸದ ಕುರಿತಾದ ಸಮೀಕ್ಷೆ ಪುಷ್ಟೀಕರಿಸಿದೆ.
ಸಿಎಸ್‌ಡಿಎಸ್-ಲೋಕನೀತಿ ಸಮೀಕ್ಷೆಯು ಎನ್‌ಡಿಎ ಒಕ್ಕೂಟಕ್ಕೆ ಅನುಕೂಲಕರ ಪರಿಸ್ಥಿತಿಯಿದ್ದರೂ, ಬೆಲೆ ಏರಿಕೆ, ನಿರುದ್ಯೋಗ ಮತ್ತು ಇಳಿಯುತ್ತಿರುವ ಆದಾಯದ ಪ್ರಮಾಣದಂತಹ ಅಂಶಗಳು ಅದಕ್ಕೆ ಸವಾಲಾಗಲಿವೆ ಎಂದು ತಿಳಿಸಿತ್ತು. ಲೋಕನೀತಿಯ ಸಮೀಕ್ಷೆಯಲ್ಲಿ ಶೇ. 32ರಷ್ಟು ಮಂದಿ ಹೆಚ್ಚುತ್ತಿರುವ ನಿರುದ್ಯೋಗವನ್ನು ತಾವು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದಿದ್ದರೆ, ಶೇ. 20ರಷ್ಟು ಮಂದಿ ಬೆಲೆ ಏರಿಕೆಯನ್ನು, ಶೇ. 11ರಷ್ಟು ಮಂದಿ ಇಳಿಯುತ್ತಿರುವ ಆದಾಯದ ಪ್ರಮಾಣವನ್ನು ಸಮಸ್ಯೆ ಎಂದು ಕರೆದಿದ್ದರು. ಆರ್‌ಬಿಐ 2024ರ ಮಾರ್ಚ್ 2-8ರ ನಡುವೆ ದೇಶದ 19 ನಗರಗಳಿಗೆ ಸೇರಿದ 6083 ಜನರನ್ನು ಸಮೀಕ್ಷೆಗೆ ಒಳಪಡಿಸಿದಾಗ ದೊರೆತಿರುವ ಅಂಕಿಅಂಶಗಳು, ಹೆಚ್ಚು ಕಡಿಮೆ ಸಿಎಸ್‌ಡಿಎಸ್-ಲೋಕನೀತಿಯ ಸಮೀಕ್ಷೆ ಪತ್ತೆಹಚ್ಚಿದ ವಿಚಾರಗಳನ್ನೇ ಪುಷ್ಟೀಕರಿಸಿವೆ.
ಇದನ್ನು ಓದಿದ್ದೀರಾ?: ಲೋಕ ನೀತಿ – ಸಿಎಸ್‌ಡಿಎಸ್ ಚುನಾವಣಾ ಸಮೀಕ್ಷೆ 3: ಮೋದಿ ಆಡಳಿತ ಕುರಿತು ತೃಪ್ತಿಯೂ ಇದೆ, ಅತೃಪ್ತಿಯೂ ಇದೆ
ಉದ್ಯೋಗದ ಅವಕಾಶಗಳು
ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ. 38 ಮಂದಿ ಕಳೆದ ಒಂದು ವರ್ಷಕ್ಕೆ ಹೋಲಿಸಿದರೆ ಉದ್ಯೋಗದ ಅವಕಾಶಗಳು ಕುಂಠಿತಗೊಂಡಿವೆ ಎಂದರೆ, ಅಷ್ಟೇ ಪ್ರಮಾಣದ ಮಂದಿ ಉದ್ಯೋಗದ ಅವಕಾಶಗಳು ಹೆಚ್ಚಾಗಿವೆ ಎಂದಿದ್ದಾರೆ. ಉಳಿದ ಶೇ. 24 ಮಂದಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ. ಈ ಅಂಕಿಸಂಖ್ಯೆಗಳನ್ನು ಅರ್ಥೈಸಿಕೊಳ್ಳುವಾಗ, ಕಳೆದ ವರ್ಷ ಕೋವಿಡ್-19ರ ಪರಿಣಾಮದಿಂದ ನಲುಗಿದ್ದ ಬಳಕೆದಾರರ ಆತ್ಮವಿಶ್ವಾಸ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದ ವರ್ಷವಾಗಿದ್ದರಿಂದ ಅದು ಅತ್ಯಂತ ಕನಿಷ್ಠ ಬೇಸ್ ವ್ಯಾಲ್ಯೂ ಹೊಂದಿತ್ತೆನ್ನುವುದನ್ನು ಗಮನಿಸಬೇಕಿದೆ. ಕೋವಿಡ್ ಪೂರ್ವ ಸ್ಥಿತಿಗೆ ಬಳಕೆದಾರರ ಆತ್ಮವಿಶ್ವಾಸ ಈಗ ಬಂದಿದೆ ಎನ್ನುವುದರ ಜೊತೆಗೆ, ಮೂರನೇ ಒಂದು ಭಾಗದಷ್ಟು ಮಂದಿ ನಿರಾಶಾವಾದಿ ಸ್ಥಿತಿಯಲ್ಲಿದ್ದಾರೆನ್ನುವುದನ್ನು ಗಮನಿಸಬೇಕಿದೆ.
ಆದಾಯದ ಪ್ರಮಾಣ
ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ.27 ಮಂದಿ ಆದಾಯದಲ್ಲಿ ಏರಿಕೆ ಕಂಡಿದ್ದೇವೆ ಎಂದರೆ, ಶೇ. 22 ಮಂದಿ ಆದಾಯದಲ್ಲಿ ಇಳಿಕೆ ಅನುಭವಿಸಿದ್ದೇವೆ ಎಂದಿದ್ದಾರೆ. ಉಳಿದ ಶೇ. 51 ಮಂದಿ ಯಾವುದೇ ಏರಿಕೆಯಾಗಲೀ ಇಳಿಕೆಯಾಗಲೀ ಇಲ್ಲ ಎಂದು ಉತ್ತರಿಸಿದ್ದಾರೆ. ಪ್ರತಿ ವರ್ಷ ಅಗತ್ಯವಸ್ತುಗಳ ಬೆಲೆಗಳು ಏರಿಕೆ ಕಾಣುತ್ತಿರುವ ಕಾಲಘಟ್ಟದಲ್ಲಿ ಇದು ಬಹಳ ಮುಖ್ಯವಾದ ಅಂಶವಾಗುತ್ತದೆ.
ಬೆಲೆ ಏರಿಕೆ
ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ. 90 ಮಂದಿ ವಸ್ತುಗಳ ಬೆಲೆಗಳು ಏರಿಕೆ ಕಂಡಿವೆ ಎಂದರೆ, ಕೇವಲ ಶೇ. 1ರಷ್ಟು ಮಂದಿ ಮಾತ್ರ ಇಳಿಕೆ ಕಂಡಿವೆ ಎಂದಿದ್ದಾರೆ. ಉಳಿದ ಶೇ. 9ರಷ್ಟು ಮಂದಿ ಯಾವುದೇ ವ್ಯತ್ಯಾಸವಾಗಿಲ್ಲ ಎಂದಿದ್ದಾರೆ. ಆದಾಯದ ಪ್ರಮಾಣದ ಕುರಿತು ವ್ಯಕ್ತವಾಗಿರುವ ಅಂಕಿಅಂಶವನ್ನು ಬೆಲೆ ಏರಿಕೆಯ ಜೊತೆಗೆ ಸಮೀಕರಿಸಿ ನೋಡಿದಾಗ, ಶೇ. 72ರಷ್ಟು ಮಂದಿ ಆದಾಯದಲ್ಲಿ ಇಳಿಕೆಯಾಗಿದೆ ಎನ್ನುವುದು ಗೋಚರಿಸುತ್ತದೆ. ಹಾಗೆ ಶೇ. 90 ಮಂದಿ ಕಳೆದ ವರ್ಷಕ್ಕೆ ಹೋಲಿಸಿದರೆ ವಸ್ತುಗಳ ಬೆಲೆ ಸಾಕಷ್ಟು ಏರಿವೆ ಎಂದಿದ್ದಾರೆ. ಹೀಗಾಗಿ, ಸಿಎಸ್‌ಡಿಎಸ್-ಲೋಕನೀತಿ ಸಮೀಕ್ಷೆಯಲ್ಲಿ ಆರ್ಥಿಕ ವಿಚಾರಗಳು ಪ್ರಮುಖ ಪ್ರಶ್ನೆಯಾಗಲಿವೆ ಎನ್ನುವುದು ಏಕೆ ವ್ಯಕ್ತವಾಗಿತ್ತು ಎನ್ನುವುದಕ್ಕೆ ಪುರಾವೆ ದೊರೆಯುತ್ತದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬೆಲೆ ಏರಿಕೆ, ನಿರುದ್ಯೋಗವೇ ಚುನಾವಣೆ ವಿಷಯ; ಎಚ್ಚೆತ್ತ ಮತದಾರರು
ಒಟ್ಟಾರೆ ಆರ್ಥಿಕ ಪರಿಸ್ಥಿತಿ:
ದೇಶದ ಒಟ್ಟಾರೆ ಆರ್ಥಿಕ ಪರಿಸ್ಥಿತಿ ಕಳೆದ ವರ್ಷಕ್ಕೆ ಹೋಲಿಸಿದರೆ ಸುಧಾರಣೆ ಕಂಡಿದೆ ಎಂದು ಶೇ. 41 ಮಂದಿ ಹೇಳಿದರೆ, ಶೇ. 36 ಮಂದಿ ಹಿನ್ನೆಡೆ ಕಂಡಿದೆ ಎಂದಿದ್ದಾರೆ. ಒಟ್ಟಾರೆ ಬಳಕೆದಾರರ ಆತ್ಮವಿಶ್ವಾಸದ ಪ್ರಮಾಣ ಕೋವಿಡ್ ಪೂರ್ವ ಪರಿಸ್ಥಿತಿಗೆ ಬಂದಿದ್ದರೂ, 2019ರ ನಂತರ ಒಟ್ಟಾರೆ ಆರ್ಥಿಕ ಸ್ಥಿತಿ ಹಿಂಜರಿತದ ಸ್ಥಿತಿಯಲ್ಲಿರುವುದನ್ನು ಗಮನಿಸಬೇಕಿದೆ. 2015-17ರಲ್ಲಿದ್ದ ಸ್ಥಿತಿಗೆ ಆತ್ವವಿಶ್ವಾಸದ ಪ್ರಮಾಣ ಇನ್ನೂ ತಲುಪಿಲ್ಲವೆನ್ನುವುದನ್ನು ಗಮನಿಸಬೇಕಿದೆ.
(‘ದ ಹಿಂದು’ ಏಪ್ರಿಲ್ 17, 2024ರ ಸಂಚಿಕೆಯಲ್ಲಿ ಪ್ರಕಟ)