ಆಸ್ತಿ ಸಂಪಾದನೆ ಮತ್ತಿತರ ವಿಚಾರಗಳ ಬಗ್ಗೆ ಕುಮಾರಸ್ವಾಮಿ ನನ್ನ ಸವಾಲು ಸ್ವೀಕರಿಸಿದ್ದರೆ ಚುನಾವಣೆ ನಂತರ ಅಧಿವೇಶನದಲ್ಲಿ ಚರ್ಚಿಸೋಣ ಎಂದು ಮಾಜಿ ಸಿಎಂಗೆ ಎಚ್ ಡಿ ಕುಮಾರಸ್ವಾಮಿ ಅವರಿಗೆ ಡಿಸಿಎಂ ಡಿ ಕೆ ಶಿವಕುಮಾರ್ ಪ್ರತಿ ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, “ವೈಯಕ್ತಿಕವಾಗಿ ಆಧಾರರಹಿತ ಟೀಕೆ ಮಾಡಿದರೆ ಅದೇ ಧಾಟಿಯಲ್ಲಿ ಉತ್ತರ ಕೊಡುವೆ. ನನಗೆ ಗೌರವ ಕೊಟ್ಟರೆ ನಾನೂ ಗೌರವ ಕೊಡುತ್ತೇನೆ” ಎಂದು ಎಚ್ಚರಿಸಿದರು.
”ಕುಮಾರಸ್ವಾಮಿಗೆ ವೈಯಕ್ತಿಕವಾಗಿ ಗೌರವ ಕೊಡುತ್ತೇನೆ. ಆದರೆ, ಬಂಡೆ ಒಡೆದ, ವಿಷ ಹಾಕಿದ, ಹೆಣ್ಣುಮಕ್ಕಳನ್ನು ಕಿಡ್ನಾಪ್ ಮಾಡಿ ಜಮೀನು ಬರೆಸಿಕೊಂಡ ಎಂದೆಲ್ಲಾ ವೈಯಕ್ತಿಕ ಮಟ್ಟದಲ್ಲಿ ಟೀಕೆ ಮಾಡಿದ್ದಕ್ಕೆ ನಾನೂ ಅದೇ ರೀತಿ ಉತ್ತರ ಕೊಟ್ಟಿದ್ದೇನೆ” ಎಂದು ಸಮರ್ಥಿಸಿಕೊಂಡರು.
”ಮಹಿಳೆಯರ ಬಗ್ಗೆ ತಮ್ಮ ಅಗೌರವಯುತ ನುಡಿಮುತ್ತು ಮರೆಮಾಚಲು ಕುಮಾರಸ್ವಾಮಿ ನನ್ನ ವಿರುದ್ಧ ಅಪಾರ್ಟ್‌ಮೆಂಟ್ ನಿವಾಸಿಗಳಿಂದ ಕಲೆಕ್ಷನ್‌ನಂತಹ ಆರೋಪ ಮಾಡಿದ್ದಾರೆ. ಕುಮಾರಸ್ವಾಮಿಯವರು ಮಹಿಳೆಯರಿಗೆ ಅವಮಾನ ಮಾಡಿದ್ದ ಬಗ್ಗೆ ಯಡಿಯೂರಪ್ಪ, ಅಶೋಕ್ ಸೇರಿ ಯಾರೊಬ್ಬರೂ ಬಾಯಿ ಬಿಡುತ್ತಿಲ್ಲ ಏಕೆ” ಎಂದು ಪ್ರಶ್ನಿಸಿದರು.
“ಒಂದು ಕಾಲದಲ್ಲಿ ನಾನು ಬಂಡೆ ಒಡೆದಿದ್ದರೆ ಅದು ನನ್ನ ಜಮೀನಿನಲ್ಲಿ ಕಾನೂನುಬದ್ಧವಾಗಿ ಒಡೆದಿದ್ದೇನೆ. ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಸಮುದಾಯದ ದೃಷ್ಟಿಯಿಂದ ನಾನು ಕುಮಾರಸ್ವಾಮಿ ಅವರಿಗೆ ಗೌರವ ಕೊಟ್ಟು ಅವರು ಏನೇ ಹೇಳುತ್ತಿದ್ದರೂ ಸಹಿಸಿಕೊಂಡು ಬಂದಿದ್ದೆ” ಎಂದರು.