2024ರ ಲೋಕಸಭೆ ಚುನಾವಣೆಗೆ ಮೊದಲ ಹಂತದ ಮತದಾನ ಇನ್ನೆರಡು ದಿನಗಳಲ್ಲಿ (ಏಪ್ರಿಲ್ 19) ನಡೆಯಲಿದೆ. ಮಹಾರಾಷ್ಟ್ರದ ನಾಗ್ಪುರ ಕ್ಷೇತ್ರದಲ್ಲಿಯೂ ಅಂದು ಮತದಾನ ನಡೆಯಲಿದೆ. ಪ್ರಚಾರಕ್ಕೆ ಬುಧವಾರ (ಏ.17) ತೆರೆಬೀಳಲಿದೆ. ಹೀಗಾಗಿ, ಕ್ಷೇತ್ರದಲ್ಲಿ ಎಲ್ಲ ಪಕ್ಷಗಳ ಪ್ರಚಾರದ ಅಬ್ಬರ ತಾರಕ್ಕೇರಿದೆ.
‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಶಿವಸೇನೆಯ (ಉದ್ದವ್ ಬಣ) ವಿಕಾಶ್ ಠಾಕ್ರೆ ಕಣದಲ್ಲಿದ್ದಾರೆ. ಬಿಜೆಪಿಯಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ಸ್ಪರ್ಧಿಸಿದ್ದಾರೆ. ನಾಗ್ಪುರ ಕ್ಷೇತ್ರದಲ್ಲಿ ಗಡ್ಕರಿ 3ನೇ ಬಾರಿಗೆ ಕಣಕ್ಕಿಳಿದಿದ್ದಾರೆ.
ನಾಗ್ಪುರದ ನಾನಾ ಪ್ರದೇಶಗಳಲ್ಲಿ ಬಿಜೆಪಿ ಪ್ರಚಾರ ಪೋಸ್ಟರ್‌ಗಳನ್ನು ರಾರಾಜಿಸುತ್ತಿವೆ. ಕುತೂಹಲಕಾರಿ ವಿಷಯವೆಂದರೆ, ಆ ಎಲ್ಲ ಪೋಸ್ಟರ್, ಫ್ಲೆಕ್ಸ್, ಬ್ಯಾನರ್‌ಗಳಲ್ಲಿ ಮೋದಿ ಫೋಟೋಗಳೇ ತುಂಬಿವೆ. ಇಲ್ಲಿಯೂ ಗಡ್ಕಿಯವರ ಚಿತ್ರ ಕಾಣಿಸುತ್ತಲೇ ಇಲ್ಲ.
2014 ಮತ್ತು 2019ರಲ್ಲಿ ನಗ್ಪುರದಲ್ಲಿ ಸ್ಪರ್ಧಿಸಿ ಗೆದ್ದಿದ್ದ ಗಡ್ಕರಿ, ಈಗ ಮತ್ತೆ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಆದರೂ, ಅವರ ತಮ್ಮ ಹೆಸರಿನಲ್ಲಿ ಪ್ರಚಾರ ಮಾಡುತ್ತಿಲ್ಲ ಎಂಬುದನ್ನು ಈ ಚಿತ್ರಗಳು ಹೇಳುತ್ತಿವೆ. ಇಡೀ ಕ್ಷೇತ್ರದಲ್ಲಿ ಗಡ್ಕರಿ ಅವರ ಚಿತ್ರಗಳು ಕಾಣದಾಗಿವೆ. ಎಲ್ಲೆಡೆ ಮೋದಿ ಚಿತ್ರ ಬೃಹದಾಕಾರದಲ್ಲಿ ರಾರಾಜಿಸುತ್ತಿವೆ.
ನಗ್ಪುರದಲ್ಲಿ ಹಾಕಲಾಗಿರುವ ಬಿಜೆಪಿಯ ಎಲ್ಲ ಪೋಸ್ಟರ್‌ಗಳಲ್ಲಿ’ಮೋದಿ ಗ್ಯಾರಂಟಿ’ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಉಲ್ಲೇಖಿಸಲಾಗಿದೆ. ಇಂತಹ ಪೋಸ್ಟರ್‌ಗಳು ನಗರದ ಕಟೋಲ್ ನಾಗ್‌ಪುರ ರಸ್ತೆ, ಅಗ್ರಸೇನ್ ಚೌಕ್, ವಾರ್ಧಾ ರಸ್ತೆ ಹಾಗೂ ನಗರದ ಇತರ ಜನನಿಬಿಡ ಸ್ಥಳಗಳಲ್ಲಿ ಹೇರಳವಾಗಿ ಕಾಣಿಸುತ್ತಿವೆ.
ಗಡ್ಕರಿ ಅವರು ಭಾರೀ ಜನಪ್ರಿಯ ವ್ಯಕ್ತಿಯಾಗಿದ್ದರೂ ಕೂಡ ಅವರ ಚಿತ್ರಗಳು ಎಲ್ಲಿಯೂ ಕಾಣಿಸುತ್ತಿಲ್ಲ. ಅವರ ಹೆಸರಿನಲ್ಲಿ ನಾಗ್ಪುರದಲ್ಲಿ ಪ್ರಚಾರವೂ ನಡೆಯುತ್ತಿರುವಂತೆ ಕಾಣಣುತ್ತಿಲ್ಲ. ಹೀಗಾಗಿ, ಕ್ಷೇತ್ರದ ಜನರಲ್ಲಿ ತಮ್ಮ ಕ್ಷೇತ್ರದಲ್ಲಿನ ಅಭ್ಯರ್ಥಿ ಯಾರು ಎಂಬ ಗೊಂದಲು ಸೃಷ್ಟಿಯಾಗಿದೆ.
“ಕ್ಷೇತ್ರದಲ್ಲಿ ಯಾರು ಸ್ಪರ್ಧಿಸಿದ್ದಾರೆ? ನರೇಂದ್ರ ಮೋದಿಯೋ ಅಥವಾ ನಿತಿನ್ ಗಡ್ಕರಿಯೋ? ಎಂಬುದು ನಮಗೆ ಖಚಿತವಾಗಿ ತಿಳಿಯುತ್ತಿಲ್ಲ. ಗಡ್ಕರಿ ಅವರು 10 ವರ್ಷದಿಂದ ಸಂಸದರಾಗಿದ್ದರೂ, ಅವರು ಎಲ್ಲಿಯೂ ಕಾಣುತ್ತಿಲ್ಲ” ಎಂದು ಕ್ಷೇತ್ರದ ಮತದಾರರು ಹೇಳುತ್ತಿದ್ದಾರೆ.
ಚಿತ್ರ ಕೃಪೆ: ದಿ ವೈರ್