ಬೆಳೆ ವಿಮೆ ಯೋಜನೆಯಡಿ ಬೀದರ ಜಿಲ್ಲೆಯಲ್ಲಿ 1,200 ಕೋಟಿ ರೂ.ಪರಿಹಾರ ನೀಡಲಾಗಿದೆ ಎಂದು ಸುಳ್ಳು ಹೇಳಿ ಸಂಸದ ಭಗವಂತ ಖೂಬಾ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಆರೋಪಿಸಿದರು.
ಬೀದರ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, “ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಬೆಳೆ ವಿಮೆ ಯೋಜನೆಗೆ ಬೀದರ್ ಜಿಲ್ಲೆಯ ರೈತರು ಕಟ್ಟಿರುವ ಕಂತು ಎಷ್ಟು? ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಕಂತಿನ ಪಾಲು ಎಷ್ಟು? ವಿಮಾ ಕಂಪನಿಗಳು ಒಟ್ಟು ಎಷ್ಟು ಹಣ ಸಂಗ್ರಹಿಸಿ, ಎಷ್ಟು ಪರಿಹಾರ ನೀಡಿದ್ದಾರೆ? ಎಂದು ಬಹಿರಂಗ ಪಡಿಸಲಿ. ಆಗ ವಿಮಾ ಕಂಪನಿಗಳು 650 ಕೋಟಿ ರೂ. ಲಾಭ ಮಾಡಿಕೊಂಡಿರುವುದು ಬಹಿರಂಗವಾಗುತ್ತದೆ” ಎಂದು ಸವಾಲು ಹಾಕಿದರು.
“ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಜಾರಿಗೆ ತಂದಿರುವುದೇ ಬೆಳೆ ಬೆಳೆ ವಿಮಾ ಕಂಪನಿಗಳ ಉದ್ಧಾರಕ್ಕಾಗಿಯೇ ಹೊರತು, ಬಡ ರೈತರ ಬದುಕು ಹಸನು ಮಾಡಲು ಅಲ್ಲ. ಭಗವಂತ ಖೂಬಾ ತಮ್ಮ ನಾಮಪತ್ರ ಸಲ್ಲಿಕೆ ವೇಳೆ ಸುಳ್ಳುಗಳ ಸರಮಾಲೆಯನ್ನೇ ಹೆಣೆದಿದ್ದಾರೆ. ಕೇಂದ್ರದಿಂದ 1 ಲಕ್ಷ ಕೋಟಿ ರೂಪಾಯಿ ಅನುದಾನ ತಂದು ಬೀದರ ಕ್ಷೇತ್ರದ ಅಭಿವೃದ್ಧಿ ಮಾಡಿರುವುದಾಗಿ ಹೇಳಿದ್ದಾರೆ. 1 ಲಕ್ಷ ಕೋಟಿ ಅನುದಾನ ತಂದಿದ್ದರೆ, ಕೆಲಸ ಮಾಡಿದ್ದರೆ ಅದು ಕಣ್ಣಿಗೆ ಕಾಣಬೇಕಲ್ಲ? ಎಲ್ಲಿ ಕೈಗಾರಿಕೆ ಕಟ್ಟಿದ್ದಾರೆ? ತಮ್ಮ ಸುಳ್ಳುಗಳಿಗೆ ಈ ಬಾರಿ ಜನ ತಕ್ಕ ಪಾಠ ಕಲಿಸಲಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತರ ಹಣ ಲೂಟಿ ಹೊಡೆದಿರುವ ಭಗವಂತ ಖೂಬಾ :
“ತಮ್ಮದೇ ಪಕ್ಷದ ರಾಜ್ಯ ಸರ್ಕಾರ ಇದ್ದಾಗ, ತಮ್ಮ ಪ್ರಭಾವ ಬೀರಿ ಭಗವಂತ ಖೂಬಾ ತಮ್ಮ ಸೋದರನಿಗೆ ಬ್ರಿಮ್ಸ್ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಯ ಹೊರಗುತ್ತಿಗೆ ಕೊಡಿಸಿದರು. ಬಡ ಹೊರಗುತ್ತಿಗೆ ದಲಿತ ಕಾರ್ಮಿಕರಿಗೆ ಕನಿಷ್ಠ 16 ಸಾವಿರ ರೂಪಾಯಿ ಸಂಬಳ ಕೊಡಬೇಕು. ಆದರೆ, ಕೇವಲ 5-6 ಸಾವಿರ ರೂಪಾಯಿ ಸಂಬಳ ನೀಡಿ ಬಡ ದಲಿತರ ಹೊಟ್ಟೆ ಮೇಲೆ ಹೊಡೆದಿದ್ದಾರೆ” ಎಂದು ಆರೋಪಿಸಿದರು.
“ಕಾರ್ಮಿಕರ ಪಿ.ಎಫ್. ಹಣ ಕಟ್ಟಿಲ್ಲ, ಇ.ಎಸ್.ಐ. ಹಣ ಕಟ್ಟಿಲ್ಲ. ಈ ಬಗ್ಗೆ ದಲಿತ ಸಂಘಟನೆಗಳೇ ದೂರು ನೀಡಿವೆ. ಈ ದೂರಿನ ಆಧಾರದ ಮೇಲೆ ಕಲಬುರ್ಗಿ ಸಹಾಯಕ ಕಾರ್ಮಿಕ ಆಯುಕ್ತರು ಇವರದೇ ರಾಜ್ಯ ಸರ್ಕಾರ ಇದ್ದಾಗ 2021ರಲ್ಲಿ ನೋಟಿಸ್ ನೀಡಿ, 1948ರ ಕನಿಷ್ಠ ವೇತನ ಕಾಯಿದೆ ಉಲ್ಲಂಘನೆ ಆಗಿದೆ, 7 ದಿನಗಳ ಒಳಗಾಗಿ ಬಾಕಿ ಹಣ 38 ಲಕ್ಷ ರೂಪಾಯಿಗಳನ್ನು ಕಾರ್ಮಿಕರಿಗೆ ಪಾವತಿ ಮಾಡಿ ಎಂದು ಹೇಳಿದ್ದಾರೆ. ದಲಿತರ ಹಣ ಲೂಟಿ ಹೊಡೆದಿರುವ ಖೂಬಾರನ್ನು ಈ ಬಾರಿ ಎಲ್ಲ ದಲಿತ ಮತದಾರರೂ ತಿರಸ್ಕರಿಸುತ್ತಾರೆ” ಎಂದರು.
ಬಡವರ ಸೂರು ಕಸಿದುಕೊಂಡ ಖೂಬಾಗೆ ಶಾಪ ತಟ್ಟದೆ ಬಿಡದು:
“2022ಕ್ಕೆ ಸರ್ವರಿಗೂ ಸೂರು ಎಂದು ಬಿಜೆಪಿ ಸರ್ಕಾರ ಬಡ ಜನರಿಗೆ ಭರವಸೆ ನೀಡಿ ಅಧಿಕಾರಕ್ಕೆ ಬಂತು. ನಾನು 2017ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆಗಿದ್ದಾಗ, ಜಿಲ್ಲೆಯ ಸಾವಿರಾರು ಜನರಿಗೆ ಮನೆ ಮಂಜೂರು ಮಾಡಿಸಿದೆ. ಆದರೆ, ಬಿಜೆಪಿ ರಾಜ್ಯ ಸರ್ಕಾರ ಇದ್ದಾಗ ಇವರೇ ಸಂಸತ್ ಸದಸ್ಯರಾಗಿದ್ದರು. ಒಂದೇ ಒಂದು ಮನೆಯನ್ನೂ ಬೀದರ ಜಿಲ್ಲೆಯ ಬಡವರಿಗೆ ಕೊಡಲಿಲ್ಲ.ಅಮೃತ ಕೊಡಲು ಆಗದಿದ್ದರೆ ಬೇಡ, ವಿಷ ಕೊಡಬಾರದು ಅಂತಾರೆ ಹಿರಿಯರು. ಇವರು ಬಡವರಿಗೆ ಮನೆ ಕೊಡದಿದ್ದರೆ ಬೇಡ, ಹಿಂದಿನ ಸರ್ಕಾರ ಕೊಟ್ಟಿದ್ದ ಮನೆಯ ಕಂತಿನ ಹಣವನ್ನೂ ಕೊಡದಂತೆ ತಡೆದು ಬಡವರ ಮೇಲೆ ಕ್ರೌರ್ಯ ಮೆರೆದರು. ಖೂಬಾ ಬಡವರ ವಿರೋಧಿ. ಬಡ ಜನರ ಶಾಪ ಇವರಿಗೆ ತಟ್ಟದೆ ಬಿಡದು” ಎಂದು ಕಿಡಿಕಾರಿದರು.
ನಾಗಮಾರಪಳ್ಳಿ ಸೋದರರನ್ನು ಬಿಜೆಪಿ ಸೇರಿಸಿಕೊಳ್ಳಲು ಐ.ಟಿ. ದಾಳಿ:
“ನಮ್ಮ ಕುಟುಂಬದ ಮೇಲೆ ಬರೀ ಸುಳ್ಳು ಆರೋಪ ಮಾಡಿದ್ದಾರೆ. ಡಿಸಿಸಿ ಬ್ಯಾಂಕ್ ಮೇಲಿನ ಐಟಿ ದಾಳಿ ನಮ್ಮ ಕರ್ಮಕಾಂಡ ಎಂದು ಖೂಬಾ ಹೇಳಿದ್ದಾರೆ. ಆದಾಯ ತೆರಿಗೆ ಇಲಾಖೆ ದಾಳಿ ಮಾಡಬೇಕಾದರೆ ಆರು ತಿಂಗಳು ಸಿದ್ಧತೆ ಮಾಡಿಕೊಳ್ಳುತ್ತದೆ. ಹಿಂದಿನ ಸಾಲಿನ ಬ್ಯಾಲೆನ್ಸ್ ಶೀಟ್, ಕಟ್ಟಿದ ತೆರಿಗೆ ಎಲ್ಲ ಪರಿಶೀಲಿಸಿ ನಂತರ ದಾಳಿ ಮಾಡುತ್ತದೆ. ಆದರೆ ನನ್ನ ಸೋದರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ 3 ತಿಂಗಳೂ ಆಗಿಲ್ಲ. ಈ ದಾಳಿಯ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಈ ಬಾರಿ ಕ್ಷೇತ್ರದಾದ್ಯಂತ ಖೂಬಾ ವಿರೋಧಿ ಅಲೆ ಇದೆ. ಸೋಲಿನ ಭೀತಿ ಅವರನ್ನು ಕಾಡುತ್ತಿದೆ. ಹೀಗಾಗಿ ನಾಗಮಾರಪಳ್ಳಿ ಸೋದರರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಕೇಂದ್ರ ಬಿಜೆಪಿ ನಾಯಕರನ್ನು ಅಂಗಲಾಚಿ ಅವರೇ ದಾಳಿ ಮಾಡಿಸಿದ್ದಾರೆ” ಎಂದು ಆರೋಪಿಸಿದರು.
“ನನ್ನ ಸೋದರ ಅಮರ್ ಖಂಡ್ರೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ 3 ತಿಂಗಳೂ ಆಗಿಲ್ಲ. ಹಿಂದಿನ ಅವಧಿಯಲ್ಲಿ ಆಗಿರುವ ಹಣಕಾಸು ದುರ್ಬಳಕೆ ಬಗ್ಗೆ ನಾನೇ ಸಹಕಾರ ಸಂಘದ ನಿಬಂಧಕರಿಗೆ ದೂರು ನೀಡಿದ್ದೇನೆ. ನನ್ನ ಸೋದರ ಅಧ್ಯಕ್ಷರಾಗಿ ಹಿಂದೆ ತಪ್ಪು ಮಾಡಿದವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಈ ಹಂತದಲ್ಲಿ ಐ.ಟಿ. ದಾಳಿ ಮಾಡಿಸಿದರೆ ನಾಗಮಾರಪಳ್ಳಿ ಸೋದರರು ಹೆದರಿಕೊಂಡು ಬಿಜೆಪಿ ಸೇರುತ್ತಾರೆ ಎಂದೇ ಭಗವಂತ ಖೂಬಾ ಈ ನಾಟಕ ಆಡಿಸಿದ್ದಾರೆ. ಇದು ಅವರ ನಾಮಪತ್ರ ಸಲ್ಲಿಕೆ ದಿನ ನಾಗಮಾರಪಳ್ಳಿ ಸೋದರರ ಉಪಸ್ಥಿತಿಯೊಂದಿಗೆ ಸಾಬೀತಾಗಿದೆ” ಎಂದರು.
ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ:
ಈ ರೀತಿ ಸುಳ್ಳು ಹೇಳಿ ತೇಜೋವಧೆ ಮಾಡುತ್ತಿರುವ ಭಗವಂತ ಖೂಬಾ ವಿರುದ್ಧ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸುತ್ತೇನೆ ಮತ್ತು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ.
“ನನಗೆ ಹೈಕೋರ್ಟ್ 5 ಲಕ್ಷ ರೂ. ದಂಡ ಹಾಕಿತ್ತು ಎಂದು ಖೂಬಾ ಹೇಳಿದ್ದಾರೆ. ಸಂಸದರಾಗಿ ಶಾಸನಸಭೆ ಪ್ರವೇಶಿಸಿರುವ ಅವರಿಗೆ ಕಾನೂನಿನ ಅರಿವಿಲ್ಲ. ದಂಡ ಯಾವುದು ಕಾಸ್ಟ್ ಯಾವುದೂ ಎಂದೂ ಗೊತ್ತಿಲ್ಲ. ನನ್ನ ಮೇಲೆ ಒಂದು ಚುನಾವಣೆ ತಕರಾರು ಅರ್ಜಿ ಇತ್ತು. ನಾನು ಕೋವಿಡ್ ಕಾಲದಲ್ಲಿ ನ್ಯಾಯಾಲಯಕ್ಕೆ ಗೈರು ಹಾಜರಾದೆ ಎಂದು ನನಗೆ 5 ಲಕ್ಷ ಕಾಸ್ಟ್ ಹಾಕಿ ಅದನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡಲು ನ್ಯಾಯಾಲಯ ಹೇಳಿತ್ತು. ವಿಷಯ ಗೊತ್ತಿಲ್ಲದೆ ಜನರಿಗೆ ತಪ್ಪು ಮಾಹಿತಿ ಕೊಡ್ತಾರೆ. ಇವರಿಗೆ ಗಣಿ ಇಲಾಖೆ 60 ಲಕ್ಷ ಬಾಕಿ ಕಟ್ಟಿಲ್ಲ ಅಂತ ದಂಡ ಹಾಕಿದೆ. ಆ ಬಗ್ಗೆ ಮಾತನಾಡಲಿ” ಎಂದು ಆಗ್ರಹಿಸಿದರು.
“ನಮ್ಮ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ನಾನು ಅವರ ತರ ಸುಳ್ಳು ಹೇಳಲ್ಲ ದಾಖಲೆ ಕೊಟ್ಟು ಮಾತಾಡ್ತೀನಿ. ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರು, ಏಕೀಕರಣದ ನೇತಾರರು, ಶತಾಯುಷಿಯ ಬಗ್ಗೆ ಸುಳ್ಳು ಆರೋಪ ಮಾಡ್ತಾರೆ. ಆ ನೈತಿಕತೆ ಅವರಿಗಿಲ್ಲ. ನನ್ನ ತಂದೆ ಭೀಮಣ್ಣ ಖಂಡ್ರೆ ಅವರು ಸಾರಿಗೆ ಸಚಿವರಾಗಿದ್ದಾಗ ನಕಲಿ ಬಸ್ ಟಿಕೆಟ್ ಹಗರಣವನ್ನು ಅವರೇ ಬಯಲಿಗೆಳೆದು ತಪ್ಪಿತಸ್ಥರಿಗೆ. ತಕ್ಕ ಶಿಕ್ಷೆ ಕೊಡಿಸಿದರು. ಸದನದ ಕಲಾಪದಲ್ಲಿ ಈ ಎಲ್ಲದರ ಬಗ್ಗೆಯೂ ಉಲ್ಲೇಖವಿದೆ. ಹೋಗಿ ಅದನ್ನು ತೆಗೆಸಿ ನೋಡಲಿ” ಎಂದರು.
ಈ ಸುದ್ದಿ ಓದಿದ್ದೀರಾ? ಈದಿನ ಸಂದರ್ಶನ | ಬದ್ಧತೆ ಮೈಗೂಡಿಕೊಂಡು ಓದಿದರೆ ಕೋಚಿಂಗ್ ಅಗತ್ಯವಿಲ್ಲ: ಯುಪಿಎಸ್‌ಸಿ ಟಾಪರ್ ಎಂಡಿ ಅಸೀಮ್
“ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಪ್ರಚಂಡ ಬಹುಮತದಿಂದ ಜಯ ಸಾಧಿಸುತ್ತಾರೆ. ಗೆದ್ದ ಬಳಿಕ 24/7 ಕ್ಷೇತ್ರದ ಜನರ ಸೇವೆ ಮಾಡುತ್ತಾರೆ. ಮೇ 7ರಂದು ಬೀದರ್ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದ್ದು, ಈ ಬಾರಿ ಜನ ಬದಲಾವಣೆ ಬಯಸಿದ್ದಾರೆ. 10 ವರ್ಷದ ಅಧಿಕಾರ ಕೊಟ್ಟರೂ, ಸಂಸದರಾಗಿಯಾಗಲಿ, ಕೇಂದ್ರ ಸಚಿವರಾಗಿಯಾಗಲಿ ಕ್ಷೇತ್ರಕ್ಕೆ ಶೂನ್ಯ ಕೊಡುಗೆ ನೀಡಿರುವ ಭಗವಂತ ಖೂಬಾ ಅವರಿಗೆ ವಿಶ್ರಾಂತಿ ಕೊಟ್ಟು ಮನೆಯಲ್ಲಿ ಕೂರಿಸಲು ಮತದಾರರು ತೀರ್ಮಾನಿಸಿದ್ದಾರೆ” ಈಶ್ವರ ಖಂಡ್ರೆ ಹೇಳಿದರು.