ಎಲೆಕ್ಟೋರಲ್‌ ಬಾಂಡ್ ಸಮಗ್ರ ತನಿಖೆಗೆ ಎಸ್‌ಐಟಿ ನೇಮಕ ಅಗತ್ಯ: ಪ್ರಶಾಂತ್ ಭೂಷಣ್

Date:

ಬಿಜೆಪಿ ಸರ್ಕಾರ ಜಾರಿಗೆ ತಂದ ಎಲೆಕ್ಟೋರಲ್ ಬಾಂಡ್‌ಗಳ ರದ್ದತಿಗಾಗಿ ಹೋರಾಡಿ ಯಶಸ್ವಿಯಾಗಿರುವ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಬಿಚ್ಚಿಟ್ಟ ಆತಂಕಗಳಿವು…

“ದೇಶದ ಅರ್ಥಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಪರಕಾಲ ಪ್ರಭಾಕರ ಅವರು ಪ್ರತಿಕ್ರಿಯಿಸುತ್ತಾ ಎಲೆಕ್ಟೋರಲ್‌ ಬಾಂಡ್‌ ಪ್ರಪಂಚದ ದೊಡ್ಡ ಹಗರಣ ಎಂದು ಹೇಳಲು ಕಾರಣವಿದೆ. ಇಲ್ಲಿ ಲಕ್ಷ ಕೋಟಿ ಬಾಂಡ್ ಹಣ ಪಡೆದಿಲ್ಲ. ಆದರೆ ಸಾವಿರ ಕೋಟಿ ಬಾಂಡ್ ಕೊಟ್ಟು ಲಕ್ಷ ಲಕ್ಷ ಕೋಟಿ ರೂ.ಗಳ ಕಾಮಗಾರಿಗಳನ್ನು ಗುತ್ತಿಗೆಯನ್ನು ಪಡೆದುಕೊಂಡಿದ್ದಾರೆ. ಯಾರು ಎಷ್ಟು ಪಡೆದಿದ್ದಾರೆಂದು ಸಮಗ್ರವಾಗಿ ತಿಳಿಯಬೇಕಾದರೆ ಸ್ವತಂತ್ರ ತನಿಖೆಯಾಗಬೇಕು. ಅದಕ್ಕಾಗಿ ಎಸ್‌ಐಟಿ ರಚನೆಯಾಗಬೇಕು” ಎಂದು ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್‌ ಆಗ್ರಹಿಸಿದರು.

ಜಾಗೃತ ಕರ್ನಾಟಕ, ಜನಾಧಿಕಾರ ಸಂಘರ್ಷ ಪರಿಷತ್‌ ಮತ್ತು ಬಹುತ್ವ ಕರ್ನಾಟಕ ಸಂಘಟನೆಗಳ ವತಿಯಿಂದ ಬೆಂಗಳೂರಿನ ಗಾಂಧಿ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ’ಎಲೆಕ್ಟೋರಲ್ ಬಾಂಡ್‌- ಇದೇಕೆ ವಿಶ್ವದಲ್ಲೇ ಅತಿದೊಡ್ಡ ಹಗರಣ?- ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜೊತೆಗೆ ಬಾಂಡ್‌ಗಳ ಬಾಂಡ್‌ ರದ್ದಿಗಾಗಿ ತಾವು ನಡೆಸಿದ ಕಾನೂನಾತ್ಮಕ ಹೋರಾಟವನ್ನು ಹಂಚಿಕೊಂಡರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ವಂಚಕ ಕಂಪನಿಗಳಿಗೆ  ಕಾಮಗಾರಿಗಳನ್ನು ನೀಡಲಾಗುತ್ತಿದೆ. ಜನರ ಜೀವಕ್ಕೆ ಹಾನಿಯಾಗುವಂತಹ ಔಷಧಗಳನ್ನು ಮಾರುಕಟ್ಟೆಯಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಟ್ಟು ಬಾಂಡ್ ಭ್ರಷ್ಟಾಚಾರ ನಡೆಸಲಾಗಿದೆ. ಆದರೆ ನೇರವಾಗಿ ಸಂಬಂಧ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಒಂದು ಎಸ್‌ಐಟಿ (ವಿಶೇಷ ತನಿಖಾ ತಂಡ) ನೇಮಕ ಅಗತ್ಯವಿದೆ” ಎಂದು ತಿಳಿಸಿದರು.

“ಸುಪ್ರೀಂಕೋರ್ಟ್ ಬಾಂಡ್ ನಿಷೇಧಿಸಿದ್ದರೂ ಏಕೆ ಮುಟ್ಟುಗೋಲು ಹಾಕಿಕೊಂಡಿಲ್ಲ? ರಾಜಕೀಯ ಪಕ್ಷಕ್ಕೆ ಹಣ ಕೊಡುವುದನ್ನು ಅದು ನಿಷೇಧಿಸಿಲ್ಲ. ಅನಾಮಧೇಯವಾಗಿ ಹಣ ನೀಡುವುದನ್ನು ನಿಷೇಧಿಸಿದೆಯಷ್ಟೇ. ಬಾಂಡ್ ಮೂಲಕ ಯಾರು ಯಾರಿಗೆ ಹಣ ಕೊಟ್ಟರು, ಯಾವ ಕಾರಣಕ್ಕೆ ಹಣ ನೀಡಿದರು ಎಂಬುದನ್ನು ಪರಿಶೀಲಿಸಲು ತನಿಖೆಯ ಅಗತ್ಯವಿದೆ” ಎಂದು ತಿಳಿಸಿದರು.

“ಬಾಂಡ್ ಹಗರಣದ ಬಗ್ಗೆ ಎಸ್‌ಐಟಿ ಆಗಬೇಕೆಂದು ನಾವು ಕೋರ್ಟ್‌ಗೆ ಹೋಗಿ ಮೊಕದ್ದಮೆ ಹೂಡಿದ್ದೇವೆ. ಒಂದು  ಮಹತ್ವದ ತೀರ್ಪನ್ನು ನೀಡಲು ಸುಪ್ರಿಂಕೋರ್ಟ್ ಆರು ವರ್ಷ ತೆಗೆದುಕೊಂಡಿದೆ. ಆದರೆ ಈಗ ಅದನ್ನು ಪಾಲೋಅಪ್‌ ಮಾಡಿ ಆ ವಿಚಾರದ ಕುರಿತು ಒಳ್ಳೆಯ ತಿರ್ಪನ್ನು ನೀಡುತ್ತಾರೆಂದು ಆಶಿಸುತ್ತೇನೆ” ಎಂದರು.

“ಕಳಪೆ ಮತ್ತು ಜೀವಹಾನಿ ಉಂಟು ಮಾಡಬಹುದಾದ ಔಷಧಗಳನ್ನು ಮಾರಲು ಕಂಪನಿಗಳಿಗೆ ಎಲೆಕ್ಟೋರಲ್ ಬಾಂಡ್ ಹೇಗೆ ನೆರವಾದವು ಎಂಬುದು ಈಗ ಹೊರಬಂದಿದೆ” ಎಂದು ಹೇಳಿದರು.

ಚುನಾವಣಾ ಆಯೋಗ ಬಿಜೆಪಿಯ ಕೈಗೊಂಬೆ: ಭೂಷಣ್

“ಚುನಾವಣಾ ಆಯೋಗವು ಬಿಜೆಪಿಯವರ ಕೀಲಿಗೊಂಬೆ” ಎಂದು ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಆರೋಪಿಸಿದರು.

ಅವರದ್ದೇ ಕೀಲಿಕೈ ಆಗಿರುವ ಚುನಾವಣಾ ಆಯೋಗವು ಪಕ್ಷಪಾತದಿಂದ ಕೂಡಿದೆ. ಚುನಾವಣಾ ಆಯುಕ್ತರು ನೇಮಕಗೊಳ್ಳುತ್ತಿರುವ ರೀತಿಯೇ ಅದಕ್ಕೆ ಸಾಕ್ಷಿ. ಚುನಾವಣಾ ಆಯುಕ್ತರನ್ನು ಸರ್ಕಾರ ನೇಮಿಸಬಾರದು ಎಂಬ ಕೂಗು ಹಿಂದಿನಿಂದಲೂ ಇತ್ತು. ಪ್ರಧಾನಿ, ವಿಪಕ್ಷ ನಾಯಕ, ಸುಪ್ರೀಂಕೋರ್ಟಿನ ನ್ಯಾಯಮೂರ್ತಿ ಸೇರಿ ಅವರನ್ನು ಆಯ್ಕೆ ಮಾಡಬೇಕಿತ್ತು. ಈ ನಿಯಮ ಬದಲಾಗಿದ್ದನ್ನು ನಾವು ಕೋರ್ಟಿನಲ್ಲಿ ಪ್ರಶ್ನಿಸಿದ್ದೆವು. ಒಬ್ಬ ಆಯುಕ್ತರ ಹುದ್ದೆ ಖಾಲಿಯಿತ್ತು. ಅದಕ್ಕೆ ನೇಮಕ ಮಾಡುವ ಮುನ್ನ ಕೋರ್ಟ್ ಮಧ್ಯ ಪ್ರವೇಶಿಸಬೇಕು ಎಂದು ಕೋರಿದೆವು. ಆದರೆ ಅಷ್ಟರಲ್ಲಿ ಸರ್ಕಾರವು ಇದ್ದಕ್ಕಿದ್ದಂತೆ ಒಬ್ಬರನ್ನು ತನ್ನಿಷ್ಟ ಬಂದಹಾಗೆ ನೇಮಿಸಿಬಿಟ್ಟಿತು. ಅಷ್ಟೇ ಅಲ್ಲ, ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನೇ ಆಯ್ಕೆ ಸಮಿತಿಯಿಂದ ತೆಗೆದು ಹಾಕಿ, ಆ ಜಾಗದಲ್ಲಿ ಒಬ್ಬ ಮಂತ್ರಿಯನ್ನು ಹಾಕಿಕೊಳ್ಳುವ ಕಾನೂನು ತಂದಿದ್ದಾರೆ. ಈ ಮಧ್ಯೆ ಸರ್ಕಾರವೇ ನೇಮಿಸಿಕೊಂಡಿದ್ದ ಒಬ್ಬ ಆಯುಕ್ತರು (ಸರ್ಕಾರದ ಮಾತನ್ನು ಕೇಳದ್ದಕ್ಕೆ) ರಾಜೀನಾಮೆ ಕೊಡುವಂತೆ ಮಾಡಲಾಯಿತು. ಎರಡು ಸ್ಥಾನಗಳು ಖಾಲಿಯಾಗಿದ್ದರಿಂದ ನಾವು ಮತ್ತೆ ಕೋರ್ಟಿನಲ್ಲಿ ಪ್ರಶ್ನೆ ಮಾಡಿದೆವು. ನ್ಯಾಯಪೀಠಕ್ಕೆ ಪ್ರಕರಣ ಬರಲು ಎರಡು ದಿನಗಳಿರುವಾಗ ಸರ್ಕಾರ ಇಬ್ಬರನ್ನೂ ನೇಮಕ ಮಾಡಿಯೇ ಬಿಟ್ಟಿತು” ಎಂದು ನೆನಪಿಸಿದರು.

ಚುನಾವಣಾ ಪ್ರಜಾತಂತ್ರವೆಂದರೆ- ಸರ್ಕಾರಗಳು ಜನರ ಕಣ್ಗಾವಲಿನಲ್ಲಿ ಇರುವುದು. ಸಹಭಾಗಿ ಪ್ರಜಾತಂತ್ರವೆಂದರೆ ಜನರು ನೀತಿ ನಿರೂಪಣೆಯಲ್ಲೂ ಭಾಗಿಯಾಗುವುದು. ನಮ್ಮದು ಪ್ರಾತಿನಿಧಿಕ ಪ್ರಜಾತಂತ್ರವಾಗಿದ್ದರಿಂದ ನಮ್ಮ ಪ್ರತಿನಿಧಿಗಳು ನಮ್ಮ ಪರವಾಗಿ ಈ ನೀತಿ ನಿರೂಪಣೆಯಲ್ಲಿ ಭಾಗಿಯಾಗಿರುತ್ತಾರೆ. ಹಾಗಾಗಿ ನಾವು ಪ್ರತಿನಿಧಿಗಳನ್ನು ಆರಿಸುವ ಚುನಾವಣೆ ಇವೆಲ್ಲದರ ಕೇಂದ್ರದಲ್ಲಿರುತ್ತದೆ. ಅಂತಹ ಚುನಾವಣೆ ನಡೆಯುವ ರೀತಿಯೂ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಬೇಕು. ಆದರೆ ಈಗ ಆಡಳಿತದಲ್ಲಿರುವ ಬಿಜೆಪಿಯು ಇತರ ಪಕ್ಷಗಳಿಗಿಂತ ಎರಡು ಪಟ್ಟು ಹಣವನ್ನು ವಂತಿಗೆಯ ಮೂಲಕ ಪಡೆದಿದೆ” ಎಂದು ಎಚ್ಚರಿಸಿದರು.

ಸರ್ಕಾರಿ ಮಾಧ್ಯಮವಲ್ಲದೆ ಖಾಸಗೀ ಮಾಧ್ಯಮಗಳು, ಸರ್ಕಾರಿ ಏಜೆನ್ಸಿಗಳು (ಇ.ಡಿ., ಐಟಿ, ಸಿಬಿಐ) ಎಲ್ಲವೂ ಸರ್ಕಾರದ ರಾಜಕೀಯ ಉಪಕರಣವಾಗಿವೆ. ಅವುಗಳನ್ನು ಆಡಳಿತ ಪಕ್ಷ ರಾಜಕೀಯ ಅಸ್ತ್ರಗಳಾಗಿ ಬಳಸುತ್ತಿದೆ. ಉಳಿದ ರಾಜಕೀಯ ಪಕ್ಷಗಳ ಬ್ಯಾಂಕ್ ಖಾತೆಯನ್ನು ನಿರ್ಬಂಧಿಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

“ಜನ ಏನು ಯೋಚಿಸುತ್ತಾರೆ ಎಂದರೆ ಯಾರು ಕಡಿಮೆ ದುಷ್ಟರೋ ಅವರಿಗೆ ಓಟು ಹಾಕೋಣ ಎಂದುಕೊಳ್ಳುತ್ತಾರೆ. ಯಾರು ಎಲ್ಲರಿಗಿಂತ ಹೆಚ್ಚು ಕಾಣಿಸುತ್ತಾರೋ (ವಿಸಿಬಲ್‌ ಇರುತ್ತಾರೋ) ಅವರಲ್ಲಿ ಕಡಿಮೆ ದುಷ್ಟರಿಗೆ ಓಟು ಹಾಕಲು ಮತದಾರರು ಮುಂದಾಗುತ್ತಾರೆ. ಆ ವಿಸಿಬಲಿಟಿಗೆ ಹಣ ಬೇಕಾಗುತ್ತದೆ. ಜಾಹೀರಾತು ನೀಡುವುದು, ಟಿವಿಯಲ್ಲಿ ಕಾಣಿಸಿಕೊಳ್ಳುವುದು ಅಗತ್ಯ. ಯಾರಲ್ಲಿ ಹೆಚ್ಚು ಹಣ ಇರುತ್ತದೋ ಅವರು ಗೆಲ್ಲುತ್ತಾರೆ. ಇದುವೇ ನಮ್ಮ ಪ್ರಜಾಪ್ರಭುತ್ವ ಆಗಿಬಿಟ್ಟಿದೆ” ಎಂದು ವಿಷಾದಿಸಿದರು.

“ಅಭ್ಯರ್ಥಿಯೊಬ್ಬರು 90 ಲಕ್ಷ ರೂ.ಗಳನ್ನು ಖರ್ಚು ಮಾಡಬಹುದು. 500 ಅಭ್ಯರ್ಥಿಗಳನ್ನು ಹಾಕಿದ ಪಕ್ಷಕ್ಕೆ 400 ಕೋಟಿ ಸಾಕು. ಆದರೆ ಬಿಜೆಪಿಯ ಅಕೌಂಟಿನಲ್ಲಿರುವ ಹಣ ಎಷ್ಟಿದೆ ನೋಡಿ! ಅಭ್ಯರ್ಥಿ ಎಷ್ಟು ಖರ್ಚು ಮಾಡಬೇಕು ಎಂಬುದರ ಮೇಲೆ ಮಿತಿ ಇದೆಯೇ ಹೊರತು ಪಕ್ಷವೊಂದು ಎಷ್ಟು ಖರ್ಚು ಮಾಡಬಹುದು ಎಂಬುದಕ್ಕೆ ಮಿತಿಯೇ ಇಲ್ಲ. ಈಗ ಅಧಿಕೃತವಾಗಿ (ಅನಧಿಕೃತವಾಗಿ ಸಾಕಷ್ಟು ಖರ್ಚು ಮಾಡುತ್ತಾರೆ ಎಂಬುದು ಬೇರೆ ಮಾತು) ಅತ್ಯಂತ ಹೆಚ್ಚು ಖರ್ಚು ಮಾಡುವುದು ಯಾರು?- ಅದುವೇ ಬಿಜೆಪಿ” ಎಂದರು.

“ಇಂದು ಈ ದೇಶದಲ್ಲಿ 75 ಲಕ್ಷ ರೂ. ಖರ್ಚು ಮಾಡಲು ಸಾಧ್ಯವಾಗದವರು ಇದ್ದಾರೆ. ಅಂಥವರು ಅಭ್ಯರ್ಥಿಗಳಾಗಲು ಬಯಸುತ್ತಾರೆ. ಆದರೆ ಅವರು ಎಷ್ಟೇ ಒಳ್ಳೆಯರಾಗಿದ್ದರೂ ಜನರಿಂದಲೇ ಹಣವನ್ನು ಸಾಲವಾಗಿ ಪಡೆದು ಸ್ಪರ್ಧಿಸಿ ಗೆಲ್ಲಲು ಸಾಧ್ಯವಾಗಬೇಕು. ನಿರ್ದಿಷ್ಟ ಸಂಖ್ಯೆಯ ಮತ ಪಡೆಯಲು ಸಾಧ್ಯವಾದರೆ ಸರ್ಕಾರ ಅವರಿಗೆ ಅಷ್ಟು ಹಣ ಕೊಡಬೇಕು. ಇದು ಸರ್ಕಾರವೇ ಚುನಾವಣೆಗೆ  ಹಣ ಕೊಡುವ ರೀತಿ. ಇದಕ್ಕೆ 3,000 ಕೋಟಿ ಹೆಚ್ಚೆಂದರೆ ಖರ್ಚಾಗಬಹುದು. ಐದು ವರ್ಷಕ್ಕೊಮ್ಮೆ ಇಷ್ಟು ಖರ್ಚು ಮಾಡುವುದು ಈ ದೇಶಕ್ಕೆ ಕಷ್ಟವಿಲ್ಲ. ಇಂತಹ ವಿಧಾನಗಳ ಮೂಲಕ ನಮ್ಮ ಪ್ರಜಾತಂತ್ರದ ಸುಧಾರಣೆ ಮಾಡಬಹುದು. ಅಂಥದ್ದನ್ನು ಮಾಡದ ಆಡಳಿತ ಪಕ್ಷ ಎಲೆಕ್ಟೋರಲ್ ಬಾಂಡ್ ಜಾರಿಗೆ ತಂದಿದೆ. ಕಂಪನಿಗಳ ಪರವಾಗಿ ನೀತಿ ನಿರೂಪಣೆ ಮಾಡಿ ಸುಲಿಗೆಗೆ ದಾರಿ ಮಾಡಿಕೊಂಡಿದೆ” ಎಂದು ಟೀಕಿಸಿದರು.

ಎಲೆಕ್ಟೋರಲ್ ಬಾಂಡ್ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಹೋರಾಡಿದ ‘ಜನರ ಮಾಹಿತಿ ಹಕ್ಕು ರಾಷ್ಟ್ರೀಯ ಅಭಿಯಾನ’ದ ಸಹ ಸಂಚಾಲಕಿ ಅಂಜಲಿ ಭಾರದ್ವಾಜ್‌, ಜನಾಧಿಕಾರ ಸಂಘರ್ಷ ಪರಿಷತ್‌ನ ಆದರ್ಶ ಅಯ್ಯರ್‌, ಸಾಮಾಜಿಕ ಕಾರ್ಯಕರ್ತರಾದ ಮುತ್ತುರಾಜ್, ಪರ್ಯಾಯ ಕಾನೂನು ವೇದಿಕೆಯ ಪೂರ್ಣ ಹಾಜರಿದ್ದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿ ಅಬಕಾರಿ ನೀತಿ ಪ್ರಕರಣ | ಸಿಸೋಡಿಯಾ ಜಾಮೀನು ಅರ್ಜಿ; ಸಿಬಿಐ, ಇಡಿಗೆ ಹೈಕೋರ್ಟ್ ನೋಟಿಸ್

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾಮೀನು ಕೋರಿ ಎಪಿಪಿ ನಾಯಕ ಮತ್ತು...

ಅಶ್ಲೀಲ ವಿಡಿಯೋ ಪ್ರಸಾರ ತಡೆ: ಪೊಲೀಸ್ ಇಲಾಖೆಗೆ ಮಹಿಳಾ ಆಯೋಗ ಪತ್ರ

ಹಾಸನ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ...

ನೇಹಾ ಕೊಲೆ | ಲವ್ ಜಿಹಾದ್ ಎನ್ನುವ ಅಮಿತ್ ಶಾ ಮಣಿಪುರದಲ್ಲಿ ಏನು ಕ್ರಮ ಕೈಗೊಂಡರು: ಸಿದ್ದರಾಮಯ್ಯ ಪ್ರಶ್ನೆ

ನೇಹಾ ಕೊಲೆ ಪ್ರಕರಣದ ಆರೋಪಿಯನ್ನು ತಕ್ಷಣ ಬಂಧಿಸಲಾಗಿದೆ. ಪ್ರಕರಣವನ್ನು ಸಿಐಡಿಗೆ ವಹಿಸಿ...

ಪ್ರಜ್ವಲ್ ವಿರುದ್ಧ ಮುನ್ನೂರು ಕೇಸ್‌ ದಾಖಲಾಗಬೇಕು: ಎಸ್‌.ಬಾಲನ್

"ರಾಜ್ಯ ಸರ್ಕಾರವು ಎಚ್.ಡಿ.ರೇವಣ್ಣನವರನ್ನು ರಕ್ಷಿಸುವ ಕೆಲಸ ಮಾಡುತ್ತಿದೆ" ಎಂದು ಎಸ್‌.ಬಾಲನ್ ಆರೋಪಿಸಿದರು ಬಿಜೆಪಿ-...