ಎಲೆಕ್ಟೋರಲ್ ಬಾಂಡ್ ಭ್ರಷ್ಟಾಚಾರದ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ಮೊಕದ್ದಮೆ ನಡೆಸಿದ ಹೋರಾಟಗಾರ್ತಿ ಅಂಜಲಿ ಭಾರದ್ವಾಜ್ ಅವರು ಬೆಂಗಳೂರಿನಲ್ಲಿ ಮಾತನಾಡಿದ್ದಾರೆ
“ಎಲೆಕ್ಟೋರಲ್ ಬಾಂಡ್ ಭ್ರಷ್ಟಾಚಾರವನ್ನು ಪ್ರಧಾನಿ ನರೇಂದ್ರ ಮೋದಿಯವರು ಸಮರ್ಥಿಸುತ್ತಿರುವುದು ದುರಂತದ ಸಂಗತಿ” ಎಂದು ‘ಜನರ ಮಾಹಿತಿ ಹಕ್ಕಿಗಾಗಿನ ರಾಷ್ಟ್ರೀಯ ಅಭಿಯಾನ’ದ ಸಹ ಸಂಚಾಲಕಿ ಅಂಜಲಿ ಭಾರದ್ವಾಜ್ ಟೀಕಿಸಿದರು.
ಜಾಗೃತ ಕರ್ನಾಟಕ, ಜನಾಧಿಕಾರ ಸಂಘರ್ಷ ಪರಿಷತ್ ಮತ್ತು ಬಹುತ್ವ ಕರ್ನಾಟಕ ಸಂಘಟನೆಗಳ ವತಿಯಿಂದ ಬೆಂಗಳೂರಿನ ಗಾಂಧಿ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ’ಎಲೆಕ್ಟೋರಲ್ ಬಾಂಡ್- ಇದೇಕೆ ವಿಶ್ವದಲ್ಲೇ ಅತಿದೊಡ್ಡ ಹಗರಣ?- ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜೊತೆಗೆ ಬಾಂಡ್ಗಳ ರದ್ದಿಗಾಗಿ ತಾವು ನಡೆಸಿದ ಕಾನೂನಾತ್ಮಕ ಹೋರಾಟವನ್ನು ಹಂಚಿಕೊಂಡರು.
“ಇ.ಡಿ, ಐಟಿ, ಸಿಬಿಐ ಥರದ ಏಜೆನ್ಸಿಗಳು ಬಿಜೆಪಿ ಪಕ್ಷಕ್ಕಾಗಿ ಹಣ ಸುಲಿಗೆ ಮಾಡುವ ಕಂಪನಿಗಳಾಗಿವೆ ಎಂಬುದು ಸಾಬೀತಾಗಿದೆ. ಆದರೆ ದುರಂತವೆಂದರೆ ಪ್ರಧಾನಮಂತ್ರಿಯೇ ಇದನ್ನು ಸಮರ್ಥಿಸುತ್ತಿದ್ದಾರೆ. ಎಎನ್ಐ ಸುದ್ದಿಸಂಸ್ಥೆಯ ಸಂದರ್ಶನದಲ್ಲಿ ಮಾತನಾಡಿರುವ ಮೋದಿ, ’ಎಲೆಕ್ಟೋರಲ್ ಬಾಂಡ್ ಇದ್ದಿದ್ದರಿಂದಲೇ ಯಾರು, ಯಾರಿಗೆ, ಎಷ್ಟು ಕೊಟ್ಟರು ಎಂಬುದು ಗೊತ್ತಾಯಿತು. ಇದರಿಂದ ಪಾರದರ್ಶಕತೆ ಬಂದಿದೆ’ ಎಂದಿದ್ದಾರೆ. ವಾಸ್ತವವೆಂದರೆ ಸರ್ವೊಚ್ಚ ನ್ಯಾಯಾಲಯವು ಎಸ್ಬಿಐಗೆ ಛೀಮಾರಿ ಹಾಕಿ, ಮಾಹಿತಿಯನ್ನು ತರಿಸಿಕೊಳ್ಳಬೇಕಾಯ್ತು. ಸರ್ಕಾರವು ಈ ಮಾಹಿತಿ ಕೊಡಲು ಸಿದ್ಧವಿರಲಿಲ್ಲ” ಎಂದು ವಿವರಿಸಿದರು.
ಸುಪ್ರೀಂಕೋರ್ಟ್ ತಡವಾಗಿಯಾದರೂ ಮಹತ್ವದ ತೀರ್ಪು ಕೊಟ್ಟಿದೆ. ಲಭ್ಯವಿರುವ ಮಾಹಿತಿಯನ್ನು ಕೈಗೆತ್ತಿಕೊಂಡು ಜನರಿಗೆ ಸತ್ಯ ತಿಳಿಸುವ ಕೆಲಸ ಆಗಬೇಕಿದೆ ಎಂದು ಆಶಿಸಿದರು.
ಇಂದು ಈ ದೇಶದ ಇಬ್ಬರು ಮುಖ್ಯಮಂತ್ರಿಗಳು ಜೈಲಿನಲ್ಲಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪ್ರಕರಣದಲ್ಲಿ ಹೆಸರಿಸಲಾಗಿರುವ ಶರಶ್ಚಂದ್ರ ರೆಡ್ಡಿಯನ್ನು ಬಂಧಿಸಲಾಗಿತ್ತು. ಆತ ಸರ್ಕಾರಕ್ಕೆ ಬಾಂಡ್ ಮೂಲಕ ಹಣ ಕೊಟ್ಟಿರುವುದು ಸಾಬೀತಾಗಿದೆ. ಅಂದರೆ ಏನರ್ಥ? ಎಂದು ಪ್ರಶ್ನಿಸಿದರು.
ಕಂಪನಿ ಕಾಯ್ದೆಗಳಿಗೆ ತಿದ್ದುಪಡಿ ತಂದು ಚುನಾವಣಾ ಬಾಂಡ್ಗಳನ್ನು ತರಲಾಯಿತು. ಶೆಲ್ ಕಂಪನಿಗಳು (ಬೇನಾಮಿ ಸಂಸ್ಥೆಗಳು) ಕೂಡ ಹಣ ಕೊಡಲು ಅವಕಾಶ ನೀಡಲಾಯಿತು. ವಿದೇಶಿ ಕಂಪನಿಗಳು ಕೂಡ ದೇಶಿ ಶಾಖೆಗಳಿಗೆ ಹಣ ಕೊಡಬಹುದು ಎಂದು ತಿದ್ದುಪಡಿ ತಂದರು. ಆದರೆ ಇದ್ಯಾವುದರ ಕುರಿತು ಯಾವುದೇ ಸಾರ್ವಜನಿಕ ಚರ್ಚೆ ನಡೆಯಲಿಲ್ಲ ಎಂದು ವಿಷಾದಿಸಿದರು.
ಕಾನೂನು ತರುವಾಗ ಚರ್ಚೆ ಅಗತ್ಯವಿರುತ್ತದೆ. ಎಲೆಕ್ಟೋರಲ್ ಬಾಂಡ್ ಅಪಾಯಕಾರಿ ಎಂದು ಹಣಕಾಸು ಇಲಾಖೆಗೆ ರಿಸರ್ವ್ ಬ್ಯಾಂಕ್ ಪತ್ರವನ್ನೂ ಬರೆದಿತ್ತು. ಬಾಂಡ್ನಿಂದಾಗಿ ದೊಡ್ಡ ಕಪ್ಪು ಹಣ ಸೃಷ್ಟಿಯಾಗುತ್ತದೆ ಎಂದು ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ಎಚ್ಚರಿಸಿದ್ದರು. ಆರ್ಬಿಐನಂತಹ ಸಾಂವಿಧಾನಿಕ ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿದರೂ ಬಾಂಡ್ಗಳನ್ನು ಜಾರಿಗೆ ತಂದೇ ಬಿಟ್ಟರು. ಸಂಸತ್ತಿನಲ್ಲೂ ಚರ್ಚೆಯಾಗಲಿಲ್ಲ. ರಾಜಕೀಯ ಪಕ್ಷಗಳಿಗೂ ಚರ್ಚೆ ಮಾಡಲು ಬಿಡಲಿಲ್ಲ. ಹೀಗಾಗಿಯೇ ಸುಪ್ರೀಂಕೋರ್ಟ್, “ನೀವು ನಾಗರಿಕರ ಮೂಲಭೂತ ಹಕ್ಕನ್ನು ನಿರಾಕರಿಸುತ್ತಿದ್ದೀರಿ” ಎಂದಿದೆ. ಬಾಂಡ್ ವಿವರ ಬಹಿರಂಗಪಡಿಸಲು ಆದೇಶಿಸಿದೆ ಎಂದರು.
ತೀರ್ಪು ಬಂದ ನಂತರ ರಾಶಿ ರಾಶಿ ಮಾಹಿತಿ ಹೊರ ಬಂದಿದೆ. ಭಾರೀ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿರುವ ಸಾಧ್ಯತೆಗಳು ಕಾಣುತ್ತಿವೆ. ಮೇಘಾ ಇಂಜಿನಿಯರಿಂಗ್ನಂತಹ ಕಂಪನಿಗಳು ದೇಣಿಗೆ ಕೊಟ್ಟು ತಮಗೆ ಬೇಕಾದ ಹಾಗೆ ಕಾಮಗಾರಿಗಳ ಗುತ್ತಿಗೆಗಳನ್ನು ಪಡೆದಿವೆ ಎಂದು ವಿವರಿಸಿದರು.
ಇದು ಭ್ರಷ್ಟಾಚಾರ ಮಾತ್ರವಲ್ಲ, ಸುಲಿಗೆಯೂ ಹೌದು. ಐಟಿ, ಇ.ಡಿ ರೈಡ್ ಬಳಿಕ ಕಂಪನಿಗಳು ದೇಣಿಗೆ ನೀಡಿವೆ. ಈ ರೀತಿ ಸುಲಿಗೆ ನಡೆಸಲೆಂದೇ ಇಂತಹ ಏಜೆನ್ಸಿಗಳನ್ನು ಸರ್ಕಾರ ನಡೆಸುತ್ತಿದೆಯಾ ಎಂದು ಕೇಳಿದರು.
ಜನಾಧಿಕಾರ ಸಂಘರ್ಷ ಪರಿಷತ್ನ ಆದರ್ಶ ಅಯ್ಯರ್ ಅವರು ಮಾತನಾಡಿ, “ನಮ್ಮ ದೇಶ ಈಗ ಕವಲು ದಾರಿಯಲ್ಲಿ ನಿಂತಿದೆ. ಒಂದು ದಾರಿ- ಸದೃಢ ದೇಶದತ್ತ ಇದೆ. ಇನ್ನೊಂದು ದಾರಿ ಫ್ಯಾಸಿಸಂ (ಸರ್ವಾಧಿಕಾರ) ಕಡೆಗೆ ಹೋಗುತ್ತಿದೆ. ಮೋದಿ ಸರ್ಕಾರ ಬಂದರೆ ಫ್ಯಾಸಿಸಂ ಬರುವುದು ಖಚಿತ” ಎಂದು ಎಚ್ಚರಿಸಿದರು.
ಸಾಮಾಜಿಕ ಕಾರ್ಯಕರ್ತ ಮುತ್ತುರಾಜ್ ಮಾತನಾಡಿ, “ಯಾವುದೇ ಚರ್ಚೆ ನಡೆದು ಎಲೆಕ್ಟೋರಲ್ ಬಾಂಡ್ ಬರಲಿಲ್ಲ. ಜನಾಭಿಪ್ರಾಯ ಪಡೆಯಲಿಲ್ಲ. ಹಿಂಬಾಗಿಲಿನಿಂದ ಮತ್ತು ದರ್ಪ, ಧಿಮಾಕಿನ ಮೂಲಕ ಬಾಂಡ್ಗಳನ್ನು ತಂದರು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾಗೃತ ಕರ್ನಾಟಕ ಒಂದು ಚಳವಳಿ: “ಜಾಗೃತ ಕರ್ನಾಟಕವು ಒಂದು ರಾಜಕೀಯ ಚಳವಳಿಯಾಗಿದೆ. ಕಳೆದ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ನಲವತ್ತು ಪರ್ಸೆಂಟ್ ಹಗರಣವನ್ನು ಮುನ್ನೆಲೆಗೆ ತಂದಿದ್ದು ನಮ್ಮ ಸಂಘಟನೆ. ಆತ್ಮಹತ್ಯೆ ಮಾಡಿಕೊಳ್ಳುವ ಕೆಲವು ದಿನಗಳ ಹಿಂದೆಯಷ್ಟೇ ಗುತ್ತಿಗೆದಾರ ಸಂತೋಷ್ ಪಾಟೀಲ್ ಜಾಗೃತ ಕರ್ನಾಟಕದೊಂದಿಗೆ ಮಾತನಾಡಿದ್ದರು. ಗುತ್ತಿಗೆದಾರರ ಸಭೆಯನ್ನು ಕರೆಸಲು ಸಿದ್ಧತೆ ನಡೆಸುತ್ತಿರುವ ಹೊತ್ತಿನಲ್ಲೇ ಸಂತೋಷ್ ಆತ್ಮಹತ್ಯೆ ಮಾಡಿಕೊಂಡರು” ಎಂದು ಮುತ್ತುರಾಜ್ ನೆನೆದರು.
“ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ ಅವರನ್ನು ಕರೆಸಿ ಕಾರ್ಯಕ್ರಮ ಮಾಡಲಾಗಿದೆ. ತೆರಿಗೆ ವಂಚನೆ, ಬರ ಪರಿಹಾರದಲ್ಲಿ ವಿಳಂಬ ಕುರಿತು ಎದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ಮುಕ್ತ ಚರ್ಚೆಯನ್ನು ಆಯೋಜಿಸಿ ಕೇಂದ್ರ ಮತ್ತು ರಾಜ್ಯದ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿತ್ತು. ರಾಜ್ಯ ಸರ್ಕಾರದಿಂದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಬಂದು ಮಾತನಾಡಿದ್ದರು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆಹ್ವಾನವನ್ನು ಸ್ವೀಕರಿಸಲಿಲ್ಲ” ಎಂದು ತಿಳಿಸಿದರು.
ಎಲೆಕ್ಟೋರಲ್ ಬಾಂಡ್ ರದ್ದಿಗಾಗಿ ಸುಪ್ರೀಂಕೋರ್ಟ್ನಲ್ಲಿ ಹೋರಾಡಿರುವ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರು ಮಹತ್ವದ ಮಾತುಗಳನ್ನು ಕಾರ್ಯಕ್ರಮದಲ್ಲಿ ಆಡಿದರು (ವಿವರಗಳನ್ನು ‘ಇಲ್ಲಿ’ ನೋಡಿ).
ಪರ್ಯಾಯ ಕಾನೂನು ವೇದಿಕೆಯ ಪೂರ್ಣ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
