ಹೈದರಾಬಾದ್ ಲೋಕಸಭಾ ಕೇತ್ರದಲ್ಲಿ ಎಐಎಂಐಎಂ ಪಕ್ಷದ ಅಧ್ಯಕ್ಷ, ಸಂಸದ ಅದಾದುದ್ದೀನ್ ಓವೈಸಿ ವಿರುದ್ಧ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಲತಾ ಅವರು ಮಸೀದಿಯತ್ತ ಬಾಣದ ಸನ್ನೆ ಮಾಡಿದ್ದು, ಅದು ಕೋಮು ದ್ವೇಷ ಪ್ರಚೋದಿಸುವ ಉದ್ದೇಶ ಹೊಂದಿದೆ ಎಂದು ಆರೋಪಿಸಲಾಗಿದೆ.
ಬುಧವಾರ (ಏ.17) ರಂದು ರಾಮನವಮಿ ಶೋಭಾಯಾತ್ರೆ ಮೆರವಣಿಗೆ ಸಮಯದಲ್ಲಿ, ಸಿದ್ದಿ ಅಂಬರ್ ಬಜಾರ್ ವೃತ್ತದಲ್ಲಿರುವ ಮಸೀದಿಯತ್ತ ಕಾಲ್ಪನಿಕ ಬಾಣವನ್ನು ಮಾಧವಿ ಲತಾ ಬಿಟ್ಟಿದ್ದರು. ಇದು ವಿವಾದಕ್ಕೀಡಾಗಿತ್ತು. ವಿಡಿಯೋ ವೈರಲ್ ಆದ ಬೆನ್ನಲ್ಲೇ ಮಾಧವಿ ಲತಾ ವಿರುದ್ಧ ಬೇಗಂ ಬಾಜಾರ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿದ ಬಳಿಕ ಮಾಧವಿ ಲತಾ ಅವರು ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಫಸ್ಟ್ ಲ್ಯಾನ್ಸರ್ ನಿವಾಸಿ ಎಂಡಿ ಶೇಖ್ ಇಮ್ರಾನ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇಡಿ ಎಂಬ ತನಿಖಾ ಸಂಸ್ಥೆಯ ಘನತೆಯನ್ನು ಮಣ್ಣುಪಾಲು ಮಾಡಿದ್ದೇ ಮೋದಿಯ ‘ಮಹಾನ್’ ಸಾಧನೆ
ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದು, ಬಿಜೆಪಿ ಅಭ್ಯರ್ಥಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಇಮ್ರಾನ್ ಹೇಳಿದ್ದಾರೆ. ದೂರಿನನ್ವಯ ಪೊಲೀಸರು ಮಾಧವಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.