ಕಳೆದ ನಾಲ್ಕೈದು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಪೆನ್‌ಡ್ರೈವ್ ಭಾರೀ ಸುದ್ದಿ ಮಾಡ್ತಾ ಇದೆ. ಅದೂ, ನನ್ನತ್ರ ಅವರ ಅವ್ಯವಹಾರಗಳ ದಾಖಲೆಯ ಪೆನ್‌ಡ್ರೈವ್ ಇದೆ – ಇವರ ಭ್ರಷ್ಟಾಚಾರಗಳ ಪೆನ್‌ಡ್ರೈವ್ ಇದೆ ಎಂದು ರಾಜಕೀಯದಲ್ಲಿ ಆಗಾಗ್ಗೆ ಚರ್ಚೆ ಹುಟ್ಟುಹಾಕುತ್ತಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ತವರು ಜಿಲ್ಲೆ ಹಾಸನದಲ್ಲಿ ಈ ಹೊಸ ಪೆನ್‌ಡ್ರೈವ್‌ಗಳು ಸದ್ದು ಮಾಡುತ್ತಿವೆ. ಆ ಪೆನ್‌ಡ್ರೈವ್ ಯುವ ರಾಜಕಾರಣಿಯೊಬ್ಬರ ಅಸಹ್ಯ ಕಾಮಕೇಳಿಯ ಸುಮಾರು 2,296 ವಿಡಿಯೋಗಳನ್ನು ಹೊಂದಿವೆ. ಅಂತಹ ಸಾವಿರಾರು ಪೆನ್‌ಡ್ರೈವ್‌ಗಳನ್ನು ಹಾಸನ ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ಹಂಚಲಾಗಿದೆ. ಇದರ ಬಗ್ಗೆ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಮುನ್ನೆಲೆಯಲ್ಲಿದೆ.
ಹಾಸನ ಜಿಲ್ಲೆಯ ಯುವ ರಾಜಕೀಯ ನಾಯಕನೊಬ್ಬ ತನ್ನ ಕಾಮವಾಂಚೆ ತೀರಿಸಿಕೊಳ್ಳಲು ಅನೇಕ ಮಹಿಳೆಯನ್ನು ಬಳಸಿಕೊಂಡಿದ್ದಾರೆ. ವಿಡಿಯೋದಲ್ಲಿ ಭಾಗಿಯಾಗಿರುವ ಆ ಯುವನಾಯಕ ಬೇರೆ ಬೇರೆ ಕಾರಣಗಳಿಗೆ ತನ್ನ ಬಳಿ ಬಂದ ಹೆಣ್ಣು ಮಕ್ಕಳನ್ನು ಮನವೊಲಿಸಿ, ಪುಸಲಾಯಿಸಿ, ಆಮಿಷ ಒಡ್ಡಿ, ಬೆದರಿಸಿ ಲೈಂಗಿಕ ತೃಷೆ ತೀರಿಸಿಕೊಂಡಿದ್ದಾನೆ. ಮಾತ್ರವಲ್ಲದೆ, ಎಲ್ಲರ ಜೊತೆಗಿನ ಕಾಮದಾಟವನ್ನು ತಾನೇ ರೆಕಾರ್ಡ್ ಮಾಡಿ ಇಟ್ಟುಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಹಾಸನದ ‘ಸತ್ಯದ ಹೊನಲು’ ಎಂಬ ಪತ್ರಿಕೆ ‘ಅಸಹ್ಯಕರ ವಿಡಿಯೋ: ಪೆನ್ ಡ್ರೈವ್ ಭೂತ’ ಎಂಬ ಶೀರ್ಷಿಕೆಯಲ್ಲಿ ಹಲವಾರು ಮಾಹಿತಿಯುಳ್ಳ ವರದಿಯೊಂದನ್ನು ಪ್ರಕಟಿಸಿದೆ. ಸುದೀರ್ಘ ರಾಜಕೀಯ ಜೀವನ ನಡೆಸಿದ ಕುಟುಂಬವೊಂದರ ಕುಡಿ ಈ ಅಶ್ಲೀಲ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಆ ಕುಟುಂಬಕ್ಕೆ ಮಸಿ ಬಳಿದಂತಾಗಿದೆ ಎಂಬ ಮಾತುಗಳಿವೆ ಎಂದು ಪತ್ರಿಕೆ ವರದಿ ಮಾಡಿದೆ.
ಆ ಕುಟುಂಬ ಯಾವುದು? ಹೆಣ್ಣು ಮಕ್ಕಳನ್ನು ಕಾಮದ ಬೊಂಬೆಗಳಾಗಿ, ಭೋಗದ ವಸ್ತುಗಳಾಗಿ ನೋಡಿ, ಅನೇಕ ಹೆಣ್ಣುಮಕ್ಕಳನ್ನು ತನ್ನ ಕಾಮವಾಂಛೆ ತೀರಿಸಿಕೊಳ್ಳಲು ಬಳಸಿಕೊಂಡ ಆ ಕಾಮುಕ ಯುವ ನಾಯಕನಾರು ಎಂಬ ಪ್ರಶ್ನೆ ಒಂದೆಡೆ ಇದ್ದರೆ, ಆತ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ, ಸಂಸದ ಪ್ರಜ್ವಲ್ ರೇವಣ್ಣ ಎಂಬ ಚರ್ಚೆಗಳೂ ನಡೆಯುತ್ತಿವೆ. ಅಂದಹಾಗೆ, ಇದೇ ಪ್ರಜ್ವಲ್ ರೇವಣ್ಣ ಈ 8 ತಿಂಗಳ ಹಿಂದೆಯೇ ತನ್ನ ಖಾಸಗಿ ವಿಚಾರಗಳನ್ನು ಯಾರು ಪ್ರಕಟಸಬಾರದೆಂದು ಕೋರ್ಟ್‌ನಿಂದ ‘ಸ್ಟೇ’ ತಂದಿದ್ದರು.
ಇದೆಲ್ಲದಕ್ಕೂ ಮಿಗಿಲಾಗಿ, ಹೊಳೆನರಸೀಪುರದ ಪರಾಜಿತ ಅಭ್ಯರ್ಥಿ, ಬಿಜೆಪಿ ನಾಯಕ ಜಿ. ದೇವರಾಜೇಗೌಡ ಅವರು ಕಳೆದ ಡಿಸೆಂಬರ್‌ನಲ್ಲಿಯೇ ಬಿಜೆಪಿ ನಾಯಕರಿಗೆ ಪತ್ರ ಬರೆದಿದ್ದು, ”ಜೆಡಿಎಸ್ ಜೊತೆ ಮೈತ್ರಿ ಬೇಡ, ತಮ್ಮ ಬಳಿ ಲೈಂಗಿಕ ಹಗರಣದ ವಿಡಿಯೋಗಳು ಇವೆ. ಬಿಡುಗಡೆ ಮಾಡಿದರೆ ಮೈತ್ರಿ ಪಕ್ಷಗಳು ಸೋಲಬೇಕಾಗುತ್ತದೆ. ನನ್ನ ಬಳಿ 2296 ಕ್ಕೂ ಹೆಚ್ಚು ವಿಡಿಯೋಗಳಿವೆ. ತಡೆಯಾಜ್ಞೆ ತೆರವುಗೊಳಿಸಿದರೆ ಎಲ್ ಇಡಿ ಪರದೆ ಹಾಕಿ ತೋರಿಸ್ತೀನಿ” ಎಂದು ಹೇಳಿದ್ದರು.
ಈ ತಡೆಯಾಜ್ಞೆ ತೆರವುಗೊಳಿಸಿದರೆ ಎಂಬ ಉಲ್ಲೇಖವು ಅದು ಪ್ರಜ್ವಲ್ ರೇವಣ್ಣ ಕುರಿತು ಹೇಳಿದ ಮಾತು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಆದರೆ, ಇದೀಗ, ”ಆ ವಿಡಿಯೋಗಳು ಬಿಡುಗಡೆಯಾಗಿರುವುದರಲ್ಲಿ ತಮ್ಮ ಪಾತ್ರವಿಲ್ಲ” ಎಂದು ಹೇಳಿ, ಚರ್ಚೆಯಿಂದ ದೇವರಾಜೇಗೌಡ ಜಾರಿಕೊಂಡಿದ್ದಾರೆ.
ಇನ್ನು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸುತ್ತ ಪ್ರಜ್ವಲ್ ರೇವಣ್ಣ ಹೆಸರು ತಳುಕು ಹಾಕಿ ಚರ್ಚೆಗಳು ನಡೆಯುತ್ತಿವೆ. ಈ ಅಪವಾದವನ್ನು ಒಪ್ಪಿಕೊಂಡಂತೆ ಪ್ರಜ್ವಲ್ ರೇವಣ್ಣ ಚುನಾವಣಾ ಕಣದಲ್ಲಿದ್ದರೂ ಜಿಲ್ಲೆಯಲ್ಲಿ ಪ್ರಚಾರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ದೇವೇಗೌಡರ ಕುಟುಂಬದ ಯಾರೊಬ್ಬರೂ ಮಾತನಾಡುತ್ತಿಲ್ಲ.
”ರಾಜ್ಯದ ಹಿರಿಯ ಮುತ್ಸದಿ ರಾಜಕಾರಣಿ, ಮಾಜಿ ಪ್ರಧಾನಿ ದೇವೇಗೌಡರು ಮೌನವಾಗಿರುವುದು ತರವಲ್ಲ. ಅದೂ ಅವರದ್ದೇ ಕುಟುಂಬದ ಬಗ್ಗೆಯೇ ಇಂತಹದೊಂದು ಲೈಂಗಿಕ ಹಗರಣದ ಅಪವಾದ ಬಂದರೂ ಅವರು ಮೌನವಾಗಿರುವುದು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ. ಹಾಸನ ಜಿಲ್ಲೆಯಲ್ಲಿ ಹಲವಾರು ಹೆಣ್ಣು ಮಕ್ಕಳು ಮಾನ ಕಳೆದುಕೊಳ್ಳುತ್ತಿದ್ದಾರೆ. ಮುಂದೆ ಅವರ ಬದುಕು ಏನಾಗಬಹುದು ಎಂಬ ಗಂಭೀರತೆ ನಿಮಗಿದ್ದರೆ ಈಗಲಾದರೂ ಮೌನ ಮುರಿದು, ಮಾತಾಡಿ” ಎಂದು ಹಲವಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸುತ್ತಿದ್ದಾರೆ.
”ಮಹಿಳೆಯರನ್ನು ಗೌರವಿಸುತ್ತೇವೆ, ಮಹಿಳೆಯರನ್ನು ರಕ್ಷಿಸುತ್ತೇವೆ ಎಂದು ಬೊಬ್ಬೆ ಹೊಡೆಯುವ ಬಿಜೆಪಿಗರು ಕೂಡ ಮೌನವಾಗಿದ್ದಾರೆ. ಬಿಜೆಪಿ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಬಗ್ಗೆ, ಅದರಲ್ಲೂ, ಮೈತ್ರಿ ಅಭ್ಯರ್ಥಿಯ ಬಗ್ಗೆ ಇಂತಹ ಗಂಭೀರ ಆರೋಪ ಕೇಳಿ ಬಂದಿದೆ. ಈಗಲೂ, ಜೆಡಿಎಸ್ ಜೊತೆ ಮೈತ್ರಿ ಮುಂದುವರೆಸುತ್ತೀರಾ? ಇದೇನಾ ನಿಮ್ಮ ‘ಬೇಟಿ ಬಚಾವೋ – ಬೇಟಿ ಪಡಾವೋ”’ ಎಂದು ಬಿಜೆಪಿಯನ್ನು ನೆಟ್ಟಿಗರು ಪ್ರಶ್ನಿಸಿದ್ದಾರೆ.