‘ಮೋದಿ ಕಿ ಗ್ಯಾರಂಟಿ’ ಈಗ ಕುರುಹು ಇಲ್ಲದೆ ಕಣ್ಮರೆಯಾಗಿದ್ದು, ಇದರಿಂದಾಗಿ ಆತಂಕಕ್ಕೆ ಒಳಗಾದ ಬಿಜೆಪಿ ಸುಳ್ಳಿನ ಬೆನ್ನತ್ತಿದೆ ಎಂದು ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದಾರೆ. ಹಾಗೆಯೇ ಕಾಂಗ್ರೆಸ್ ಮತ್ತು ಮುಸ್ಲಿಮರ ವಿರುದ್ಧದ ಪ್ರಧಾನಿ ನರೇಂದ್ರ ಮೋದಿ ಅವರ ದ್ವೇಷ ಭಾಷಣವನ್ನು ಟೀಕಿಸಿದರು.
ಕಾಂಗ್ರೆಸ್ ಪ್ರಣಾಳಿಕೆಯನ್ನು ರಚಿಸಿದ ಸಮಿತಿಯ ಅಧ್ಯಕ್ಷರಾಗಿದ್ದ ಚಿದಂಬರಂ ಅವರು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, “ನಮ್ಮ ಪ್ರಣಾಳಿಕೆಯು ಎಲ್ಲಾ ವರ್ಗದ ಜನರಿಗೆ ನ್ಯಾಯದ ಭರವಸೆ ನೀಡುತ್ತದೆ” ಎಂದು ಪ್ರತಿಪಾದಿಸಿದರು.
“ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆ 2024 ರಿಂದ ಬಿಜೆಪಿಯನ್ನು ಕೆಣಕಿರುವುದು ಸ್ಪಷ್ಟವಾಗಿದೆ. ಪ್ರಣಾಳಿಕೆಯು ಜನರ ಮನಸ್ಸಿನಲ್ಲಿ, ವಿಶೇಷವಾಗಿ ಬಡವರು ಮತ್ತು ಮಧ್ಯಮ ವರ್ಗದವರ ಮನಸ್ಸಿನಲ್ಲಿ ಆಳವಾದ ಪ್ರಭಾವ ಬೀರಿದೆ. ಪ್ರಣಾಳಿಕೆಯು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ, ಯುವಕರು ಮತ್ತು ಮಹಿಳೆಯರಿಗೆ ಹೊಸ ಭರವಸೆಯನ್ನು ನೀಡುತ್ತದೆ” ಎಂದು ಚಿದಂಬರಂ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬಿಜೆಪಿ ರಾಜಕೀಯ ಪಕ್ಷವಲ್ಲ, ಮೋದಿಯನ್ನು ಆರಾಧಿಸುವ ಭಕ್ತಗಣ: ಪಿ ಚಿದಂಬರಂ
‘ಸಂಪತ್ತಿನ ಮರುಹಂಚಿಕೆ’ ಮತ್ತು ‘ಪಿತ್ರಾರ್ಜಿತ ತೆರಿಗೆ’ ಕುರಿತ ಇತ್ತೀಚಿನ ಬಿಜೆಪಿಯ ಎಲ್ಲಾ ವಿವಾದಾತ್ಮಕ ಹೇಳಿಕೆಗಳು ಬಿಜೆಪಿಯಲ್ಲಿ ಆವರಿಸಿರುವ ಭಯದ ಉತ್ತಮ ಸೂಚಕವಾಗಿದೆ. ಪ್ರಣಾಳಿಕೆಯಲ್ಲಿ ಸಂಪತ್ತಿನ ಮರುಹಂಚಿಕೆ ಅಥವಾ ದೀರ್ಘಾವಧಿಯಿಂದ ರದ್ದುಪಡಿಸಲಾದ ಪಿತ್ರಾರ್ಜಿತ ತೆರಿಗೆ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂದು ಚಿದಂಬರಂ ಸ್ಪಷ್ಟಪಡಿಸಿದರು.
“1985 ರಲ್ಲಿ ಕಾಂಗ್ರೆಸ್ ಸರ್ಕಾರವು ‘ಎಸ್ಟೇಟ್ ಸುಂಕ’ವನ್ನು ರದ್ದುಗೊಳಿಸಿದೆ ಎಂಬುವುದನ್ನು ನಾನು ಜನರಿಗೆ ನೆನಪಿಸಲು ಬಯಸುತ್ತೇನೆ. ‘ಸಂಪತ್ತು ತೆರಿಗೆ’ ಅನ್ನು 2015ರಲ್ಲಿ ಬಿಜೆಪಿ ಸರ್ಕಾರ ರದ್ದು ಮಾಡಿದೆ” ಎಂದು ಹೇಳಿದ ಮಾಜಿ ಹಣಕಾಸು ಸಚಿವರು, ‘ಉದ್ಯೋಗ, ಸಂಪತ್ತು ಮತ್ತು ಕಲ್ಯಾಣ’ ಎಂಬ ಮೂರು ಮ್ಯಾಜಿಕ್ ಪದಗಳನ್ನು ಕಾಂಗ್ರೆಸ್‌ನ ಪ್ರಣಾಳಿಕೆ ಆಧರಿಸಿದೆ ಎಂದರು.
ಇದನ್ನು ಓದಿದ್ದೀರಾ? ಕಾಂಗ್ರೆಸ್‌ಗೆ ನೀಡಿರುವ ಐಟಿ ನೋಟಿಸ್ ಎಲ್ಲ ವಿಪಕ್ಷಗಳಿಗೆ ಎಚ್ಚರಿಕೆ ಸಂದೇಶ: ಪಿ ಚಿದಂಬರಂ
“ಉದ್ಯೋಗ ಎಂದರೆ ನಾವು ಲಕ್ಷಾಂತರ ಜನರಿಗೆ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುವುದು ಆಗಿದೆ. ಸಂಪತ್ತು ಎಂದರೆ ನಾವು ಸಂಪತ್ತನ್ನು ಸೃಷ್ಟಿಸುವ ಮತ್ತು ನಮ್ಮ ಜಿಡಿಪಿಯನ್ನು ವೇಗವಾಗಿ ಹೆಚ್ಚಿಸುವ ಪಾಲಿಸಿಯನ್ನು ಅಳವಡಿಸಿಕೊಳ್ಳುವುದು. ಕಲ್ಯಾಣ ಎಂದರೆ ಬಡ ಮತ್ತು ಮಧ್ಯಮ ವರ್ಗಗಳ ಆದಾಯ ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಕ್ರಮಗಳು ಆಗಿದೆ” ಎಂದು ವಿವರಿಸಿದರು.
“ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳು ಜನರ ಬಾಯಲ್ಲಿ ಇಂದಿಗೂ ಮಾತನಾಡುವ ವಿಚಾರವಾಗಿದೆ. ಆದರೆ ದುರದೃಷ್ಟವಶಾತ್ ಬಿಜೆಪಿಯ ‘ಮೋದಿ ಕಿ ಗ್ಯಾರಂಟಿ’ ಯಾವುದೇ ಕುರುಹು ಇಲ್ಲದೆ ಕಣ್ಮರೆಯಾಗಿದೆ. ಹೀಗಾಗಿ, ಬಿಜೆಪಿ ತನ್ನ ಹಳೆಯ ವಿರೂಪ, ಸುಳ್ಳು ಮತ್ತು ನಿಂದನೆಯ ತಂತ್ರಗಳಿಗೆ ಮರಳಿದೆ” ಎಂದು ಟೀಕಿಸಿದರು.