ಅಂಕಗಳನ್ನು ವಿದ್ಯಾರ್ಥಿ ಬರೆದ ಗುಣಮಟ್ಟದ ಉತ್ತರದ ಆಧಾರದ ಮೇಲೆ ನೀಡಲಾಗುತ್ತದೆ. ಆದರೆ ಉತ್ತರ ಪ್ರದೇಶದ ವಿವಿಯೊಂದರಲ್ಲಿ ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳಲ್ಲಿ ‘ಜೈ ಶ್ರೀರಾಮ್’ ಹಾಗೂ ಭಾರತೀಯ ಕ್ರಿಕೆಟ್ ಪಟುಗಳ ಹೆಸರನ್ನು ಬರೆದಿರುವುದಕ್ಕೆ ಮೌಲ್ಯಮಾಪಕರು ಶೇ.50 ರಷ್ಟು ಹೆಚ್ಚಿನ ಅಂಕಗಳನ್ನು ನೀಡಿದ್ದಾರೆ.
ಜುನಾಪುರ್ ನಗರದ ವೀರ್ ಬಹುದ್ದೂರ್ ಸಿಂಗ್ ಪೂರ್ವಾಂಚಲ್ ವಿವಿಯಲ್ಲಿ ಈ ಘಟನೆ ನಡೆದಿದೆ. ಮೂಲಗಳ ಪ್ರಕಾರ ಈ ರೀತಿ ಹೆಚ್ಚು ಅಂಕ ನೀಡಿ ಕೃತ್ಯವೆಸಗಿದ ಇಬ್ಬರು ಶಿಕ್ಷಕರನ್ನು ವಜಾಗೊಳಿಸಲು ವಿಶ್ವವಿದ್ಯಾಲಯ ಶಿಫಾರಸ್ಸು ಮಾಡಿದೆ.
ವೀರ್ ಬಹುದ್ದೂರ್ ಸಿಂಗ್ ಪೂರ್ವಾಂಚಲ್ ವಿವಿಯ ಮಾಜಿ ವಿದ್ಯಾರ್ಥಿಯಾದ ದಿವ್ಯಾನ್ಷು ಸಿಂಗ್ ಎಂಬುವವರು ಆರ್‌ಟಿಐ ಮೂಲಕ ಉತ್ತರ ಪತ್ರಿಕೆಗಳನ್ನು ಪುನರ್ ಪರಿಶೀಲಿಸುವ ಮಾಹಿತಿ ಕೇಳಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದ್ವೇಷ -ವಿರಸ- ವೈಷಮ್ಯಗಳ ಮೇಲೆ ಮತಯಾಚನೆ ಪರಮವಿಕೃತಿ
ಮೂಲಗಳ ಪ್ರಕಾರ ಫಾರ್ಮಸಿ ಕೋರ್ಸಿನ ನಾಲ್ವರು ವಿದ್ಯಾರ್ಥಿಗಳು ತಮ್ಮ ಡಿ ಫಾರ್ಮಾ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಹಲವು ಕಡೆಗಳಲ್ಲಿ ‘ಜೈ ಶ್ರೀರಾಮ್’ ಹಾಗೂ ಭಾರತೀಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ರ್‌ಗಳ ಹೆಸರುಗಳನ್ನು ಬರೆದಿದ್ದರು.
ಈ ರೀತಿ ಉತ್ತರ ಬರೆದ ಕಾರಣಕ್ಕಾಗಿ ಈ ನಾಲ್ವರು ವಿದ್ಯಾರ್ಥಿಗಳು ಶೇ.50 ರಷ್ಟು ಹೆಚ್ಚಿನ ಅಂಕ ಪಡೆದಿದ್ದರು. ನಂತರ ಉತ್ತರ ಪತ್ರಿಕೆಗಳನ್ನು ಪುನಃ ಮರುಮೌಲ್ಯಮಾಪನಗೊಳಿಸಿದ ನಂತರ ಆ ನಾಲ್ವರು ವಿದ್ಯಾರ್ಥಿಗಳು ಶೂನ್ಯ ಅಂಕ ಪಡೆದಿದ್ದರು.
ಆರ್‌ಟಿಐ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಯು ಈ ಪ್ರಕರಣದ ವಿವರವನ್ನು ರಾಜ್ಯಪಾಲರು, ಉಪಕುಲಪತಿಯವರಿಗೆ ಕಳುಹಿಸಿದ್ದು, ತನಿಖೆ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ರಾಜಭವನ ಕೂಡ ವಿವಿಯ ಸಮಿತಿ ನೇತೃತ್ವದಲ್ಲಿ ತನಿಖೆ ಕೈಗೊಳ್ಳುವಂತೆ ಆದೇಶಿಸಿದೆ.
