ಈ ದಿನ ಸಂಪಾದಕೀಯ | ದ್ವೇಷ -ವಿರಸ- ವೈಷಮ್ಯಗಳ ಮೇಲೆ ಮತಯಾಚನೆ ಪರಮವಿಕೃತಿ

Date:

ನೈಜ ಯದುವಂಶಿಗಳಾಗಿದ್ದರೆ ಭಗವಾನ್ ಕೃಷ್ಣನನ್ನು ಅವಮಾನಿಸಿದವರನ್ನು ಶಿಕ್ಷಿಸಿ ಎನ್ನುತ್ತಾರೆ ಮೋದಿ. ಒಂದು ಇಡೀ ಜನಾಂಗಕ್ಕೇ ನುಸುಳುಕೋರರು ಎಂದು ಹಣೆಪಟ್ಟಿ ಹಚ್ಚಿ ದ್ವೇಷ ಬಿತ್ತುತ್ತಾರೆ. ದ್ವೇಷದ ಆಧಾರದ ಮೇಲೆ ಹಿಂದೂ ಮತಗಳನ್ನು ಧೃವೀಕರಿಸಲು ಮುಂದಾಗುತ್ತಾರೆ.

 

ದ್ವೇಷ, ನಿಂದೆ, ಹಗೆತನ ಪೂರ್ವಗ್ರಹಗಳನ್ನೇ ಬಿತ್ತಿ ಬೆಳೆದು ತಮ್ಮ ಅಧಿಕಾರ ಗದ್ದುಗೆಯನ್ನು ಗಟ್ಟಿ ಮಾಡಿಕೊಂಡವರಿದ್ದಾರೆ. ವಿಷಪೂರಿತ ಫಸಲು ಕಟಾವು ಮಾಡಿಕೊಂಡು ಜನರ ಕಷ್ಟ ಕಣ್ಣೀರಿನ ಸಮಾಧಿಗಳ ಮೇಲೆ ಸಿಂಹಾಸನ ಇರಿಸಿ ಗಹಗಹಿಸುವ ಕಟುಕ ಕೃಷಿಕರು ಇತಿಹಾಸದಲ್ಲಿ ದಾಖಲಾಗಿ ಹೋಗಿದ್ದಾರೆ. ಮನುಷ್ಯತ್ವದ ಆಳದಲ್ಲಿ ಸುರುಳಿ ಸುತ್ತಿ ಮಲಗಿರುವ ಸುಪ್ತವಿಕಾರಗಳನ್ನು ಬಡಿದೆಬ್ಬಿಸಿ ಕೇಕೆ ಹಾಕಿಸುವವರು ಇವರು. ಮನುಷ್ಯ ಕುಲದ ಕರಾಳ ಇತಿಹಾಸದ ಕಪ್ಪು ಚುಕ್ಕೆಗಳು. ವಿರಸದ ವಿಧ್ವಂಸದ ಜ್ವಾಲೆಗಳನ್ನು ಹೊತ್ತಿಸಿ ದೇಶ ದೇಶಗಳನ್ನು ಬೇಯಿಸಿದವರು. ಜನಸಾಮಾನ್ಯರ ಸುಖ ದುಃಖಗಳಿಗೆ ಇವರು ಮೂರು ಕಾಸಿನ ಕಿಮ್ಮತ್ತನ್ನೂ ನೀಡುವುದಿಲ್ಲ.

ಹುಸಿ ಭಯಗಳನ್ನು ಸೃಷ್ಟಿಸಿ ಒಬ್ಬರ ವಿರುದ್ಧ ಮತ್ತೊಬ್ಬರನ್ನು ಎತ್ತಿ ಕಟ್ಟಿ ಒಡೆದು ಆಳುವುದೇ ಇಂತಹ ದುರಾತ್ಮರ ಧರ್ಮ ಮತ್ತು ಮರ್ಮ. ಕಾಲ ಕಾಲಕ್ಕೆ ಹತ್ತು ಹಲವು ದೇಶಕೋಶಗಳ ಸೂತ್ರ ಹಿಡಿದು ಚರಿತ್ರೆಯ ಕರಾಳ ಪುಟಗಳಲ್ಲಿ ದಾಖಲಾಗಿ ಹೋಗಿದ್ದಾರೆ. ಇತಿಹಾಸ ಇವರಿಗೆ ಪಾಠಗಳನ್ನು ಕಲಿಸುತ್ತಲೇ ಇರುತ್ತದೆ. ಆದರೂ ಇಂತಹವರ ಸಾಲಿಗೆ ಸೇರಲು ಹಲವು ಮಂದಿ ಚಂಡ ಪ್ರಚಂಡರು ಸೇರಲು ಹಗಲಿರುಳು ತಹತಹಿಸುತ್ತಲೇ ಇರುತ್ತಾರೆ. ಇತಿಹಾಸದ ತಿಪ್ಪೆ ಸೇರಿದರೂ ವರ್ತಮಾನದ ಉಪ್ಪರಿಗೆಯ ಮೋಹ ಇವರನ್ನು ಬೆನ್ನು ಹತ್ತಿ ಕಾಡುತ್ತಿರುತ್ತದೆ. ನಮ್ಮ ಪ್ರಧಾನಮಂತ್ರಿಯವರನ್ನೂ ಇಂತಹ ದೌರ್ಬಲ್ಯ ಮೆಟ್ಟಿ ಹಿಡಿದಂತಿದೆ.
ವಿರಸ ವೈಷಮ್ಯಗಳೇ ಇವರ ಕರ್ಮಸೂಚಿ. ಇದರ ಅಡಿಪಾಯದ ಮೇಲೆ ಅಭಿವೃದ್ಧಿಯ ಹುಸಿ ಕನಸುಗಳನ್ನು ಹರವಿ ಸಿಂಹಾಸನ ಹಿಡಿದವರು ಇವರು.

ಆಳುವವರಿಗೆ ತಮ್ಮ ಪ್ರಜೆಗಳ ಅನ್ನ ನೀರು ನೆರಳು ಅರಿವೆಗಳ ಕುರಿತು ಕಾಳಜಿ ಇರಬೇಕು. ಹಸಿದ ಹೊಟ್ಟೆಗಳಿಗೆ ಅನ್ನ, ದುಡಿಯುವ ಕೈಗಳಿಗೆ ಉದ್ಯೋಗಗಳು ಒದಗಿಸಿ ದೇಶದ ಸಂಪತ್ತನ್ನು ಸೃಷ್ಟಿಸಬೇಕು. ಹಸಿದ ಹೊಟ್ಟೆಗಳಿಗೆ ವೇದಾಂತ ಬೋಧನೆ ಸಲ್ಲದು ಎಂದಿದ್ದರು ಸ್ವಾಮಿ ವಿವೇಕಾನಂದ. ಧರ್ಮ ಒತ್ತಟ್ಟಿಗಿರಲಿ, ಹಸಿದ ಹೊಟ್ಟೆಗಳಿಗೆ ವೈಷಮ್ಯದ ವಿಷ ಹಿಂಡಿ, ದುಡಿಯುವ ಕೈಗಳಿಗೆ ದ್ವೇಷದ ಕತ್ತಿ ಕಠಾರಿಗಳನ್ನು ಹಂಚುವುದು ಪರಮ ವಿಕೃತಿ. ಈ ಕೃತಿಯು ಎಲ್ಲ ಕಾಲಕ್ಕೂ ಸಲ್ಲುವುದಿಲ್ಲ. ಅದಕ್ಕೊಂದು ತೀರುವಳಿ ದಿನಾಂಕ ಇದ್ದೇ ಇರುತ್ತದೆ ನಿಜ. ಆದರೆ ಇಂತಹ ದಿನಾಂಕ ಹತ್ತಿರ ಬರುವ ಹೊತ್ತಿಗೆ, ತಮ್ಮ ಮೈಮನಗಳಿಗೆ ಎರೆದ ವಿದ್ವೇಷದ ನಶೆ ಇಳಿದ ಜನ ಎಚ್ಚೆತ್ತುಕೊಳ್ಳುವ ಹೊತ್ತಿಗೆ ಅನಾಹುತ ಆಗಿ ಹೋಗಿರುತ್ತದೆ. ನೆತ್ತರು ನರನಾಡಿಗಳಿಗೆ ಇಳಿದು ವ್ಯಾಪಿಸಿದ ವಿಷ ಇಳಿಯುವುದು ಅಷ್ಟು ಸಲೀಸೇ?

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಲೋಕಸಭಾ ಚುನಾವಣೆಯ ಮೊದಲ ಸುತ್ತಿನ ಮತದಾನದ ವೈಖರಿ ದೇಶ ಆಳುವವರಲ್ಲಿ ದಿಗಿಲು ಹುಟ್ಟಿಸಿದಂತಿದೆ. 102 ಸೀಟುಗಳಲ್ಲಿ ನಡೆದ ಮತದಾನ ನೀರಸವಾಗಿದೆ. ಮೋದಿ ಅಲೆ ಕಾಣೆಯಾಗಿದೆ. ಮತದಾನದ ಪ್ರಮಾಣ 2019ರ ಚುನಾವಣೆಗೆ ಹೋಲಿಸಿದರೆ ನಿರಾಶಾದಾಯಕ. ನಾಲ್ಕು ನೂರು ಸೀಟುಗಳ ಸಂಖ್ಯೆಯ ದಾಟಿ ಜಯಭೇರಿ ಬಾರಿಸುವ ಮೋದಿ ಘೋಷಣೆಗೆ ಮಂಕು ಹಿಡಿದಿದೆ. ಮೋದಿ ನಿರ್ಮಿತ ಹುಸಿ ಹುರುಪು ಕಳೆದ ಎರಡು ಚುನಾವಣೆಗಳಲ್ಲಿ ಮತದಾರರನ್ನು ಮತಗಟ್ಟೆಗಳಿಗೆ ಕರೆ ತಂದಿದ್ದು ಹೌದು. ಈ ಪರಿಯ ಉತ್ಸಾಹ ಈ ಸಲ ಕಾಣೆಯಾಗಿದೆ.

ಶೇ.4.6ರಷ್ಟು ಮತದಾನ ತಗ್ಗಿದೆ. ಮತದಾನದ ಶೇಕಡಾವಾರು ಪ್ರಮಾಣ ಕೆಳಗೆ ಬಿದ್ದಿದೆ. 2019ರಲ್ಲಿ ಶೇ 69.9 ರಷ್ಟು ಮತದಾನ ನಡೆದಿತ್ತು. ಚುನಾವಣಾ ಆಯೋಗದ ಅಂಕಿ ಅಂಶಗಳ ಪ್ರಕಾರವೇ ಈ ಪ್ರಮಾಣ ಶೇ 65.5ಕ್ಕೆ ಕುಸಿದಿದೆ. ಒಂದೆಡೆ 2024ರ ಚುನಾವಣೆಗಳ ಮೊದಲ ದೃಶ್ಯದ ಝಲಕ್ ಎನ್ನುತ್ತಾರೆ ಯೋಗೇಂದ್ರ ಯಾದವ್. ಮೊದಲ ಹಂತ 2024ರ ಚುನಾವಣೆಯ ಕನ್ನಡಿ. 4.60 ಪರ್ಸೆಂಟ್ ಅಂದ್ರೆ 76 ಲಕ್ಷ ಮಂದಿ ಮತ ಚಲಾಯಿಸಿಲ್ಲ. ಮುಂಬರುವ ಹಂತಗಳಲ್ಲಿನ ಶೇಕಡಾವಾರು ಪ್ರಮಾಣ ಇನ್ನಷ್ಟು ಕುಸಿಯಲಿದೆ ಎನ್ನುತ್ತಾರೆ ವೀಕ್ಷಕರು.

ಮೋದಿ ಸುಳ್ಳುಗಳ ಕುರಿತು ಮತದಾರರ ಉತ್ಸಾಹ ತಗ್ಗಿದೆ. ದೇಶವನ್ನು ಕಾಡುವ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣವೆಂದು ಕಾಂಗ್ರೆಸ್ ಪಕ್ಷ ಮತ್ತು ಮುಸಲ್ಮಾನರನ್ನು ದೂಷಿಸುವುದರಲ್ಲೇ ಕಾಲ ಕಳೆದಿದ್ದಾರೆ ಪ್ರಧಾನಮಂತ್ರಿ ಮೋದಿ. ಹತ್ತು ವರ್ಷಗಳ ನಂತರವೂ ಅವರು ಈ ಚಾಳಿ ಬಿಟ್ಟಿಲ್ಲ. ಹಿಂದೂಗಳನ್ನು ಮುಸಲ್ಮಾನರ ವಿರುದ್ಧ ಕೆರಳಿಸಿ ಛೂ ಬಿಡುವ ಅವರ ಕುಯುಕ್ತಿಗೆ ಕೊನೆಯೇ ಇಲ್ಲ. ಮತದಾರರ ಮೇಲೆ ಮಂಕುಬೂದಿ ಎರಚುವ ಕುರಿತು ಅವರಿಗಿರುವ ಆತ್ಮವಿಶ್ವಾಸ ಅಪಾರ.

ಕಾಂಗ್ರೆಸ್ಸು ಮುಸಲ್ಮಾನರಿಗೆ ನೀಡಲು ಹೊರಟಿರುವ ದೇಶದ ಸಂಪತ್ತನ್ನು ತಾವು ಹಿಂದುಗಳಿಗೆ ಮರು ಹಂಚಿಕೆ ಮಾಡುವುದಾಗಿ ಮೋದಿ ಗ್ಯಾರಂಟಿ ನೀಡಿದ್ದಾರೆ. ತಾವು ಪ್ರಧಾನಿಯಾದ ನಂತರ ದೇಶದ ಸಂಪತ್ತನ್ನು ತಮ್ಮ ಮಿತ್ರರಾದ ಅದಾನಿ, ಅಂಬಾನಿಗಳಿಗೆ ನಿರಂತರವಾಗಿ ಧಾರೆ ಎರೆಯುತ್ತ ಬಂದಿದ್ದಾರೆ. ಈ ಘೋರ ಅನ್ಯಾಯದ ಹಂಚಿಕೆಯನ್ನು ಅವರು ಮೊದಲು ನಿಲ್ಲಿಸಬೇಕು. ಈ ಸಂಬಂಧ ಮೋದಿ ಗ್ಯಾರಂಟಿ ಯಾಕೆ ನಾಪತ್ತೆ ಎಂದು ಜವಾಬು ನೀಡಬೇಕು.

ದ್ವೇಷದ ಕುದುರೆಯೇರಿ ದಿಬ್ಬಣ ಹೊರಡುವ ಮದುಮಗ ಆಗಿ ಹೋಗಿದ್ದಾರೆ ಮೋದಿ. ಇಂತಹ ಹಗೆತನದ ಕುದುರೆ ಸವಾರಿ ದೇಶವನ್ನು ಸುಸ್ಥಿರವಾಗಿ ಇಡುವುದಿಲ್ಲ ಎಂಬ ಹಿರಿಯ ನ್ಯಾಯವಾದ ಕಪಿಲ್ ಸಿಬಲ್ ಮಾತಿನಲ್ಲಿ ವಿವೇಕವಿದೆ.

ರಾಮಮಂದಿರವನ್ನು ವಿರೋಧಿಸುವವರನ್ನು ಮರೆಯಬೇಡಿ. ನೈಜ ಯದುವಂಶಿಗಳಾಗಿದ್ದರೆ ಭಗವಾನ್ ಕೃಷ್ಣನನ್ನು ಅವಮಾನಿಸಿದವರನ್ನು ಶಿಕ್ಷಿಸಿ ಎನ್ನುತ್ತಾರೆ ಮೋದಿ. ಒಂದು ಇಡೀ ಜನಾಂಗಕ್ಕೇ ನುಸುಳುಕೋರರು ಎಂದು ಹಣೆಪಟ್ಟಿ ಹಚ್ಚಿ ದ್ವೇಷ ಬಿತ್ತುತ್ತಾರೆ. ದ್ವೇಷದ ಆಧಾರದ ಮೇಲೆ ಹಿಂದೂ ಮತಗಳನ್ನು ಧೃವೀಕರಿಸಲು ಮುಂದಾಗುತ್ತಾರೆ. ‘ವಿಶ್ವಜನತಂತ್ರದ ಜನನಿ’ ಎಂದು ಭಾರತವನ್ನು ತಾವೇ ಬಣ್ಣಿಸುತ್ತಾರೆ. ಆದರೆ ಮೋದಿಯವರ ದ್ವೇಷ ಬಿತ್ತನೆಯ ಕೃತ್ಯವು ವಿಶ್ವಜನತಂತ್ರದ ಜನನಿ ಎಂಬ ಬಣ್ಣನೆಗೆ ಶೋಭಿಸುವುದಿಲ್ಲ.

ಚುನಾವಣಾ ನೀತಿ ಸಂಹಿತೆಯ ಚೀರಹರಣವಿದು. ಎಳ್ಳಷ್ಟು ನೈತಿಕತೆ ಉಳಿದಿದ್ದರೂ ಚುನಾವಣಾ ಆಯೋಗ ಕ್ರಮ ಜರುಗಿಸಬೇಕು. ಧರ್ಮಗಳ ನಡುವೆ ದ್ವೇಷ ಹುಟ್ಟಿಸುವ ಮಾತುಗಳನ್ನು ಆಡಕೂಡದೆಂದು ನೀತಿ ಸಂಹಿತೆ ವಿಧಿಸುತ್ತದೆ. ಹೇಳಿದವರಿಗೆ ಜೈಲು ಶಿಕ್ಷೆ ವಿಧಿಸುವ ಮತ್ತು ಆರು ವರ್ಷಗಳ ಕಾಲ ಚುನಾವಣೆಯಿಂದ ದೂರ ಇರಿಸುವ ಶಿಕ್ಷೆಯ ಅಧಿಕಾರ ಆಯೋಗಕ್ಕೆ ಉಂಟು. ಆಯೋಗದ ಕಣ್ಣುಗಳು ಇಂಗಿ ಹೋಗಿವೆಯೇ, ನಾಲಗೆ ಸೇದಿ ಹೋಗಿದೆಯೇ, ಆತ್ಮಸಾಕ್ಷಿ ಸತ್ತು ಹೋಗಿದೆಯೇ?

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರಾಜ್ಯವನ್ನು ತಲ್ಲಣಿಸಿದ ಹೆಣ್ಣುಮಕ್ಕಳ ಸರಣಿ ಹತ್ಯೆಗಳು ಕೊಡುತ್ತಿರುವ ಸಂದೇಶವೇನು?

ಒಂದು ತಿಂಗಳಲ್ಲಿ ಮೂರ್ನಾಲ್ಕು ಘಟನೆಗಳು ನಡೆದಾಗ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಮಹಿಳೆಯರಿಗೆ...

ಈ ದಿನ ಸಂಪಾದಕೀಯ | ಮುಸ್ಲಿಮರು, ಮಾಧ್ಯಮಗಳು ಮತ್ತು ಮೂರು ಕೊಲೆಗಳು

ನೇಹಾ ಹತ್ಯೆಯ ವಿರುದ್ಧ ಕಾಣಿಸಿಕೊಂಡ ಜನಾಕ್ರೋಶದ ಹಿಂದೆ ಸುದ್ದಿ ಮಾಧ್ಯಮಗಳ ಪ್ರಚೋದನೆ...

ಈ ದಿನ ಸಂಪಾದಕೀಯ | ಹಿಂದೂ-ಮುಸ್ಲಿಮ್ ರಾಜಕಾರಣ ಮಾಡುವುದಿಲ್ಲವೇ ನಮ್ಮ ಪ್ರಧಾನಿ!

ಪ್ರಸಿದ್ಧ ಇಂಗ್ಲಿಷ್ ನಿಯತಕಾಲಿಕ 'ದಿ ಎಕಾನಮಿಸ್ಟ್‌'ನ 2022ರ ಏಪ್ರಿಲ್ ಸಂಚಿಕೆಯೊಂದರ ಬರೆಹವೊಂದರ...

ಈ ದಿನ ಸಂಪಾದಕೀಯ | ದೇಶ ತನ್ನ ಹಳೆಯ ಲಯಕ್ಕೆ, ಪ್ರಜಾಪ್ರಭುತ್ವಕ್ಕೆ ಹಿಂದಿರುಗುತ್ತಿದೆಯೇ?

'ಬಿಜೆಪಿಯ ಮುಂದಿನ ಪ್ರಧಾನಿ ಅಭ್ಯರ್ಥಿ ಯಾರು' ಎನ್ನುವುದು ಕೇವಲ ಒಂದು ಪೊಲಿಟಿಕಲ್...