ಲೋಕಸಭಾ ಚುನಾವಣೆಯ ಕರ್ತವ್ಯಕ್ಕೆ ತೆರಳುವ ಬಹುತೇಕ ಸೇವಾ ಸಿಬ್ಬಂದಿಗಳು ಈ ಬಾರಿ ಮತದಾನದ ಅವಕಾಶದಿಂದ ವಂಚಿತರಾಗುವ ಆತಂಕದಲ್ಲಿದ್ದು, ಹೊರಗುತ್ತಿಗೆ ವಾಹನಗಳ ಚಾಲಕರು ಹಾಗೂ ಸಿಬ್ಬಂದಿ ಈ ಬಾರಿಯೂ ಮತದಾನದಿಂದ ವಂಚಿತರಾಗಲಿದ್ದಾರೆ.
ಸಶಸ್ತ್ರ ಮೀಸಲು ಪಡೆ, ಹೊರ ರಾಜ್ಯ, ದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು, ಪೊಲೀಸ್ ಸಿಬ್ಬಂದಿ ಮೊದಲಾದ ಸೇವಾ ಮತದಾರರಿಗೆ ಮತದಾನಕ್ಕೆ ಅವಕಾಶ ಇದೆ. ಅದರ ಜತೆಗೆ, ಚುನಾವಣೆಯ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿ, ಸೂಕ್ಷ್ಮ ವೀಕ್ಷಕರು, ವಿಚಕ್ಷಣ ದಳ, ಕಣ್ಗಾವಲು ಸಿಬ್ಬಂದಿ ಮತದಾನ ಸೌಲಭ್ಯ ಕೇಂದ್ರಗಳಿಗೆ ತೆರಳಿ ಅಂಚೆ ಮತ ಪತ್ರಗಳ ಮೂಲಕ ಮತ ಚಲಾಯಿಸಬಹುದು.
ಚುನಾವಣಾ ಕರ್ತವ್ಯಕ್ಕೆ ನಿಯೋಜಿತವಾದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಜತೆಗೆ, 12 ವಿವಿಧ ಇಲಾಖೆಗಳ ಅಗತ್ಯ ಸೇವೆಗಳ ಮತದಾರರಿಗೆ (ಎವಿಇಎಸ್) ಅಂಚೆ ಮತದಾನದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಚುನಾವಣಾ ಆಯೋಗವು ಇಂತಹ ಇಲಾಖೆಗಳನ್ನು ಅಗತ್ಯ ಸೇವೆಗಳೆಂದು ಪರಿಗಣಿಸಿದ್ದು, ಆಯಾ ಇಲಾಖಾವಾರು ನೀಡುವ ಪಟ್ಟಿಯ ಅನುಸಾರ ಅಂಚೆ ಮತದಾನದ ಮೂಲಕ ಮತ ಚಲಾಯಿಸಲು ಅವಕಾಶ ಕಲ್ಪಿಸುತ್ತದೆ. ಪಟ್ಟಿ ನೀಡಿದ ನಂತರ 12ಡಿ ನಮೂನೆಗಳಲ್ಲಿ ಭರ್ತಿ ಮಾಡಿ, ಕಳೆದ ಮಾರ್ಚ್ 22ರೊಳಗೆ ಸಲ್ಲಿಸಿದ್ದ ಅರ್ಹ ಮತದಾರರು ತಾವು ನೋಂದಣಿ ಮಾಡಿಕೊಂಡ ಲೋಕಸಭಾ ಕ್ಷೇತ್ರದಲ್ಲಿ ಸ್ಥಾಪಿಸಲಾದ ಪೋಸ್ಟಲ್ ವೋಟಿಂಗ್ ಸೆಂಟರ್‌ನಲ್ಲಿ (ಪಿವಿಸಿ) ಅಂಚೆ ಮತದಾನ ಮಾಡಿದ್ದಾರೆಂದು ತಿಳಿದುಬಂದಿದೆ.
ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆಯುತ್ತಿರುವ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ತೆರೆದಿರುವ ಅಂಚೆ ಮತದಾನ ಕೇಂದ್ರಗಳ ವ್ಯಾಪ್ತಿಯಲ್ಲಿ ಏಪ್ರಿಲ್ 19ರಿಂದಲೇ ಮತದಾನ ಆರಂಭವಾಗಿದೆ. ಈ ಅವಕಾಶವನ್ನು ಏಪ್ರಿಲ್ 25ರವರೆಗೂ ಚುನಾವಣಾ ಆಯೋಗ ವಿಸ್ತರಿಸಿದೆ. ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಮತ ಚಲಾಯಿಸಲು ಅವಕಾಶವಿದೆ ಎನ್ನಲಾಗಿದೆ.
ರಾಜ್ಯದ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ವಾಹನಗಳನ್ನು ಪಡೆಯಲಾಗುತ್ತಿದೆ. ಚುನಾವಣಾ ಕೆಲಸಕ್ಕೆ ನಿಯೋಜನೆಯಾಗುವ ಅಧಿಕಾರಿಗಳು, ವೀಕ್ಷಕರು, ಕಣ್ಗಾವಲು ತಂಡಗಳು ಹೆಚ್ಚಿನ ಸಂಖ್ಯೆಯಲ್ಲಿ ಹೊರ ಗುತ್ತಿಗೆ ಆಧಾರಿತ ವಾಹನಗಳನ್ನೇ ಬಳಕೆ ಮಾಡುತ್ತಿದ್ದಾರೆ. ಇಂತಹ ವಾಹನಗಳ ಚಾಲಕರು, ಸಹಾಯಕರಿಗೆ ಯಾವ ಕ್ಷೇತ್ರಗಳಿಗೆ ತೆರಳಬೇಕು. ಎಲ್ಲಿ ಕೆಲಸ ಎನ್ನುವ ಯಾವುದೇ ಪೂರ್ವಮಾಹಿತಿ ಇರುವುದಿಲ್ಲ. ಹಾಗಾಗಿ, ಅವರೆಲ್ಲ ಚುನಾವಣೆಯ ದಿನ ಮತದಾನ ಮಾಡಲು ಸಾಧ್ಯವಾಗುತ್ತಿಲ್ಲ. ಇಂಥವರ ಸಂಖ್ಯೆ 10 ಸಾವಿರಕ್ಕೂ ಅಧಿಕವಾಗಿರುವುದಾಗಿ ವರದಿಯಾಗಿದೆ.
ಚುನಾವಣಾ ಕೆಲಸಕ್ಕೆ ನಿಯೋಜನೆಯಾಗುವ ಸರ್ಕಾರಿ ಅಧಿಕಾರಿಗಳು, ನೌಕರರು, ಸರ್ಕಾರಿ ಕಾರು, ಜೀಪುಗಳ ಚಾಲಕರು, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸಿಬ್ಬಂದಿಗೆ ಅಂಚೆ ಮತದಾನದ ಸೌಲಭ್ಯವಿದೆ. ಆದರೆ, ಅಧಿಕಾರಿಗಳ ಕಾರು ಚಾಲಕರಾಗಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಯಾಗುವ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿ ಸೂಚಿಸಿದಲ್ಲಿಗೆ ಕಾರು ಚಲಾಯಿಸಲಾಗುತ್ತದೆ. ಚುನಾವಣೆಗಳಲ್ಲಿ ಒಮ್ಮೆಯೂ ಮತದಾನ ಮಾಡಲು ಸಾಧ್ಯವಾಗಿಲ್ಲ. ಚುನಾವಣಾ ಆಯೋಗ ಸರ್ಕಾರಿ ಕಾರು ಚಾಲಕರಿಗೂ ಅಂಚೆ ಮತದಾನದ ಅವಕಾಶ ಕೊಡಬೇಕೆಂದು ಕಾರು ಚಾಲಕರೊಬ್ಬರು ಹೇಳಿಕೊಂಡಿದ್ದಾರೆ.
ಕರಾವಳಿ ಸೇರಿದಂತೆ ಕೆಎಸ್‌ಆರ್‌ಟಿಸಿ ಮತ್ತಿತರ ನಿಗಮಗಳ ಬಸ್‌ಗಳ ಕೊರತೆ ಇರುವ ಕಡೆ ಖಾಸಗಿ ಹಾಗೂ ಶಾಲಾ ಬಸ್‌ಗಳನ್ನು ಚುನಾವಣೆ ಕರ್ತವ್ಯಕ್ಕೆ ಬಳಸಿಕೊಳ್ಳಲಾಗುತ್ತದೆ. ಅಂತಹ ವಾಹನಗಳ 5 ಸಾವಿರಕ್ಕೂ ಅಧಿಕ ಮಂದಿ ಚಾಲಕರು ಮತ್ತು ಸಹಾಯಕರೂ ಕೂಡಾ ಮತದಾನದಿಂದ ವಂಚಿತರಾಗಿದ್ದಾರೆ.
ಬ್ಯಾಂಕ್ ನೌಕರರೊಬ್ಬರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಹಲವು ಬ್ಯಾಂಕ್‌ಗಳ ನೌಕರರು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದೇವೆ. ಈವರೆಗೆ ಅಂಚೆ ಮತದಾನಕ್ಕೆ ಅವಕಾಶ ಸಿಕ್ಕಿಲ್ಲ. ಈ ಕುರಿತು ಯಾವುದೇ ಮಾಹಿತಿಗಳೂ ಬಂದಿಲ್ಲ” ಎಂದು ತಿಳಿಸಿದರು.
“ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದು, ಈವರೆಗೆ ಅಂಚೆ ಮತದಾನದ ಕುರಿತು ಸುಳಿವು ಸಿಕ್ಕಿಲ್ಲ. ಬ್ಯಾಂಕ್ ನೌಕರರ ವಾಟ್ಸಾಪ್ ಗುಂಪಿನಲ್ಲಿರುವ 4 ಮಂದಿ ನೌಕರರಿಗೂ ಅಂಚೆ ಮತದಾನದ ಅವಕಾಶ ಸಿಕ್ಕಿಲ್ಲ. ಅಲ್ಲದೆ ನಾನು ಕಾರ್ಯ ನಿರ್ವಹಿಸುತ್ತಿರುವ ಕ್ಷೇತ್ರದಲ್ಲಿ ಅಂದಾಜು ಶೇ.90ರಷ್ಟು ಮಂದಿ ಸೇವಾ ಸಿಬ್ಬಂದಿ ಅಂಚೆ ಮತದಾನದಿಂದ ವಂಚಿತರಾಗಿದ್ದೇವೆ” ಎಂದು ಕಳವಳ ವ್ಯಕ್ತಪಡಿಸಿದರು.
“ಮಾರ್ಚ್ 7ರಂದು ಅಂಚೆ ಮತದಾನಕ್ಕೆ ನೋದಾಯಿಸಿಕೊಂಡಿದ್ದು, ಅದೇ 17ರಂದು ತರಬೇತಿ ವೇಳೆಯೂ ಎರಡನೇ ಬಾರಿ ನೋದಾಯಿಸಿಕೊಳ್ಳಲಾಗಿತ್ತು” ಎಂದು ತಿಳಿಸಿದರು.
“ಚುನಾವಣಾ ಕರ್ತವ್ಯಕ್ಕಾದರೆ, ಪ್ರತಿ ಬಾರಿಯೂ ಒಂದರ ಹಿಂದೆ ಒಂದರಂತೆ ಮೆಸೇಜ್‌ಗಳು ಬರುತ್ತಿರುತ್ತವೆ. ಎಲ್ಲಿ ಕರ್ತವ್ಯ ನಿರ್ವಹಿಸಬೇಕು, ಯಾವಾಗ ಹೋಗಬೇಕು ಎಂಬೆಲ್ಲಾ ಮಾಹಿತಿಗಳು ಲೆಕ್ಕವಿಲ್ಲದಂತೆ ಬರುತ್ತಿರುತ್ತವೆ. ಆದರೆ, ಅಂಚೆ ಮತದಾನಕ್ಕೆ ಸಂಬಂಧಿಸಿದಂತೆ ಈವರೆಗೆ ಒಂದೇ ಒಂದು ಮಾಹಿತಿಯೂ ತಿಳಿದುಬಂದಿಲ್ಲ” ಎಂದು ಆರೋಪಿಸಿದರು.
ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಬಹುತೇಕ ಸೇವಾ ಸಿಬ್ಬಂದಿಗಳು ಅಂಚೆ ಮತದಾನದಿಂದ ವಂಚಿತರಾಗಿದ್ದಾರೆಂದು ತಿಳಿದುಬಂದಿದೆ.
ಅಂಚೆ ಮತದಾನದಿಂದ ವಂಚಿತದ ವಿಷಯಕ್ಕೆ ಸಂಬಂಧಿಸಿದಂತೆ ಅನುಭವೀ ಅಧಿಕಾರಿಯೊಬ್ಬರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಸೇವಾ ಸಿಬ್ಬಂದಿಗಳ ಮತದಾನದ ಕ್ಷೇತ್ರ ಮತ್ತು ಚುನಾವಣಾ ಕರ್ತವ್ಯ ಒಂದೇ ಲೋಕಸಭಾ ಕ್ಷೇತ್ರವಿದ್ದಾಗ ಇಡಿಸಿ 12(ಎ) ಎಂಬ ಫಾರಂನಲ್ಲಿ ಚುನಾವಣೆಯ ದಿನದಂದೇ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ. ಅಂಚೆ ಮತದಾನಕ್ಕೆ ಬ್ಯಾಲೆಟ್ ಪೇಪರ್ ಸಿಗದ ಸಿಬ್ಬಂದಿಗಳಿಗೆ ಕರ್ತವ್ಯದ ಮತಗಟ್ಟೆಯಲ್ಲಿಯೇ ಬ್ಯಾಲೆಟ್ ಪೇಪರ್ ನೀಡಿ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ” ಎಂದು ತಿಳಿಸಿದರು.