ʼಈ ದಿನʼ ಸಮೀಕ್ಷೆ | ನಂಬಿಕೆ ಉಳಿಸಿಕೊಂಡ ಕಾಂಗ್ರೆಸ್‌; ʼಗ್ಯಾರಂಟಿʼ ಎದುರು ಮಂಕಾದ ಮೋದಿ ಯೋಜನೆಗಳು

Date:

ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಘೋಷಿಸಿದ್ದ ಪಂಚ ಗ್ಯಾರಂಟಿಯನ್ನು ವರ್ಷದೊಳಗೆ ಜಾರಿಗೊಳಿಸಿದೆ. ಇದೀಗ ವಾರ್ಷಿಕ ರೂ.1ಲಕ್ಷ ನೀಡುವ ಘೋಷಣೆ ಮಾಡಿದೆ. ಇದು ಕಾಂಗ್ರೆಸ್‌ ಪಕ್ಷಕ್ಕೆ ಮಹಿಳಾ ಮತಗಳನ್ನು ಖಾತ್ರಿಪಡಿಸುವುದರಲ್ಲಿ ಅನುಮಾನವಿಲ್ಲ.

 

ಕಳೆದ ವರ್ಷ ಕರ್ನಾಟಕದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಪಕ್ಷದ ಅಧಿಕೃತ ಪ್ರಣಾಳಿಕೆ ಬಿಡುಗಡೆಗೂ ಮುನ್ನ ಮತ್ತು ಚುನಾವಣೆಗೆ ನಾಲ್ಕು ತಿಂಗಳಿರುವಾಗಲೇ ʼಗೃಹಲಕ್ಷ್ಮಿʼ ಯೋಜನೆಯನ್ನು ಘೋಷಿಸಿದ್ದರು. ಪ್ರತಿ ಮನೆಯ ಯಜಮಾನಿಗೆ ಮಾಸಿಕ ರೂ.2 ಸಾವಿರ ಖಾತೆಗೆ ಜಮೆ ಮಾಡುವ ವಾಗ್ದಾನವನ್ನು ಕಾಂಗ್ರೆಸ್‌ ನೀಡಿತ್ತು. ಬೆಂಗಳೂರಿನಲ್ಲಿ ಕೆಪಿಸಿಸಿ ಆಯೋಜಿಸಿದ್ದ “ನಾ ನಾಯಕಿ” ಸಮಾವೇಶದಲ್ಲಿ, .16ರಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರು ಘೋಷಣೆ ಮಾಡಿದ್ದರು.

ಆ ನಂತರ ಪಂಚ ಗ್ಯಾರಂಟಿಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ರಾಜ್ಯದ ಎಲ್ಲ ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ ಸೌಲಭ್ಯದ ʼಶಕ್ತಿʼ ಯೋಜನೆ, ಪ್ರತಿ ಮನೆಗೆ 200ಯೂನಿಟ್‌ ವಿದ್ಯುತ್‌ ಫ್ರೀ ನೀಡುವ ʼಗೃಹಜ್ಯೋತಿʼ, ಪದವೀಧರರಿಗೆ ಮತ್ತು ಡಿಪ್ಲೊಮಾ ಮಾಡಿದವರಿಗೆ ಎರಡು ವರ್ಷಗಳ ಕಾಲ ಮಾಸಿಕ 3ಸಾವಿರ ಮತ್ತು 1,500 ಪ್ರೋತ್ಸಾಹ ಧನ ನೀಡುವ “ಯುವನಿಧಿ” ಯೋಜನೆ ಘೋಷಿಸಿತ್ತು.

ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಜೆಪಿ ಹೀನಾಯವಾಗಿ ಸೋತು, ಕೇವಲ 65 ಸ್ಥಾನ ಗಳಿಸಿತ್ತು. ಜೊತೆಗೆ ಜೆಡಿಎಸ್‌ ಕೂಡಾ 37 ಸ್ಥಾನಗಳಲ್ಲಿ ಕೇವಲ 19ಸ್ಥಾನಗಳನ್ನು ಉಳಿಸಿಕೊಂಡಿತ್ತು. ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆದ್ದು ಪ್ರಚಂಡ ಬಹುಮತ ಗಳಿಸಿ ಅಧಿಕಾರ ಹಿಡಿದಿತ್ತು. ಕಾಂಗ್ರೆಸ್‌ ಗ್ಯಾರಂಟಿಯ ಹೊಳೆಯಲ್ಲಿ ಅಕ್ಷರಶಃ ಎರಡೂ ಪಕ್ಷಗಳು ಕೊಚ್ಚಿ ಹೋಗಿತ್ತು. ಬಿಜೆಪಿಯ ಅನೇಕ ನಾಯಕರೇ ಹೀಗೆ ಅಲವತ್ತುಕೊಂಡಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ ಕಡೆ ಜನರ ಒಲವು ಇರುವುದನ್ನು ಕೆಲವು ಸಮೀಕ್ಷೆಗಳು ಹೇಳಿದ್ದವು. ಆದರೆ ಬಹುತೇಕ ಗೋದಿ ಮಾಧ್ಯಮಗಳು, ಸಮೀಕ್ಷಾ ಏಜೆನ್ಸಿಗಳು ಅತಂತ್ರ ವಿಧಾನಸಭೆ, ಎಂದು ತೋರಿಸಿದ್ದವೇ ಹೊರತು ಕಾಂಗ್ರೆಸ್‌ ಬಹುಮತ ಗಳಿಸುತ್ತದೆ ಎಂಬುದನ್ನು ಹೇಳಿರಲಿಲ್ಲ. ವೈಜ್ಞಾನಿಕ ರೀತಿಯಲ್ಲಿ ಸಮೀಕ್ಷೆ ನಡೆಸಿದ ಈದಿನ.ಕಾಮ್ ಮಾತ್ರ ಕಾಂಗ್ರೆಸ್ 132ರಿಂದ 140 ಸೀಟುಗಳನ್ನು ಪಡೆಯಲಿದೆ ಎಂದು ಹೇಳಿತ್ತು. ಬಿಜೆಪಿ ಮತ್ತು ಜೆಡಿಎಸ್‌ ಪಡೆಯುವ ಸೀಟುಗಳ ಬಗ್ಗೆಯೂ ನಿಖರವಾಗಿ ಹೇಳಿತ್ತು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ವಾರದಲ್ಲೇ ಶಕ್ತಿ ಯೋಜನೆಯನ್ನು ಜಾರಿಗೊಳಿಸಿತ್ತು. ಯಾವುದೇ ನಿಯಮ ಇಲ್ಲದೇ ಎಲ್ಲ ವರ್ಗದ ಮಹಿಳೆಯರೂ ಆಧಾರ್‌ ಕಾರ್ಡ್‌ ತೋರಿಸಿ ಉಚಿತ ಪ್ರಯಾಣ ಮಾಡಿದ್ದಾರೆ. ಸರ್ಕಾರಿ ಬಸ್‌ನಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡಿದ್ದಾರೆ. ಪ್ರವಾಸಿತಾಣ, ತೀರ್ಥಕ್ಷೇತ್ರ ಎಂದು ಹೆಣ್ಣುಮಕ್ಕಳು ತಂಡ ತಂಡವಾಗಿ ಸಂತೋಷದಿಂದ ಪ್ರಯಾಣ ಮಾಡುತ್ತಿದ್ದಾರೆ.

ಯಥಾಪ್ರಕಾರ ವಿರೋಧ ಪಕ್ಷಗಳ ಕಡೆಯಿಂದ ಎಂದಿನ ಅಪಪ್ರಚಾರ ಶುರುವಾಗಿತ್ತು. ಶಕ್ತಿ ಯೋಜನೆಯಿಂದ ಹೆಣ್ಣುಮಕ್ಕಳು ಎಲ್ಲೆಂದರಲ್ಲಿ ತಿರುಗಾಡುತ್ತಿದ್ದಾರೆ, ಮನೆಯಲ್ಲಿ ಅಡುಗೆ ಮಾಡೋರಿಲ್ಲ, ಹೆಣ್ಣುಮಕ್ಕಳು ಹಾದಿ ತಪ್ಪಿದ್ದಾರೆ, ಬಸ್‌ಗಳಲ್ಲಿ ಸೀಟಿಗಾಗಿ ಜಗಳ ಮಾಡ್ತಿದ್ದಾರೆ, ಬಸ್ಸಿನ ಬಾಗಿಲು ಕಿತ್ತು ಹಾಕಿದ್ದಾರೆ, ಗಂಡಸರಿಗೆ ಬಸ್ ಸೀಟು ಸಿಗುತ್ತಿಲ್ಲ ಎಂದೆಲ್ಲ ಸುದ್ದಿ ಹಬ್ಬಿಸಿ ಖುಷಿಪಟ್ಟವರು ಬಿಜೆಪಿಯ ಬೆಂಬಲಿಗರು. ಈ ಯೋಜನೆ 2023ರ ಆಗಸ್ಟ್ 15ರ ನಂತರ ಇರಲ್ಲ ಎಂಬ ಸುಳ್ಳು ಹಬ್ಬಿಸಿದ್ದರು.

ಸರ್ಕಾರ ರಚನೆಯಾಗಿ ತಿಂಗಳಲ್ಲೇ ಗೃಹಜ್ಯೋತಿ ಯೋಜನೆಗೆ ನೋಂದಣಿ ಶುರುವಾಗಿತ್ತು, ಮೂರು ತಿಂಗಳಾಗುತ್ತಲೇ, ಗೃಹಲಕ್ಷ್ಮಿಯರ ಖಾತೆಗೆ ಹಣ ಜಮೆ ಆಗಲು ಶುರುವಾಗಿತ್ತು. ಆದರೆ, ಬಿಜೆಪಿ ಜೆಡಿಎಸ್‌ ಪಕ್ಷಗಳು ಬಡವರನ್ನು ಗೇಲಿ ಮಾಡಲು ಶುರು ಮಾಡಿದ್ದವು. ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಐದು ಕೇಜಿ ಅಕ್ಕಿ ಕೊಡಲು ಕೇಂದ್ರ ಸರ್ಕಾರ ಅಡ್ಡಗಾಲು ಹಾಕಿತ್ತು. ಅಕ್ಕಿ ಖರೀದಿಸಲು ಹೊರಟಿದ್ದ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿತ್ತು. ಆದರೂ ಕೊಟ್ಟ ಮಾತಿಗೆ ತಪ್ಪಬಾರದು ಎಂಬ ನಿಲುವಿಗೆ ಬಂದ ರಾಜ್ಯ ಸರ್ಕಾರ ಪ್ರತಿಯೊಬಬ ಪರಿತರ ಫಲಾನುಭವಿ ಖಾತೆಗೆ ಐದು ಕೇಜಿ ಅಕ್ಕಿಯ ಹಣ ಹಾಕಲು ನಿರ್ಧರಿಸಿ ಜಾರಿಗೆ ತಂದೇ ಬಿಟ್ಟಿತ್ತು. ಹೀಗೆ ವಿರೋಧಿಗಳ ಅಪಪ್ರಚಾರ , ಗೇಲಿಯ ನಡುವೆ ಸಿದ್ದರಾಮಯ್ಯ ಸರ್ಕಾರ ಆರು ತಿಂಗಳಲ್ಲೇ ನಾಲ್ಕು ಗ್ಯಾರಂಟಿಗಳನ್ನು ಜಾರಿಗೊಳಿಸಿತ್ತು.

ಡಿಸೆಂಬರ್‌ನಲ್ಲಿ ಪದವೀಧರರಿಗೆ ಮಾಸಿಕ ರೂ. 3 ಸಾವಿರ ಡಿಪ್ಲೊಮಾ ಮಾಡಿದವರಿಗೆ ರೂ.1,500 ಸಹಾಯಧನ ನೀಡುವ ಯುವನಿಧಿಯೂ ಜಾರಿಗೆ ಬಂದಿತ್ತು. ಈ ಮಧ್ಯೆ ನಡೆದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲೂ ಗ್ಯಾರಂಟಿ ಘೋಷಣೆ ಕಾಂಗ್ರೆಸ್‌ ಕೈ ಬಲಪಡಿಸಿ ಅಧಿಕಾರದ ಗದ್ದುಗೆಗೇರಿಸಿತ್ತು.

ಕಾಂಗ್ರೆಸ್‌ ಸರ್ಕಾರ ರಾಜ್ಯವನ್ನು ಬರ್ಬಾದ್ ಮಾಡ್ತಿದೆ, ಹೀಗಾದರೆ ಕರ್ನಾಟಕವೂ ಪಾಕಿಸ್ತಾನ ಮತ್ತು ಶ್ರೀಲಂಕಾ ರೀತಿ ದಿವಾಳಿ ಆಗಲಿದೆ ಎಂದು ಬಿಜೆಪಿ ಬೆಂಬಲಿಗರು ಹೋದಲ್ಲಿ ಬಂದಲ್ಲಿ ಚರ್ಚೆ ಶುರುಮಾಡಿದ್ದರು. ಕೆಲ ಮಾಧ್ಯಮಗಳು ನಕಾರಾತ್ಮ ಸುದ್ದಿಗಳನ್ನು ಹಬ್ಬಿಸಿದ್ದವು, ಎಲ್ಲೋ ಬಸ್ಸಿನ ಬಾಗಿಲು ಬದಲಾಯಿಸುತ್ತಿದ್ದ ದೃಶ್ಯವನ್ನು ಬಡ ಮಹಿಳೆಯರ ಕುಕೃತ್ಯ ಎಂಬುದಾಗಿ ಸುಳ್ಳು ಹಬ್ಬಿಸಿದ್ರು. ಗೃಹಲಕ್ಷ್ಮಿ ಯೋಜನೆಯಿಂದ ಮನೆ ಒಡೆಯುತ್ತೆ. ಅತ್ತೆ ಸೊಸೆ ಮಧ್ಯೆ ಜಗಳ ಶುರುವಾಗುತ್ತೆ. ಕಾಂಗ್ರೆಸ್‌ ಮನೆಮುರಿಯುವ ಕೆಲಸ ಮಾಡುತ್ತಿದೆ ಎಂದೆಲ್ಲ ಕಾರಿಕೊಂಡರು. ಜನರ ಬಳಿಗೆ ಹೋಗಿ ಸುಳ್ಳು ಹೇಳಿಸಿ ಸರ್ಕಾರಕ್ಕೆ ಮಸಿ ಬಳಿಯಲು ಹಲವು ಮಾಧ್ಯಮಗಳು ಟೊಂಕಕಟ್ಟಿ ನಿಂತಿದ್ದವು. ಈ ಎಲ್ಲದರ ನಡುವೆ ಕಾಂಗ್ರೆಸ್‌ನ ಗ್ಯಾರಂಟಿಯನ್ನು ಟೀಕಿಸುತ್ತಿದ್ದ ಪ್ರಧಾನಿ ಮೋದಿ ಅವರು ಅದೇ ಬಾಯಲ್ಲಿ ಪಂಚರಾಜ್ಯಗಳ ಚುನಾವಣೆಯ ಸಮಯದಲ್ಲಿ ʼಮೋದಿ ಕೀ ಗ್ಯಾರಂಟಿʼ ಎಂದು ಹೇಳುತ್ತಾ ಅಲೆದಾಡಿದ್ದರು.

ಕರ್ನಾಟಕದಲ್ಲಿ ಒಂದೇ ವರ್ಷದಲ್ಲಿ ಏನೆಲ್ಲ ಆಗಿ ಹೋದವು! ಕಾಂಗ್ರೆಸ್‌ನ ಐದು ಗ್ಯಾರಂಟಿ ಜಾರಿಯಾಯ್ತು. ನಷ್ಟದಲ್ಲಿದ್ದ ನಾಲ್ಕು ಸಾರಿಗೆ ನಿಗಮ ಲಾಭದತ್ತ ದಾಪುಗಾಟ್ಟಿತ್ತು. ಹೊಸ ಐನೂರು ಬಸ್‌ಗಳನ್ನು ಸರ್ಕಾರ ಖರೀದಿಸಿತ್ತು. ಇನ್ನೂರು ಯುನಿಟ್‌ ಉಚಿತ ವಿದ್ಯುತ್‌ ನೀಡಿಕೆ ಆಬಾಧಿತ. ಐನೂರು, ಸಾವಿರ ಬಿಲ್‌ ಕಟ್ಟುತ್ತಿದ್ದವರು ಈಗ ಬಿಲ್‌ನಲ್ಲಿ ಸೊನ್ನೆಯನ್ನು ನೋಡುವಂತಾಯ್ತು. ಲಕ್ಷಾಂತರ ಗೃಹಲಕ್ಷ್ಮಿ ಫಲಾನುಭವಿಗಳು ತಾಳಿ, ಫ್ರಿಡ್ಜ್‌, ಮಕ್ಕಳಿಗೆ ಸೈಕಲ್‌ ಕೊಂಡ ಖುಷಿಯಲ್ಲಿದ್ದಾರೆ. ಬಡ ಅಮ್ಮಂದಿರು ಮಕ್ಕಳ ಸ್ಲೂಲ್‌ ಫೀಸ್‌, ಸಾಲ ಪಾವತಿ ಮಾಡಿದ ಖುಷಿಯಲ್ಲಿದ್ದಾರೆ. ಅದೆಷ್ಟೋ ಅನಾಥ ವೃದ್ಧ ಮಹಿಳೆಯರು, ಕಾಯಿಲೆ ಪೀಡಿತ ಅಮ್ಮಂದಿರು ಸಿದ್ದರಾಮಯ್ಯ ಅವರನ್ನು ನಿತ್ಯವೂ ಸ್ಮರಿಸುತ್ತಿದ್ದಾರೆ.

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳೇನೋ ಸಮರ್ಪಕವಾಗಿ ಜಾರಿಯಾಗಿವೆ. ಫಲಾನುಭವಿಗಳ ಮನೆಮನೆಗಳಿಗೂ ತಲುಪಿವೆ. ಈ ಫಲಾನುಭವಿಗಳಲ್ಲಿ ಎಲ್ಲ ಪಕ್ಷದವರೂ ಇದ್ದಾರೆ. ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸಿದವರಲ್ಲಿ ಕೆಲ ದಶಕಗಳಿಂದ ಬಿಜೆಪಿಯನ್ನೇ ಬೆಂಬಲಿಸುತ್ತಿರುವ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯವರು ಮೊದಲೆರಡು ಸ್ಥಾನದಲ್ಲಿದ್ದರು. ಹೀಗೆ ಸೌಲಭ್ಯ ಪಡೆದವರು ಶೇ ನೂರರಷ್ಟು ಕಾಂಗ್ರೆಸ್‌ಗೆ ಮತ ಹಾಕುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ, ಅವರಲ್ಲಿ ಬಹುತೇಕರು ಧರ್ಮ, ಹಿಂದುತ್ವ, ಮೋದಿ ಈ ವಿಚಾರಗಳಿಗೆ ಬದ್ಧರಾಗಿರುವವರು. ಏನೇ ಆದರೂ ದೇಶಕ್ಕೆ ಮೋದಿಯೇ ಬೇಕು ಎಂಬುದನ್ನು ಅವರ ಮಿದುಳಿಗೆ ತುಂಬಲಾಗಿದೆ. “ಕಾಂಗ್ರೆಸ್‌ ಸರ್ಕಾರ ಬೆಸ್ಟ್, ಆದರೆ ವೋಟ್‌ ಮಾತ್ರ ಮೋದಿಗೆ, ದೇಶಕ್ಕೆ ಮೋದಿ ಬೇಕು” ಎನ್ನುವವರು ಇವರು.

ಇಷ್ಟೆಲ್ಲ ಆಗುವಾಗ 18ನೇ ಲೋಕಸಭಾ ಚುನಾವಣೆ ನಡೆಯತೊಡಗಿದೆ. ಈ ಬಾರಿ ಕಾಂಗ್ರೆಸ್ ಪಕ್ಷ ಗ್ಯಾರಂಟಿಗಳನ್ನು ರಾಷ್ಟ್ರ ಮಟ್ಟದಲ್ಲಿ ಘೋಷಿಸಿದೆ. ತನ್ನ ಚುನಾವಣಾ ಪ್ರಣಾಳಿಕೆಯನ್ನು “ನ್ಯಾಯ ಪತ್ರ” ಎಂದು ಕರೆದಿದೆ. ಬಡವರಿಗೆ, ಶೋಷತರಿಗೆ, ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ ಹೇಗೆಲ್ಲ ನ್ಯಾಯ ಒದಗಿಸಲಿದ್ದೇವೆ ಎಂದು ವಿವರಿಸಿದೆ. ʼಮಹಾಲಕ್ಷ್ಮಿʼ ಯೋಜನೆಯಡಿ ಪ್ರತಿ ಮಹಿಳೆಗೆ ವಾರ್ಷಿಕ ರೂ.1ಲಕ್ಷ ನೀಡುವ ಆಶ್ವಾಸನೆ ನೀಡಿದೆ. ಇದು ಕಾಂಗ್ರೆಸ್‌ ಪಕ್ಷಕ್ಕೆ ಮಹಿಳಾ ಸಮುದಾಯದ ಮತಗಳನ್ನು ಖಾತ್ರಿ ಪಡಿಸುವುದರಲ್ಲಿ ಅನುಮಾನವಿಲ್ಲ.

ಚುನಾವಣೆಯ ಹೊಸ್ತಿಲಲ್ಲಿ ಜನರ ನಾಡಿ ಮಿಡಿತ ಹೇಗಿದೆ ಎಂದು ಅರಿಯುವ ಸಲುವಾಗಿ
ʼಈ ದಿನ.ಕಾಮ್ʼ ಜನರ ಬಳಿಗೆ ತೆರಳಿ ಅಭಿಪ್ರಾಯ ಕೇಳಿತ್ತು. ಸಮೀಕ್ಷೆಗೆ ಒಳಪಟ್ಟವರಲ್ಲಿ ಶೇ 59 ರಷ್ಟು ಮತದಾರರು ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಉತ್ತಮವಾಗಿವೆ, ನಮಗೆ ತಲುಪಿವೆ. ಹಾಗಾಗಿ ಈ ಬಾರಿ ಕಾಂಗ್ರೆಸ್‌ಗೆ ಮತ ಹಾಕುತ್ತೇವೆ ಎಂದಿದ್ದಾರೆ. ತೃಪ್ತಿಯಿಲ್ಲ, ಕಾಂಗ್ರೆಸ್‌ಗೆ ಮತ ಹಾಕಲ್ಲ ಎಂದವರು 25.65%, ಏನೂ ಹೇಳಲ್ಲ ಎಂದವರು 15%. ಗ್ಯಾರಂಟಿ ಮೆಚ್ಚಿರುವ ಮಹಿಳೆಯರು ಶೇ 56, ಪುರುಷರು ಶೇ 53.ಈ ಸಮೀಕ್ಷೆ ನಡೆಯುವ ವೇಳೆಗೆ ಬಿಜೆಪಿಯ ಪ್ರಣಾಳಿಕೆ ಘೋಷಣೆ ಆಗಿರಲಿಲ್ಲ. ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ ಆಗಿದ್ದರೂ ಜನರಿಗೆ ತಲುಪಿರಲಿಲ್ಲ ಎಂಬುದನ್ನು ಗಮನಿಸಬೇಕು.

ಎಲ್ಲಾ ವರ್ಗ, ವಯಸ್ಸಿನವರನ್ನು ಸೆಳೆಯುವ ʼನ್ಯಾಯಪತ್ರʼ

ಲೋಕಸಭಾ ಚುನಾವಣೆಯ ಕಾಂಗ್ರೆಸ್‌ನ ಪ್ರಣಾಳಿಕೆ ಕೂಡ ಜನರನ್ನು ಸೆಳೆಯುವಂತಿದೆ. ʼಮಹಾಲಕ್ಷ್ಮಿʼ ಯೋಜನೆಯಡಿ ಪ್ರತಿ ಮಹಿಳೆಯ ಖಾತೆಗೆ ವಾರ್ಷಿಕ ರೂ. 1ಲಕ್ಷ, ʼಆರೋಗ್ಯ ಹಕ್ಕುʼ ಯೋಜನೆಯಡಿ ರೂ. 25ಲಕ್ಷ ಆರೋಗ್ಯ ವಿಮೆ, ʼಕಾರ್ಮಿಕ ನ್ಯಾಯʼ ಯೋಜನೆಯಡಿ ನರೇಗಾ ವೇತನ ಕನಿಷ್ಠ ರೂ 400 ಹೆಚ್ಚಳ, ʼಯುವ ನ್ಯಾಯʼ ಯೋಜನೆಯಡಿ ರೂ. 1ಲಕ್ಷ ಶಿಷ್ಯವೇತನ, ʼಮಹಿಳಾ ನ್ಯಾಯʼ ಯೋಜನೆಯಡಿ ಎಲ್ಲಾ ನೇಮಕಾತಿಗಳಲ್ಲಿ ಮಹಿಳೆಯರಿಗೆ ಶೇ 50 ಮೀಸಲುಇವು ಪ್ರಮುಖ ಘೋಷಣೆಗಳಾಗಿದೆ

ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮದಡಿ, ಹಿರಿಯ ನಾಗರಿಕರು, ವಿಧವೆಯರು ಮತ್ತು ಅಂಗವಿಕಲರಿಗೆ ಪಿಂಚಣಿಗೆ ಕೇಂದ್ರ ಸರ್ಕಾರದ ಕೊಡುಗೆಯು ತಿಂಗಳಿಗೆ 200 ರಿಂದ 500 ರೂ. ಈ ಮೊತ್ತವನ್ನು ತಿಂಗಳಿಗೆ 1,000 ರೂ.ಗೆ ಹೆಚ್ಚಿಸುವುದು, ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರ ಗೌರವಧನ ಹೆಚ್ಚಳ, SC, ST ಮತ್ತು OBC ಮೀಸಲಾತಿ ಮಿತಿಯನ್ನು 50%ಗೆ ಹೆಚ್ಚಿಸುವುದು, SC, ST ಮತ್ತು OBC ಮೀಸಲಾತಿ ಮಿತಿ 50%ಗೆ ಹೆಚ್ಚಳ, ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (EWS) ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ 10% ಮೀಸಲಾತಿಯನ್ನು ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ಜಾತಿಗಳು ಮತ್ತು ಸಮುದಾಯಗಳಿಗೆ ಜಾರಿಗೊಳಿಸಲಾಗುವುದು. SC, ST ಮತ್ತು OBC ಗಾಗಿ ಕಾಯ್ದಿರಿಸಿದ ಎಲ್ಲ ಸರ್ಕಾರಿ ಬ್ಯಾಕ್‌ಲಾಗ್ ಖಾಲಿ ಹುದ್ದೆಗಳಿಗೆ ಒಂದು ವರ್ಷದೊಳಗೆ ನೇಮಕಾತಿ, ಸರ್ಕಾರಿ ಮತ್ತು ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ನಿಯಮಿತ ಉದ್ಯೋಗಗಳ ಗುತ್ತಿಗೆ ವ್ಯವಸ್ಥೆ ರದ್ದು ಮಾಡುವುದಾಗಿ ಹೇಳಿದೆ.

ಇದನ್ನೂ ಓದಿ ‘ಈ ದಿನʼ ಸಮೀಕ್ಷೆ | “ನಾ ಖಾವೂಂಗ, ಖಾನೇದೂಂಗ” ಎನ್ನುತ್ತಲೇ ಭ್ರಷ್ಟಾಚಾರ ಮಾಡಿದ ಮೋದಿ ಸರ್ಕಾರ

ಕಾಂಗ್ರೆಸ್‌ ಪ್ರಣಾಳಿಕೆ ಮುಸ್ಲಿಂ ಲೀಗ್‌ ಪ್ರಣಾಳಿಕೆಯಂತಿದೆ ಎಂದು ಮೋದಿ ಸುಳ್ಳೇ ಟೀಕಿಸಿದ್ದರು. ದಿನಕ್ಕೊಂದು ಆರೋಪ ಮಾಡುತ್ತ ಮುಸ್ಲಿಮರನ್ನು ಗುರಿಯಾಗಿಸಿದ ಪ್ರಧಾನಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜನರ ಸಂಪತ್ತನ್ನು ಸಂಗ್ರಹಿಸಿ ಹೆಚ್ಚು ಮಕ್ಕಳಿರುವ ಮುಸ್ಲಿಮರಿಗೆ ನೀಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ ಎಂದು ಸುಳ್ಳು ಹೇಳಿದ್ದಾರೆ. ಮತ್ತೂ ಮುಂದುವರಿದು ನಿಮ್ಮ ಮಾಂಗಲ್ಯವನ್ನೂ ಕಿತ್ತು ಮುಸ್ಲಿಮರಿಗೆ ನೀಡುತ್ತದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ʼಮೋದಿ ಕೀ ಗ್ಯಾರಂಟಿʼಯಲ್ಲೇನಿದೆ?

ಬಹಳ ತಡವಾಗಿ ಏಪ್ರಿಲ್‌ 14ರಂದು ಬಿಜೆಪಿಯ ಪ್ರಣಾಳಿಕೆ ʼಸಂಕಲ್ಪ ಪತ್ರʼ ಬಿಡುಗಡೆ ಮಾಡಿದೆ. ಅದರಲ್ಲಿ ಏನಿದೆ ಎಂದು ನೋಡಿದರೆ, ಮೋದಿಯವರ ಸವಕಲು ಕೋಮುವಾದಿ ಭಾಷಣದಂತೆ ಬಹಳಷ್ಟಿದೆ ಆದರೆ, ಜನರ ಬದುಕು ಬಾಳ್ವೆಗಳಿಗೆ ನೇರವಾಗಿ ನೆರವಾಗುವಂತಹದು ಏನೂ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಉಚಿತ ಅಕ್ಕಿ ನೀಡುವ ಯೋಜನೆಯನ್ನು ಐದು ವರ್ಷಗಳಿಗೆ ವಿಸ್ತರಿಸುವುದು, 3 ಕೋಟಿ ಹೊಸ ಮನೆಗ ನಿರ್ಮಾಣ, ಪೈಪ್ ಗಳ ಮುಖಾಂತರ ಕಡಿಮೆ ವೆಚ್ಚದ ಅಡುಗೆ ಅನಿಲ, ಪಿಎಂ ಸೂರ್ಯಘರ್ ಮುಕ್ತ ವಿದ್ಯುತ್ ಯೋಜನೆಯಡಿ ಶೂನ್ಯ ಬಿಲ್, ಮುದ್ರಾ ಯೋಜನೆ ಸಾಲದ ಪ್ರಮಾಣವನ್ನು 10 ಲಕ್ಷದಿಂದ 20 ಲಕ್ಷ ರೂ.ಗಳಿಗೆ ಏರಿಸಲಾಗಿದೆ.

ಸಂಕಲ್ಪಪತ್ರವು ವಿಕಸಿತ ಭಾರತದ 4 ಪ್ರಮುಖ ಶಕ್ತಿಗಳಾದ ಯುವ ಶಕ್ತಿ, ನಾರಿ ಶಕ್ತಿ, ಬಡ, ರೈತರನ್ನು ಸಶಕ್ತಗೊಳಿಸುವ ಗುರಿ ಹೊಂದಿದೆ ಎಂದು ಮೋದಿ ಹೇಳಿದ್ದಾರೆ. ಆದರೆ ಹತ್ತು ವರ್ಷಗಳಲ್ಲಿ ಎರಡು ಚುನಾವಣೆಗಳಲ್ಲಿ ನೀಡಿದ್ದ ಭರವಸೆಗಳು ಏನಾದವು ಎಂಬುದನ್ನು ಅವಲೋಕಿಸಿದರೆ ಯೋಜನೆಗಳ ಬಗ್ಗೆ ಜನ ಹೆಚ್ಚಿನ ನಿರೀಕ್ಷೆ ಭರವಸೆ ಇಟ್ಟುಕೊಳ್ಳುವ ಅಗತ್ಯವಿಲ್ಲ. ಹತ್ತು ವರ್ಷಗಳಲ್ಲಿ  ತಾವೇ ಕೊಟ್ಟ ಭರವಸೆಯಂತೆ ಕಪ್ಪುಹಣ ತಂದಿಲ್ಲ, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸಿಲ್ಲ, ರೈತರ ಆದಾಯ ದುಪ್ಪಟ್ಟು ಮಾಡಿಲ್ಲ, ʼಸಬ್‌ ಕಾ ಸಾತ್‌ ಸಬ್‌ ಕಾ ವಿಕಾಸ್‌ʼ ಎಂದು ಹೇಳುತ್ತಿದ್ದ ಮೋದಿಯವರು ಮುಸ್ಲಿಮರನ್ನು ಅವಮಾನಿಸುತ್ತಿದ್ದಾರೆ.

ಕೇವಲ ಕಾಂಗ್ರೆಸ್ಆಡಳಿತವನ್ನು ಟೀಕಿಸುತ್ತಾ, ಹಿಂದುಮುಸ್ಲಿಂ ದ್ವೇಷವನ್ನು ದಟ್ಟವಾಗಿಸುತ್ತ, ಹುಸಿ ದೇಶಭಕ್ತಿಯನ್ನು ಸಾರುತ್ತ ಹತ್ತು ವರ್ಷ ಆಡಳಿತ ನಡೆಸಿದ್ದಾಯ್ತು. ಇನ್ನು ಸಾಕು ಮೋದಿಯವರೇ, ಸಾಕು ಎಂದು ಹೇಳುವ ಸಮಯ ಬಂದಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರಿಯಾಣ ಚುನಾವಣೆ | ಉಚಿತ ವಿದ್ಯುತ್, ವೈದ್ಯಕೀಯ ಚಿಕಿತ್ಸೆ ಸೇರಿ 5 ಗ್ಯಾರಂಟಿ ಘೋಷಿಸಿದ ಎಎಪಿ

ಈ ವರ್ಷದ ಅಕ್ಟೋಬರ್‌ನಲ್ಲಿ ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈಗಾಗಲೇ ಎಲ್ಲ...

ಶಿರೂರು ಗುಡ್ಡ ಕುಸಿತ | ನೊಂದ ಕುಟುಂಬಗಳ ಜತೆ ಸರಕಾರ ನಿಲ್ಲಬೇಕು: ಎಚ್‌ ಡಿ ಕುಮಾರಸ್ವಾಮಿ

ರಾಜ್ಯ ಸರಕಾರವು ಗುಡ್ಡ ಕುಸಿತದಲ್ಲಿ ಜೀವ ಕಳೆದುಕೊಂಡಿರುವ ಕುಟುಂಬಗಳ ಜತೆ ನಿಲ್ಲಬೇಕು...

ಕಾವಡ್ ಯಾತ್ರೆ ವೇಳೆ ಅಂಗಡಿ ಮಾಲೀಕರ ಹೆಸರುಳ್ಳ ಫಲಕ ಹಾಕಲು ಆದೇಶ; ‘ಸಂವಿಧಾನದ ಮೇಲಿನ ದಾಳಿ’ ಎಂದ ಪ್ರಿಯಾಂಕಾ

ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಜುಲೈ 22ರಿಂದ ನಡೆಯುವ ಕಾವಡ್ ಯಾತ್ರೆ ನಡೆಯಲಿದೆ....

ನಮ್ಮ ಬಗ್ಗೆಯೂ ತನಿಖೆ ಮಾಡಿ, ಆದರೆ ಮೊದಲು ತಾವು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ: ಬಿ ವೈ ವಿಜಯೇಂದ್ರ

ಮುಖ್ಯಮಂತ್ರಿಗಳೇ ನೀವು ಅಹಿಂದ ಹೆಸರು ಹೇಳಿ ಅಧಿಕಾರಕ್ಕೆ ಬಂದವರು. ವಾಲ್ಮೀಕಿ ನಿಗಮದಲ್ಲಿ...