ಈ ದಿನ ಸಂಪಾದಕೀಯ | ನೋಟಾವನ್ನು ಅಭ್ಯರ್ಥಿಯನ್ನಾಗಿ ಪರಿಗಣಿಸಲು ಇದು ಸಕಾಲ

Date:

Advertisements

ಜನರಿಂದ ಆಯ್ಕೆಯೇ ನಡೆಯದೆ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸಿರುವುದು ಪ್ರಜಾತಂತ್ರದ ಅಣಕವೇ ಸರಿ

ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡು, ಬಿಜೆಪಿ ಕ್ಯಾಂಡಿಡೇಟ್ ಮುಖೇಶ್ ದಲಾಲ್ ಹೊರತುಪಡಿಸಿ ಉಳಿದೆಲ್ಲವರೂ ಉಮೇದುವಾರಿಕೆ ವಾಪಸ್ ಪಡೆದ ಕಾರಣ, ಬಿಜೆಪಿ ಅಭ್ಯರ್ಥಿಯನ್ನು ವಿಜಯಶಾಲಿ ಎಂದು ಘೋಷಿಸಲಾಗಿದೆ. ಇದೇ ರೀತಿಯ ಪ್ರಹಸನ ಅರುಣಾಚಲ ಪ್ರದೇಶದಲ್ಲೂ ನಡೆದಿದೆ. ಲೋಕಸಭೆ ಜೊತೆಗೆ ವಿಧಾನಸಭಾ ಚುನಾವಣೆಯೂ ನಡೆಯುತ್ತಿರುವ ರಾಜ್ಯ ಅರುಣಾಚಲ. 60 ಅಸೆಂಬ್ಲಿ ಕ್ಷೇತ್ರಗಳ ಪೈಕಿ ಹತ್ತರಲ್ಲಿ ಈಗಾಗಲೇ ಬಿಜೆಪಿ ಗೆದ್ದಿದೆ! ಆರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಷ್ಟೇ ನಾಮಪತ್ರ ಸಲ್ಲಿಸಿದ್ದರೆ, ನಾಲ್ಕರಲ್ಲಿ ಪ್ರತಿಸ್ಪರ್ಧಿಗಳೆಲ್ಲ ನಾಮಪತ್ರ ವಾಪಸ್ ಪಡೆದು ಬಿಜೆಪಿ ಗೆಲುವಿಗೆ ಕಾರಣವಾಗಿದ್ದಾರೆ.

ಎದುರಾಳಿಯೇ ಇಲ್ಲದೇ ಆಯ್ಕೆಯಾಗುತ್ತಿರುವುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಜನರಿಂದ ಆಯ್ಕೆಯೇ ನಡೆಯದೆ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸಿರುವುದು ಪ್ರಜಾತಂತ್ರದ ಅಣಕವೇ ಸರಿ. ಕಾಂಗ್ರೆಸ್ ಅಭ್ಯರ್ಥಿ ಕಣದಲ್ಲಿ ಇರದಿದ್ದಾಗ ಉಳಿದವರೆಲ್ಲರೂ ನಾಮಪತ್ರ ವಾಪಸ್ ಪಡೆದಿರುವುದು ಮತ್ತು ಯಾರೂ ಚುನಾವಣೆಯಲ್ಲಿ ಸ್ಪರ್ಧಿಸದೇ ಇರುವುದು ಅಕ್ರಮಗಳ ವಾಸನೆಯನ್ನು ರಾಚಿದೆ. ಹೀಗಾಗಿಯೇ ನೋಟಾ (None of the above- ಮೇಲಿನ ಯಾರೂ ಅಲ್ಲ) ಆಯ್ಕೆ ಚರ್ಚೆಗೆ ಬಂದಿದೆ. ನೋಟಾವನ್ನು ಅಭ್ಯರ್ಥಿಯನ್ನಾಗಿ ಪರಿಗಣಿಸಿ ಮತದಾನಕ್ಕೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಲಾಗುತ್ತಿದೆ.

Advertisements

ನೋಟಾ ಮತಗಳೇ ಹೆಚ್ಚಿದ್ದಾಗ ಸದರಿ ಕ್ಷೇತ್ರಗಳಲ್ಲಿ ಮರು ಚುನಾವಣೆ ನಡೆಸಬೇಕೆಂದು ಬರಹಗಾರ ಶಿವ ಖೇರಾ ಅವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಪ್ರತಿಕ್ರಿಯೆ ಪಡೆಯಲು ಸುಪ್ರೀಂಕೋರ್ಟ್ ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ನೋಟಾ ಮತಗಳು ಇತರ ಅಭ್ಯರ್ಥಿಗಳ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದರ ಕುರಿತು ನಿಯಮಗಳನ್ನು ರೂಪಿಸುವಂತೆ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದಾರೆ.

ಸೂರತ್‌ನ ಬಿಜೆಪಿ ಅಭ್ಯರ್ಥಿ ವಿರುದ್ಧ ನೋಟಾವನ್ನು ಅಭ್ಯರ್ಥಿ ಎಂದು ಭಾವಿಸಿ ಮತ ಚಲಾಯಿಸುವುದು ಸಾಧ್ಯವಾಗಿದ್ದರೆ ಜನರ ನಿಜವಾದ ಆಯ್ಕೆ ಸ್ಪಷ್ಟವಾಗುತ್ತಿತ್ತು ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ. ನೋಟಾಕ್ಕೆ ಮತ ಹಾಕುವವರ ವೋಟಿಗೂ ಇತರರಿಗೆ ಚಲಾವಣೆಯಾಗುವ ಮತದಷ್ಟೇ ಮಹತ್ವವಿದೆ, ಮೌಲ್ಯವಿದೆ. ಯಾವುದೇ ಕ್ಷೇತ್ರದಲ್ಲಿ ಮತ ಚಲಾಯಿಸುವ ಹಕ್ಕನ್ನು ಮತದಾರರಿಗೆ ನಿರಾಕರಿಸಬಾರದು. ಚುನಾವಣಾ ಕಣದಲ್ಲಿ ಒಬ್ಬರೇ ಅಭ್ಯರ್ಥಿ ಇದ್ದರೂ ಆ ಅಭ್ಯರ್ಥಿಯ ಪರ ಅಥವಾ ವಿರುದ್ಧವಾಗಿ ಮತ ಚಲಾಯಿಸುವ ಅವಕಾಶವನ್ನು ನೀಡಬೇಕು. ಹೀಗಾಗಿ ಯಾವುದೇ ಪ್ರತಿಸ್ಪರ್ಧಿ ಇಲ್ಲದೆ ಅಭ್ಯರ್ಥಿಯೊಬ್ಬರನ್ನು ವಿಜೇತ ಎಂದು ಘೋಷಿಸುವುದು ತಪ್ಪಾಗುತ್ತದೆ.

ನೋಟಾ ಚಾಲ್ತಿಗೆ ಬರುವ ಮುನ್ನ ಫಾರ್ಮ್ 27 ಜಾರಿಯಲ್ಲಿತ್ತು. ಯಾರಿಗೂ ಮತ ಹಾಕಲು ಇಷ್ಟವಿಲ್ಲ ಎನ್ನುವ ಮತದಾರರು ಫಾರ್ಮ್  27 ಮೂಲಕ ತಿಳಿಸಬಹುದಿತ್ತು. ಆದರೆ ಅದು ಮತದಾರನ ಗೌಪ್ಯತೆಯನ್ನು ಕಾಪಾಡುತ್ತಿರಲಿಲ್ಲ. ಈ ವಿಚಾರ ಸುಪ್ರೀಂಕೋರ್ಟ್ ಮುಂದೆ ಬಂದಾಗ 2013ರಲ್ಲಿ ನ್ಯಾಯಾಲಯದ ನಿರ್ದೇಶನದ ಮೇರೆಗೆ ನೋಟಾವನ್ನು ಪರಿಚಯಿಸಲಾಯಿತು. ಮತದಾರರ ಆಯ್ಕೆಯ ಅಭಿವ್ಯಕ್ತಿಯನ್ನು ಸಶಕ್ತಗೊಳಿಸುವ ಮಹತ್ವದ ಹೆಜ್ಜೆಯೂ ಇದಾಗಿತ್ತು. ನೋಟಾ ನಕಾರಾತ್ಮಕ ಮತವಾಗಿ ಕಂಡುಬಂದರೂ, ಇದು ಚುನಾವಣಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುತ್ತದೆ. ಆದರೆ ಇದು ಹಲ್ಲಿಲ್ಲದ ಹುಲಿಯಾಗಿದೆ. ನೋಟಾಕ್ಕೆ ಹೆಚ್ಚು ಮತ ಬಂದರೂ ಪ್ರಯೋಜನವಾಗುತ್ತಿಲ್ಲ. ಯಾಕೆಂದರೆ ನೋಟಾವನ್ನು ಒಂದು ಅಭ್ಯರ್ಥಿಯನ್ನಾಗಿ ಪರಿಗಣಿಸುತ್ತಿಲ್ಲ.

ಮಹಾರಾಷ್ಟ್ರ ಮತ್ತು ಹರಿಯಾಣದ ರಾಜ್ಯ ಚುನಾವಣಾ ಆಯೋಗಗಳು ನೋಟಾವನ್ನು ಕಾಲ್ಪನಿಕ ಅಭ್ಯರ್ಥಿಯನ್ನಾಗಿ ಮಾಡಿ ಅಧಿಸೂಚನೆಗಳನ್ನು ಹೊರಡಿಸಿವೆ. ನೋಟಾಕ್ಕೆ ಇತರ ಅಭ್ಯರ್ಥಿಗಳಿಗಿಂತ ಹೆಚ್ಚು ಮತಗಳು ಬಂದರೆ ಚುನಾವಣೆಯನ್ನು ಅನೂರ್ಜಿತಗೊಳಿಸಲಾಗುತ್ತದೆ ಮತ್ತು ಮರುಚುನಾವಣೆ ನಡೆಸಲಾಗುವುದು ಎಂದು ಘೋಷಿಸಲಾಗಿದೆ. ಇಂತಹ ನಿಯಮಗಳನ್ನು ಇತರ ರಾಜ್ಯಗಳಿಗೂ ಮತ್ತು ರಾಷ್ಟ್ರ ಮಟ್ಟದಲ್ಲಿಯೂ ವಿಸ್ತರಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ಇಂಡೋನೇಷಿಯಾದಂತಹ ರಾಷ್ಟ್ರಗಳಲ್ಲಿ ಇಂತಹ ನಿಬಂಧನೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಸ್ವೀಡನ್, ಡೆನ್ಮಾರ್ಕ್‌ನಂತಹ ದೇಶಗಳಲ್ಲಿ ನೋಟಾಕ್ಕೆ ಹೆಚ್ಚು ಮತ ಬಂದರೆ, ಈಗಾಗಲೇ ಕಣದಲ್ಲಿದ್ದ ಅಭ್ಯರ್ಥಿಗಳು ಮತ್ತೆ ಚುನಾವಣೆಗೆ ಸ್ಪರ್ಧಿಸಬಾರದೆಂಬ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿರುವುದನ್ನು ಗಮನಿಸಬೇಕು.

ಮಧ್ಯಪ್ರದೇಶದ ಇಂಧೋರ್‌ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅಕ್ಷಯ ಬಮ್ ಅವರು ನಾಮಪತ್ರ ವಾಪಸ್ ಪಡೆದು ಬಿಜೆಪಿ ಸೇರಿಕೊಂಡರು. ಆ ಮೂಲಕ ಚುನಾವಣಾ ಅಕ್ರಮಗಳಿಗೆ ಸಾಕ್ಷಿಯಾಗಿ ಅಕ್ಷಯ್‌ ನಿಂತಿದ್ದಾರೆ. ಆಘಾತಗೊಂಡಿರುವ ಕಾಂಗ್ರೆಸ್‌, “ನೋಟಾಕ್ಕೆ ಮತ ಹಾಕಿ” ಎಂದು ಕರೆ ನೀಡಿದೆ. ಎದುರಾಳಿಯೇ ಇಲ್ಲದೇ ಆಯ್ಕೆ ಆಗುವುದನ್ನು ತಪ್ಪಿಸಲು, ನೋಟಾವನ್ನು ಅಭ್ಯರ್ಥಿಯನ್ನಾಗಿ ಪರಿಗಣಿಸುವುದಕ್ಕೆ ಇದು ಸಕಾಲ.

ಕೊನೆಯಲ್ಲಿ ಒಂದು ಮಾತು: ನಾಡಿನ ಎರಡು ಪ್ರಮುಖ ದಿನಪತ್ರಿಕೆಗಳಾದ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಈ ಕುರಿತು ನಿಷ್ಠುರ ಸಂಪಾದಕೀಯಗಳನ್ನು ಬರೆದಿರುವುದು ಅಭಿನಂದನೀಯ ಸಂಗತಿ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X