ಡಾ. ಬಿ.ಆರ್. ಅಂಬೇಡ್ಕರ್ ಅವರು ಈ ಜಗತ್ತು ಕಂಡ ಅದ್ಭುತ ಸಮಾಜ ವಿಜ್ಞಾನಿ. ಬಹಳ ದೊಡ್ಡ ಸಮಾಜ ಸುಧಾರಕ ಎಂದು ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ನಾಗಭೂಷಣ್ ಬಗ್ಗನಡು ಅಭಿಪ್ರಾಪಟ್ಟರು.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕೊಟ್ಟ ಗ್ರಾಮದಲ್ಲಿ ಅಂಬೇಡ್ಕರ್ ಯುವಕ ಸಂಘದಿಂದ ಏರ್ಪಡಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಅವರ 133ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಕಾರ್ಮಿಕರ, ಶೋಷಿತರ, ರೈತರ, ಮಹಿಳೆಯರ ಪರವಾಗಿ ಇಡೀ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ದನಿ ಎತ್ತಿದವರು. ಅವರ ಪರವಾಗಿ ಹೋರಾಡಿದವರು ಅಂಬೇಡ್ಕರ್. ಅಲ್ಲಿಯವರೆಗೂ ಕಾರ್ಮಿಕರ, ಶೋಷಿತರ, ರೈತರ, ಮಹಿಳೆಯರ ಬಗ್ಗೆ ಮಾತನಾಡಿದವರು, ಬರೆದವರು ವಿರಳ ಅಂತಹ ಮಹಾನ್ ಚೇತನರ ಜಯಂತಿ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ಹೋರಾಟಗಾರ ಕೊಟ್ಟ ಶಂಕರ್ ಮಾತನಾಡಿ ಶಿಕ್ಷಣ ಎಲ್ಲಾ ವಿಮೋಚನೆಗೆ ದಾರಿ, ನಾವು ಶಿಕ್ಷಣ ಪಡೆದು ಪ್ರಶ್ನೆ ಮಾಡುವುದನ್ನು ಕಲಿಯದಿದ್ದರೆ ಗುಲಾಮಗಿರಿಯನ್ನು ಅನುಭವಿಸಬೇಕಾಗುತ್ತದೆ. ಓದು ನಮ್ಮನ್ನು ಪ್ರಶ್ನೆ ಮಾಡುವುದನ್ನು ಕಲಿಸುತ್ತದೆ. ಇದನ್ನೇ ಅಂಬೇಡ್ಕರ್ ಅವರು ಹೇಳಿದ್ದು, ನಾವು ಅಂಬೇಡ್ಕರ್ ಅವರನ್ನು ಅವರ ಜಯಂತಿ ಆಚರಿಸುವ ಮೂಲಕ ತಿಳಿಯಬೇಕು. ಅವರು ವಿಚಾರಗಳನ್ನು ಜನರಿಗೆ ತಿಳಿಸಬೇಕು ಎಂದು ಹೇಳಿದರು.
ಇಡೀ ದೇಶದಲ್ಲಿ ಸಂಪ್ರದಾಯಗಳ ಹೆಸರಿನಲ್ಲಿ ದಲಿತರನ್ನು ಶೋಷಣೆ ಮಾಡಲಾಗುತ್ತಿದೆ. ಆದ್ದರಿಂದ ದಲಿತ ಸಮುದಾಯ ಶಿಕ್ಷಣ ಕಲಿತು, ಸಂಘಟನೆಯಾಗಿ ಆ ಮುಖೇನ ಜಾಗೃತಿಯಾಗಬೇಕು. ಯಾವುದು ನ್ಯಾಯ, ಯಾವುದು ಅನ್ಯಾಯ, ಯಾವುದು ಮೌಢ್ಯ ಎಂಬುದನ್ನು ಶಿಕ್ಷಣ ತಿಳಿಸುತ್ತದೆ. ಎಲ್ಲಿ ಶಿಕ್ಷಣ ಇರುತ್ತದೆ ಅಲ್ಲಿ ಸ್ವಾಭಿಮಾನ ಇರುತ್ತದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಕೇವಲ ಒಂದು ಜಾತಿಗೆ ಸೀಮಿತರಲ್ಲ. ಈ ದೇಶದ ಎಲ್ಲಾ ಜಾತಿಯ, ಎಲ್ಲಾ ಧರ್ಮದ ಎಲ್ಲರಿಗೂ ಸಲ್ಲುವವರು ಅಂಬೇಡ್ಕರ್. ಇಂತಹ ಮಹಾನಾಯಕರ ಚಿಂತನೆಗಳು ದೇಶದ ಮನೆ ಮನೆಗೆ ತಲುಪಬೇಕು ಎಂದರು.
ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರ ರವಿಕುಮಾರ್ ಮಾತನಾಡಿ ಅಂಬೇಡ್ಕರ್ ಅವರು ಕೇವಲ ಭಾರತ ರತ್ನ ಅಷ್ಟೆ ಅಲ್ಲ. ಇಡೀ ಪ್ರಪಂಚಕ್ಕೆ ವಿಶ್ವರತ್ನರಾಗಿದ್ದಾರೆ. ಅವರು ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಕೊಡುಗೆ ನೀಡಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ ಅವರು ಈ ಜಗತ್ತಿಗೆ ತಿಳಿ ಹೇಳಿದವರು. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಎಲ್ಲರಿಗೂ ತಿಳಿ ಹೇಳಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಿಎಸ್‌ಪಿ ಅಧ್ಯಕ್ಷ ಜೆ.ಎನ್.ರಾಜಸಿಂಹ, ಬರಹಗಾರರಾದ ಡಾ. ರವಿಕುಮಾರ್ ನೀಹಾ, ಸಂತೋಷ್ ಕೋಡಿಹಳ್ಳಿ, ಮಾಜಿ ನಗರಸಭಾ ಸದಸ್ಯ ಬಸವರಾಜು, ಕಲ್ಲುಕೋಟೆ ಲಿಂಗರಾಜು, ಸಣ್ಣಪ್ಪ, ಡಾ. ಮೂರ್ತಿ ತಿಮ್ಮನಹಳ್ಳಿ ಸೇರಿದಂತೆ ಹಲವರು ಹಾಜರಿದ್ದರು.
