ಕಾಂಗ್ರೆಸ್ ಅಭ್ಯರ್ಥಿಗೆ ಸೋಲಿನ ಭೀತಿ ಎದುರಾಗಿದ್ದು, ಡಾಕ್ಟರ್ ಬೇಕೋ, ಪಿಯುಸಿ ಬೇಕೋ ಅಂತ ನನ್ನ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ. ಅವರ ಮಾವ ಶಾಮನೂರು ಶಿವಶಂಕರಪ್ಪ ಅವರು ನನಗೆ ಮಾತಾಡುವುದಕ್ಕೆ ಬರುವುದಿಲ್ಲ. ಅಡುಗೆ ಮಾಡುವುದಕ್ಕೆ ಲಾಯಕ್ ಎಂದಿದ್ದರು. ಮನುಷ್ಯನಿಗೆ ವಿದ್ಯೆಯ ಜೊತೆ ವಿನಯ, ಸಂಸ್ಕಾರ, ಸಂಸ್ಕೃತಿ ತಿಳಿದಿರಬೇಕು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ವಾಗ್ದಾಳಿನಡೆಸಿದರು.
ದಾವಣಗೆರೆ ಜಿಲ್ಲೆ ಹರಿಹರ ನಗರದಲ್ಲಿ ಬೃಹತ್ ರೋಡ್ ಶೋ ನಡೆಸಿ ಅವರು ಮಾತನಾಡಿದರು.
ಕಾಂಗ್ರೆಸ್ ಅಭ್ಯರ್ಥಿಗೆ ಮತ್ತು ಅವರ ಕುಟುಂಬಕ್ಕೆ ವಿನಯ, ಸಂಸ್ಕಾರ, ಸಂಸ್ಕೃತಿಯೇ ಗೊತ್ತಿಲ್ಲ. ಹಿರಿಯರಿಗೆ, ಮಹಿಳೆಯರಿಗೆ ಗೌರವ ಕೊಡುವುದು ಗೊತ್ತಿಲ್ಲ. ಸೋಲುತ್ತೇನೆ ಎಂಬ ಹತಾಶೆಯಿಂದ ಹೀಗೆ ಪ್ರಚಾರ ಮಾಡುತ್ತಿದ್ದಾರೆ. ಇಂತಹವರನ್ನು ಕ್ಷೇತ್ರದ ಜನ ರಾಜಕೀಯದಿಂದ ದೂರ ಇಡಬೇಕು ಎಂದರು.
ಕಾಂಗ್ರೆನದ್ದು ಬ್ರಿಟಿಷ್ ಸಂಸ್ಕೃತಿ, ಬ್ರಿಟಿಷರು ಹೇಗೆ ಭಾರತೀಯರನ್ನು ಒಡೆದು ಆಳ್ವಿಕೆ ಮಾಡಿದ್ದರೋ ಅದೇ ರೀತಿ ಕಾಂಗ್ರೆಸ್ ಅಭ್ಯರ್ಥಿ ಕೂಡ ಉಳ್ಳವರು, ನಿರ್ಗತಿಕರು, ವಿದ್ಯಾವಂತರು, ಅವಿದ್ಯಾವಂತರು, ಹಿಂದುಗಳು, ಮುಸ್ಲಿಮರು ಎಂದು ಜಾತಿ ಜಾತಿಗಳ, ಧರ್ಮ, ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತಿ ರಾಜಕೀಯ ಮಾಡುತ್ತಿದ್ದಾರೆ. ಇಂತಹ ಕೆಟ್ಟ ರಾಜಕಾರಣಕ್ಕೆ ಮತದಾರರು ಮೇ 7 ರಂದು ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಬಿಜೆಪಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಎಲ್ಲರನ್ನೂ ಜೊತೆಯಾಗಿ ತೆಗೆದುಕೊಂಡು ಹೋಗುವ ಪಕ್ಷ. ಮುಸ್ಲಿಂ ವಿವಾಹಿತ ಮಹಿಳೆಯರಿಗೆ ತ್ರಿವಳಿ ತಲಾಖ್ ಒಂದು ರೀತಿ ಮರಣಶಾಸನವಾಗಿತ್ತು. ಅಂತಹ ತ್ರಿವಳಿ ತಲಾಖ್ ತೆಗೆದು ಮಹಿಳೆಯರ ಗೌರವ ಉಳಿಸುವ ಕೆಲಸ ಮಾಡಿದೆ. ಮಹಿಳಾ ಸಬಲೀಕರಣಕ್ಕೆ ಮೋದಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.
ಬೇಟಿ ಬಚಾವೋ, ಭೇಟಿ ಪಡಾವೋ ಎಂದು ಹೆಣ್ಣು ಮಕ್ಕಳ ರಕ್ಷಣೆ, ವಿದ್ಯಾಭ್ಯಾಸಕ್ಕೆ ಒತ್ತು ನೀಡಿದೆ. ಮಹಿಳೆಯರು ರಾಜಕೀಯ ಕ್ಷೇತ್ರಕ್ಕೆ ಹೆಚ್ಚಿನದಾಗಿ ಬರಬೇಕು ಎಂದು ರಾಜಕೀಯದಲ್ಲಿ ಶೇ.33 ರಷ್ಟು ಮೀಸಲಾತಿ ನೀಡಿದ್ದಾರೆ. ನಾನು ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಗೆದ್ದು ದೆಹಲಿಗೆ ಹೋಗಿ ಅಡುಗೆ ಮಾಡುವುದಕ್ಕೆ ಅಷ್ಟೇ ಅಲ್ಲ ಅಧಿಕಾರಕ್ಕೂ ಸೈ ಎಂದು, ಅಭಿವೃದ್ಧಿಗೂ ಸೈ ಎಂದು ಸಾಭೀತುಪಡಿಸುತ್ತೇನೆ. ಅದಕ್ಕೆಲ್ಲ ನೀವು ನನ್ನ ಬೆಂಬಲವಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೇವೆ. ಕಾಂಗ್ರೆಸ್ ನಾವಿಕನಿಲ್ಲದ ಹಡಗು. ಅದೇ ನಮ್ಮ ಬಿಜೆಪಿಗೆ ನರೇಂದ್ರ ಮೋದಿ ಅವರೇ ನಾಯಕರು. ನಮ್ಮನ್ನೆಲ್ಲ ಸುರಕ್ಷಿತವಾಗಿ ನೋಡಿಕೊಳ್ಳುವ ಸೈನಿಕರೂ ಮೋದಿ ಅವರೇ. ಹೀಗಿರುವಾಗ ಕಾಂಗ್ರೆಸ್ ಅಭ್ಯರ್ಥಿಗೆ ತಮ್ಮ ಅಭಿವೃದ್ಧಿ ಕೆಲಸಗಳನ್ನು ಹೇಳಿಕೊಳ್ಳಲು ಆಗದೆ ನನ್ನ ವಿದ್ಯಾಭ್ಯಾಸದ ಬಗ್ಗೆ ಮಾತನಾಡಿ ಕೀಳು ರಾಜಕೀಯ ಮಾಡುತ್ತಿದ್ದಾರೆ. ಮೇ 7 ರಂದು ಮತದಾನ ವೇಳೆ ನೀವೆಲ್ಲರೂ ಕಮಲದ ಗುರುತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತಗಳನ್ನು ಹಾಕಿಸುವ ಮೂಲಕ ಇಂತಹವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.
ಪ್ರಚಾರ ಸಭೆಯಲ್ಲಿ ಮಾತನಾಡಿದ ಗಾಯಿತ್ರಿ ಸಿದ್ದೇಶ್ವರ್ ಅವರು, ಕಾಂಗ್ರೆಸ್ ಅಭ್ಯರ್ಥಿ ಪ್ರಣಾಳಿಕೆಯಲ್ಲಿ ಸುಳ್ಳಿನ ಸರ ಮಾಲೆಯನ್ನೇ ಪೋಣಿಸಿದ್ದಾರೆ. ಪ್ರತಿ ಗ್ರಾಮ ಪಂಚಾಯಿತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸುವುದಾಗಿ ಹೇಳಿದ್ದಾರೆ. ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆ ಕಾನೂನು ಅನ್ವಯ 30 ಸಾವಿರ ಜನ ಸಂಖ್ಯೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಅವಕಾಶವಿದೆ ಎಂದರು.
ಪಿಯುಸಿ ಓದಿರುವ ನನಗೆ ಇದರ ಬಗ್ಗೆ ಗೊತ್ತಿದೆ. ಆದರೆ, ನಾನು ವೈದ್ಯೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಅಭ್ಯರ್ಥಿಗೆ ಇದರ ಅರಿವು ಇಲ್ಲದೇ ಇರೋದು ದುರದೃಷ್ಟಕರ. ಪರ್ಯಾಯ ಶಿಕ್ಷಣ ವ್ಯವಸ್ಥೆ ಬಗ್ಗೆ ಹೇಳಿದ್ದಾರೆ. ಅಂದರೆ, ಮದರಸಾಗಳನ್ನು ಪ್ರಾರಂಭ ಮಾಡುತ್ತಾರಾ? ಪರ್ಯಾಯ ಶಿಕ್ಷಣ ವ್ಯವಸ್ಥೆ ಎಂದರೆ ಏನು ಎನ್ನುವುದರ ಬಗ್ಗೆ ಪ್ರಜ್ಞಾವಂತ ಮತದಾರರು ಯೋಚಿಸಬೇಕಿದೆ. ಕಾಂಗ್ರೆಸ್ ಅಭ್ಯರ್ಥಿ ಪ್ರಣಾಳಿಕೆಯಲ್ಲಿ ಹೇಳಿರುವ ಎಲ್ಲ ಕೆಲಸಗಳು ರಾಜ್ಯ ಸರ್ಕಾರದಿಂದ ಆಗಬೇಕಿರುವ ಕೆಲಸಗಳು ಎಂದರು.
ಈಗ ಅವರ ಪತಿಯೇ ಜಿಲ್ಲಾ ಉಸ್ತುವಾರಿ ಸಚಿವರು. ಅವರ ಪತಿಗೆ ಹೇಳಿ ಪ್ರಣಾಳಿಕೆಯಲ್ಲಿರುವ ಎಲ್ಲ ಕೆಲಸಗಳನ್ನು ಮಾಡಿಸಲಿ. ಪತಿ ಮಾಡಬೇಕಿರುವ ಕೆಲಸಕ್ಕೆ ಪತ್ನಿ ಏಕೆ ಸಂಸದರಾಗಬೇಕು ಎಂದು ಪ್ರಶ್ನಿಸಿದರು. ಒಬ್ಬ ಸಂಸದರ ಕಾರ್ಯವ್ಯಾಪ್ತಿ, ಕೆಲಸಗಳ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದ ಇವರು ವೈದ್ಯ ಪದವಿ ಪಡೆದರೆ ಏನು ಪ್ರಯೋಜನ. ಇವರಿಗೆ ಅಧಿಕಾರ ಕೊಟ್ಟರೆ ಅಂದರ ಕೈಗೆ ವಜ್ರಾಯುಧ ಕೊಟ್ಟಂತೆ ಎಂದು ವಾಗ್ದಾಳಿ ನಡೆಸಿದರು.
ಸಾವಿರಾರು ಕಾರ್ಯಕರ್ತರೊಂದಿಗೆ ಶಿವಮೊಗ್ಗ ಹರಪನಹಳ್ಳಿ ವೃತ್ತ ಮಾರ್ಗವಾಗಿ ರಸ್ತೆಯಿಂದ ಹರಿಹರೇಶ್ವರ ದೇವಸ್ಥಾನದವರೆಗೂ ಮೆರವಣಿಗೆ ಮಾಡಲಾಯಿತು.
ಈ ವೇಳೆ ಹರಿಹರ ಶಾಸಕ ಬಿ.ಪಿ. ಹರೀಶ್, ಜೆ.ಡಿ.ಎಸ್. ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಮಂಡಲ ಅಧ್ಯಕ್ಷ ನಿಂಗರಾಜ್, ಜೆಡಿಎಸ್ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಹರಿಹರದ ಸಾಕ್ಷಿ, ಸುನಿತಾ, ಗೀತಮ್ಮ, ಸೇರಿದಂತೆ ಬಿಜೆಪಿಯ ಮುಖಂಡರು, ಜೆಡಿಎಸ್ ಮುಖಂಡರು ಹಾಗೂ ಗ್ರಾಮದ ಬಿಜೆಪಿಯ ಕಾರ್ಯಕರ್ತರು ಗ್ರಾಮ ಪಂಚಾಯತಿ ಸದಸ್ಯರು ಜಿಲ್ಲಾ ಪಂಚಾಯತಿ ಸದಸ್ಯರು ಭಾಗವಹಿಸಿದ್ದರು.