ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದು ಸನ್ ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ನಡೆದ ಐಪಿಎಲ್ನ 50ನೇ ಪಂದ್ಯವು ರೋಚಕ ಹಣಾಹಣಿಗೆ ಸಾಕ್ಷಿಯಾಯಿತು. ಹೈದರಾಬಾದ್ ತಂಡದ ಬೌಲರ್ ಭುವನೇಶ್ವರ್ ಕುಮಾರ್ ಅವರ ಸಾಹಸಮಯ ಬೌಲಿಂಗ್ನ ನೆರವಿನಿಂದ ಕೇವಲ 1 ರನ್ಗಳ ರೋಚಕ ಜಯ ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಟ್ರಾವಿಸ್ ಹೆಡ್ ಮತ್ತು ನಿತೀಶ್ ರೆಡ್ಡಿ ಅವರ ಅಮೋಘ ಅರ್ಧಶತಕಗಳ ನೆರವಿಂದ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿದ್ದು, ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 202 ರನ್ಗಳ ಗುರಿ ನೀಡಿತ್ತು.
#TATAIPL Matches 📂
↳ Last Ball Thrillers 📂Bhuvneshwar Kumar wins it for @SunRisers 👌👏
Recap the Match on @StarSportsIndia and @JioCinema 💻📱#SRHvRR pic.twitter.com/mHdbR2K3SH
— IndianPremierLeague (@IPL) May 2, 2024
ಈ ಗುರಿಯನ್ನು ಬೆನ್ನಟ್ಟುವಲ್ಲಿ ಕೊನೆಯ ಓವರ್ನ ಕೊನೆಯ ಎಸೆತದಲ್ಲಿ ವಿಫಲರಾದ ರಾಜಸ್ಥಾನ ತಂಡವು, ಕೇವಲ ಒಂದು ರನ್ಗಳ ಅಂತರದಿಂದ ವಿರೋಚಿತ ಸೋಲು ಅನುಭವಿಸಿದೆ.
ರಾಜಸ್ಥಾನ ತಂಡಕ್ಕೆ ಕೊನೆಯ ಓವರ್ನ ಕೊನೆಯ ಎಸೆತದಲ್ಲಿ ಗೆಲ್ಲಲು 2 ರನ್ಗಳ ಅವಶ್ಯಕತೆ ಇತ್ತು. ಈ ವೇಳೆ ಬ್ಯಾಟಿಂಗ್ನಲ್ಲಿದ್ದ ರೋವ್ಮೆನ್ ಪೊವೆಲ್ ಅವರನ್ನು ಎಲ್ಬಿಡಬ್ಲ್ಯೂ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾದ ಭುವನೇಶ್ವರ್ ಕುಮಾರ್, ಹೈದರಾಬಾದ್ ತಂಡಕ್ಕೆ ರೋಚಕ 1 ರನ್ಗಳ ಗೆಲುವು ತಂದುಕೊಟ್ಟು, ಹೀರೋ ಎನಿಸಿಕೊಂಡರು.
ಮೊದಲ ಓವರ್ನಲ್ಲೇ ಎರಡು ವಿಕೆಟ್ ಕಳೆದುಕೊಂಡಿದ್ದ ರಾಜಸ್ಥಾನ
2ನೇ ಇನ್ನಿಂಗ್ಸ್ನ ಮೊದಲ ಓವರ್ ಎಸೆದಿದ್ದ ಭುವನೇಶ್ವರ್ ಕುಮಾರ್, ತನ್ನ ಸ್ವಿಂಗ್ ದಾಳಿಯಿಂದ ರಾಜಸ್ಥಾನದ ಪ್ರಮುಖ ಬ್ಯಾಟರ್ಗಳಾದ ಜೋಶ್ ಬಟ್ಲರ್ ಹಾಗೂ ಸಂಜು ಸ್ಯಾಮ್ಸನ್ ಅವರ ವಿಕೆಟ್ ಪಡೆಯುವ ಮೂಲಕ ಆರಂಭಿಕ ಆಘಾತ ನೀಡಿದ್ದರು. ಆ ಬಳಿಕ ಜೊತೆಗೂಡಿದ ಯುವ ಬ್ಯಾಟರ್ಗಳಾದ ರಿಯಾನ್ ಪರಾಗ್ ಹಾಗೂ ಯಶಸ್ವಿ ಜೈಸ್ವಾಲ್ ಉತ್ತಮ ಜೊತೆಯಾಟ ನಡೆಸಿದ್ದಲ್ಲದೇ, ಇಬ್ಬರೂ ಕೂಡ ಅರ್ಧಶತಕ ಗಳಿಸಿದರು.
ಜೈಸ್ವಾಲ್ ಔಟಾಗುವುದಕ್ಕೂ ಮುನ್ನ 7 ಬೌಂಡರಿ ಮತ್ತು 2 ಸಿಕ್ಸರ್ಗಳೊಂದಿಗೆ 67 (40 ಎಸೆತ) ಹಾಗೂ ಪರಾಗ್ ಔಟಾಗುವುದಕ್ಕೂ ಮುನ್ನ 8 ಬೌಂಡರಿಗಳು ಮತ್ತು 4 ಸಿಕ್ಸರ್ಗಳೊಂದಿಗೆ 49 ಎಸೆತಗಳಲ್ಲಿ 77 ರನ್ ಗಳಿಸಿದ್ದರು. ಆದರೆ ಆ ಬಳಿಕ ಬಂದ ಪೊವೆಲ್ ಗೆಲುವಿನ ದಡ ತಲುಪಿಸು ಶ್ರಮಿಸಿದರಾದರೂ, ಕೊನೆಯ ಓವರ್ನ ಕೊನೆಯ ಎಸೆತದಲ್ಲಿ ಎಡವಿದರು. ರಾಜಸ್ಥಾನ ತಂಡವು ನಿಗದಿತ 20 ಓವರ್ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 200 ರನ್ ಗಳಿಸಿತು.
ಹೈದರಾಬಾದ್ ತಂಡದ ಪರ ಭುವನೇಶ್ವರ್ ಕುಮಾರ್ 41ಕ್ಕೆ ಮೂರು ವಿಕೆಟ್, ಪ್ಯಾಟ್ ಕಮ್ಮಿನ್ಸ್ ಹಾಗೂ ನಟರಾಜನ್ ತಲಾ ಎರಡ ವಿಕೆಟ್ ಪಡೆದುಕೊಂಡರು.
