ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಇತಿಹಾಸವು ಹಿಂದು-ಮುಸ್ಲಿಂ ವಿವಾದವನ್ನು ಆಧರಿಸಿದೆ. ಇದರಿಂದ ಯಾರಿಗೆ ಲಾಭವಾಗಿದೆ – ಯಾರಿಗೆ ತೊಂದರೆಯಾಗಿದೆ ಎಂಬುದನ್ನು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಹೇಳಿದ್ದಾರೆ.
ಮಧ್ಯಪ್ರದೇಶದ ರಾಜ್‌ಗಢ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ಸಿಂಗ್, “ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಕುರಿತು ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪಿನ ಬಗ್ಗೆ ಅಸಮಾಧಾನವಿದೆ” ಎಂದು ಹೇಳಿದ್ದಾರೆ.
“ಬಿಜೆಪಿ ನಿಜವಾದ ಸಮಸ್ಯೆಗಳ ಬದಲಿಗೆ ಜಾತಿ ಮತ್ತು ಧರ್ಮದ ಆಧಾರದ ಮೇಲೆ ಮತ ಕೇಳುತ್ತಿದೆ. ನೈಜ ಸಮಸ್ಯೆಗಳ ಆಧಾರದ ಮೇಲೆ ಎಲ್ಲಿ ಚುನಾವಣೆ ನಡೆಸಲಾಗುತ್ತಿದೆ. ಕಾಂಗ್ರೆಸ್ ವಿರುದ್ಧ ಬಿಜೆಪಿ ಸುಳ್ಳು ಆರೋಪಗಳನ್ನು ಮಾಡುತ್ತಿದೆ” ಎಂದು ಕಿಡಕಾರಿದ್ದಾರೆ.
ಗುಜರಾತ್ ಮಾದರಿ ಬಗ್ಗೆ ವ್ಯಂಗ್ಯವಾಡಿದ ಸಿಂಗ್, “ನೀವು ಗುಜರಾತ್‌ನ ಮಾನವ ಅಭಿವೃದ್ಧಿ ಸೂಚ್ಯಂಕವನ್ನು (ಎಚ್‌ಡಿಐ) ನೋಡಿದರೆ, ಅದು ದೇಶದ ಟಾಪ್ 10 ರಾಜ್ಯಗಳಲ್ಲಿ ಸ್ಥಾನವನ್ನೇ ಪಡೆದಿಲ್ಲ. ಹಾಗಿದ್ದರೆ, ಗುಜರಾತ್ ಮಾದರಿ ಎಂದರೆ ಏನು” ಎಂದು ಪ್ರಶ್ನಿಸಿದ್ದಾರೆ.
“ಬಿಜೆಪಿಯ ಚುನಾವಣಾ ಯಶಸ್ಸಿನಲ್ಲಿ ಇವಿಎಂಗಳ ಪಾತ್ರವಿದೆ ಎಂಬುದನ್ನು ನಾನು ನಂಬುತ್ತೇನೆ. ಇವಿಎಂಗಳ ಕುರಿತು ಸುಪ್ರೀಂ ಕೋರ್ಟ್ ನೀಡಿದ ಇತ್ತೀಚಿನ ತೀರ್ಪಿನ ಬಗ್ಗೆ ಅಸಮಾಧಾನವಿದೆ. ಈ ಬಗ್ಗೆ ಚುನಾವಣೆ ಮುಗಿದ ಬಳಿಕ ಮಾತನಾಡುತ್ತೇನೆ” ಎಂದಿದ್ದಾರೆ.
ಕಳೆದ ಬಾರಿ ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಸೋತಿದ್ದ ಸಿಂಗ್, ಈ ಬಾರಿ ಹಾಲಿ ಬಿಜೆಪಿ ಸಂಸದ ರೋಡ್ಮಲ್ ನಗರ್ ವಿರುದ್ಧ ಕಣಕ್ಕಿಳಿದಿದ್ದಾರೆ. ನಗರ್ ಅವರು 2014ರಿಂದ ರಾಜ್‌ಗಢವನ್ನು ಪ್ರತಿನಿಧಿಸುತ್ತಿದ್ದಾರೆ. ಇದೇ ಕ್ಷೇತ್ರದಲ್ಲಿ ಸಿಂಗ್ ಅವರು 1984 ಮತ್ತು 1991ರಲ್ಲಿ ಗೆದ್ದಿದ್ದರು.