ರಾಜ್ಯದ 14 ಲೋಕಸಭೆ ಕ್ಷೇತ್ರಗಳ ಎರಡನೇ ಹಂತದ ಮತದಾನಕ್ಕೆ ಎರಡು ದಿನ ಬಾಕಿ ಇದ್ದು, ಮೇ 7ರಂದು ದೇಶದಲ್ಲಿ ಮೂರನೇ ಹಂತದ ಹಾಗೂ ಕರ್ನಾಟಕದಲ್ಲಿ ಎರಡನೇ ಹಂತದ ಮತದಾನಕ್ಕೆ ವೇದಿಕೆ ಸಿದ್ದವಾಗಿದೆ.
ಎಲ್ಲ ರೀತಿಯ ಅಬ್ಬರದ ರಾಜಕೀಯ ಪ್ರಚಾರಕ್ಕೆ ಭಾನುವಾರ (ಮೇ 5) ಸಂಜೆ 6 ಗಂಟೆಗೆ ತೆರೆಬೀಳಲಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬೆಳಗಾವಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ಕರೆದು ಮತದಾರರಿಗೆ ಕೊನೆಯ ಸಂದೇಶ ಸಾರಿದರು.
“ಬಹಳ ಜವಾಬ್ದಾರಿಯಿಂದ ನಾನು ಈ ಮಾತು ಹೇಳುತ್ತಿರುವೆ, ಮೋದಿ ಸರ್ಕಾರದಿಂದ ರಾಜ್ಯಕ್ಕೆ ತೆರಿಗೆ ವಿಚಾರದಲ್ಲಿ ಬಹುದೊಡ್ಡ ಅನ್ಯಾಯವಾಗಿದೆ. ಕರ್ನಾಟಕದ ಮತದಾರರಿಗೆ ನಾನು ಮನವಿ ಮಾಡುವೆ, ದಯಮಾಡಿ ಇದೊಂದು ಅವಕಾಶವಿದೆ. ಮೋದಿ ಅವರು 10 ವರ್ಷದಲ್ಲಿ ಏನು ಮಾಡಿಲ್ಲ, ಕರ್ನಾಟಕ್ಕೆ ಕೊಟ್ಟಿದ್ದು ಕೇವಲ ಚೊಂಬು. ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಸಂಸತ್‌ನಲ್ಲಿ ರಾಜ್ಯದ ಪರವಾಗಿ ಧ್ವನಿ ಎತ್ತಲು ಅವಕಾಶ ಮಾಡಿಕೊಡಿ” ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.
“ಫೆರಿಪರಲ್ ರಿಂಗ್ ರಸ್ತೆಗೆ 3 ಸಾವಿರ ಕೋಟಿ ಕೊಡುತ್ತೇವೆ ಎಂದ್ರು, ಬೆಂಗಳೂರು ಕೆರೆಗಳ ಅಭಿವೃದ್ಧಿಗೆ 3 ಸಾವಿರ ಕೋಟಿ ಕೊಡುವುದಾಗಿ ಘೋಷಿಸಿದರು. ಅಪ್ಪರ್ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಕೊಡುತ್ತೇವೆ ಎಂದು ಬಜೆಟ್‌ನಲ್ಲಿ ಘೋಷಿಸಿದರು. ಆದರೆ ಈವರೆಗೂ 1 ರೂಪಾಯಿ ರಾಜ್ಯಕ್ಕೆ ಬಂದಿಲ್ಲ. ಇದು ಮೋದಿ ಸರ್ಕಾರ ಕನ್ನಡಿಗರಿಗೆ ಮಾಡಿರುವ ಅವಮಾನ” ಎಂದು ಕಿಡಿಕಾರಿದರು.
“ಎನ್‌ಡಿಆರ್‌ಎಫ್ ನಿಯಮದ ಪ್ರಕಾರ 18 ಸಾವಿರ ಕೋಟಿ ಬರ ಪರಿಹಾರ ಕೊಡಿ ಎಂದು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೆವು. ನಮ್ಮ ಮನವಿಯನ್ನು ನಿರ್ಲಕ್ಷಿಸಿ ರಾಜಕೀಯ ಹೇಳಿಕೆ ನೀಡಿದರು. ಅನಿವಾರ್ಯವಾಗಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರಿಂದ ನಮಗೆ ಈಗ ಸಣ್ಣ ಮೊತ್ತವಾದರೂ ಬಂದಿದೆ. ನಮ್ಮ ಹೋರಾಟ ಮುಂದುವರಿಯಲಿದೆ” ಎಂದರು.
“ಪ್ರತಿ ವರ್ಷ ಕರ್ನಾಟಕ ಕೇಂದ್ರ ಸರ್ಕಾರಕ್ಕೆ 4 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿ ಕೊಡುತ್ತಿದೆ. ನಮಗೆ ಮರಳಿ ಬರುತ್ತಿರುವುದು ಕೇವಲ 55 ಸಾವಿರ ಕೋಟಿ ಮಾತ್ರ. ಅಂದರೆ 100 ತೆರಿಗೆ ಕಟ್ಟಿದರೆ 13 ರೂ. ಮರಳಿ ಬರುತ್ತಿದೆ. ಈ ಅನ್ಯಾಯಕ್ಕೆ ರಾಜ್ಯದ ಮತದಾರರು ತಕ್ಕ ಉತ್ತರ ಕೊಡಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ಮೋದಿ ಸರ್ಕಾರ ಜಾತಿ ಜಾತಿಗಳ ನಡುವೆ ಸಮಾಜ ಒಡೆಯುವ ಕೆಲಸ ಮಾಡಿದೆ. ಈ ಸಾರಿ ಕರ್ನಾಟಕದ ಜನ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿಟ್ಟು ಕರ್ನಾಟಕದ ಮತದಾರರು ಸ್ವಾಭಿಮಾನನದಿಂದ ಮತಹಾಕುತ್ತಾರೆ. ಬಿಜೆಪಿಯನ್ನು ಮನೆಗೆ ಕಳುಹಿಸುತ್ತಾರೆ. ಹೆಚ್ಚಿನ ಸ್ಥಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ” ಎಂದರು.
ಬಿಜೆಪಿಯದು ಬರೀ ಬುರುಡೆ: ಡಿಕೆಶಿ
ಮಹಾತ್ಮ ಗಾಂಧಿ ಅವರು ಕಾಂಗ್ರೆಸ್‌ನ ನಾಯಕತ್ವ ವಹಿಸಿಕೊಂಡಿ ನೆಲವಿದು. ಇಂತಹ ಬೆಳಗಾವಿ ನೆಲದಲ್ಲಿ ನಾವಿಂದು ಚುನಾವಣೆ ಪ್ರಚಾರಕ್ಕೆ ತೆರೆ ಎಳೆಯುತ್ತಿದ್ದೇವೆ. ಉತ್ತರ ಕರ್ನಾಟದಲ್ಲಿ 12 ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಭರವಸೆ ವ್ಯಕ್ತಪಡಿಸಿದರು.
“ಆತ್ಮವಿಶ್ವಾಸದಿಂದ ಮತಯಾಚನೆ ಪ್ರಚಾರವನ್ನು ಕೊನೆ ಮಾಡುತ್ತಿದ್ದೇವೆ. ಬಿಜೆಪಿಯವರು ಬರೀ ಬುರುಡೆ ಬಿಟ್ಟುಕೊಂಡು ಹೋಗುತ್ತಿದ್ದಾರೆ. ಮೋದಿ ಅವರ 10 ವರ್ಷದ ಸಾಧನೆ ಏನಾದ್ರೂ ಇದ್ದರೆ ಅದನ್ನು ತಿಳಿಸಲಿ. ಸುಳ್ಳು ಹೇಳುವುದರಲ್ಲಿ ಬಿಜೆಪಿಗರು ನಿಸ್ಸಿಮರು” ಎಂದು ವಾಗ್ದಾಳಿ ನಡೆಸಿದರು.
“ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಗಾಳಿ ಬೀಸುತ್ತಿದೆ. ಒಂದು ಮತಕ್ಕೆ 10 ಗ್ಯಾರಂಟಿ. ಈ ದೇಶದ ಜನರ ಬದುಕಿನಲ್ಲಿ ಬದಲಾವಣೆ ತರಲು ಕಾಂಗ್ರೆಸ್ ಗ್ಯಾರಂಟಿ ತಂದಿದೆ. ನಮ್ಮ ರಾಜ್ಯದಲ್ಲಿ ನಾನು ಮತ್ತು ಸಿದ್ದರಾಮಯ್ಯ ಹೇಗೆ ಗ್ಯಾರಂಟಿ ಯೋಜನೆಗಳಿಗೆ ಸಹಿ ಮಾಡಿ ಘೋಷಿಸಿದ್ದೇವೋ ಹಾಗೆಯೇ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳಿಗೆ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಸಹಿ ಮಾಡಿದ್ದಾರೆ. ನಾವು ನಡಿದಂತೆ ನಡೆಯುತ್ತೇವೆ” ಎಂದು ಹೇಳಿದರು.