ಒಕ್ಕಲಿಗ ರಾಜಕೀಯ ನಾಯಕರೇ ಆಗಲಿ, ಸಮುದಾಯದ ಸ್ವಾಮೀಜಿಗಳೇ ಆಗಲಿ ರಾಜಕಾರಣವನ್ನು ಬದಿಗಿಟ್ಟು; ರೇವಣ್ಣ ವಿರುದ್ಧ ನಿಷ್ಪಕ್ಷಪಾತದ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಬೇಕಿದೆ. ಹಾಗೂ ಪ್ರಜ್ವಲ್ ದೌರ್ಜನ್ಯಕ್ಕೆ ಬಲಿಯಾದ ಬಡ, ಅಸಹಾಯಕ ಹೆಣ್ಣುಮಕ್ಕಳ ಪರವಾಗಿ ನಿಲ್ಲಬೇಕಿದೆ. ಸಂತ್ರಸ್ತೆಯರು ಸಮಾಜದಲ್ಲಿ ತಲೆ ಎತ್ತಿಕೊಂಡು ತಿರುಗುವಂತೆ ನೋಡಿಕೊಳ್ಳಬೇಕಿದೆ. ಅವರಿಗೆ ರಕ್ಷಣೆ, ಧೈರ್ಯ, ಸಾಂತ್ವನ, ಸಹಕಾರ ನೀಡಬೇಕಾಗಿದೆ. ಆ ಮೂಲಕ ಮನುಷ್ಯರಾಗಬೇಕಿದೆ.
‘ಎಚ್.ಡಿ. ರೇವಣ್ಣ ಅವರನ್ನು ಬಂಧಿಸಿರುವ ಪೊಲೀಸರ ಕ್ರಮ ಸರಿಯಾಗಿದೆ. ರೇವಣ್ಣ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಜ್ವಲ್ ರೇವಣ್ಣ ಈಗಲೂ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಸಂಸದರಾಗಿಯೇ ಇದ್ದಾರೆ. ಈ ಬಾರಿ ಹಾಸನ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರಜ್ವಲ್ ರೇವಣ್ಣ ಅವರು ಒಂದು ವೇಳೆ ಗೆದ್ದರೆ ಖಂಡಿತ ಅನರ್ಹಗೊಳಿಸುತ್ತೇವೆ’ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಅಂದರೆ, ಪ್ರಜ್ವಲ್ ರೇವಣ್ಣ ಸದ್ಯಕ್ಕೆ ನಮ್ಮ ಸಂಸದರಲ್ಲ, ಜೆಡಿಎಸ್ನೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದರೂ, ನಾವು ಪ್ರಜ್ವಲ್ ಪರ ನಿಲ್ಲುವುದಿಲ್ಲ, ಅವರ ಕೃತ್ಯಗಳನ್ನು ಸಮರ್ಥಿಸಿಕೊಳ್ಳುವುದಿಲ್ಲ ಎಂಬುದು ಬಿಜೆಪಿಯ ಅಶೋಕ್ ಹೇಳಿಕೆಯಿಂದ ಸ್ಪಷ್ಟವಾದರೂ, ಇದರ ಹಿಂದೆ ಹಲವು ರಾಜಕೀಯ ಒಳಸುಳಿಗಳಿವೆ.
ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆಯ ಪ್ರಚಾರ ಕಾರ್ಯ ಈಗಾಗಲೇ ಮುಗಿದಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ಗೆ ನೆಲೆ ಇಲ್ಲದಿರುವುದರಿಂದ, ಬಿಜೆಪಿಗೆ ಜೆಡಿಎಸ್ನ ಅಗತ್ಯವಿಲ್ಲ ಎನಿಸಿದೆ. ಅದನ್ನು ನೇರವಾಗಿ ಹೇಳದೆ, ಪ್ರಜ್ವಲ್ ಪ್ರಕರಣದ ಮೂಲಕ ರವಾನಿಸಿರುವುದು ಸ್ಪಷ್ಟವಾಗುತ್ತದೆ.
ಅದರಲ್ಲೂ ವಿಪಕ್ಷ ನಾಯಕ ಅಶೋಕ್, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತರ ಯಡಿಯೂರಪ್ಪ ಹಾಗೂ ಒಕ್ಕಲಿಗರ ದೇವೇಗೌಡರ ಕುಟುಂಬದ ಕತೆ ಮುಗಿಯಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೇ ಪಕ್ಷಗಳು ಉಳಿದು, ಪಕ್ಷದ ಹಿಡಿತ ಒಕ್ಕಲಿಗ ನಾಯಕತ್ವದತ್ತ ಹೊರಳುತ್ತದೆ. ಅದಕ್ಕೆ ನಾನೇ ನಾಯಕ ಎಂಬ ಭ್ರಮೆಯಲ್ಲಿದ್ದಾರೆ.
ಅದಕ್ಕೆ ತಕ್ಕಂತೆ, ಯಡಿಯೂರಪ್ಪರ ವಿರುದ್ಧ ಈಶ್ವರಪ್ಪ, ಸಂತೋಷ್ ವಿರುದ್ಧ ಅನಂತಕುಮಾರ್ ಹೆಗಡೆ, ಪ್ರಲ್ಹಾದ್ ಜೋಶಿ ವಿರುದ್ಧ ಶೆಟ್ಟರ್, ಅಶೋಕ್ ವಿರುದ್ಧ ರವಿ ಮತ್ತು ಅಶ್ವತ್ಥನಾರಾಯಣ ಕುಸ್ತಿಗೆ ಬಿದ್ದಿದ್ದಾರೆ. ಬೇಯುತ್ತಿರುವ ಬಿಜೆಪಿ ಮನೆಯಿಂದ ಗಳ ಹಿರಿಯುತ್ತಿದ್ದಾರೆ. ಇದಕ್ಕೆ ಬಿಜೆಪಿ ಹೈಕಮಾಂಡ್ ಕೂಡ ಗಾಳಿ ಹಾಕುತ್ತಿದೆ. ಇದು ಕೂಡ ಅಶೋಕ್ಗೆ ಸುಗಮ ಹಾದಿಯಂತೆ ಕಾಣತೊಡಗಿದೆ.
ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆ ಭಾಗದಲ್ಲಿ ಈಗಲೂ ದೇವೇಗೌಡರೇ ಪ್ರಶ್ನಾತೀತ ಒಕ್ಕಲಿಗರ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ದೇವೇಗೌಡರ ಈ ಕೋಟೆ ಕಳೆದ ವಿಧಾನಸಭಾ ಚುನಾವಣೆಯ ವೇಳೆಯಲ್ಲಿ ಛಿದ್ರವಾಗಿತ್ತು. ಮತ ಗಳಿಕೆಯಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಇದನ್ನೆಲ್ಲ ಅಳೆದ ತೂಗಿದ ಗೌಡರು, ಬಿಜೆಪಿಯೊಂದಿಗೆ ಮೈತ್ರಿಗೆ ಮುಂದಾದರು. ಕೊನೆಪಕ್ಷ ಒಂದೆರಡು ಲೋಕಸಭಾ ಕ್ಷೇತ್ರಗಳನ್ನಾದರೂ ಗೆದ್ದರೆ, ಅಸ್ತಿತ್ವ ಉಳಿಸಿಕೊಳ್ಳಬಹುದು ಎಂದು ಯೋಚಿಸಿದರು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಪ್ರಧಾನಿಯನ್ನಾಗಿಸಿದ ಹಾಸನಕ್ಕೆ ಗೌಡರು ಕೊಟ್ಟ ಉಜ್ವಲ ಕೊಡುಗೆ ಈ ಪ್ರಜ್ವಲ
ಆದರೆ, ಬಿಜೆಪಿಯ ಲೆಕ್ಕಾಚಾರವೇ ಬೇರೆ. ಜೆಡಿಎಸ್ ಒಂದೆರಡು ಸ್ಥಾನ ಗೆದ್ದರೆ ತಾನೇ ಅಸ್ತಿತ್ವ, ಗೆಲ್ಲದಂತೆ ನೋಡಿಕೊಳ್ಳುವುದರಲ್ಲಿಯೇ ಬಿಜೆಪಿಯ ಅಸ್ತಿತ್ವವಿದೆ. ಅದಕ್ಕಾಗಿ ಅವರು ಕುಮಾರಸ್ವಾಮಿಯವರು ಸೋಲಲು ಶಕ್ತಿಮೀರಿ ಶ್ರಮಿಸಿರುವುದು ಮತ್ತು ಅವರ ಒಳಾಸೆ ಈಗ ಪ್ರಜ್ವಲ್ ಪ್ರಕರಣದಿಂದ ಹೊರಬರುತ್ತಿರುವುದು- ಎಲ್ಲವೂ ನಿಚ್ಚಳವಾಗಿದೆ.
ಒಂದು ಕಡೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಯಿಂದ ಒಳೇಟು, ಪ್ರಜ್ವಲ್ ಪ್ರಕರಣದಿಂದಾದ ಮುಜುಗರ ಮತ್ತು ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಬಲಿಯುತ್ತಿರುವ ಬಗೆಗಿನ ಬೇಸರ- ಇದನ್ನೆಲ್ಲ ಕಂಡು ಕಂಗಾಲಾಗಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ‘ಒಕ್ಕಲಿಗರು ಈ ಬಾರಿ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಡಿಕೆ ಸಹೋದರರಿಗೆ ತಿವಿದಿದ್ದಾರೆ.
ಅಸಲಿಗೆ, ಒಕ್ಕಲಿಗ ನಾಯಕತ್ವದ ವಿಚಾರದಲ್ಲಿ ಕುಮಾರಸ್ವಾಮಿಯವರ ನೇರ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಡಿ.ಕೆ. ಶಿವಕುಮಾರ್ ಅವರೇ ಹೊರತು, ಬಿಜೆಪಿಯ ಅಶೋಕ್ ಅಲ್ಲ. ಅಶೋಕ್ರನ್ನು ಅವರು ಲೆಕ್ಕಕ್ಕೇ ಇಟ್ಟಿಲ್ಲ. ಆದರೆ ಬಿಜೆಪಿಯನ್ನು ಬಿಟ್ಟುಕೊಡಲಾಗದ ಕುಮಾರಸ್ವಾಮಿ, ಡಿಕೆ ಸಹೋದರರ ಮೇಲೆ ಉರಿದು ಬೀಳುತ್ತಿದ್ದಾರೆ.
ರಾಜಕಾರಣದಲ್ಲಿ ಚುನಾವಣೆಗಳನ್ನು ಗೆಲ್ಲುವುದು ಮತ್ತು ಅಧಿಕಾರ ಹಿಡಿಯುವುದು ಮುಖ್ಯವಾಗಿರುವಾಗ, ಕಾಂಗ್ರೆಸ್ಸಿನ ಡಿ.ಕೆ. ಶಿವಕುಮಾರ್ ಅದರಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಡಿ.ಕೆ. ಸುರೇಶ್ ಫಲಿತಾಂಶ ಬರಬೇಕಿದೆ. ಅಕಸ್ಮಾತ್ ಅವರು ಸೋತರೂ, ಒಕ್ಕಲಿಗರ ನಾಯಕತ್ವಕ್ಕೇನೂ ತೊಂದರೆಯಾಗುವುದಿಲ್ಲ ಎನ್ನುವುದು ಡಿ.ಕೆ. ಶಿವಕುಮಾರ್ಗೂ ಗೊತ್ತಿದೆ. ಗೊತ್ತಿದ್ದೇ, ‘ಒಕ್ಕಲಿಗ ಸಮುದಾಯದ ನಾಯಕತ್ವ ಬಯಸಿಲ್ಲ, ಅದರ ಅಗತ್ಯವೂ ನನಗಿಲ್ಲ’ ಎಂದು ಕುಮಾರಸ್ವಾಮಿಯವರಿಗೆ ಕುಟುಕಿದ್ದಾರೆ.
ಅಂದರೆ, ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್- ಈ ಮೂರೂ ಪಕ್ಷಗಳ ನಾಯಕರಿಗೆ ಅವರ ಪ್ರಭಾವ, ಹಿಡಿತ, ಅಧಿಕಾರ ಮುಖ್ಯವೇ ಹೊರತು, ಒಕ್ಕಲಿಗರಲ್ಲ. ಆದರೆ ರಾಜ್ಯದ ಒಕ್ಕಲಿಗರು ಆಕಾಶದತ್ತ ಆಸೆಗಣ್ಣಿಯಿಂದ ನೋಡುತ್ತಿದ್ದಾರೆ. ಮಳೆಗಾಗಿ, ಬೆಳೆಗಾಗಿ, ಬರಗೆಟ್ಟ ಬದುಕಿನಿಂದ ಬಚಾವು ಆಗಲಿಕ್ಕಾಗಿ ಕಾಯುತ್ತಿದ್ದಾರೆ. ಹಣದ ದರ್ಪ, ಅಧಿಕಾರದ ಮದದಿಂದ ಮೆರೆಯುತ್ತಿರುವ ಈ ಫ್ಯೂಡಲ್ ಜಾತಿಯ ನಾಯಕರು, ಒಕ್ಕಲಿಗರನ್ನು ಗುತ್ತಿಗೆ ಪಡೆದವರಂತೆ, ಅವರನ್ನು ಹಿಡಿದಿಟ್ಟುಕೊಳ್ಳುವ ಆಟದಲ್ಲಿ ನಿರತರಾಗಿದ್ದಾರೆ.
ಇದನ್ನು ಓದಿದ್ದೀರಾ?: ಗುಜರಾತಿನ ವ್ಯಾಪಾರಿಗಳ ಕೈಗೆ ಕೋಲು: ಇದಲ್ಲವೇ ದೇವೇಗೌಡರ ದುರಂತ?
ಇದರ ನಡುವೆಯೇ, ಒಕ್ಕಲಿಗರ ಹಾರ್ಟ್ ಲ್ಯಾಂಡ್ ಎಂದೇ ಹೆಸರಾಗಿರುವ ಹಾಸನ ಜಿಲ್ಲೆಯಲ್ಲಿ ರೇವಣ್ಣರ ಪುತ್ರ ಪ್ರಜ್ವಲ್, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿಕೊಂಡು ಪ್ರಪಂಚದಾದ್ಯಂತ ಕುಖ್ಯಾತಿ ಗಳಿಸುತ್ತಿದ್ದಾರೆ. ಒಕ್ಕಲಿಗರನ್ನು ಹಿಡಿತದಲ್ಲಿಟ್ಟುಕೊಳ್ಳಲು ಬಯಸುವ ಒಕ್ಕಲಿಗ ನಾಯಕರು, ರಾಜಕೀಯ ಕಾರಣಕ್ಕಾಗಿ ಪ್ರಜ್ವಲ್ ಕೃತ್ಯವನ್ನು ಖಂಡಿಸುತ್ತಿದ್ದಾರೆ. ಆದರೆ, ಒಕ್ಕಲಿಗ ನಾಯಕರನ್ನು ಬೆಂಬಲಿಸಿ ಎಂದು ಸಮುದಾಯಕ್ಕೆ ಕರೆ ಕೊಡುವ ಒಕ್ಕಲಿಗ ಸ್ವಾಮೀಜಿಗಳು ಮತ್ತು ದೊಡ್ಡಗೌಡರು ಬಹಿರಂಗವಾಗಿ ಪ್ರಜ್ವಲ್ನ ಕೃತ್ಯ ಖಂಡಿಸಿದ್ದು ಕಾಣಿಸುತ್ತಿಲ್ಲ.
ಒಕ್ಕಲಿಗ ನಾಯಕರೇ ಆಗಲಿ, ಸ್ವಾಮೀಜಿಗಳೇ ಆಗಲಿ ರಾಜಕಾರಣವನ್ನು ಬದಿಗಿಟ್ಟು; ರೇವಣ್ಣ ವಿರುದ್ಧ ನಿಷ್ಪಕ್ಷಪಾತದ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಬೇಕಿದೆ. ಹಾಗೂ ಪ್ರಜ್ವಲ್ ದೌರ್ಜನ್ಯಕ್ಕೆ ಬಲಿಯಾದ ಬಡ, ಅಸಹಾಯಕ ಹೆಣ್ಣುಮಕ್ಕಳ ಪರವಾಗಿ ನಿಲ್ಲಬೇಕಿದೆ. ಸಂತ್ರಸ್ತೆಯರು ಸಮಾಜದಲ್ಲಿ ತಲೆ ಎತ್ತಿಕೊಂಡು ತಿರುಗುವಂತೆ ನೋಡಿಕೊಳ್ಳಬೇಕಿದೆ. ಅವರಿಗೆ ರಕ್ಷಣೆ, ಧೈರ್ಯ, ಸಾಂತ್ವನ, ಸಹಕಾರ ನೀಡಬೇಕಾಗಿದೆ. ಆ ಮೂಲಕ ಮನುಷ್ಯರಾಗಬೇಕಿದೆ.
