2010ರಲ್ಲಿ ಗುಜರಾತಿನಲ್ಲಿ ನಡೆದಿದ್ದ ಆರ್‌ಟಿಐ ಕಾರ್ಯಕರ್ತ ಅಮಿತ್ ಜೇತ್ವಾ ಅವರ ಹತ್ಯೆ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ನೀಡಿದ್ದ ಶಿಕ್ಷೆಯ ವಿರುದ್ಧ ಬಿಜೆಪಿ ಮಾಜಿ ಸಂಸದ ದಿನು ಸೋಲಂಕಿ ಮತ್ತು ಇತರ ಆರು ಮಂದಿ ಸಲ್ಲಿಸಿದ್ದ ಮೇಲ್ಮನವಿಯನ್ನು ಗುಜರಾತ್ ಹೈಕೋರ್ಟ್ ಸೋಮವಾರ ಪುರಸ್ಕರಿಸಿದೆ. ಅಲ್ಲದೇ, ಪ್ರಕರಣದಿಂದ ಅವರನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.
‘ವಿಚಾರಣಾ ನ್ಯಾಯಾಲಯ ಪೂರ್ವನಿರ್ಧರಿತ ಕಲ್ಪನೆಯೊಂದಿಗೆ ವಿಚಾರಣೆಯನ್ನು ನಡೆಸಿದೆ’ ಎಂದು ಪರಿಗಣಿಸಿ ನ್ಯಾಯಮೂರ್ತಿಗಳಾದ ಎಎಸ್ ಸುಪೇಹಿಯಾ ಮತ್ತು ವಿಮಲ್ ಕೆ ವ್ಯಾಸ್ ಅವರ ವಿಭಾಗೀಯ ಪೀಠವು ಸೋಲಂಕಿ ಮತ್ತು ಇತರ ಆರು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಸಿಬಿಐ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿತು.
ನ್ಯಾಯಮೂರ್ತಿ ಸುಪೇಹಿಯಾ ಅವರು ಖುಲಾಸೆಗೊಳಿಸುವ ತೀರ್ಪು ನೀಡುವಾಗ, “ಅನಿರೀಕ್ಷಿತ ಸಂದರ್ಭಗಳಿಂದಾಗಿ ನಾವು ಈ ತೀರ್ಪು ಪ್ರಕಟಿಸಲು ಮೂರು ವಾರ ತಡವಾಯಿತು. ಸತ್ಯಮೇವ ಜಯತೇ. ಸತ್ಯಕ್ಕೆ ಜಯ ಸಿಗಬೇಕು. ಮೊದಲಿನಿಂದಲೂ ತನಿಖೆಯು ನಿಷ್ಪ್ರಯೋಜಕ ಮತ್ತು ಪೂರ್ವಾಗ್ರಹ ಪೀಡಿತವಾಗಿದೆ” ಎಂದು ಹೇಳುತ್ತಾ ಮೇಲ್ಮನವಿಯನ್ನು ಪುರಸ್ಕರಿಸಿದರು.
#BREAKING#GujaratHighCourt ACQUITS former BJP MLA Dinu Solanki and 6 others in RTI Activist Amit Jethva Murder case.
A Bench of Justices AS Supehia and Vimal K Vyas pronounced the judgment. pic.twitter.com/Jc3v6IYoUF
— Bar and Bench (@barandbench) May 6, 2024
ಜುಲೈ 20, 2010 ರಂದು ಗುಜರಾತ್ ಹೈಕೋರ್ಟ್ ಆವರಣದ ಹೊರಗೆ ಆರ್‌ಟಿಐ ಕಾರ್ಯಕರ್ತ ಅಮಿತ್ ಜೇತ್ವಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸೋಲಂಕಿ ಮತ್ತು ಇತರ ಆರು ಮಂದಿಗೆ 2019ರಲ್ಲಿ ಸಿಬಿಐ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಕೊಲೆ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣದಲ್ಲಿ 15 ಲಕ್ಷ ರೂ. ದಂಡ ಕೂಡ ವಿಧಿಸಲಾಗಿತ್ತು.
ಪ್ರಕರಣದಲ್ಲಿ ಅಪರಾಧಿಯಾಗಿದ್ದ ದಿನು ಸೋಲಂಕಿ ಮತ್ತು ಅವರ ಸೋದರಳಿಯ ಶಿವ ಸೋಲಂಕಿ ಅವರ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ನಂತರ ಅಮಾನತುಗೊಳಿಸಿತ್ತು.

“ಅಪರಾಧದ ಆರಂಭದಿಂದಲೂ ತನಿಖೆಯು ನಿಷ್ಪ್ರಯೋಜಕ ಮತ್ತು ಪೂರ್ವಾಗ್ರಹ ಪೀಡಿತವಾಗಿದೆ. ಸಾಕ್ಷಿಗಳ ವಿಶ್ವಾಸವನ್ನು ಭದ್ರಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ” ಎಂದು ಹೈಕೋರ್ಟ್ ನ್ಯಾಯಪೀಠ ಹೇಳಿತು. ಪರಿಣಾಮವಾಗಿ ಜುಲೈ 11, 2019 ರಂದು ಸಿಬಿಐ ಕೋರ್ಟ್‌ನ ವಿಶೇಷ ನ್ಯಾಯಾಧೀಶರು ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದರು.
ಸಿಬಿಐ ಕೋರ್ಟ್ ವಿಶೇಷ ನ್ಯಾಯಾಧೀಶರು ಆರೋಪಿಗಳಿಗೆ ಐಪಿಸಿ ಸೆಕ್ಷನ್ 302 (ಕೊಲೆ) 120 (ಬಿ) (ಅಪರಾಧ ಪಿತೂರಿ, 201 (ಸಾಕ್ಷಾಧಾರಗಳು ಕಣ್ಮರೆಯಾಗಲು ಕಾರಣ) ಅಡಿಯಲ್ಲಿ ಅಪರಾಧಕ್ಕಾಗಿ ಶಿಕ್ಷೆ ವಿಧಿಸಿದ್ದರು.
ಜುಲೈ 20, 2010 ರಂದು ಗುಜರಾತ್ ಹೈಕೋರ್ಟಿನ ಹೊರಗೆ ಜೇಥ್ವಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಅವರು ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಮಾಹಿತಿ ಪಡೆಯುವ ಮೂಲಕ ದಿನು ಸೋಲಂಕಿಯನ್ನು ಒಳಗೊಂಡಿರುವ ಅಕ್ರಮ ಗಣಿಗಾರಿಕೆ ಚಟುವಟಿಕೆಗಳನ್ನು ಬಹಿರಂಗಪಡಿಸಲು ಪ್ರಯತ್ನಿಸಿದ್ದರು. ನಂತರ ಇಬ್ಬರು ಅಪರಿಚಿತ ದಾಳಿಕೋರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.
ತನಿಖೆಯನ್ನು ರಾಜ್ಯ ಪೊಲೀಸ್‌ನ ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ವರ್ಗಾಯಿಸಲಾಗಿತ್ತು. ನಂತರ ಆರೋಪಪಟ್ಟಿ ಸಲ್ಲಿಸಿತ್ತು. ಸೆಪ್ಟೆಂಬರ್ 2012ರಲ್ಲಿ ಹೈಕೋರ್ಟ್ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಿತ್ತು. ನವೆಂಬರ್ 2013ರಲ್ಲಿ ಸಿಬಿಐ ದಿನು ಸೋಲಂಕಿಯನ್ನು ಬಂಧಿಸಿತ್ತು.
