ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಕಿಡಿಗೇಡಿಗಳು ಭಗ್ನಗೊಳಿಸಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಬೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಗಳವಾರ ರಾತ್ರಿ ಘಟನೆ ನಡೆದಿದ್ದು, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಮದಲ್ಲಿ 2023ರ ಜೂನ್ ತಿಂಗಳಿನಲ್ಲಿ ಸಂಗೊಳ್ಳಿ ರಾಯಣ್ಣ ಯುವ ಬ್ರಿಗೇಡ್ ಸದಸ್ಯರು ಮತ್ತು ಗ್ರಾಮಸ್ಥರು ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ನಿರ್ಮಿಸಿದ್ದರು. ಆ ಪ್ರತಿಮೆಯನ್ನು ಕೆಲ ದುಷ್ಕರ್ಮಿಗಳು ಹಾನಿಗೊಳಿಸಿದ್ದಾರೆ. ಪ್ರತಿಮೆಯ ಕತ್ತಿ, ಕೈ, ಕಾಲು ಸೇರಿದಂತೆ ವಿವಿಧ ಭಾಗಗಳನ್ನು ಭಗ್ನಗೊಳಿಸಿದ್ದಾರೆ.
ಘಟನೆಯ ಬಗ್ಗೆ ತಿಳಿಸಿರುವ ಗ್ರಾಮದ ಮುಖಂಡ ಹಿರೇಗೌಡ, “ಸರ್ವ ಸಮುದಾಯ ನಾಯಕ ಮತ್ತು ಸ್ವತಂತ್ರಕ್ಕಾಗಿ ಹೋರಾಡಿದ ದೇಶಭಕ್ತ ಸಂಗೊಳ್ಳಿ ರಾಯಣ್ಣನ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಪ್ರತಿಮೆಯನ್ನು ಪ್ರತಿಷ್ಟಾಪನೆ ಮಾಡಲಾಗಿತ್ತು. ಆದ್ರೆ ಕಳೆದ ರಾತ್ರಿ ಕಿಡಿಗೇಡಿಗಳು ಪ್ರತಿಮೆಯನ್ನು ವಿರೋಪಗೊಳಿಸಿ, ವಿಕೃತಿ ಮೆರೆದಿದ್ದಾರೆ. ದೇಶಕ್ಕಾಗಿ ಬಲಿದಾನವಾದ ಮಹನೀಯರ ಮೇಲೆ ವಿಕೃತಿ ಮೆರೆದಿರುವುದು ಖಂಡನೀಯ. ದುಷ್ಕರ್ಮಿಗಳನ್ನ ತಕ್ಷಣವೇ ಬಂಧಿಸಬೇಕು. ಕಾನೂನು ರೀತ್ಯಾ ಶಿಕ್ಷೆ ವಿಧಿಸಬೇಕು” ಎಂದು ಆಗ್ರಹಿಸಿದ್ದಾರೆ.
“ರಾಯಣ್ಣ ಒಂದು ಸಮುದಾಯಕ್ಕೆ ಸೀಮಿತವಲ್ಲ. ಅವರ ತತ್ವ, ಆದರ್ಶ, ಹೋರಾಟದ ಹಾದಿ ಎಲ್ಲರಿಗೂ ಸಲ್ಲುವಂತದ್ದು. ಇಂತಹ ಮಹನೀಯರಿಗೆ ಅಪಮಾನ ಮಾಡುವುದು ಸೂಕ್ತವಲ್ಲ. ಪೊಲೀಸ್ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ” ಎಂದು ಹೇಳಿದ್ದಾರೆ.