ಹೆಣ್ಣುಮಕ್ಕಳ ಮೇಲಿನ ಭೀಭತ್ಸ ದೌರ್ಜನ್ಯದ ಘಟನೆಗಳು ನಡೆಯುತ್ತಿದ್ದು, ಮಹಿಳೆಯರನ್ನು ಸಂಕಷ್ಟಕ್ಕೆ ದೂಡಿವೆ. ಹುಬ್ಬಳ್ಳಿಯಲ್ಲಿ ನಡೆದ ನೇಹಾ ಪ್ರಕರಣ ನಡೆದಿದೆ. ಕರ್ನಾಟಕದ ಅತ್ಯಂತ ಬಲಾಢ್ಯ ರಾಜಕಾರಣ ಕುಟುಂಬದ ಪ್ರಜ್ವಲ್ ರೇವಣ್ಣ ಎಂಬಾತ ನೂರಾರು ಹೆಣ್ಣುಮಕ್ಕಳ ಮೇಲೆ ಲೈಂಗಿಕ ಹಿಂಸಾಕಾಂಡ ನಡೆಸಿದ್ದಾನೆ. ಇಂತಹ ವಿಕೃತಿ ಮೆರೆಯುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, “ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರದಲ್ಲಿ ಮುಳುಗಿವೆ. ಹುಬ್ಬಳ್ಳಿ ನೇಹಾ ಪ್ರಕರಣದಲ್ಲಿ ಕೊಲೆಗಾರ ಅಲ್ಪಸಂಖ್ಯಾತ ಸಮುದಾಯದವನೆಂದು ತಿಳಿದಾಕ್ಷಣ ಪ್ರಕರಣವನ್ನು ಬಿಜೆಪಿ ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳಲು ಯತ್ನಿಸಿತು. ಅದೇ ರೀತಿ, ಪ್ರಜ್ವಲ್ ಪ್ರಕರಣವು ಹೊರಬಂದ ರೀತಿ ಭೀಕರವಾದುದು. ಸಂತ್ರಸ್ತ ಮಹಿಳೆಯರ ಗುರುತು ಸಿಗುವಂತಿದ್ದ ವಿಡಿಯೋಗಳ ಪೆನ್‌ಡ್ರೈವ್‌ಗಳು ಸಾರ್ವಜನಿಕರಿಗೆ ಸಿಕ್ಕುವಂತೆ ಮಾಡಿದ್ದು ಖಂಡನಾರ್ಹ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಯಲು ಸಮಾಜವನ್ನು ಎಚ್ಚರಿಸಿ, ಮಹಿಳೆಯರ ಆಯ್ಕೆಗಳನ್ನು ಮತ್ತು ಹಕ್ಕುಗಳನ್ನು ಗೌರವಿಸುವ ಅರಿವನ್ನು ಮೂಡಿಸಬೇಕಾಗಿದೆ. ಘಟನೆಗಳು ನಡೆಯುವ ಮೊದಲೇ ತಡೆಯಲು ಸಾಧ್ಯವಾಗುವಂತಹ ಸರ್ಕಾರದ ಸಂಸ್ಥೆಗಳನ್ನು ರೂಪಿಸಬೇಕು. ಇದಕ್ಕಾಗಿ ಮಹಿಳೆಯರ ಹಕ್ಕುಗಳ ವಿಷಯದಲ್ಲಿ ಸೂಕ್ಷ್ಮ ಸಂವೇದನೆಯುಳ್ಳ ಪರಿಣತರ ಹಾಗೂ ಕಾನೂನು ಮತ್ತು ವಿಷಯ ತಜ್ಞರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ಕೂಡಲೇ ರಚಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನಾಕಾರರ ಹಕ್ಕೊತ್ತಾಯಗಳು:
• ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿ ಪ್ರಜ್ವಲ್ ರೇವಣ್ಣನನ್ನು ಕೂಡಲೇ ಬಂಧಿಸಲು ಎಲ್ಲ ಕ್ರಮ ತೆಗೆದುಕೊಳ್ಳಬೇಕು; ತನಿಖೆ ಹಾಗೂ ಕಾನೂನುಕ್ರಮದಲ್ಲಿ ಲೋಪವೆಸಗದೇ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.
• ಸಂತ್ರಸ್ತೆಯ ಘನತೆ, ಗೌಪ್ಯತೆ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ; ಇನ್ನಷ್ಟು ವಿಡಿಯೋ ಪ್ರಸಾರವಾಗದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಸಂತ್ರಸ್ತ ಮಹಿಳೆಯರ ಗುರುತು ಸಿಗುವಂತೆ ವಿಡಿಯೋ ಪ್ರಸಾರ ಮಾಡಿದವರ ಮೇಲೂ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು.
• ಪ್ರಜ್ವಲ್‌ನನ್ನು ಅಭ್ಯರ್ಥಿಯನ್ನಾಗಿಸಿ, ಆತನ ಪರ ಪ್ರಚಾರ ಮಾಡಿದ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಕರ್ನಾಟಕದ ಜನರ, ದೇಶದ ಮಹಿಳೆಯರ ಬಳಿ ಕ್ಷಮೆ ಯಾಚಿಸಬೇಕು.
• ಮಹಿಳೆಯರ ಸುರಕ್ಷತೆ ಖಾತ್ರಿಯಾಗುವುದು ಸಮಾನತೆಯಿಂದ, ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವುದರಿಂದ. ಸಮಗ್ರ ಕ್ರಮಗಳಿಗೆ ಸರ್ಕಾರ ಮುಂದಾಗಬೇಕು. ತಜ್ಞರ, ಮಹಿಳಾ ಸಂಘಟನೆಗಳ ಪಾಲುದಾರಿಕೆಯೊಂದಿಗೆ ಇದು ನಡೆಯಬೇಕು.
• ಇತ್ತೀಚೆಗೆ ಕರ್ನಾಟಕದಲ್ಲಿ ನಡೆದಿರುವ ಮಹಿಳೆಯರ ಮೇಲಿನ ಎಲ್ಲಾ ದೌರ್ಜನ್ಯದ ಪ್ರಕರಣಗಳ ನಿಷ್ಪಕ್ಷಪಾತ ತನಿಖೆ ಮತ್ತು ಶಿಕ್ಷೆಯನ್ನು ಖಾತ್ರಿಪಡಿಸಲು, ಹಾಗೆಯೇ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳನ್ನು ನಿಯಂತ್ರಿಸುವ ಮಾರ್ಗಸೂಚಿ ಕ್ರಮಗಳಿಗಾಗಿ ಉನ್ನತ ಮಟ್ಟದ ಸಮಿತಿಯೊಂದನ್ನು ಸರ್ಕಾರ ಕೂಡಲೇ ರಚಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ತಾರಾ ರಾವ್, ಮರೆಪ್ಪ ಹಳ್ಳಿ, ರಾಜೇಂದ್ರ ರಾಜವಾಳ್, ಲಕ್ಷ್ಮಣ ಮಂಡಲಗೇರಾ, ಭುವನ್, ವಿಕ್ರಮ್ ತೇಜಸ್, ದಿಗಂಬರ ಕಾಡಹುಲಿ, ಮೈಲಾರಿ ದೊಡ್ಡಮನಿ, ಗೌರಮ್ಮ, ರೇಣುಕಾ ಸರಡಗಿ ಇನ್ನಿತರರು ಉಪಸ್ಥಿತರಿದ್ದರು.