ಅದಾನಿ ಅಂಬಾನಿ ಬಳಿ ಕಪ್ಪು ಹಣ ಇದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಕೊನೆಗೂ ಒಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ವ್ಯಂಗ್ಯವಾಡಿದರು.
ಚುನಾವಣೆ ಬಂದಾಗ ರಾಹುಲ್ ಗಾಂಧಿ ಅದಾನಿ ಅಂಬಾನಿಗಳ ಹೆಸರು ಹೇಳುವುದಿಲ್ಲ. ಅವರಿಂದ ಹಣ ಬಂದಿರಬಹುದು ಎಂದು ಪ್ರಧಾನಿ ಮೋದಿ ತನ್ನ ಚುನಾವಣಾ ಪ್ರಚಾರದಲ್ಲಿ ಆರೋಪ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಅಶೋಕ್ ಗೆಹ್ಲೋಟ್, “ತಮ್ಮ ಹೇಳಿಕೆ ಮೂಲಕ ಅದಾನಿ-ಅಂಬಾನಿ ಕಪ್ಪುಹಣ ಸಂಗ್ರಹಿಸಿದ್ದಾರೆ ಎಂದು ಮೋದಿ ಒಪ್ಪಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.
“ಚುನಾವಣೆ ಘೋಷಣೆಯಾದ ಬಳಿಕ ಈ ಜನರು (ಕಾಂಗ್ರೆಸ್ ನಾಯಕರು) ಅದಾನಿ-ಅಂಬಾನಿಯನ್ನು ನಿಂದನೆ ಮಾಡುವುದನ್ನು ನಿಲ್ಲಿಸಿದ್ದಾರೆ. ಶೆಹಜಾದಾ (ರಾಹುಲ್ ಗಾಂಧಿಯ ಬಗ್ಗೆ ಮೋದಿ ವ್ಯಂಗ್ಯ) ಅಂಬಾನಿ ಅದಾನಿಯಿಂದ ಎಷ್ಟು ಹಣ ಪಡೆದಿದ್ದಾರೆ ಎಂದು ಬಹಿರಂಗಪಡಿಸಲಿ. ಕಾಂಗ್ರೆಸ್‌ಗೆ ಟೆಂಪೋಗಳಲ್ಲಿ ನೋಟುಗಳು (ಹಣ) ಬಂದಿದೆಯೇ? ರಾತ್ರೋರಾತ್ರಿ ಅಂಬಾನಿ-ಅದಾನಿ ನಿಂದನೆ ನಿಲ್ಲಬೇಕಾದರೆ ಯಾವ ಡೀಲ್ ನಡೆದಿದೆ” ಎಂದು ಪ್ರಶ್ನಿಸಿದ್ದರು.
चलो यह खुलासा तो प्रधानमंत्री जी ने बेबाकी से कर ही दिया कि अदाणी-अंबानी के पास अकूत कालाधन मौजूद है जिस पर हाथ डालने की हिम्मत वे 10 साल में नहीं कर पाये। अब मोदी जी को ये भी बता देना चाहिए कि आज के पहले नोटों से भरे बोरे और टेम्पो किनके यहां खाली होते थेl
श्री राहुल गांधी…
— Ashok Gehlot (@ashokgehlot51) May 8, 2024
ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿರುವ ಶೆಹಜಾದಾ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್, “ಅದಾನಿ-ಅಂಬಾನಿ ಬಳಿ ಅಪಾರ ಪ್ರಮಾಣದ ಕಪ್ಪುಹಣವಿದೆ ಎಂದು ಪ್ರಧಾನಿ ಕೊನೆಗೂ ಹತ್ತು ವರ್ಷದ ಬಳಿಕ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ” ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
“ಈಗ, ಮೋದಿ ಅವರು ಇದಕ್ಕೂ ಮೊದಲು ಯಾರ ಸ್ಥಳದಲ್ಲಿ ಕರೆನ್ಸಿ ನೋಟುಗಳಿಂದ ತುಂಬಿದ ಗೋಣಿಚೀಲಗಳು ಮತ್ತು ಟೆಂಪೋಗಳನ್ನು ಖಾಲಿ ಮಾಡಲಾಯಿತು ಅಂತ ಹೇಳಬೇಕಾಗುತ್ತದೆ” ಎಂದು ಕುಟುಕಿದರು.
ಹಾಗೆಯೇ, “ರಾಹುಲ್ ಗಾಂಧಿ ಬಹಳ ಸಮಯದಿಂದ ಸತ್ಯಕ್ಕಾಗಿ ಹೋರಾಡುತ್ತಿದ್ದಾರೆ. ಅಂತಿಮ ಗೆಲುವು ಸತ್ಯ, ಜೂನ್ 4 ರಂದು ನ್ಯಾಯ ಮತ್ತು ಸತ್ಯಕ್ಕೆ ಜಯ ಸಿಗುತ್ತದೆ” ಎಂದು ಭರವಸೆ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ತಿರುಗೇಟು
ಇನ್ನು ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಮೋದಿ ಅವರೇ ಕೊಂಚ ಭಯಪಟ್ಟಿದ್ದೀರಾ? ಸಾಮಾನ್ಯವಾಗಿ ನೀವು ಮುಚ್ಚಿನ ಕೋಣೆಯಲ್ಲಿ ಕೂತು ಅದಾನಿ ಅಂಬಾನಿ ಬಗ್ಗೆ ಮಾತನಾಡುತ್ತೀರಿ. ಮೊದಲ ಬಾರಿಗೆ ನೀವು ಸಾರ್ವಜನಿಕವಾಗಿ ಅದಾನಿ ಅಂಬಾನಿ ಎಂದಿದ್ದೀರಿ. ಟೆಂಪೋದಲ್ಲಿ ಹಣ ನೀಡುತ್ತಾರೆ ಎಂದು ನಿಮಗೆ ತಿಳಿದಿದೆಯಲ್ವ, ಇದು ನಿಮ್ಮ ವೈಯಕ್ತಿಕ ಅನುಭವವೇ” ಎಂದು ಪ್ರಧಾನಿ ಕಾಳೆದಿದ್ದಾರೆ.
“ಸಿಬಿಐ, ಇಡಿಯನ್ನು ಕಳುಹಿಸಿ. ಎಲ್ಲ ವಿಚಾರಣೆಯನ್ನು ಮಾಡಿಸಿ. ಹೆದರಬೇಡಿ ಮೋದಿ ಜಿ” ಎಂದು ವ್ಯಂಗ್ಯವಾಡಿದ ರಾಹುಲ್ ಗಾಂಧಿ ಅವರು, “ಪ್ರಧಾನಿ ಮೋದಿ ಅವರು ಇವರಿಗೆ (ಅದಾನಿ ಅಂಬಾನಿ) ಎಷ್ಟು ಹಣವನ್ನು ನೀಡಿದ್ದಾರೋ ಅಷ್ಟು ಹಣವನ್ನು ನಾವು ದೇಶದ ಬಡವರಿಗೆ ನೀಡುತ್ತೇವೆ” ಎಂದು ಪುನರುಚ್ಛರಿಸಿದ್ದಾರೆ.