ಹಾವೇರಿ ಜಿಲ್ಲೆಯಲ್ಲಿ ಶಾಂತಿಯುತ ಮತದಾನವಾಗಿದ್ದು, 18ನೇ ಲೋಕಸಭೆಯ ಸಾರ್ವತ್ರಿಕ ಚುನಾವಣೆಯ ಹಾವೇರಿ ಕ್ಷೇತ್ರದಲ್ಲಿ ಶೇ.77.60ರಷ್ಟು ಮತದಾನವಾಗಿದೆ. ಮತಎಣಿಕೆ ಕೇಂದ್ರವಾದ ದೇವಗಿರಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಇವಿಎಂಗಳನ್ನು ಪೊಲೀಸ್ ಹಾಗೂ ಕೇಂದ್ರ ಸಶಸ್ತ್ರ ಮೀಸಲು ಪಡೆಯ ಬಿಗಿಭದ್ರತೆಯಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದ್ದಾರೆ.
ದೇವಗಿರಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, “ಎಂಟು ವಿಧಾನಸಭಾ ಕ್ಷೇತ್ರಗಳ ಇವಿಎಂಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ದಾಸ್ತಾನು ಮಾಡಲಾಗಿದೆ. ಕೊಠಡಿ ಸುತ್ತಲೂ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಪ್ರತಿ ಕೊಠಡಿಗೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಹೊರ ಭಾಗದಲ್ಲೂ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ದಿನ 24 ತಾಸು ಪಾಳೆಯದ ಪ್ರಕಾರ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಉಸ್ತುವಾರಿಗೆ ನೇಮಕ ಮಾಡಲಾಗಿದೆ ಹಾಗೂ ಕೇಂದ್ರ ಶಸ್ತ್ರಪಡೆ ಹಾಗೂ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ” ಎಂದು ಮಾಹಿತಿ ನೀಡಿದರು.
ಸ್ಟ್ರಾಂಗ್ ರೂಂನಲ್ಲಿ ಭದ್ರತೆಯಲ್ಲಿ ಮತಯಂತ್ರ: ಹಾವೇರಿ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಪ್ರತ್ಯೇಕ ಎಂಟು ಕೊಠಡಿಗಳಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಭದ್ರಕಾವಲಿನಲ್ಲಿ ಕಾಯ್ದಿರಿಸಲಾಗಿದೆ. ಅಂಚೆ ಮತಪತ್ರ, ಇಡಿಸಿ, ಎವಿಇಎಸ್ ಮತಪತ್ರಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಕಾಯ್ದಿರಿಸಿ ಸೀಲ್ ಮಾಡಲಾಗಿದೆ.
ಕೇಂದ್ರ ಚುನಾವಣಾ ಆಯೋಗದಿಂದ ಜಿಲ್ಲೆಗೆ ನಿಯೋಜನೆಗೊಂಡ ಸಾಮಾನ್ಯ ವೀಕ್ಷಕರಾದ ಐಎಎಸ್ ಅಧಿಕಾರಿ ತಿತರ್‌ಮರೆ ಅವರ ಸಮ್ಮುಖದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅವರು ವಿವಿಧ ರಾಜಕೀಯ ಪಕ್ಷಗಳ ಅಧಿಕೃತ ಏಜೆಂಟರುಗಳ ಸಮ್ಮುಖದಲ್ಲಿ ಸ್ಟ್ರಾಂಗ್‍ರೂಂ ಒಳಗೆ ಹಾಗೂ ಹೊರಗಿನ ಭದ್ರತಾ ಕ್ರಮ, ಪ್ರತಿ ಮತಯಂತ್ರಗಳ ವೀಕ್ಷಣೆ ನಡೆಸಿ ಭದ್ರತಾ ಕೊಠಡಿಗೆ ಸೀಲ್‍ಗಳನ್ನು ಮಾಡಲಾಯಿತು. ನಂತರ ಪ್ರತಿ ಕೊಠಡಿ ಬಾಗಿಲಿಗೆ ಪ್ಲೈವುಡ್‍ಗಳಿಂದ ಮುಚ್ಚಿ ಭದ್ರತೆ ಕೈಗೊಳ್ಳಲಾಯಿತು.
ಪ್ರತಿ ಕೊಠಡಿಗೆ ಸಿಸಿ ಕ್ಯಾಮರಾ ಅಳವಡಿಕೆ, ಅಗ್ನಿನಿರೋಧಕ, ಜಲನಿರೋಧಕ, ಬೆಳಕಿನ ಕಿರಣಗಳು ಕೊಠಡಿಯೊಳಗೆ ನುಸುಳದಂತೆ ಎಲ್ಲ ಕಿಟಕಿ ಬಾಗಿಲುಗಳನ್ನು ಪ್ಲೈವುಡ್‍ಗಳಿಂದ ಭದ್ರಪಡಿಸಿ ಅತಿ ಸುರಕ್ಷತಾ ಕ್ರಮಗಳನ್ನು ಪಕ್ಷದ ಏಜೆಂಟರ್ ಸಮ್ಮುಖದಲ್ಲಿ ಖಚಿತಪಡಿಸಲಾಗಿದೆ.
ಮುಖ್ಯ ದ್ವಾರದಲ್ಲಿ ಡಿಎಫ್‍ಎಂಡಿ ಅಳವಡಿಸಲಾಗಿದೆ. ಒಂದು ಅಗ್ನಿಶ್ಯಾಮಕ ವಾಹನವನ್ನು ನಿಯೋಜಿಸಲಾಗಿದೆ. ಬೆಂಕಿ ಪ್ರತಿಬಂಧಕವನ್ನು ಅಳವಡಿಸಲಾಗಿದೆ. ಯಾವುದೇ ವಿದ್ಯುತ್ ಅವಘಡಗಳು ಸಂಭವಿಸದಂತೆ ಹೆಸ್ಕಾಂ ಅಭಿಯಂತರರು ಸ್ಟ್ರಾಂಗ್‍ರೂಮ್ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿದ್ದಾರೆ.
“ಮೇಲುಸ್ತುವಾರಿಗಾಗಿ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳನ್ನು ಪಾಳೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಗಳು ನಿಯೋಜಿಸಿದ್ದಾರೆ. ಗರಿಷ್ಠ ಭದ್ರತೆ ಹಾಗೂ ಸುರಕ್ಷತಾ ಕ್ರಮಗಳನ್ನು ವಹಿಸಲಾಗಿದೆ” ಎಂದು ತಿಳಿಸಿದ್ದಾರೆ.
ಉಸ್ತುವಾರಿ ಅಧಿಕಾರಿಗಳು: ಸ್ಟ್ರಾಂಗ್ ರೂಂಗಳ ಉಸ್ತುವಾರಿಗಾಗಿ ಮೇ 7 ರಿಂದ ಜೂನ್ 4ರವರೆಗೆ ಮೂರು ಪಾಳೆಯಲ್ಲಿ ಕಾರ್ಯನಿರ್ವಹಿಸಲು ಆರು ಜನ ಉಸ್ತುವಾರಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಸಹಕಾರಿ ಸಂಘಗಳ ಉಪ ನಿಬಂಧಕ ಅಜಮತ್ ಉಲ್ಲಾಖಾನ(9980648277) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್ ವಿ ಚಿನ್ನಿಕಟ್ಟಿ(9740034612) ಅವರು ಬೆಳಿಗ್ಗೆ 7ರಿಂದ ಮಧ್ಯಾಹ್ನ 3ರವರೆಗೆ ಕಾರ್ಯನಿರ್ವಹಿಸಲಿದ್ದಾರೆ.
ರಾಣೇಬೆನ್ನೂರು ಕೃಷಿ ಇಲಾಖೆ ಉಪ ಕೃಷಿ ನಿರ್ದೇಶಕ ರೇವಣಸಿದ್ದನಗೌಡ (8277931802) ಹಾಗೂ ಜಿಲ್ಲಾ ಕೈಗಾರಿಕಾ ಇಲಾಖೆ ಉಪನಿರ್ದೇಶಕ ಅಸ್ಪಾಕ ಅಹಮದ ತಹಶೀಲ್ದಾರ್(7892578523) ಅವರನ್ನು ಮಧ್ಯಾಹ್ನ 3ರಿಂದ ರಾತ್ರಿ 11ರವರೆಗೆ ಕಾರ್ಯನಿರ್ವಹಿಸಲಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ(9480940235) ಹಾಗೂ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ(9448999343) ಅವರು ರಾತ್ರಿ 11ರಿಂದ ಬೆಳಿಗ್ಗೆ 7ರವರೆಗೆ ಕಾರ್ಯನಿರ್ವಹಿಸಲಿದ್ದಾರೆ.
ಪೊಲೀಸ್ ಭದ್ರತೆ: ಸ್ಟ್ರಾಂಗ್ ರೂಂಗಳ ಭದ್ರತೆಗೆ ಎಂಟು ಸ್ಟ್ರಾಂಗ್ ರೂಂ ಡೋರ್‌ಗಳಿಗೆ ಸಿಎಪಿಎಫ್ ಒಂದು(ಐಟಿಬಿಪಿ) ಫ್ಲಟುನ್, ಕಾಲೇಜಿನ ಮುಖ್ಯ ದ್ವಾರ ಒಂದು ಮತ್ತು ಎರಡು, ಔಟ್‍ಸೈಡ್ ಸ್ಟ್ರಾಂಗ್ ರೂಂ, ಹೊರವಲದ ಚೆಕ್ ಪೋಸ್ಟ್, ಕಾಲೇಜಿನ ಮುಂಭಾಗ, ಕಾಲೇಜಿನ ಎಡ, ಬಲ ಹಾಗೂ ಹಿಂಬದಿ ಮತ್ತು ಮುಖ್ಯ ಬದಿಗೆ ಬಿಗಿ ಪೊಲೀಸ್ ಪಹರೆ ಹಾಕಲಾಗಿದ್ದು, ಮತಯಂತ್ರಗಳ ಭದ್ರತೆಗೆ ಸಿಸಿ ಕ್ಯಾಮರಾಗಳ ಜತೆಗೆ ಪೊಲೀಸರ ಹದ್ದಿನಕಣ್ಣು ಇರಿಸಲಾಗಿದೆ. ಓರ್ವ ಡಿಎಸ್‍ಪಿ, ಇಬ್ಬರು ಸಿಪಿಐ, ಆರು ಮಂದಿ ಪಿಎಸ್‍ಐ, ಎಂಟು ಮಂದಿ ಎಎಸ್‍ಐ, ಹೆಡ್ ಕಾನ್‌ಸ್ಟೆಬಲ್ ಹಾಗೂ ಪಿಸಿ 36 ಜನ, ಎರಡು ಜಿಲ್ಲಾ ಶಸ್ತ್ರ ಮೀಸಲು ಪಡೆ, ಒಂದು ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ಹೇಮಾವತಿ ನಾಲೆ ಕಾಮಗಾರಿ ನಿಲ್ಲಿಸದಿದ್ದರೆ ಬೆಂಕಿ ಹಚ್ತೀವಿ: ಜೆಡಿಎಸ್ ಶಾಸಕ ಎಂ.ಟಿ ಕೃಷ್ಣಪ್ಪ
ಸ್ಟ್ರಾಂಗ್‍ರೂಂಗಳ ಭದ್ರತಾ ಪ್ರಕ್ರಿಯೆಯಲ್ಲಿ ಗದಗ ಜಿಲ್ಲಾಧಿಕಾರಿ ಶ್ರೀಮತಿ ವೈಶಾಲಿ ಎಂ ಎಲ್, ಜಿ ಪಂ ಮುಖ್ಯ ಕಾರ್ಯನಿರ್ವಹಾಣಧಿಕಾರಿ ಅಕ್ಷಯ್ ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮನಗೌಡ, ಗದಗ ಜಿ ಪಂ ಸಿಇಒ ಭರತ್ ಎಸ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಎಂಟು ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ತಹಶೀಲ್ದಾರ್‌ಗಳು, ಪೊಲೀಸ್ ಅಧಿಕಾರಿಗಳು ಇದ್ದರು.
