ಎಐಎಂಐಎಂ ಪಕ್ಷದ ಓವೈಸಿ ಸಹೋದರರ ಬಗ್ಗೆ ಮಹಾರಾಷ್ಟ್ರದ ಅಮರಾವತಿ ಲೋಕಸಭಾ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿ ನವನೀತ್ ರಾಣಾ ವಿವಾದಾತ್ಮಕ ಹೇಳಿಕೆ ನೀಡಿರುವುದು ಎಲ್ಲಡೆ ಆಕ್ರೋಶಕ್ಕೆ ಕಾರಣವಾಗಿದೆ.
ಹೈದರಾಬಾದ್‌ನಲ್ಲಿ ಮಾತನಾಡಿರುವ ನವನೀತ್ ರಾಣಾ, ಪೊಲೀಸರನ್ನು 15 ಸೆಕೆಂಡ್ ಹಿಂದಕ್ಕೆ ಪಡೆದರೆ ಸಹೋದರರು ಎಲ್ಲಿಂದ ಆಗಮಿಸಿದರು ಎಲ್ಲಿಗೆ ವಾಪಸ್ ಹೋದರು ಎಂಬುದನ್ನು ತಿಳಿಯದ ಹಾಗೆ ಮಾಡುತ್ತೇವೆ ಎಂದು ಓವೈಸಿ ಸಹೋದರರನ್ನು ಗುರಿಯಾಗಿಸಿಕೊಂಡು ಹೇಳಿದ್ದಾರೆ.
2019ರಲ್ಲಿ ಮಹಾರಾಷ್ಟ್ರದ ಅಮರಾವತಿಯಿಂದ ಸ್ವತಂತ್ರವಾಗಿ ಸಂಸದರಾಗಿ ಆಯ್ಕೆಯಾಗಿದ್ದು, ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ.
ನವನೀತ್ ರಾಣಾಗೆ ತಿರುಗೇಟು ನೀಡಿರುವ ಅಸಾದುದ್ದೀನ್ ಓವೈಸಿ, “ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಆಕೆಗೆ 15 ಸೆಕೆಂಡ್ ನೀಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ಕೇವಲ 15 ಸೆಕೆಂಡ್ ಮಾತ್ರವಲ್ಲ, ಒಂದು ಗಂಟೆ ತೆಗೆದುಕೊಳ್ಳಿ. ನಾವು ಹೆದರಿಕೊಳ್ಳುವುದಿಲ್ಲ. ನಿಮ್ಮಿಂದ ಮಾನವೀಯತೆ ಹೇಗೆ ಕಳೆದುಹೋಗಿದೆ ಎಂಬುದನ್ನು ಸಹ ನಾವು ನೋಡ ಬಯಸುತ್ತೇವೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇದು ಜೆಡಿಎಸ್-ಬಿಜೆಪಿ ಜಂಟಿ ಕೃತ್ಯ, ಘನಘೋರ ಲೈಂಗಿಕ ಹತ್ಯಾಕಾಂಡ
“ಪ್ರಧಾನಿಯೂ ನಿಮ್ಮವರೆ, ಆರ್‌ಎಸ್‌ಎಸ್ ಕೂಡ ನಿಮ್ಮವರೆ. ಮಾಡಿ ನಿಮ್ಮನ್ನು ಯಾರೂ ತಡೆಯುತ್ತಾರೆ. ಎಲ್ಲಿಗೆ ಬರಬೇಕೆಂದು ಹೇಳಿ ಅಲ್ಲಿಗೆ ಬರುತ್ತೇವೆ. ಅದನ್ನು ಈಗಲೇ ಮಾಡಿ” ಎಂದು ಹೇಳಿದ್ದಾರೆ.
ನವನೀತ್ ಹೇಳಿಕೆಯನ್ನು ಖಂಡಿಸಿರುವ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚೌಹಾಣ್, “ಇಂತಹ ವ್ಯಕ್ತಿಗಳು ಸಮಾಜಕ್ಕೆ ವಿಷಬೀಜ ಬಿತ್ತುತ್ತಿದ್ದಾರೆ. ಚುನಾವಣೆಯಲ್ಲಿ ಎಲ್ಲ ಬಿಜೆಪಿ ನಾಯಕರು ಇದನ್ನೇ ಮಾಡುತ್ತಿದ್ದಾರೆ” ಎಂದು ದೂರಿದರು.
ಅಸಾದುದ್ದೀನ್ ಓವೈಸಿ ವಿರುದ್ಧ ಸ್ಪರ್ಧಿಸಿರುವ ಬಿಜೆಪಿಯ ಮಾಧವಿ ಲತಾ ಕೂಡ ಈ ಹಿಂದೆ ಪ್ರಚಾರ ಕೈಗೊಳ್ಳುವ ಸಂದರ್ಭದಲ್ಲಿ ಮಸೀದಿಯನ್ನು ಬಿಲ್ಲುಬಾಣದಿಂದ ಕೆಡವುವ ಅಣಕು ಪ್ರದರ್ಶನ ಮಾಡಿದ್ದರು.
ಹೈದರಾಬಾದ್ ಲೋಕಸಭಾ ಕ್ಷೇತ್ರವು 6 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಅಸಾದುದ್ದೀನ್ ಓವೈಸಿ 2004ರಿಂದ ಈ ಕ್ಷೇತ್ರದ ಸಂಸದರಾಗಿದ್ದಾರೆ. ತೆಲಂಗಾಣದ 17 ಲೋಕಸಭಾ ಕ್ಷೇತ್ರಗಳಿಗೆ ಮೇ 13 ರಂದು ಚುನಾವಣೆ ನಡೆಯಲಿದೆ.
