ಲೋಕಸಭೆ ಚುನಾವಣೆಯ ಮೊದಲ ಮತ್ತು ಎರಡನೇ ಹಂತದ ಮತದಾನದ ಅಂತಿಮ ಅಂಕಿ ಅಂಶಗಳನ್ನು ಬಹಳ ತಡವಾಗಿ ಬಿಡುಗಡೆಗೊಳಿಸಿರುವುದು ಮತ್ತು ಚುನಾವಣಾ ಆಯೋಗದ ವೆಬ್‌ಸೈಟ್‌ನಿಂದ ನೋಂದಾಯಿತ ಮತದಾರರ ಮಾಹಿತಿ ಕಾಣೆಯಾಗಿರುವುದು ಅನುಮಾನಗಳನ್ನು ಹುಟ್ಟು ಹಾಕಿತ್ತು.
ಈ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಸಾಮಾಜಿಕ ಕಾರ್ಯಕರ್ತರು, ವಕೀಲರು ಮತ್ತು ನಿವೃತ್ತ ಸರ್ಕಾರಿ ಅಧಿಕಾರಿಗಳು, ಮತದಾನದ ಪ್ರಮಾಣೀಕೃತ ದಾಖಲೆಯನ್ನು ತಕ್ಷಣವೇ ಬಹಿರಂಗಪಡಿಸುವಂತೆ ಒತ್ತಾಯಿಸಿದ್ದಾರೆ.
ಈ ಪತ್ರಕ್ಕೆ ಸುಪ್ರೀಂ ಕೋರ್ಟ್ ವಕೀಲರಾದ ಪ್ರಶಾಂತ್ ಭೂಷಣ್, ಸಾಮಾಜಿಕ ಕಾರ್ಯಕರ್ತರಾದ ಅಂಜಲಿ ಭಾರಧ್ವಾಜ್, ಯೋಗೇಂದ್ರ ಯಾದವ್, ಖ್ಯಾತ ಸಾಹಿತಿಗಳು, ನಿವೃತ್ತ ಐಎಎಸ್ ಅಧಿಕಾರಿಗಳು ಸೇರಿದಂತೆ ಹಲವು ಮಂದಿ ಸಹಿ ಹಾಕಿದ್ದಾರೆ.
ಚುನಾವಣಾ ಆಯೋಗಕ್ಕೆ ತಮ್ಮ ಪತ್ರದಲ್ಲಿ, ಸದ್ಯ ದೇಶದಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಗಳ ಮೊದಲ ಎರಡು ಹಂತಗಳಲ್ಲಿ ಮತದಾನದ ಅಂಕಿ-ಅಂಶಗಳಲ್ಲಿ ದೊಡ್ಡ ಏರಿಳಿತದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರತಿ ಮತಗಟ್ಟೆಯ ಮತದಾನದ ವಿವರಗಳನ್ನು ಫಾರ್ಮ್ 17ಸಿ ಭಾಗ 1ರಲ್ಲಿರುವಂತೆ ಮತದಾರರ ಮತದಾನದ ಪ್ರಮಾಣೀಕೃತ ದಾಖಲೆಯನ್ನು ತಕ್ಷಣವೇ ಬಹಿರಂಗಪಡಿಸುವಂತೆ ಒತ್ತಾಯಿಸಿದ್ದಾರೆ.
“ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕ ನಂಬಿಕೆಯನ್ನು ಹೆಚ್ಚಿಸಲು, ಇನ್ನು ಉಳಿದಿರುವ ಹಂತಗಳಲ್ಲಿ, ಈ ಮಾಹಿತಿಯನ್ನು ಮತದಾನ ಮುಗಿದ 48 ಗಂಟೆಗಳ ಒಳಗೆ ಇಸಿಐ ವೆಬ್‌ಸೈಟ್‌ನಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
“ಫಾರ್ಮ್‌ಗಳ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡುವುದರ ಜೊತೆಗೆ, ಕ್ಷೇತ್ರ ಮತ್ತು ಮತಗಟ್ಟೆವಾರು ಮತದಾರರ ಸಂಪೂರ್ಣ ಸಂಖ್ಯೆಯ ಅಂಕಿ-ಅಂಶಗಳ ಪಟ್ಟಿಯನ್ನು ಇಸಿಐ ವೆಬ್‌ಸೈಟ್‌ನಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಮತದಾರರ ವಿಶ್ವಾಸವನ್ನು ಹೆಚ್ಚಿಸಲು ಆಯೋಗವು ಈ ಪ್ರಮುಖ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಮತ್ತು ಸೂಕ್ತ ಕ್ರಮಗಳನ್ನು ತುರ್ತಾಗಿ ತೆಗೆದುಕೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಪತ್ರದಲ್ಲಿ ಸಾಮಾಜಿಕ ಕಾರ್ಯಕರ್ತರು ಉಲ್ಲೇಖಿಸಿದ್ದಾರೆ.
ಇದೇ ವಿಚಾರವಾಗಿ, ಈ ಹಿಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಇಂಡಿಯಾ ಮೈತ್ರಿಕೂಟದ ಪಕ್ಷಗಳ ನಾಯಕರಿಗೆ ವಿವರವಾದ ಪತ್ರವೊಂದನ್ನು ಬರೆದಿದ್ದರು.
