ಲೋಕಸಭಾ ಚುನಾವಣೆ | 362 ಕ್ಷೇತ್ರಗಳಲ್ಲಿ ಐದೂವರೆ ಲಕ್ಷ ಮತಗಳನ್ನು ಎಣಿಕೆಗೆ ಪರಿಗಣಿಸದೆ ‘ಕೈಬಿಡಲಾಗಿದೆ’!

Date:

ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಎರಡು ಅಂಕಿ ಅಂಶಗಳ ನಡುವೆ ತಾಳೆಯಾಗದೆ 542 ಕ್ಷೇತ್ರಗಳ ಪೈಕಿ 538ರಲ್ಲಿ ಮತಗಳ ಅಂತರ ಕಂಡು ಬಂದಿದೆ. ಅರ್ಥಾತ್ ಈ ಕ್ಷೇತ್ರಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ಚಲಾಯಿಸಲಾದ ಮತಗಳ ಸಂಖ್ಯೆ ಮತ್ತು ಫಲಿತಾಂಶದ ದಿನ ಎಣಿಕೆ ಮಾಡಲಾದ ಮತಗಳ ಸಂಖ್ಯೆಗಳು ಪರಸ್ಪರ ಹೊಂದುತ್ತಿಲ್ಲ. (ಈ ಫರಕಿನಲ್ಲಿ ಅಂಚೆ ಮತಗಳು ಸೇರಿಲ್ಲ). ಕನಿಷ್ಠ 267 ಕ್ಷೇತ್ರಗಳಲ್ಲಿ ಚಲಾಯಿತ ಮತಗಳು ಮತ್ತು ಎಣಿಸಲಾದ ಮತಗಳ ನಡುವಿನ ವ್ಯತ್ಯಾಸ 500ಕ್ಕೂ ಹೆಚ್ಚಿದೆ.

ಈ ಕುರಿತು ‘ದಿ ಕ್ವಿಂಟ್’ ಅಂತರ್ಜಾಲ ಸುದ್ದಿ ತಾಣಕ್ಕೆ ಹಿಮಾಂಶಿ ದಹಿಯಾ ವಿಶೇಷ ವರದಿ ಮಾಡಿದ್ದಾರೆ. ಈ ವರದಿಯಲ್ಲಿ ನೀಡಿರುವ ಉದಾಹರಣೆಗಳು ಈ ಕೆಳಕಂಡಂತಿವೆ.

ಏಪ್ರಿಲ್ 19ರಂದು ಮೊದಲ ಹಂತದಲ್ಲಿ ಮತದಾನ ನಡೆದ ತಮಿಳುನಾಡಿನ ತಿರುವಳ್ಳೂರು ಕ್ಷೇತ್ರದ ಅಂಕಿ ಅಂಶಗಳನ್ನು ಚುನಾವಣಾ ಆಯೋಗ ಮೇ.25ರಂದು ಬಿಡುಗಡೆ ಮಾಡಿತು. ಆಯೋಗದ ಪ್ರಕಾರ ಈ ಕ್ಷೇತ್ರದಲ್ಲಿ ಚಲಾಯಿಸಿದ ಇವಿಎಂ  ಮತಗಳ ಸಂಖ್ಯೆ 14,30,738. ಆದರೆ ಜೂನ್ 4ರ ಮತ ಎಣಿಕೆಯಲ್ಲಿ ಎಣಿಸಲಾದ ಮತಗಳ ಸಂಖ್ಯೆ 14,13,947. ಅಂದರೆ 16,791 ಮತಗಳನ್ನು ಎಣಿಕೆಗೆ ಪರಿಗಣಿಸಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಏಪ್ರಿಲ್ 26ರಂದು ಮತದಾನ ನಡೆದ ಅಸ್ಸಾಮಿನ ಕರೀಮ್ ಗಂಜ್ ಕ್ಷೇತ್ರದಲ್ಲಿ ಆಯೋಗದ ಅಂಕಿಅಂಶಗಳ ಪ್ರಕಾರ ಚಲಾಯಿಸಲಾದ ಒಟ್ಟು ಇವಿಎಂ ಮತಗಳು 11,32,538. ಆದರೆ ಫಲಿತಾಂಶದ ದಿನದಂದು ಎಣಿಸಲಾದ ಮತಗಳ ಸಂಖ್ಯೆ 11,40,349. ಹೆಚ್ಚುವರಿಯಾಗಿ 3,811 ಮತಗಳನ್ನು ಹೆಚ್ಚುವರಿಯಾಗಿ ಎಣಿಸಲಾಗಿದೆ.

ಈ ಎರಡು ಅಂಕಿ ಅಂಶಗಳು ತಾಳೆಯಾಗದೆ ಇರುವುದಕ್ಕೆ ಆಯೋಗ ಯಾವುದೇ ನಿರ್ದಿಷ್ಟ ಕಾರಣಗಳನ್ನು ನೀಡಿಲ್ಲ. ಆದರೆ ಉತ್ತರಪ್ರದೇಶದ ಮುಖ್ಯ ಚುನಾವಣಾಧಿಕಾರಿ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಉತ್ತರಪ್ರದೇಶಕ್ಕೆ ಸೀಮಿತಗೊಂಡಂತೆ ಈ ಫರಕಿನ ಕುರಿತು ವಿವರಣೆ ನೀಡಿದ್ದಾರೆ.

‘ಚುನಾವಣಾ ಆಯೋಗ ಮತ್ತು ಮತ್ತು ಹಲವಾರು ಕೈಪಿಡಿಗಳಲ್ಲಿ ಒದಗಿಸಲಾಗಿರುವ ಸವಿವರ ಶಿಷ್ಟಾಚಾರದ (ಪ್ರೋಟೋಕಾಲ್) ಪ್ರಕಾರ ಹಲವು ನಿರ್ದಿಷ್ಟ ಮತಗಟ್ಟೆಗಳ ಮತಗಳನ್ನು ಎಣಿಕೆ ಮಾಡಿಲ್ಲ. ಹೀಗಾಗಿ ಚಲಾಯಿತ ಮತಗಳು ಮತ್ತು ಎಣಿಸಿದ ಮತಗಳ ಸಂಖ್ಯೆಯಲ್ಲಿ ಫರಕು ಕಂಡು ಬಂದಿದೆ. ಅಸಲು ಮತದಾನ ಶುರುವಾಗುವ ಮುನ್ನ ಕಂಟ್ರೋಲ್ ಯೂನಿಟ್ ನಲ್ಲಿ ಉಳಿದಿರಬಹುದಾದ ಅಣಕು ಚುನಾವಣಾ ಅಂಕಿಅಂಶವನ್ನು ಚುನಾವಣಾಧಿಕಾರಿ ಅಳಿಸಲು ಸಾಧ್ಯವಾಗದೆ ಹೋದಾಗ ಅಥವಾ ವಿವಿಪ್ಯಾಟ್ ನಲ್ಲಿರುವ ಅಣಕು ಮತಚೀಟಿಗಳನ್ನು ಅಸಲು ಮತದಾನ ಆರಂಭ ಆಗುವ ಮುನ್ನ ತೆಗೆದು ಹಾಕದೆ ಇದ್ದಾಗ ಈ ಫರಕು ಕಂಡು ಬರುತ್ತದೆ’

ಎರಡನೆಯದಾಗಿ ಕಂಟ್ರೋಲ್ ಯೂನಿಟ್ ನಲ್ಲಿ ದಾಖಲಾದ ಒಟ್ಟು ಚಲಾಯಿತ ಮತಗಳ ಸಂಖ್ಯೆಗೂ ಚುನಾವಣಾಧಿಕಾರಿ ಭರ್ತಿ ಮಾಡಿದ ಫಾರ್ಮ್ 17ಸಿ ಯಲ್ಲಿ ದಾಖಲಿಸಿದ ಒಟ್ಟು ಚಲಾಯಿತ ಮತಗಳಿಗೂ ಅಂತರವಿದ್ದಾಗ ಈ ಫರಕು ಕಂಡು ಬಂದಿದೆ. ಈ ಎರಡೂ ಸನ್ನಿವೇಶಗಳಲ್ಲಿ ಚುನಾವಣಾಧಿಕಾರಿಯಿಂದ ಆಕಸ್ಮಿಕವಾಗಿ ಜರುಗುವ ದೋಷಗಳಿವು. ಉದ್ದೇಶಪೂರ್ವಕ ಅಲ್ಲ. ಎಲೆಕ್ಟ್ರಾನಿಕ್ ಮತಯಂತ್ರ ಸರಿಯಾಗಿ ಕೆಲಸ ಮಾಡುತ್ತಿದೆಯೇ ಇಲ್ಲವೇ ಎಂದು ಪರೀಕ್ಷಿಸಲು ಮತದಾನದ ದಿನ ಬೆಳಗಿನ ಜಾವ ಐದಕ್ಕೆ ಅಣಕು ಮತದಾನ ನಡೆಯುತ್ತದೆ. ಪ್ರತಿ ಅಭ್ಯರ್ಥಿಗೆ ಐದು ಅಣಕು ಮತಗಳನ್ನು ಹಾಕಲಾಗುತ್ತದೆ. ಅವುಗಳ ಫಲಿತಾಂಶಗಳನ್ನು ಆನಂತರ ಪರೀಕ್ಷಿಸಲಾಗುತ್ತದೆ.

ವಾಸ್ತವ ಮತದಾನ ಆರಂಭ ಆಗುವ ಮುನ್ನ ಕಂಟ್ರೋಲ್ ಯೂನಿಟ್ ನಿಂದ ಈ ಮತಗಳನ್ನು ಚುನಾವಣಾಧಿಕಾರಿ ಅಳಿಸಿ ಹಾಕಬೇಕು. ಫಾರ್ಮ್ 17 ಸಿ ಎಂಬುದು ಪ್ರತಿಯೊಂದು ಮತಗಟ್ಟೆಯ ಮತದಾನದ ಸಮಗ್ರ ದಾಖಲೆ. ಪ್ರತಿಯೊಂದು ಮತಗಟ್ಟೆಗೆ ಹಂಚಿಕೆ ಮಾಡಲಾದ ಒಟ್ಟು ಮತದಾರರ ಸಂಖ್ಯೆ, ನಿರ್ದಿಷ್ಟ ಮತಗಟ್ಟೆ ವ್ಯಾಪ್ತಿಯಲ್ಲಿ ನೋಂದಣಿ ಮಾಡಿಕೊಂಡ ಒಟ್ಟು ಮತದಾರರ ಸಂಖ್ಯೆ, ಮತದಾನ ಮಾಡದೆ ಇರುವ ಮತದಾರರ ಸಂಖ್ಯೆ, ಮತದಾನ ಮಾಡಲು ಅವಕಾಶ ನಿರಾಕರಿಸಲಾದವರ ಸಂಖ್ಯೆ, ಎಲೆಕ್ಟ್ರಾನಿಕ್ ಮತದಾನ ಯಂತ್ರಗಳ ಮುಖಾಂತರ ಚಲಾಯಿತ ಮತಗಳ ಸಂಖ್ಯೆ ಹಾಗೂ ಮತಪತ್ರಗಳು ಮತ್ತು ಪೇಪರ್ ಮೊಹರುಗಳ ಕುರಿತ ವಿವರಗಳನ್ನು ಫಾರ್ಮ್ 17 ಸಿ ಹೊಂದಿರುತ್ತದೆ.

ಆದರೆ ಯಾವ್ಯಾವ ಸನ್ನಿವೇಶಗಳಲ್ಲಿ ಹೆಚ್ಚುವರಿ ಮತಗಳನ್ನು ಎಣಿಸಬಹುದು ಎಂಬುದಕ್ಕೆ ಉತ್ತರಪ್ರದೇಶದ ಮುಖ್ಯ ಚುನಾವಣಾಧಿಕಾರಿ ಸ್ಪಷ್ಟೀಕರಣ ನೀಡಿಲ್ಲ.

ಬಿಹಾರದ ಬಕ್ಸರ್ (1010), ಮಧ್ಯಪ್ರದೇಶದ ಮಂಡ್ಲಾ (1089), ಆಂಧ್ರಪ್ರದೇಶದ ಓಂಗೋಲ್ (1467) ಹಾಗೂ ಅಸ್ಸಾಮಿನ ಕರೀಮ್ ಗಂಜ್ (3811) ಕ್ಷೇತ್ರಗಳಲ್ಲಿ ಆವರಣ ಚಿಹ್ನೆಗಳಲ್ಲಿ ನೀಡಿರುವ ಹೆಚ್ಚುವರಿ ಮತಗಳನ್ನು ಎಣಿಸಲಾಗಿದೆ. ಕರೀಮ್ ಗಂಜ್ ನಲ್ಲಿ ಭಾರತೀಯ ಜನತಾ ಪಾರ್ಟಿಯ ಕೃಪಾನಾಥ ಮಲ್ಲಾ 18,360 ಮತಗಳ ಅಂತರದಿಂದ ಗೆದ್ದಿದ್ದಾರೆ. ಒಡಿಶಾದ ಜಜಪುರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಬೀಂದ್ರ ನಾರಾಯಣ ಬೆಹೆರ ಅವರು ಕೇವಲ 1,587 ಮತಗಳ ಅಂತರದಿಂದ ಗೆದ್ದಿದ್ದಾರೆ. ಇಲ್ಲಿ ಎಣಿಸಲಾಗಿರುವ ಹೆಚ್ಚುವರಿ ಮತಗಳು 809.

ಈ ವ್ಯತ್ಯಾಸಗಳಿಗೆ ಕ್ಷೇತ್ರವಾರು ನಿರ್ದಿಷ್ಟ ವಿವರಣೆಗಳನ್ನು ನೀಡಬೇಕೆಂದು ದಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ನ ಸಹಸಂಸ್ಥಾಪಕ ಜಗದೀಪ್ ಛೋಕರ್ ಚುನಾವಣಾ ಆಯೋಗವನ್ನು ಒತ್ತಾಯಪಡಿಸಿದ್ದಾರೆ.

ಇವಿಎಂ ಮತಗಳ ಹೆಚ್ಚುವರಿ ಅಥವಾ ಕೊರತೆಯ ಕುರಿತು ಆಯೋಗ ಈವರೆಗೆ ಸಾಮಾನ್ಯ ವಿವರಣೆ ನೀಡಿದೆ, ಅದೂ ಟ್ವಿಟರ್ ನಲ್ಲಿ. ನಿರ್ದಿಷ್ಟ ವಿವರಗಳನ್ನು ನೀಡಲೇಬೇಕು. ಈ ಕಾರಣಕ್ಕಾಗಿ ಫಾರ್ಮ್ 17ಸಿ ಯನ್ನು ಸಾರ್ವಜನಿಕಗೊಳಿಸಬೇಕು ಎಂಬ ವಾದಕ್ಕೆ ಹೆಚ್ಚು ಪುಷ್ಟಿ ನೀಡುವ ಅಂಶವಿದು. ಚುನಾವಣೆಯ ಫಲಿತಾಂಶಗಳ ಕುರಿತು ನಾವು ಸಂದೇಹ ವ್ಯಕ್ತಪಡಿಸುತ್ತಿಲ್ಲ. ಆದರೆ ಮತ ಎಣಿಕೆಯ ಕುರಿತು ಪಾರದರ್ಶಕವಾದ ಮತ್ತು ಕಟ್ಟುಮಸ್ತಾದ ವಿಧಾನ-ವ್ಯವಸ್ಥೆ ಇರಲೇಬೇಕು ಎಂಬುದು ಛೋಕರ್ ಅಭಿಪ್ರಾಯ.

ತಮಿಳುನಾಡಿನ ತಿರುವಳ್ಳೂರಿನಲ್ಲಿ ಚಲಾಯಿತ ಮತಗಳಿಗಿಂತ 16,791 ಕಡಿಮೆ ಮತಗಳನ್ನು ಎಣಿಸಲಾಗಿದೆ. ಅಸ್ಸಾಮಿನ ಕೋಕ್ರಝಾರ್ ನಲ್ಲಿ ಇಂತಹ ಮತಗಳ ಸಂಖ್ಯೆ 10,760. ಒಡಿಶಾದ ಧೇಂಕನಾಳದಲ್ಲಿ 9,427. ಕೇರಳದ ಆಲಪ್ಪುಳದಲ್ಲಿ 7,928, ಆಂಧ್ರಪ್ರದೇಶದ ಗುಂಟೂರಿನಲ್ಲಿ 7,928.

ಕೋಕ್ರಝಾರ್ ನಲ್ಲಿ ಯುನೈಟೆಡ್ ಪೀಪಲ್ಸ್ ಪಾರ್ಟಿಯ ಅಭ್ಯರ್ಥಿ ಜೊಯೊಂತ ಬಸುಮತಾರಿ 51,580 ಮತಗಳಿಂದ ಗೆದ್ದಿದ್ದಾರೆ. ಉತ್ತರಪ್ರದೇಶದ ಅಲೀಗಢದಲ್ಲಿ ಬಿಜೆಪಿಯ ಸತೀಶ್ ಕುಮಾರ್ ಗೌತಮ್ 15,647 ಮತಗಳ ಅಂತರದಿಂದ ಗೆದ್ದಿದ್ದಾರೆ. ಈ ಕ್ಷೇತ್ರದಲ್ಲಿ ಎಣಿಕೆಗೆ ಪರಿಗಣಿಸದೆ ಕೈ ಬಿಟ್ಟ ಮತಗಳ ಸಂಖ್ಯೆ 5,896.

2019ರಲ್ಲಿಯೂ ಇಂತಹುದೇ ದೋಷಗಳನ್ನು ಕ್ವಿಂಟ್ ವರದಿ ಬಯಲು ಮಾಡಿತ್ತು. ದಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಈ ದೋಷಗಳನ್ನು ಸರಿಪಡಿಸುವಂತೆ ಚುನಾವಣೆ ಆಯೋಗಕ್ಕೆ ನಿರ್ದೇಶನ ನೀಡಲು ಸುಪ್ರೀಮ್ ಕೋರ್ಟನ್ನು ಕೋರಿತ್ತು. ವಿವಿಪ್ಯಾಟ್ ಮತಚೀಟಿಗಳು ಮತ್ತು ಇವಿಎಂಗಳ ಮತಗಳನ್ನು ಸಂಪೂರ್ಣವಾಗಿ ಪರಸ್ಪರ ತಾಳೆ ನೋಡಬೇಕೆಂಬ ಅಹವಾಲಿನ ಜೊತೆಗೆ ಈ ಕೋರಿಕೆಯನ್ನೂ ನ್ಯಾಯಾಲಯ ತಿರಸ್ಕರಿಸಿತ್ತು.

ನಾಲ್ಕು ಕೋಟಿ ವಿವಿಪ್ಯಾಟ್ ಚೀಟಿಗಳನ್ನು ತಾಳೆ ನೋಡಿರುವುದಾಗಿಯೂ, ಎಣಿಸಲಾದ ಮತಗಳು ಮತ್ತು ವಿವಿಪ್ಯಾಟ್ ಚೀಟಿಗಳ ಸಂಖ್ಯೆಗಳ ನಡುವೆ ಯಾವುದೇ ಫರಕು ಕಂಡುಬಂದಿಲ್ಲವೆಂದೂ ಚುನಾವಣಾ ಆಯೋಗ ನ್ಯಾಯಾಲಯಕ್ಕೆ ನಿವೇದಿಸಿಕೊಂಡ ನಂತರ ಈ ತೀರ್ಪು ಹೊರಬಿದ್ದಿತ್ತು

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನೀರಿನ ಸಮಸ್ಯೆ| ದೆಹಲಿ ಜಲ ಮಂಡಳಿ ಕಚೇರಿ ಧ್ವಂಸಗೊಳಿಸಿದ ಬಿಜೆಪಿ ಮಹಿಳಾ ಕಾರ್ಯಕರ್ತರು

ದೆಹಲಿಯಲ್ಲಿ ತೀವ್ರ ನೀರಿನ ಬಿಕ್ಕಟ್ಟಿನ ನಡುವೆ ಬಿಜೆಪಿಯ ಮಹಿಳಾ ಪ್ರತಿಭಟನಾಕಾರರು ಚತ್ತರ್‌ಪುರದಲ್ಲಿರುವ...

ಕಾಂಗ್ರೆಸ್ ಕಚೇರಿಯಲ್ಲಿ ಅಕಾಡೆಮಿ ಅಧ್ಯಕ್ಷರು ವರದಿ ಒಪ್ಪಿಸುವುದು – ಅರ್ವೆಲ್ ಮಾತನ್ನು ನೆನಪಿಸುತ್ತದೆ

'ದ್ವಂದಾಲೋಚನೆ ಎಂದರೆ ಏಕಕಾಲದಲ್ಲಿ ಮನಸ್ಸಿನಲ್ಲಿ ಎರಡು ತದ್ವಿರುದ್ಧ ನಂಬಿಕೆಗಳನ್ನು ಇಟ್ಟುಕೊಳ್ಳುವುದು ಮತ್ತು...

ಬಹುತ್ವದ ಪರವಾಗಿ ಇರುವವರನ್ನು ನಾವು ಸದಾ ಸ್ಮರಿಸುತ್ತಿರಬೇಕು: ಸಿಎಂ ಸಿದ್ದರಾಮಯ್ಯ

"ಅಂತರ್ಜಾತಿ, ಅಂತರ್ ಧರ್ಮೀಯ ಮದುವೆಗಳಿಂದ ಜಾತಿ ವ್ಯವಸ್ಥೆ ಅಳಿಸಲು ಸಾಧ್ಯ" ಎಂದು...