ಒಡಿಶಾದಲ್ಲಿ ಚುನಾವಣಾ ಪೂರ್ವ ಹಿಂಸಾಚಾರ ಭುಗಿಲೆದ್ದಿದೆ. ರಾಜ್ಯದ ಗಂಜಾಂ ಜಿಲ್ಲೆಯ ಖಲ್ಲಿಕೋಟೆ ಪ್ರದೇಶದಲ್ಲಿ ಆಡಳಿತಾರೂಢ ಬಿಜು ಜನತಾ ದಳದ (ಬಿಜೆಡಿ) ಕಾರ್ಯಕರ್ತರೊಂದಿಗೆ ನಡೆದ ಘರ್ಷಣೆಯಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಬುಧವಾರ ತಡರಾತ್ರಿ ಹಿಂಸಾಚಾರ ನಡೆದಿದ್ದು, ಜಿಲ್ಲೆಯ ಕಲ್ಲಿಕೋಟೆ ಪೊಲೀಸ್ ವ್ಯಾಪ್ತಿಯ ಶ್ರೀಕೃಷ್ಣಶರಣಪುರ ಗ್ರಾಮದ ದಿಲೀಪ್ ಪಹಾನ್ ಎಂಬ ಬಿಜೆಪಿ ಕಾರ್ಯಕರ್ತ ಸಾವನ್ನಪ್ಪಿದ್ದಾರೆ. ಗಾಯಗೊಂಡಿದ್ದ ದಿಲೀಪ್ ಎಂಕೆಸಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ.
ಇದನ್ನು ಓದಿದ್ದೀರಾ? ಒಡಿಶಾ ಸಿಎಂ ನವೀನ್ 2 ಕ್ಷೇತ್ರದಲ್ಲಿ ಸ್ಪರ್ಧೆ; ಮೋದಿ ಅಲೆ – ಬಿಜೆಪಿ ಮಣಿಸಲು ಬಿಜೆಡಿ ತಂತ್ರ
Deeply disturbed and saddened at the very unfortunate and tragic incident of violence in Khallikote area. Such incidents of violence have no place in our democracy and civil society.
I strongly condemn this incident. My deepest condolence to the family who has lost their loved…
— Naveen Patnaik (@Naveen_Odisha) May 16, 2024
ಇನ್ನು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಗುರುವಾರ ಹಿಂಸಾಚಾರವನ್ನು ಖಂಡಿಸಿದ್ದಾರೆ. “ಕಲ್ಲಿಕೋಟೆ ಪ್ರದೇಶದಲ್ಲಿ ನಡೆದ ಅತ್ಯಂತ ದುರದೃಷ್ಟಕರ ಮತ್ತು ದುರಂತ ಹಿಂಸಾಚಾರದ ಘಟನೆಯಿಂದ ತೀವ್ರವಾಗಿ ವಿಚಲಿತಗೊಂಡಿದ್ದೇನೆ ಮತ್ತು ದುಃಖವಾಗಿದೆ. ಇಂತಹ ಹಿಂಸಾಚಾರದ ಘಟನೆಗಳಿಗೆ ನಮ್ಮ ಪ್ರಜಾಪ್ರಭುತ್ವ ಮತ್ತು ನಾಗರಿಕ ಸಮಾಜದಲ್ಲಿ ಸ್ಥಾನವಿಲ್ಲ. ಈ ಘಟನೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ” ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಎಕ್ಸ್ ಪೋಸ್ಟ್ ಮಾಡಿದ್ದಾರೆ.
“ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಕ್ಕೆ ನನ್ನ ಆಳವಾದ ಸಂತಾಪ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತೇನೆ. ಈ ಘೋರ ಅಪರಾಧಗೈದ ಅಪರಾಧಿಗಳ ವಿರುದ್ದ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ನನಗೆ ಖಾತ್ರಿಯಿದೆ” ಎಂದು ಕೂಡಾ ಪೋಸ್ಟ್‌ನಲ್ಲಿ ಸಿಎಂ ಪಟ್ನಾಯಕ್ ಉಲ್ಲೇಖಿಸಿದ್ದಾರೆ.
ಇದನ್ನು ಓದಿದ್ದೀರಾ? ಒಡಿಶಾ | ನವೀನ್ ಪಟ್ನಾಯಕ್‌ರ ಬಿಜೆಡಿ ಜೊತಿಗಿಲ್ಲ ಮೈತ್ರಿ; ಬಿಜೆಪಿ ಏಕಾಂಗಿ ಸ್ಪರ್ಧೆ
ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಒಡಿಶಾದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ನಿಕುಂಜ ಬಿಹಾರಿ ಧಾಲ್ ಅವರು ಜಿಲ್ಲೆಯಲ್ಲಿ ಚುನಾವಣಾ ಪೂರ್ವ ಹಿಂಸಾಚಾರವನ್ನು ನಿಯಂತ್ರಣಕ್ಕೆ ತರುವ ಮೂಲಕ ಶಾಂತಿ ಸ್ಥಾಪಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಗಂಜಾಂ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಗುರುವಾರ ಸೂಚನೆ ನೀಡಿದ್ದಾರೆ.
ಅಸ್ಕಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕಲ್ಲಿಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಮೇ 20ರಂದು ಮತದಾನ ನಡೆಯಲಿದೆ.