ಪ್ರಧಾನಿ ನರೇಂದ್ರ ಮೋದಿ ಮಾಧ್ಯಮವೊಂದಕ್ಕೆ ಇಸ್ರೇಲ್ – ಗಾಜಾದ ಬಗ್ಗೆ ನೀಡಿರುವ ಹೇಳಿಕೆಯೊಂದು ಎಲ್ಲೆಡೆ ವೈರಲ್ ಆಗುತ್ತಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನಿಯನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
”ಅದು ರಂಜಾನ್ ತಿಂಗಳ ಸಂದರ್ಭವಾಗಿತ್ತು. ನಾನು ನನ್ನ ವಿಶೇಷ ರಾಯಭಾರಿಯನ್ನು ಇಸ್ರೇಲ್‌ಗೆ ಕಳುಹಿಸಿ ಅಲ್ಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ರಂಜಾನ್‌ನ ಸಂದರ್ಭದಲ್ಲಿ ಗಾಜಾದ ಮೇಲೆ ಬಾಂಬ್ ಹಾಕಬೇಡಿ ಎಂದು ತಿಳಿಸುವಂತೆ ಹೇಳಿದ್ದೆ. ಅವರು ಅದನ್ನು ಅನುಸರಿಸಲು ಎಲ್ಲ ಪ್ರಯತ್ನಗಳನ್ನು ಮಾಡಿದರು. ಆದರೆ ಕೊನೆಯಲ್ಲಿ ಎರಡು ಮೂರು ದಿನಗಳ ಕಾಲ ಹೋರಾಟ ನಡೆಯಿತು” ಎಂದು ಸಂದರ್ಶನವೊಂದರಲ್ಲಿ ಪ್ರಧಾನಿ ಹೇಳಿದ್ದರು.
ಪ್ರಧಾನಿ ನೀಡಿದ ಈ ಹೇಳಿಕೆ ಎಲ್ಲೆಡೆ ಟ್ರೋಲ್‌ಗೆ ಒಳಗಾಗುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನಿಯ ಹೇಳಿಕೆಯನ್ನು ಪ್ರಶ್ನಿಸುತ್ತಿರುವ ನೆಟ್ಟಿಗರು ಇವರು ಮಣಿಪುರ ಒಂದನ್ನು ಬಿಟ್ಟು ಪ್ರಪಂಚದ ಎಲ್ಲ ರಾಷ್ಟ್ರಗಳ ಯುದ್ಧಗಳನ್ನು ನಿಲ್ಲಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಹಿಂದೂ-ಮುಸ್ಲಿಮ್ ರಾಜಕಾರಣ ಮಾಡುವುದಿಲ್ಲವೇ ನಮ್ಮ ಪ್ರಧಾನಿ!
ಈಶಾನ್ಯ ರಾಜ್ಯ ಆಂತರಿಕ ಸಂಘರ್ಷದಿಂದ ಗಲಭೆಗಳು ಉಂಟಾಗಿ ನೂರಾರು ಜನರು ಪ್ರಾಣ ಕಳೆದುಕೊಂಡರು. ಸಾವಿರಾರು ಜನ ತಮ್ಮ ಸ್ವಂತ ಆಸ್ತಿಪಾಸ್ತಿ ಬಿಟ್ಟು ಬೇರೆಡೆ ತಮ್ಮ ನೆಲೆ ಬದಲಾಯಿಸಿದರು. ಭಾರತ ಇತಿಹಾಸದಲ್ಲಿಯೇ ಇಂತಹ ಘೋರ ಘಟನೆ ನಡೆದರೂ ಪ್ರಧಾನಿ ನರೇಂದ್ರ ಮೋದಿ ಮಾತ್ರ ಮಣಿಪುರದ ಬಗ್ಗೆ ಒಂದು ಮಾತು ಆಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಡೀ ದೇಶವೇ ಮಣಿಪುರದ ಆಂತರಿಕ ಸಂಘರ್ಷದ ಬಗ್ಗೆ ಕಂಬನಿ ಮಿಡಿದರೂ ಪ್ರಧಾನಿ ಏಕೆ ಮಾತನಾಡಲಿಲ್ಲ ಕೆಲವರು ಪ್ರಶ್ನಿಸಿದ್ದಾರೆ. ಮತ್ತೂ ಕೆಲವರು ಮಣಿಪುರವು ಪ್ರಧಾನಿಯ ಪಠ್ಯದ ವಿಷಯದಲ್ಲಿ ಇಲ್ಲ ಎಂದು ಕುಟುಕಿದ್ದಾರೆ. ಇನ್ನೂ ಕೆಲವರು ಬಹುಶಃ ನಡ್ಡಾ ಹಾಗೂ ಅಮಿತ್ ಶಾ ಅವರನ್ನು ಇಸ್ರೇಲ್‌ಗೆ ಯುದ್ಧ ನಿಲ್ಲಿಸಲು ಕಳಿಸಿರಬೇಕು ಎಂದು ಕುಹುಕವಾಡಿದ್ದಾರೆ.
ಅದಲ್ಲದೆ ಮಾಧ್ಯಮದಲ್ಲಿ ಸಂದರ್ಶನದಲ್ಲಿ ಕುಳಿತು ಪ್ರಶ್ನೆ ಕೇಳುತ್ತಿದ್ದ ನಾಲ್ವರು ಪತ್ರಕರ್ತರು ಕೂಡ ಮೋದಿಯನ್ನು ಆರಾಧಿಸುವ ಗೋಧಿ ಮಾಧ್ಯಮ ಪತ್ರಕರ್ತರಾಗಿದ್ದು, ಇಂತಹ ಪತ್ರಕರ್ತರು ಸರ್ಕಾರದ ದುರಾಡಳಿತವನ್ನು ಪ್ರಶ್ನಿಸುವುದನ್ನು ಬಿಟ್ಟು ಪ್ರಧಾನಿಯ ಸುಳ್ಳುಗಳಿಗೆ ತಲೆಯಾಡಿಸುತ್ತಿರುವುದನ್ನು ಕೂಡ ಹಲವರು ಟ್ರೋಲ್ ಮಾಡಿದ್ದಾರೆ.
https://x.com/VeeryaSorry/status/1791338756500533492
