ನಿವೇಶನ ಹಾಗೂ ಮೂಲಭೂತ ಸೌಲಭ್ಯ ವಂಚಿತ ನಿವಾಸಿಗಳು ಅಟ್ರಾಸಿಟಿ ಕಾಯಿದೆ 3(1)ಜಿ, 4(1)ಮತ್ತು ಐಪಿಸಿ ಕಾಲಂ 166ರ ಅಡಿ ಸರ್ಕಾರಿ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ. ತಪ್ಪಿತಸ್ತ ಅಧಿಕಾರಗಳ ವಿರುದ್ಧ ಎಫ್‌ಐಆರ್ ದಾಖಲಿಸಿ, ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ. ಆದರೆ, ದೂರುದಾರರ ಮೇಲೆ ಡಿವೈಎಸ್‌ಪಿ ರಾಮಚಂದ್ರಯ್ಯ ದರ್ಪ, ದೌರ್ಜನ್ಯ ನಡೆಸಿ, ದುರ್ನಡೆತೆ ತೋರಿದ್ದಾರೆ. ಅಲ್ಲದೆ, ಕೋಳಾಲ ಠಾಣೆಯ ಪಿಎಸ್‌ಐಗೆ ದೂರನ್ನು ತಿರಸ್ಕರಿಸುವಂತೆ ಆದೇಶಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕೋಳಾಲ ಬಳಿಯ ನೀಲಗೊಂಡನಹಳ್ಳಿಯ ಸರ್ವೆ ನಂಬರ್ 27ರಲ್ಲಿ 17 ನಿವೇಷನರಹಿತ ದಲಿತ ಕುಟುಂಬಗಳು ವಾಸವಿದ್ದಾರೆ. ಆದರೆ, ಕಾಡುಪ್ರಾಣಿಗಳ ಭಯದಲ್ಲೇ ಜೀವನ ನಡೆಸುವಂತಾಗಿದ್ದು, ತಮಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆಯನ್ನೂ ನಡೆಸಿದ್ದರು. ಅಲ್ಲದೆ, ಇತ್ತೀಚೆಗೆ ಲೋಕಸಭಾ ಚುನಾವಣೆಯನ್ನೂ ಬಹಿಷ್ಕಾರಿಸುವುದಾಗಿಯೂ ಘೋಷಿಸಿದ್ದರು. ಅಧಿಕಾರಿಗಳ ಭರವಸೆ ನೀಡಿದ ಬಳಿಕ ಬಹಿಷ್ಕಾರವನ್ನು ಹಿಂತೆಗೆದುಕೊಂಡಿದ್ದರು. ಆದರೆ, ಚುನಾವಣೆ ಮುಗಿದು 20 ದಿನ ಕಳೆದರೂ ಅಧಿಕಾರಿಗಳು ತಮ್ಮತ್ತ ಗಮನ ಹರಿಸುತ್ತಿಲ್ಲ ಎಂದು ಕುಟುಂಬಗಳು ಆರೋಪಿಸಿವೆ.
ಈ ಹಿಂದೆ ತಹಶೀಲ್ದಾರ್, ಜಿಲ್ಲಾಧಿಕಾರಿ, ಪಿಡಿಓಗಳಿಗೆ ಅರ್ಜಿ ಕೊಟ್ಟು ಕಚೇರಿಗಳಿಗೆ ಅಲೆದಿದ್ದ ಕುಟುಂಬಗು ಈಗ ತಮ್ಮ ಹಕ್ಕುಗಳಿಗಾಗಿ ಅಟ್ರಾಸಿಟಿ ಕಾಯಿದೆ ಮೊರೆ ಹೋಗಿದ್ದಾರೆ. ಕೊರಟಗೆರೆ ತಾಲೂಕು ದಂಡಾಧಿಕಾರಿ ಮಂಜುನಾಥ್, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಅಪೂರ್ವ, ನೀಲಗೊಂಢನಹಳ್ಳಿ ಪಿಡಿಓ ಮಂಜುಳಾ ಅವರ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈದಿನ.ಕಾಮ್ ಜೊತೆ ಮಾತನಾಡಿದ ಮಧುಗಿರಿ ಡಿವೈಎಸ್‌ಪಿ ರಾಮಚಂದ್ರಯ್ಯ, ಪ್ರಕರಣದ ಮಾಹಿತಿಗಾಗಿ ಕೋಳಾಲ ಪಿಎಸ್‌ಐ ಅವರೊಂದಿಗೆ ಮಾತನಾಡಿ ಎಂದರು. ಅಲ್ಲದೆ, ದೂರಿನಲ್ಲಿ ಉಲ್ಲೇಖಿಸಲಾಗಿರುವ ಕಲಂಗಳ ಅಡಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ಅಟ್ರಾಸಿಟಿ ಪ್ರಕರಣ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ಹೈಕೋರ್ಟ್ ವಕೀಲ ಉಮಾಪತಿ, “ಸರ್ಕಾರಿ ಅಧಿಕಾರಿಗಳು ದಲಿತ ಸಮುದಾಯದವರಿಗೆ ಸರ್ಕಾರಿ ಸೇವೆ ನೀಡದಿದ್ದರೆ 3(1)ಜಿ ಅಡಿಯಲ್ಲಿ ಸರ್ಕಾರಿ ಅಧಿಕಾರಿಗಳ ವಿರುದ್ಧ ಅಟ್ರಾಸಿಟಿ ದಾಖಲಿಸಲು ಅವಕಾಶವಿದೆ. ಅವರೇನಾದರೂ ದಾಖಲಿಸದಿದ್ದರೆ, ಅವರ ವಿರುದ್ಧ ಅಟ್ರಾಸಿಟಿ ದಾಖಲಾಗುತ್ತದೆ” ಎಂದು ತಿಳಿಸಿದರು.
“ದಲಿತ ಸಮುದಾಯದ ಕುಟುಂಬಗಳಿಗೆ ಸರ್ಕಾರಿ ಸೇವೆ ನೀಡದಿದ್ದರೆ ಅಧಿಕಾರಿಗಳ ವಿರುದ್ಧ ಅಟ್ರಾಸಿಟಿ ದೂರು ದಾಖಲಿಸಲು ಅವಕಾಶವಿದೆ. ಕೋಳಾಲ ಪೊಲೀಸ್ ಠಾಣೆಗೆ ಬಂದಿದ್ದ ಮಧುಗಿರಿ ಡಿವೈಎಸ್‌ಪಿ ದಲಿತರೊಂದಿಗೆ ದುರ್ನಡತೆಯಿಂದ ವರ್ತಿಸಿದ್ದಾರೆ. ಈ ಕುರಿತು ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರದ ಅಧ್ಯಕ್ಷರಿಗೆ ದೂರು ನೀಡಿದ್ದೇವೆ. ಅವರು ಕ್ರಮಕೖಗೊಳ್ಳದಿದ್ದರೆ, ಉಚ್ಚನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಲಾಗುವುದು” ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಹಂದ್ರಾಳು ನಾಗಭೂಷಣ್ ಹೇಳಿದ್ದಾರೆ.