ಈ ದಿನ ಸಂಪಾದಕೀಯ | ರಾಜ್ಯವನ್ನು ತಲ್ಲಣಿಸಿದ ಹೆಣ್ಣುಮಕ್ಕಳ ಸರಣಿ ಹತ್ಯೆಗಳು ಕೊಡುತ್ತಿರುವ ಸಂದೇಶವೇನು?

Date:

ಒಂದು ತಿಂಗಳಲ್ಲಿ ಮೂರ್ನಾಲ್ಕು ಘಟನೆಗಳು ನಡೆದಾಗ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಮಹಿಳೆಯರಿಗೆ ಸುರಕ್ಷತೆಯ ಸಂದೇಶ ರವಾನಿಸಬೇಕಿತ್ತು. ಆದರೆ ಈ ಎಳೆ ಹೆಣ್ಣುಮಕ್ಕಳ ಕೊಲೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ

 

ಒಂದು ತಿಂಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಹೆಣ್ಣಮಕ್ಕಳ ಸರಣಿ ಕೊಲೆಗಳು ನಾಗರಿಕ ಸಮಾಜದಲ್ಲಿ ಭಯಭೀತಿಯನ್ನು ಬಿತ್ತಿದೆ. ಪ್ರೀತಿಸಿದ ಜೀವವನ್ನು ಪ್ರೇಮಿಯೇ ಚಾಕುವಿನಿಂದ ಚುಚ್ಚಿ ಕೊಂದು ಹಾಕಿರುವ ನಾಲ್ಕು ಅಮಾನುಷ ಪ್ರಕರಣಗಳು ಜರುಗಿವೆ. ನಿಜಕ್ಕೂ ಪ್ರೀತಿಸಿದ ಕಾರಣಕ್ಕೆ ಯುವತಿಯರು ಪ್ರೇಮಿಗಳಿಂದಲೇ ನಿರ್ದಾಕ್ಷಿಣ್ಯವಾಗಿ ಕೊಲೆಯಾಗುತ್ತಿರುವುದು ಈ ಸಮಾಜ ಸ್ತ್ರೀದ್ವೇಷ ಕೂಪವಾಗಿ ಪರಿಣಮಿಸಿರುವ ಉದಾಹರಣೆಯಷ್ಟೇ.

ಅನ್ಯ ಧರ್ಮದವರನ್ನು, ದಲಿತರನ್ನು, ಬೇರೆ ಜಾತಿಯವರನ್ನು ಪ್ರೀತಿಸಿದ, ಮದುವೆಯಾದ ಕಾರಣಕ್ಕೆ ಹೆತ್ತವರೇ ಕೊಲೆ ಮಾಡುವ ಮರ್ಯಾದೆಗೇಡು ಹತ್ಯೆಗಳು ಒಂದೆಡೆಯಾದರೆ, ಮನೆಯವರ ಒತ್ತಡಕ್ಕೋ ಅಥವಾ ಬೇರೆ ಯಾವುದೋ ಕಾರಣಕ್ಕೆ ಯುವತಿಯರು ಪ್ರೀತಿ ನಿರಾಕರಿಸಿದರೆಂದು ಹಾಡಹಗಲೇ ಚಾಕುವಿನಿಂದ ಇರಿದು ಜೀವ ತೆಗೆಯುವ ಅಮಾನವೀಯ ಪ್ರವೃತ್ತಿ ಹೆಚ್ಚುತ್ತಿದೆ. ಇದು ಶತಮಾನಗಳಿಂದ ಸಾಗಿ ಬಂದಿರುವ ಹೆಣ್ಣುಮಕ್ಕಳ ಮೇಲಿನ ಪುರುಷಾಹಂಕಾರ ಮತ್ತು ಹೆಣ್ಣನ್ನು ತಮ್ಮ ಅಧೀನದ ಆಸ್ತಿಪಾಸ್ತಿಯಂತೆ, ಸರಕು ಸಾಮಗ್ರಿಯಂತೆ ಪರಿಗಣಿಸುವ ಪ್ರವೃತ್ತಿಯ ಸೂಚಕ. ಈ ಸಮಾಜ ಎಷ್ಟೇ ಬದಲಾದರೂ ಹೆಣ್ಣಿನ ಮೇಲಿನ ಕಾಮ, ಕ್ರೌರ್ಯ, ದಬ್ಬಾಳಿಕೆಗೆ ಕಡಿವಾಣ ಬಿದ್ದಿಲ್ಲ, ಭವಿಷ್ಯದಲ್ಲಿ ಬೀಳುವ ಸೂಚನೆಗಳೂ ಇಲ್ಲ ಎಂಬುದು ಕಟು ವಾಸ್ತವ.

ಕಳೆದ ಏಪ್ರಿಲ್‌ನಲ್ಲಿ ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠಳನ್ನು ಆಕೆಯ ಪ್ರೇಮಿಯೇ ಪ್ರೀತಿ ನಿರಾಕರಿಸಿದ್ದಕ್ಕೆ ಕಾಲೇಜು ಆವರಣಕ್ಕೆ ನುಗ್ಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಆರೋಪಿ ಮುಸ್ಲಿಂ ಯುವಕ ಎಂಬ ಕಾರಣಕ್ಕೆ ನೇಹಾ ಕೊಲೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಲು ಕಾರಣವಾದವರು ಕೋಮುದ್ವೇಷದ ರಾಜಕಾರಣ ನಡೆಸಿರುವವರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅದಾಗಿ ಎರಡು ವಾರಕ್ಕೆ ಮಡಿಕೇರಿಯ ಅಪ್ರಾಪ್ತ ಬಾಲಕಿ, ಹತ್ತನೇ ತರಗತಿಯ ಬಡ ವಿದ್ಯಾರ್ಥಿನಿ ಮೀನಾಳನ್ನು ಆಕೆಯ ಪ್ರೇಮಿ ಪ್ರಕಾಶ ಮನೆಯಿಂದ ಹೊತ್ತೊಯ್ದು ಕತ್ತು ಕತ್ತರಿಸಿ ಪರಾರಿಯಾಗಿದ್ದ. ಅಪ್ರಾಪ್ತ ಬಾಲಕಿಯ ಜೊತೆಗೆ 32 ವರ್ಷದ ಆ ಯುವಕನ ನಿಶ್ಚಿತಾರ್ಥವಾಗಿತ್ತು. ಆದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮೀನಾ ಅಪ್ರಾಪ್ತೆಯಾದ ಕಾರಣ ಮದುವೆ ಮಾಡದಂತೆ ತಡೆದಿದ್ದರು. ಕುಟುಂಬ ಎರಡು ವರ್ಷಗಳ ನಂತರ ಮದುವೆ ಮಾಡಿಕೊಡುವುದಾಗಿ ಹೇಳಿದ್ದರೂ ಆರೋಪಿ ಕ್ರೂರವಾಗಿ ಆಕೆಯ ತಲೆ ಕತ್ತರಿಸಿ ಮರದ ಮೇಲಿಟ್ಟು ಪರಾರಿಯಾಗಿದ್ದ.

ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ವಿಶ್ವನಾಥ್‌ ಎಂಬ ಯುವಕ ಮೈಸೂರಿನಿಂದ ಹುಬ್ಬಳ್ಳಿಗೆ ರೈಲಿನಲ್ಲಿ ತೆರಳಿ ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಮೂರು ದಿನಗಳ ನಂತರ ಬಂಧನಕ್ಕೊಳಗಾದ ಆರೋಪಿ “ನಾವಿಬ್ಬರೂ ಪ್ರೀತಿಸುತ್ತಿದ್ದೆವು, ಇದ್ದಕ್ಕಿದ್ದಂತೆ ಆಕೆ ನನ್ನ ಮೊಬೈಲ್‌ ನಂಬರ್‌ ಬ್ಲಾಕ್‌ ಮಾಡಿದ್ದಳು. ಆ ಸಿಟ್ಟಿಗೆ ಮೈಸೂರಿನಿಂದ ಆಕೆಯ ಮನೆಗೆ ಹೋಗಿ ಕೊಂದೆ” ಎಂದು ಹೇಳಿದ್ದಾನೆ.

ನೇಹಾಳ ಕೊಲೆಯಾಗುವುದಕ್ಕೆ ಕೆಲ ದಿನಗಳ ಹಿಂದೆ ಮುಸ್ಲಿಂ ಯುವತಿಯೊಬ್ಬಳನ್ನು ವಿವಾಹವಾಗಿದ್ದ ಹಿಂದೂ ಯುವಕ ಆಕೆಯನ್ನು ಕೊಂದು ಸುಟ್ಟು ಹಾಕಿದ್ದ. ಬೆಂಗಳೂರಿನಲ್ಲಿ 45 ವರ್ಷ ವಯಸ್ಸಿನ ಸುರೇಶ್‌ ಎಂಬಾತ 25 ವರ್ಷದ ಅನುಷಾ ಎಂಬಾಕೆಯನ್ನು ಆಕೆ ತಾಯಿಯ ಜೊತೆ ಪಾರ್ಕ್‌ನಲ್ಲಿದ್ದಾಗ ಇರಿದಿರಿದು ಕೊಂದಿದ್ದ.

ಇದೀಗ ಮೇ 16ರಂದು ಸಂಜೆ ಬೆಂಗಳೂರಿನ ಮನೆಯೊಂದರಲ್ಲಿ ಇಪ್ಪತ್ತು ವರ್ಷದ ಕಾಲೇಜು ವಿದ್ಯಾರ್ಥಿನಿ ಪ್ರಬುದ್ಧಳ ಮೃತದೇಹ ಕತ್ತು ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದು ಕೊಲೆಯೋ, ಆತ್ಮಹತ್ಯೆಯೋ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಈ ಎಲ್ಲ ಘಟನೆಗಳನ್ನು ಗಮನಿಸಿದರೆ, ಹೆಣ್ಣುಮಕ್ಕಳ ಬದುಕು ಮನೆಯೊಳಗಿರಲಿ, ಮನೆಯಾಚೆಯಾಗಲಿ ಸುರಕ್ಷಿತವಾಗಿಲ್ಲ. ಯಾರು ಬೇಕಿದ್ದರೂ ಪ್ರೀತಿಸಬಹುದು, ಕ್ಷಣ ಮಾತ್ರದಲ್ಲಿ ಕೊಂದು ಬಿಸಾಕಬಹುದು ಎಂಬಂತಾಗಿದೆ. ಇದರ ಜೊತೆಗೆ ಒಂದು ಕೊಲೆ ನಡೆದರೆ ಅದೇ ಮಾದರಿಯಲ್ಲಿ ಸರಣಿ ಕೊಲೆ ನಡೆಯುವುದು ದಿಗಿಲು ದಿಗ್ಭ್ರಾಂತಿಯ ಸಂಗತಿ. ಮರ್ಯಾದಾ ಹತ್ಯೆ, ಆಸಿಡ್‌ ದಾಳಿ, ಕೊಂದು ಕತ್ತರಿಸಿ ಬಿಸಾಡೋದು, ಸೂಟ್‌ಕೇಸ್‌ನಲ್ಲಿ ಸಾಗಿಸೋದು ಹೀಗೆ ಸಮೂಹ ಸನ್ನಿಗೆ ಒಳಗಾಗುವುದು, ಒಬ್ಬ ಭಗ್ನ ಪ್ರೇಮಿಯ ಕೃತ್ಯ ಇನ್ನಷ್ಟು ಮತ್ತಷ್ಟು ವಿಕೃತ ಗಂಡುಗಳಿಗೆ ಪ್ರೇರಣೆಯಾಗುವುದು ಅಪಾಯಕಾರಿ.

ಲಿವ್‌ ಇನ್‌ ಸಂಗಾತಿಗಳು, ಪ್ರೀತಿಯಲ್ಲಿರುವ ಜೋಡಿಗಳು ಭಿನ್ನಾಭಿಪ್ರಾಯ ಬಂದ ಕೂಡಲೇ ಸಂಗಾತಿಯ ಪ್ರಾಣವನ್ನೇ ಬಲಿ ಪಡೆಯುವ ಪ್ರವೃತ್ತಿ ʼಪ್ರೀತಿʼ ಎಂಬ ಪದವನ್ನೇ ಅಣಕಿಸುವಂತಿದೆ. ಪ್ರೀತಿ ನಿರಾಕರಿಸಿದ ಮಾತ್ರಕ್ಕೆ ಆಕೆಗೆ ಈ ಜಗತ್ತಿನಲ್ಲಿ ಬದುಕುವ ಹಕ್ಕಿಲ್ಲವೇ? ಕ್ಷಣ ಮಾತ್ರದಲ್ಲಿ ಕೊಂದು ಬಿಸಾಕುವ ಪುರುಷರ ಮನಸ್ಥಿತಿ ಎಂಥದ್ದು? ಅವರು ನಿಜಕ್ಕೂ ಪ್ರೀತಿಸಲು ಯೋಗ್ಯರೇ? ಎಂಬುದು ನೈತಿಕತೆಯ ಪ್ರಶ್ನೆಯಾಗಿದೆ.

ಆದರೆ, ರಾಜ್ಯದಲ್ಲಿ ಹೆಣ್ಣುಮಕ್ಕಳ ಸರಣಿ ಹತ್ಯೆಗಳು ನಡೆಯುತ್ತಿರುವಾಗ ಸರ್ಕಾರ ಏನು ಮಾಡುತ್ತಿದೆ? ಏನು ಮಾಡಬೇಕು ಎಂಬ ಬಗ್ಗೆ ಪ್ರಶ್ನಿಸಬೇಕಿದೆ. ಫಾಸ್ಟ್ ಟ್ರ್ಯಾಕ್‌ ಕೋರ್ಟ್‌ಗಳ ಮೂಲಕ ಇಂತಹ ಕೊಲೆ ಪಾತಕಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಅಪರಾಧ ಕೃತ್ಯಗಳನ್ನು ಮಾಡಲು ಹೆದರುವ ಸ್ಥಿತಿ ನಿರ್ಮಾಣವಾಗಬೇಕು. ಹೆಣ್ಣೇ ಇರಲಿ, ಗಂಡೇ ಇರಲಿ, ಯಾರಿಗೂ ಯಾರನ್ನೂ ಕೊಲೆ ಮಾಡುವ ಹಕ್ಕು ಇಲ್ಲ ಎಂಬುದು ಕಾನೂನು ಪುಸ್ತಕಕ್ಕಷ್ಟೇ ಸೀಮಿತ ವಾಗಿರುವುದು ವ್ಯವಸ್ಥೆಯ ಅತೀವ ಅಣಕ. ಸಾಮಾಜಿಕ ಸ್ವಾಸ್ಥ್ಯ ಕುರಿತು ಕಳವಳ ಹುಟ್ಟಿಸುವ ವಿದ್ಯಮಾನ.

ಒಂದು ತಿಂಗಳಲ್ಲಿ ಮೂರ್ನಾಲ್ಕು ಘಟನೆಗಳು ನಡೆದಾಗ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ರಾಜ್ಯದ ಮಹಿಳೆಯರಿಗೆ ಸುರಕ್ಷತೆಯ ಸಂದೇಶ ರವಾನಿಸಬೇಕಿತ್ತು. ಆದರೆ ಈ ಎಳೆ ಹೆಣ್ಣುಮಕ್ಕಳ ಕೊಲೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಸಂಗಾತಿಗಳಿಂದ ಕಿರುಕುಳ, ಬೆದರಿಕೆ, ಭಗ್ನ ಪ್ರೇಮಿಗಳ ಕಾಟವಿದ್ದಾಗ ಅಂತಹ ಹೆಣ್ಣುಮಕ್ಕಳ ರಕ್ಷಣೆಗಾಗಿ ಸಹಾಯವಾಣಿ, ಕಾಲೇಜು, ಹಾಸ್ಟೆಲ್‌ಗಳಲ್ಲಿ ಆಗಾಗ ಆಪ್ತ ಸಮಾಲೋಚಕರ ನಿಯೋಜನೆ ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಇಲ್ಲದೇ ಹೋದರೆ ಈ ಸಮಾಜಕ್ಕೆ ನಾಗರಿಕ ಸಮಾಜ ಎಂದು ಹೇಳಿಕೊಳ್ಳುವ ಯಾವ ಅರ್ಹತೆಯೂ ಉಳಿಯಲಾರದು

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಮೂರು ಪ್ರಕರಣಗಳು ಮತ್ತು ‘ಮಾನವಂತ’ ಮಾಧ್ಯಮಗಳು

ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ, ನಟ...

ಈ ದಿನ ಸಂಪಾದಕೀಯ | ಕೊಡುವ ಸ್ಥಾನದಲ್ಲಿರುವವರು ಒಳ್ಳೆಯದನ್ನೇ ಕೊಡಬೇಕು ಎಂದು ರಾಜ್ ಹೇಳಿದ್ದು ಯಾರಿಗೆ?

ಇಲ್ಲಿ ಯಾರು ಏನು ಬೇಕಾದರೂ ಮಾಡಬಹುದು, ಮಾತಾಡಬಹುದು. ಇಂತಹ ಪರಿಸ್ಥಿತಿ ನಿರ್ಮಾಣವಾಗಲು...