ದೆಹಲಿ ಹಾಗೂ ಪಂಜಾಬ್ ಎಎಪಿ ಸರ್ಕಾರಗಳು ವಿದೇಶಿ ನೆರವು ನಿಯಂತ್ರಣ ಕಾಯ್ದೆಯನ್ನು(ಎಫ್‌ಆರ್‌ಸಿಎ) ಉಲ್ಲಂಘಿಸಿ ವಿದೇಶಗಳಿಂದ 7 ಕೋಟಿ ರೂ.ಗೂ ಹೆಚ್ಚು ನೆರವು ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಎಫ್‌ಆರ್‌ಸಿಎ ತನಿಖೆ ನಡೆಸಬೇಕೆಂದು ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಮಾಡಿದೆ.
ಪಂಜಾಬ್ ಮಾಜಿ ಎಎಪಿ ಶಾಸಕ ಸುಖಪಾಲ್ ಸಿಂಗ್ ಖೈರಾ ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯವು ಮದಕ ದ್ರವ್ಯ ಸಂಪರ್ಕ ಹೊಂದಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ಕೆಲವು ದಾಖಲೆಗಳು ಹಾಗೂ ಇಮೇಲ್‌ಗಳನ್ನು ವಶಪಡಿಸಿಕೊಂಡ ನಂತರ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿರಂತೆ ಸುಖಪಾಲ್ ಸಿಂಗ್ ಖೈರಾ ಅವರನ್ನು ಜಾರಿ ನಿರ್ದೇಶನಾಲಯವು 2021ರಲ್ಲಿ ಬಂಧಿಸಿತು. ಸದ್ಯ ಸುಖಪಾಲ್ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ.
ದಾಖಲೆಯಲ್ಲಿರುವ ಮಾಹಿತಿಯಂತೆ ಎಎಪಿಯು ಎಫ್‌ಆರ್‌ಸಿಎ ಮತ್ತು ಜನಪ್ರತಿನಿಧಿ ಕಾಯ್ದೆಯನ್ನು ಉಲ್ಲಂಘಿಸಿದೆ ಎಂದು ಇ.ಡಿ ಕಳೆದ ವರ್ಷದ ಆಗಸ್ಟ್‌ನಲ್ಲಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಇ.ಡಿ ಕೇಂದ್ರ ಗೃಹ ಸಚಿವಾಲಯಕ್ಕೆ ಹೊಸ ದಾಖಲೆಗಳನ್ನು ಹಂಚಿಕೊಂಡಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕ್ರಿಕೆಟ್ ಆಟ, ಹುಚ್ಚಾಟ, ಜೂಜಾಟ ಮತ್ತು ಧೋನಿಯ ದುಗುಡ
ಎಎಪಿ ವಿದೇಶಗಳಿಂದ ಇಲ್ಲಿಯವರೆಗೂ 7 ಕೋಟಿಗೂ ಹೆಚ್ಚು ನೆರವು ಪಡೆದಿದ್ದು, ದಾನಿಗಳ ಹೆಸರು ಹಾಗೂ ಇತರ ವಿವರಗಳನ್ನು ತಪ್ಪಾಗಿ ಘೋಷಿಸಲಾಗಿದೆ ಹಾಗೂ ತಿರುಚಲಾಗಿದೆ ಎಂದು ಇ.ಡಿ ಆರೋಪಿಸಿದೆ.
ಇ.ಡಿ ಆರೋಪವನ್ನು ಆಧಾರರಹಿತ ಎಂದು ಎಎಪಿ ತಳ್ಳಿಹಾಕಿದ್ದು, ದೆಹಲಿ ಮತ್ತು ಪಂಜಾಬ್‌ನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಎಪಿಯ ಪ್ರತಿಷ್ಠೆಯನ್ನು ಹಾಳು ಮಾಡಲು ಬಿಜೆಪಿ ಮತ್ತೊಂದು ಸಂಚು ರೂಪಿಸಿದೆ ಎಂದು ಆರೋಪಿಸಿದೆ.
“ಇದು ಆಧಾರರಹಿತ ಆರೋಪಗಳು. ಹಳೆಯ ಪ್ರಕರಣವಾಗಿದ್ದು, ಯಾವುದೇ ಅಕ್ರಮ ನೆರವು ಪಡೆದುಕೊಂಡಿಲ್ಲ ಎಂದು ಸಾಬೀತಾಗಿದೆ.ಪಂಜಾಬ್ ಹಾಗೂ ದೆಹಲಿ ಲೋಕಸಭಾ ಚುನಾವಣೆಗಳು ಹತ್ತಿರವಿರುವ ಕಾರಣ ಬಿಜೆಪಿ ಎಎಪಿಯ ವಿರುದ್ಧ ಹೊಸ ಸಂಚನ್ನು ರೂಪಿಸುತ್ತಿದೆ” ಎಂದು ದೆಹಲಿ ಸಚಿವೆ ಅತೀಶಿ ಆರೋಪಿಸಿದ್ದಾರೆ.
