ಲೋಕಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಒಕ್ಕೂಟ ಗಮನಾರ್ಹ ಸಾಧನೆ ಮಾಡಲಿದ್ದು, ಪ್ರಸ್ತುತ ಸ್ಥಿತಿಯನ್ನು ಗಮನಿಸಿದರೆ ಒಕ್ಕೂಟದ ಪಕ್ಷಗಳು ಬಿಜೆಪಿಗೆ ಬಹುಮತ ಸಿಗದಂತೆ ಕಟ್ಟಿಹಾಕುವ ಭರವಸೆಯಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು,ಜನರು ಸಮಾಜದಲ್ಲಿ ದ್ವೇಷ ಮತ್ತು ವಿಭಜನೆಯನ್ನು ಹರಡುತ್ತಿರುವ ಆರ್‌ಎಸ್‌ಎಸ್ ಹಾಗೂ ಬಿಜೆಪಿಯ ಸಿದ್ಧಾಂತಗಳ ವಿರುದ್ಧ ಹೋರಾಡುತ್ತಿದ್ದಾರೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಉಳಿಸುವ ಹೋರಾಟವಾಗಿದೆ ಎಂದು ಸಾರ್ವಜನಿಕರು ಭಾವಿಸಿದ್ದು, ಈ ಹಿನ್ನೆಲೆಯಲ್ಲಿ ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ರಾಮನ, ಹಿಂದೂ- ಮುಸ್ಲಿಂ ಹಾಗೂ ಭಾರತ – ಪಾಕಿಸ್ತಾನದ ಹೆಸರಿನಲ್ಲಿ ನಿರಂತರವಾಗಿ ಜನರನ್ನು ಪ್ರಚೋದಿಸಿ ಭಾವನಾತ್ಮಕವಾಗಿ ಲೂಟಿ ಮಾಡುತ್ತಿದ್ದಾರೆ. ಅವರ ನಿಜವಾದ ಬಣ್ಣ ಈಗ ಬಯಲಾಗುತ್ತಿದೆ. ದೇಶಾದ್ಯಂತ ಸಂಚರಿಸಿದಾಗ ನಮ್ಮ ಪರವಾಗಿ ದೊಡ್ಡ ಅಲೆಯೆದ್ದಿರುವುದಾಗಿ ಮನದಟ್ಟಾಗಿದೆ ಎಂದು ಖರ್ಗೆ ಹೇಳಿದರು.
“ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಇಂಡಿಯಾ ಒಕ್ಕೂಟ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲಿದೆ. ಬಿಜೆಪಿ ಹೆಚ್ಚು ಸೀಟು ಪಡೆದು ಅಧಿಕಾರಕ್ಕೆ ಬರುವುದನ್ನು ತಡೆಯಲು ನಮಗೆ ಸಾಧ್ಯವಿದೆ. ಇದು ನಮ್ಮ ಹೋರಾಟವಲ್ಲ, ಜನರಿಗಾಗಿ ಹೋರಾಟ. ಜನರು ನಾವು ಹಾದು ಹೋಗುತ್ತಿರುವ ಸಿದ್ಧಾಂತವನ್ನು ಬೆಂಬಲಿಸಿ, ನಮಗಾಗಿ ಹೋರಾಟ ನಡೆಸುತ್ತಿದ್ದಾರೆ. ಬಿಜೆಪಿ ಹಿಂದಿದ್ದು,ನಾವು ಮುಂದಿದ್ದೇವೆ ಎಂಬುದು ಸ್ಪಷ್ಟವಾಗಿದೆ” ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕ್ರಿಕೆಟ್ ಆಟ, ಹುಚ್ಚಾಟ, ಜೂಜಾಟ ಮತ್ತು ಧೋನಿಯ ದುಗುಡ
ಬಿಜೆಪಿ ಈ ಹಿಂದೆ ನೀಡಿದ್ದ ಎರಡು ಕೋಟಿ ಉದ್ಯೋಗಳು, ಕಪ್ಪು ಹಣ ಹಿಂದಕ್ಕೆ ತರುವುದು ಹಾಗೂ ರೈತರ ಆದಾಯ ದ್ವಿಗುಣಗೊಳಿಸುವ ಭರವಸೆಗಳನ್ನು ಪೂರ್ಣಗೊಳಿಸಿಲ್ಲ. ಜನರು ಈ ಚುನಾವಣೆಗಳಲ್ಲಿ ಬೆಲೆಏರಿಕೆ, ನಿರುದ್ಯೋಗದ ಪ್ರಮುಖ ಸಮಸ್ಯೆಗಳ ಬಗ್ಗೆ ಬೇಸರಗೊಂಡಿದ್ದಾರೆ. ಈ ಲೋಕಸಭೆ ನಿರ್ಣಾಯಕವಾಗಿದ್ದು, ಸಂವಿಧಾನ ಹಾಗೂ ಎಲ್ಲ ಭಾರತೀಯರ ಮೂಲಭೂತ ಹಕ್ಕುಗಳನ್ನು ಉಳಿಸುವುದು ಹಾಗೂ ವಾಕ್‌ಸ್ವಾತಂತ್ರವನ್ನು ಉಳಿಸಬೇಕೆಂದು ಖರ್ಗೆ ಕರೆ ನೀಡಿದರು.
ಸರ್ಕಾರವು ಸುಳ್ಳುಗಳನ್ನು ಹೇಳಿ ಜನರನ್ನು ಮುಠ್ಠಾಳರನ್ನಾಗಿ ಮಾಡುತ್ತಿದ್ದು, ಜನರಿಗೆ ಅವರ ಉದ್ದೇಶ ಗೊತ್ತಾಗಿದೆ. ಪ್ರಧಾನಿ ಜನರನ್ನು ಮಾಂಸ, ಜಾನುವಾರು, ಭೂಮಿ ಮುಂತಾದವುಗಳ ರೀತಿ ಮಾತನಾಡಿ ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ನೇತೃತ್ವದ ಸರ್ಕಾರ ಪ್ರಜಾಪ್ರಭುತ್ವವನ್ನು ಒಪ್ಪಿಕೊಳ್ಳುತ್ತಿಲ್ಲ. ಅವರು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಮಧ್ಯ ಪ್ರದೇಶ, ಕರ್ನಾಟಕ, ತೆಲಂಗಾಣ, ಮಣಿಪುರ, ಉತ್ತರಾಖಂಡ, ಗೋವಾ ಸರ್ಕಾರಗಳನ್ನು ಉರುಳಿಸಿದ್ದಾರೆ ಎಂದು ಖರ್ಗೆ ಹೇಳಿದರು.
