ಐಪಿಎಲ್ನ ಮೊದಲ ಸೀಸನ್ ಅಂದರೆ 2008ರಲ್ಲೇ ಹರಾಜಾಗಿದ್ದ ಆಲ್ರೌಂಡರ್ ಆಟಗಾರನಾಗಿರುವ 33 ವರ್ಷದ ಸ್ವಪ್ನಿಲ್ ಸಿಂಗ್ ಅವರಿಗೆ, ಈ ಬಾರಿ ಆರ್ಸಿಬಿ ತಂಡದಲ್ಲಿ, ಆಡುವ 11ರ ಬಳಗದಲ್ಲಿ ಸ್ಥಾನ ಸಿಕ್ಕಿದ್ದೇ ಅಚ್ಚರಿಯ ಬೆಳವಣಿಗೆ!
ಐಪಿಎಲ್ನಲ್ಲಿರುವ 10 ಫ್ರಾಂಚೈಸಿ ತಂಡಗಳ ಪೈಕಿ ಅತಿ ಹೆಚ್ಚು ಕಟ್ಟಾ ಅಭಿಮಾನಿಗಳು, ತುಂಬಾ ನೀಯತ್ತು ಹೊಂದಿರುವ ಅಭಿಮಾನಿಗಳ ತಂಡವೊಂದಿದ್ದರೆ ಅದು ಆರ್ಸಿಬಿ. 2024ರ ಸೀಸನ್ನ ಮೊದಲ 8 ಪಂದ್ಯಗಳಲ್ಲಿ ಸತತ 6 ಪಂದ್ಯಗಳಲ್ಲಿ ಸೋಲು ಕಂಡಿದ್ದ ಆರ್ಸಿಬಿ ತಂಡ, ‘ಪ್ಲೇಯಿಂಗ್ ಇಲೆವೆನ್’ ಸರಿಯಾಗಿ ಮ್ಯಾಚ್ ಆಗ್ತಾನೇ ಇರಲಿಲ್ಲ.
ಈ ಸೀಸನ್ನ ಫಸ್ಟ್ ಹಾಫ್ನಲ್ಲಂತೂ ಅತ್ಯಧಿಕ ‘ಕಾಂಬಿನೇಷನ್’ ಮಾಡಿದ ತಂಡ ಆರ್ಸಿಬಿಯೇ ಆಗಿತ್ತು. ಹೇಗೂ knockout ಆಗುವ ಹಂತದಲ್ಲಿದ್ದೇವೆ, ಗೆದ್ರೂ ಸೋತ್ರೂ ಏನು ಆಗಲ್ಲ, ಎಲ್ಲ ಆಟಗಾರರಿಗೆ ಅವಕಾಶ ಸಿಗ್ಲಿ ಅಂತ ಬೇರೆಯವರಿಗೂ ಸ್ಥಾನ ಕೊಡುವ ನಿರ್ಧಾರ ಮಾಡಿದರು ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ಕೋಚ್ ಆಂಡಿ ಫ್ಲವರ್. ಆಗ ಸ್ಥಾನ ಪಡೆದ ಆಟಗಾರನೇ ಸ್ವಪ್ನಿಲ್ ಸಿಂಗ್.
ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ Impact Player ಆಗಿ ಆಡುವ ಬಳಗ ಸೇರಿದ ಇವರು, ಆಮೇಲೆ ಆರ್ಸಿಬಿಯ ಲಕ್ಕಿ ಚಾರ್ಮ್ ಆಗಿ ಬದಲಾದರು. ಇವರು ಆರ್ಸಿಬಿ ತಂಡ ಸೇರಿದ ಬಳಿಕ ನಡೆದ ಎಲ್ಲಾ ಪಂದ್ಯಗಳಲ್ಲೂ ಇವರಿಗೆ ಸ್ಥಾನ ಸಿಕ್ತು . ಸ್ಪಿನ್ನರ್ ಆಗಿದ್ದರೂ ಪವರ್-ಪ್ಲೇನಲ್ಲೇ(ಮೊದಲ 6 ಓವರ್ನೊಳಗೆ) ವಿಕೆಟ್ಗಳನ್ನು ಪಡೆದು ಯಶಸ್ವಿ ಸ್ಪಿನ್ನರ್ ಎನಿಸಿದರು. ಆದರೆ ಈ ಸ್ವಪ್ನಿಲ್ ಸಿಂಗ್ ಐಪಿಎಲ್ಗೆ ಹೊಸಬರೇನೂ ಅಲ್ಲ. 33 ವರ್ಷದ ಸ್ವಪ್ನಿಲ್ ಸಿಂಗ್ 2008ರಲ್ಲೇ ಐಪಿಎಲ್ ತಂಡವೊಂದರಲ್ಲಿ ಸ್ಥಾನ ಪಡೆದಿದ್ದರು ಎಂದರೆ ನೀವು ನಂಬಲೇಬೇಕು!
Swapnil Singh has been the lucky charm for RCB, with the franchise winning 6 out of 6 games with him in the XII. He talks about the challenges he faced in his career, and how loyal the RCB fanbase is!#IPL2024 pic.twitter.com/X6KgjMRZ5v
— Cricket.com (@weRcricket) May 20, 2024
22 ಜನವರಿ 1991 ರಂದು ಉತ್ತರ ಪ್ರದೇಶದಲ್ಲಿ ಜನಿಸಿದ ಸ್ವಪ್ನಿಲ್ ಸಿಂಗ್, ತಮ್ಮ 14 ವರ್ಷ ವಯಸ್ಸಿನಲ್ಲೇ ಬರೋಡಾ ತಂಡದ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. 2006 ಮತ್ತು 2008 ರಲ್ಲಿ ಅಂಡರ್-19 ವಿಶ್ವಕಪ್ಗೆ ಭಾರತದಲ್ಲಿ ಸ್ಥಾನ ಪಡೆಯಲು ಅವರು ಪ್ರಯತ್ನಿಸಿದ್ದರೂ, ಅದರಲ್ಲಿ ಅವರು ಯಶಸ್ವಿಯಾಗಲಿಲ್ಲ.
ನಂತರ ಅದೇ ವರ್ಷ ಐಪಿಎಲ್ ಮೊದಲ ಸೀಸನ್ (2008) ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಥಾನ ಪಡೆದ ಅವರು, ಆ ಸೀಸನ್ನಲ್ಲಿ ಒಂದು ಪಂದ್ಯವನ್ನೂ ಆಡಿರಲಿಲ್ಲ! ಅದೇ ವರ್ಷ ಅವರನ್ನ ತಂಡದಿಂದಲೂ ಕೈಬಿಡಲಾಯಿತು.
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಆಡುವುದನ್ನು ಮುಂದುವರಿಸಿದ ಅವರು, 2014-15ರ ರಣಜಿ ಟ್ರೋಫಿ ಅವರ ಜೀವನದ ಒಂದು ಟರ್ನಿಂಗ್ ಪಾಯಿಂಟ್. 2015ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿನ ಅವರ ಪ್ರದರ್ಶನದಿಂದ ಮತ್ತೊಮ್ಮೆ ಐಪಿಎಲ್ ಫ್ರಾಂಚೈಸಿಗಳು ಅವರ ಮೇಲೆ ಕಣ್ಣಿಟ್ಟವು ಹಾಗೂ 2016ರಲ್ಲಿ ಪಂಜಾಬ್ ಕಿಂಗ್ಸ್ ತಂಡ ಅವರನ್ನು ಖರೀದಿಸಿತು. ತಂಡದಲ್ಲಿದ್ದರೂ, ಅವರು ಆಡುವ ಬಳಗದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು.
2017-18 ರಲ್ಲಿ ಮತ್ತೊಮ್ಮೆ ಬ್ಯಾಟ್ ಬಾಲ್ ಸದ್ದು ಮಾಡುವುದು ಮುಂದುವರೆಸಿತು. ರಣಜಿ, ವಿಜಯ್ ಹಝಾರೆ ಟ್ರೋಫಿ, ಸಯ್ಯದ್ ಮುಷ್ತಾಕ್ ಅಲಿ ಸರಣಿಯಲ್ಲೆಲ್ಲ ಇಂಪ್ಯಾಕ್ಟ್ ಮಾಡಿದ್ದ ಅವರಿಗೆ, ದುಲೀಪ್ ಟ್ರೋಫಿಯಲ್ಲಿ ಇಂಡಿಯಾ ಬ್ಲೂ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.

2021-22 ರಲ್ಲಿ ಉತ್ತರಾಖಂಡ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿದ ಅವರು, 2023ರ ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಾಲಾದರು. ಅಮಿತ್ ಮಿಶ್ರಾ ಬದಲಾಗಿ 2 ಪಂದ್ಯಗಳಲ್ಲಿ ಆಡುವ ಅವಕಾಶ ಅವರಿಗೆ ಸಿಕ್ಕಿತ್ತು. ಆದರೆ ಯಾವ ಇಂಪ್ಯಾಕ್ಟೂ ಮಾಡದ ಅವರನ್ನು ಅದೇ ವರ್ಷ ತಂಡದಿಂದ ಕೈ ಬಿಡಲಾಗಿತ್ತು.
ಕ್ರಿಕೆಟ್ ವೃತ್ತಿಜೀವನ ಮುಗೀತು ಅಂತಲೇ ಅಂದುಕೊಂಡಿದ್ದರೇನೋ ಅವರು. ಆದರೆ ಅದೃಷ್ಟವೆಂಬಂತೆ 2024ರ ಐಪಿಎಲ್ಗೆ ಆರ್ಸಿಬಿ ತಂಡದ ಟಿಕೆಟ್ ಪಡೆದ ಅವರು, ಈಗ ತಂಡದ ಲಕ್ಕಿ ಚಾರ್ಮ್ ಆಗಿ ಬದಲಾಗಿದ್ದಾರೆ. ಆರ್ಸಿಬಿ ತಂಡದ IMPACT PLAYERಗೆ ಮೊದಲ ಆಯ್ಕೆ ಈಗ ಸ್ವಪ್ನಿಲ್ ಸಿಂಗ್.
ಈ ವರ್ಷ ಆರ್ಸಿಬಿ ಪರವಾಗಿ 6 ಪಂದ್ಯಗಳಲ್ಲಿ 6 ವಿಕೆಟ್ಗಳನ್ನು ಪಡೆದು ಮಿಂಚಿದ್ದಾರೆ. ಅವರ ಕ್ರಿಕೆಟ್ ವೃತ್ತಿಜೀವನ ಇನ್ನಷ್ಟು ವೈಭವ ಕಾಣಲಿ, ಆರ್ಸಿಬಿ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಡಲಿ ಎಂಬುದಷ್ಟೇ ನಮ್ಮ ಹಾರೈಕೆ.
-ಇಂದೂಧರ್ ಹಳೆಯಂಗಡಿ, ಮಂಗಳೂರು
*************************************************************
ಆರ್ಸಿಬಿ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸ್ವಪ್ನಿಲ್ ಸಿಂಗ್ ‘EMOTIONAL STORY’
ಸ್ವಪ್ನಿಲ್ ಸಿಂಗ್ ಅವರ ವೃತ್ತಿ ಜೀವನದಲ್ಲಿನ ಏರಿಳಿತಗಳ ಬಗ್ಗೆ ಆರ್ಸಿಬಿ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ‘EMOTIONAL VIDEO’ವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ತನ್ನ ಸಂಕಷ್ಟದ ದಿನಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.
“ನನ್ನ ತಂದೆ ನನ್ನ ಮೊದಲ ತರಬೇತುದಾರ. ಅವರಿಂದಲೇ ಕ್ರಿಕೆಟ್ ಆಡುತ್ತಿದ್ದೇನೆ. ಅವರ ಉತ್ಸಾಹವೇ ಇದಕ್ಕೆಲ್ಲ ಸಾಧ್ಯವಾಗಲು ಕಾರಣವಾಯಿತು. ಕ್ರಿಕೆಟ್ಗಾಗಿ ಬರೋಡಾಕ್ಕೆ ಸ್ಥಳಾಂತರಗೊಂಡಾಗ ಆರನೇ ತರಗತಿಯಲ್ಲಿದ್ದೆ. ನಾನು ಒಬ್ಬನಾಗಬೇಕೆಂದು ಅವರು ಬಯಸಿದ್ದರು. 14 ವರ್ಷದಲ್ಲಿ ರಣಜಿಗೆ ಪದಾರ್ಪಣೆ ಮಾಡಿದ್ದೆ” ಎಂದು ಸ್ವಪ್ನಿಲ್ ಸಿಂಗ್ ನೆನಪಿಸಿಕೊಂಡಿದ್ದಾರೆ.
𝗧𝗵𝗲 𝗦𝘄𝗮𝗽𝗻𝗶𝗹 𝗦𝗶𝗻𝗴𝗵 𝗦𝘁𝗼𝗿𝘆 is special for a number of reasons! Keep those tissues handy. If you’re not his fan already, you’ll end up becoming one.🥹❤
Watch Swapnil’s emotional and inspiring journey on @bigbasket_com presents RCB Bold Diaries!#PlayBold pic.twitter.com/8wlNNjsfxo
— Royal Challengers Bengaluru (@RCBTweets) May 20, 2024
ವಿರಾಟ್ ಕೊಹ್ಲಿ ಜೊತೆಗಿನ ಬಾಂಧವ್ಯವನ್ನು ನೆನಪಿಸಿಕೊಂಡಿರುವ ಸ್ವಪ್ನಿಲ್, “ತಾನು ವಿರಾಟ್ನೊಂದಿಗೆ ಅಂಡರ್ -15 ಮತ್ತು ಅಂಡರ್ 19 ಮಟ್ಟದ ಕ್ರಿಕೆಟ್ ಆಡಿದ್ದೇನೆ ಮತ್ತು ಶ್ರೀಲಂಕಾ ಮತ್ತು ಮಲೇಷ್ಯಾ ಪ್ರವಾಸಗಳಲ್ಲಿ ಅವರ ರೂಮ್ಮೇಟ್ ಆಗಿದ್ದೆ. ನನ್ನನ್ನು 2008ರಲ್ಲಿ ಮುಂಬೈ ಇಂಡಿಯನ್ಸ್ಗೆ ಆಯ್ಕೆ ಮಾಡಲಾಯಿತು. ಸಚಿನ್ ತೆಂಡೂಲ್ಕರ್ ನಮಗೆಲ್ಲ ದೇವರಂತೆ. ನಾನು ಅವರನ್ನು ಭೇಟಿಯಾದಾಗ ಮತ್ತು ಅವರೊಂದಿಗೆ ಮೊದಲ ಬಾರಿಗೆ ಸಂವಹನ ನಡೆಸಿದಾಗ, ಅದು ತುಂಬಾ ಚೆನ್ನಾಗಿತ್ತು. ಪಂಜಾಬ್ ಪರ ಸಿಎಸ್ಕೆ ವಿರುದ್ಧ ಆಡುವಾಗ ಮ್ಯಾಕ್ಸ್ವೆಲ್ ಕ್ಯಾಪ್ಟನ್ ಆಗಿದ್ದರು. ಆಗ ಎಂಎಸ್ ಧೋನಿ ಅವರ ವಿಕೆಟ್ ಪಡೆದಿದ್ದೆ” ಎಂದು ಸದ್ಯ ಆರ್ಸಿಬಿಯಲ್ಲಿ 24 ನಂಬರ್ನ ಜೆರ್ಸಿಯಲ್ಲಿ ಆಡುತ್ತಿರುವ ಸ್ವಪ್ನಿಲ್ ನೆನಪಿಸಿಕೊಂಡಿದ್ದಾರೆ.
“ಐಪಿಎಲ್ ಹರಾಜಿನ ದಿನ ನಾನು ರಣಜಿ ಆಡಲು ಡೆಹ್ರಾಡೂನ್ಗೆ ಪ್ರಯಾಣಿಸುತ್ತಿದ್ದೆ. ರಾತ್ರಿ 7-8 ರ ಸುಮಾರಿಗೆ ನಾವು ಎಲ್ಲೋ ಬಂದಿಳಿದೆವು. ಕೊನೆಯ ಸುತ್ತಿನ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಅಲ್ಲಿಯವರೆಗೆ ನಾನು ಆಯ್ಕೆ ಆಗಿರಲಿಲ್ಲ. ಆಗ ನಾನು ಯೋಚಿಸಿದೆ, ಹರಾಜು ಮುಗಿದಿದೆ. ನಾನು ಈಗ ನಡೆಯುತ್ತಿರುವ ರಣಜಿ ಅನ್ನು ಆಡುತ್ತೇನೆ. ಅಗತ್ಯವಿದ್ದರೆ ಮುಂದಿನ ಆವೃತ್ತಿಯನ್ನು ಆಡಿ ಕ್ರಿಕೆಟ್ ಅನ್ನು ತ್ಯಜಿಸುತ್ತೇನೆ. ಏಕೆಂದರೆ ಜಗತ್ತನ್ನು ಮತ್ತು ಇತರ ವಸ್ತುಗಳನ್ನು ಗೆಲ್ಲಲು ಜೀವನದುದ್ದಕ್ಕೂ ನಾನು ಕ್ರಿಕೆಟ್ ಆಡಲು ಇಷ್ಟವಿರಲಿಲ್ಲ. ನನಗೆ ಅಂದು ತುಂಬಾ ನಿರಾಸೆಯಾಯಿತು. ಆದರೆ, ಈ ವೇಳೆ ಮನೆಯವರು ನಾನು ಆಯ್ಕೆಯಾಗಿದ್ದೇನೆ ಹೇಳಿದ ಕ್ಷಣ, ಎಲ್ಲವೂ ಒಮ್ಮೆಗೆ ಬದಲಾಯಿತು. ಈ ಕ್ರಿಕೆಟ್ ಪ್ರಯಾಣ ಎಷ್ಟು ಭಾವನಾತ್ಮಕ ಪ್ರಯಾಣವಾಗಿತ್ತು ಎಂಬುದು ಹಲವರಿಗೆ ತಿಳಿದಿಲ್ಲ” ಎಂದು ಕಣ್ಣೀರಿಟ್ಟಿದ್ದಾರಲ್ಲದೇ, ಆರ್ಸಿಬಿಯ ಅಭಿಮಾನಿಗಳು ತೋರುತ್ತಿರುವ ಬೆಂಬಲ ಹಾಗೂ ಸಹಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
ಮೊದಲಾರ್ಧದಲ್ಲಿ ಆಡಿದ 8 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಗೆದ್ದಿದ್ದ ಆರ್ಸಿಬಿ, ದ್ವಿತೀಯಾರ್ಧದಲ್ಲಿ ಸತತ ಆರು ಗೆಲುವು ಸಾಧಿಸುವುದರೊಂದಿಗೆ ಪ್ಲೇ ಆಫ್ ಪ್ರವೇಶಿಸಿದೆ. ಈ ಆರು ಪಂದ್ಯಗಳಲ್ಲಿ ಸ್ವಪ್ನಿಲ್ ಬ್ಯಾಟಿಂಗ್ ವಿಕೆಟ್-ತೆಗೆದುಕೊಳ್ಳುವ ಸಾಮರ್ಥ್ಯದೊಂದಿಗೆ ಪ್ರಮುಖ ಕೊಡುಗೆ ನೀಡಿದ್ದಾರೆ. ನಾಲ್ಕು ಇನ್ನಿಂಗ್ಸ್ಗಳಲ್ಲಿ 164.70 ಸ್ಟ್ರೈಕ್ ರೇಟ್ನಲ್ಲಿ 28 ರನ್ ಗಳಿಸುವುದರ ಜೊತೆಗೆ, 19.00ರ ಸರಾಸರಿಯಲ್ಲಿ ಆರು ವಿಕೆಟ್ ಪಡೆದಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಜೊತೆ 35 ರನ್ಗಳ ಜೊತೆಯಾಟ ನಡೆಸಿದ್ದಲ್ಲದೇ, ಸಿಕ್ಸ್ ಬಾರಿಸುವ ಮೂಲಕ ವಿನ್ನಿಂಗ್ ರನ್ ಹೊಡೆದಿದ್ದರು.
2021-22 ಸೀಸನ್ನಿಂದ ಪ್ರಸ್ತುತ ಉತ್ತರಾಖಂಡ್ಗಾಗಿ ಆಡುತ್ತಿದ್ದು, 76 ಪ್ರಥಮ ದರ್ಜೆ ಪಂದ್ಯಗಳಲ್ಲಿ, 26.22 ಸರಾಸರಿಯಲ್ಲಿ 2,727 ರನ್ ಗಳಿಸಿದ್ದಾರೆ, ಎರಡು ಶತಕಗಳು ಮತ್ತು 16 ಅರ್ಧಶತಕಗಳು ಮತ್ತು 181 ವಿಕೆಟ್ಗಳನ್ನು ಪಡೆದಿದ್ದಾರೆ.
