ರೈತ ಮತ್ತು ನೀರು: ಸಮತೋಲನ ಹೇಗೆ?

Date:

ಡಾ. ಬಿ.ಆರ್. ಅಂಬೇಡ್ಕರ್ ಅವರು ನದಿ ನೀರು ರೈಲ್ವೆಯಂತೆ ರಾಷ್ಟ್ರೀಕರಣಗೊಳ್ಳಬೇಕು ಎಂದು ಸಲಹೆ ನೀಡಿದ್ದರು. ನದಿ ನೀರಿನ ರಾಷ್ಟ್ರೀಕರಣವನ್ನೂ ಅತ್ಯಂತ ಸರಳವಾಗಿ ಹಾಗೂ ಪ್ರಜಾಸತ್ತಾತ್ಮಕವಾಗಿ ಮಾಡಲು ಸಾಧ್ಯವಿದೆ. ಆ ಸಲಹೆ ಎಷ್ಟು ವೈಜ್ಞಾನಿಕ ಎಂಬುದು ಕರ್ನಾಟಕದಲ್ಲಿ ಬರ ತಲೆದೋರಿದಾಗಲೆಲ್ಲ ತಮಿಳುನಾಡಿನ ನಡುವೆ ಉದ್ಭವಿಸುವ ನದಿ ನೀರು ಹಂಚಿಕೆ ವಿವಾದವೇ ಜ್ವಲಂತ ನಿದರ್ಶನ.

ಮುಂದಿನ ವಿಶ್ವ ಯುದ್ಧವೇನಾದರೂ ನಡೆದರೆ, ಅದು ನೀರಿಗಾಗಿ ನಡೆಯಲಿದೆ ಎಂದು ಜಲ ತಜ್ಞರು ಭವಿಷ್ಯ ನುಡಿಯತೊಡಗಿದ್ದಾರೆ. ಅಷ್ಟರ ಮಟ್ಟಿಗೆ ಈಗ ನೀರು ವಾಣಿಜ್ಯ ಸರಕಾಗಿ ಬದಲಾಗಿದೆ. ಈ ನೀರಿಗಾಗಿನ ಯುದ್ಧಕ್ಕೆ ಸಾವಿರಾರು ವರ್ಷಗಳ ಇತಿಹಾಸವೂ ಇದೆ. ಒಂದು ಬಾವಿಗಾಗಿ ತಮ್ಮ ಕುಟುಂಬದಲ್ಲಿ ನಡೆದ ಸಂಘರ್ಷವೊಂದರ ಕಾರಣಕ್ಕೆ ಪ್ರವಾದಿ ಮಹಮ್ಮದರು ನೆಲೆ ನಿಂತ ಕ್ಷೇತ್ರವನ್ನು ಮೆಕ್ಕಾದಿಂದ ಮದೀನಾಕ್ಕೆ ಸ್ಥಳಾಂತರಿಸಲಾಯಿತು ಎಂಬ ಮಾತುಗಳಿವೆ. ಡಾ. ಬಿ.ಆರ್.ಅಂಬೇಡ್ಕರ್ ಪ್ರಕಾರ, ಸೋದರ ಬುಡಕಟ್ಟುಗಳ ನಡುವೆ ಉದ್ಭವಿಸಿದ ನದಿ ನೀರು ಹಂಚಿಕೆಯ ವಿವಾದದ ಕಾರಣಕ್ಕಾಗಿ ಸಿದ್ಧಾರ್ಥ ತನ್ನ ಮನೆ ತೊರೆದು ಗೌತಮ ಬುದ್ಧನಾದ ಎಂದು ಹೇಳುತ್ತಾರೆ. ಈ ನದಿ ನೀರು ಹಂಚಿಕೆ ವಿವಾದಗಳು ಈಗಲೂ ಮುಂದುವರಿದಿದ್ದು, ಅದು ಅಂತಾರಾಷ್ಟ್ರೀಯ ನದಿ ನೀರು ಹಂಚಿಕೆ ಮತ್ತು ಅಂತರ್ ರಾಜ್ಯ ನದಿ ನೀರು ಹಂಚಿಕೆ ವಿವಾದಗಳ ರೂಪದಲ್ಲಿ ಇಂದಿಗೂ ಅಸ್ತಿತ್ವದಲ್ಲಿವೆ. ಈ ನಡುವೆ ರೈತ ಸಮುದಾಯ ನೀರು ನಿರ್ವಹಣೆಯ ಬಗ್ಗೆ ಸೂಕ್ತ ವೈಜ್ಞಾನಿಕ ತಿಳಿವಳಿಕೆ ಹಾಗೂ ಮಾರ್ಗದರ್ಶನವಿಲ್ಲದೆ ತಮ್ಮ ಫಲವತ್ತಾದ ಕೃಷಿ ಭೂಮಿಗಳನ್ನು ಬಂಜರಾಗಿಸಿಕೊಳ್ಳತೊಡಗಿದ್ದಾರೆ. ಈ ಮಾತಿಗೆ ಜ್ವಲಂತ ನಿದರ್ಶನ ಕಬ್ಬು ಮತ್ತು ಭತ್ತದ ಬೆಳೆಗಾರರು.

ಅತಿಯಾದ ನೀರಿನ ಬಳಕೆಯು ಕೃಷಿ ಭೂಮಿಯನ್ನು ಹಂತಹಂತವಾಗಿ ಜವುಳಾಗಿಸುತ್ತಾ ಹೋಗುತ್ತದೆ. ಇಂತಹ ಜವುಳಾದ ಭೂಮಿಯಲ್ಲಿ ಗರಿಕೆ ಹುಲ್ಲನ್ನೂ ಬೆಳೆಯಲು ಸಾಧ್ಯವಿಲ್ಲ. ಆದರೆ, ಕಬ್ಬು ಮತ್ತು ಭತ್ತದ ಉತ್ತಮ ಇಳುವರಿಗೆ ಅಧಿಕ ಪ್ರಮಾಣದ ನೀರು ಬಳಸಲೇಬೇಕು ಎಂಬ myth ಅನಾದಿ ಕಾಲದಿಂದಲೂ ರೈತರ ತಲೆಯಲ್ಲಿ ಕೂತು ಬಿಟ್ಟಿದೆ. ಇದರೊಂದಿಗೆ ಪ್ರತಿ ವರ್ಷ ಬೆಳೆ ಬದಲಾವಣೆ ಮಾಡುವ ಬದಲು ಪದೇ ಪದೇ ಕಬ್ಬು ಮತ್ತು ಭತ್ತವನ್ನೇ ಹಾಕುತ್ತಿರುವುದರಿಂದ ಫಲವತ್ತಾದ ಕೃಷಿ ಭೂಮಿಗಳು ನಿಸ್ಸಾರವಾಗಿ ರೂಪಾಂತರಗೊಳ್ಳತೊಡಗಿವೆ. ಇದರೊಂದಿಗೆ ನೀರಿನ ಕೊರತೆಯೂ ಇಂತಹ ರೈತರ ಪಾಲಿಗೆ ಮರಣ ಶಾಸನವಾಗತೊಡಗಿದೆ. ಇಂತಹ ಕೃಷಿ ಬಿಕ್ಕಟ್ಟಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಾದ ಕೃಷಿ ಇಲಾಖೆಯ ಕ್ಷೇತ್ರ ಕಾರ್ಯಾಧಿಕಾರಿಗಳು ಜೋಭದ್ರಗೇಡಿ ನಿದ್ರೆಗೆ ಜಾರಿರುವುದರಿಂದ ಇನ್ನೊಂದೆರಡು ದಶಕದಲ್ಲಿ ಇದು ಕೃಷಿ ಬಿಕ್ಕಟ್ಟಿಗೆ ದಾರಿ ಮಾಡಿಕೊಡುವ ಎಲ್ಲ ಸಾಧ್ಯತೆಗಳೂ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ರೈತರೇ ನೀರಿನ ಮಿತ ಬಳಕೆಯ ಮಾರ್ಗಗಳನ್ನು ಕಂಡುಕೊಳ್ಳುವತ್ತ ಮುಖ ಮಾಡಬೇಕಿದೆ.

ಏರಿಯಲ್ ಭತ್ತದ ತಳಿ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಭತ್ತದ ಅತಿಯಾದ ನೀರಿನ ಅವಲಂಬನೆಯನ್ನು ತಪ್ಪಿಸಲು ಕೃಷಿ ವಿಜ್ಞಾನಿಗಳು ಏರಿಯಲ್ ಭತ್ತದ ತಳಿಯನ್ನು ಸಂಶೋಧಿಸಿದ್ದಾರೆ. ಈ ಭತ್ತದ ತಳಿಗೆ ಒಣ ಬೆಳೆಗಳಾದ ರಾಗಿ, ಜೋಳ, ಸಜ್ಜೆ ಇತ್ಯಾದಿಗಳಿಗೆ ಸಾಕಾಗುವಷ್ಟೆ ನೀರು ಸಾಕಾಗುತ್ತದೆ ಎಂಬುದು ಕೃಷಿ ವಿಜ್ಞಾನಿಗಳ ಪ್ರತಿಪಾದನೆ. ಈ ಭತ್ತದ ತಳಿ ಸಂಶೋಧನೆಗೊಂಡು ಒಂದೆರಡು ದಶಕವೇ ಕಳೆಯುತ್ತಿದ್ದರೂ, ಈವರೆಗೆ ಅಚ್ಚುಕಟ್ಟು ಪ್ರದೇಶದ ರೈತರು ಈ ಭತ್ತದ ತಳಿಯ ಬಗ್ಗೆ ಯಾವುದೇ ಆಸಕ್ತಿಯನ್ನು ತೋರಿಲ್ಲ ಎಂಬ ಆತಂಕಕಾರಿ ಸಂಗತಿ ಬಯಲಾಗಿದೆ. ಹೀಗಾಗಿ, ಅಚ್ಚುಕಟ್ಟು ಪ್ರದೇಶದ ಬಹುತೇಕ ಫಲವತ್ತಾದ ಕೃಷಿ ಭೂಮಿಗಳು ಜವುಳು ಪ್ರದೇಶಗಳಾಗಿ ರೂಪಾಂತರಗೊಂಡಿವೆ. ಇದರಿಂದ ಭತ್ತದ ಇಳುವರಿಯ ಮೇಲೆ ತೀವ್ರ ಸ್ವರೂಪದ ಪರಿಣಾಮವುಂಟಾಗಿದ್ದು, ರಸಗೊಬ್ಬರಗಳ ಮೇಲಿನ ಅವಲಂಬನೆಯೂ ತೀವ್ರಗೊಂಡಿದೆ. ಇದರಿಂದ ಭತ್ತದ ಕೃಷಿ ವೆಚ್ಚ ದುಪ್ಪಟ್ಟುಗೊಂಡಿದ್ದರೂ, ಅದಕ್ಕನುಗುಣವಾಗಿ ಭತ್ತಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ದರ ದೊರೆಯುತ್ತಿಲ್ಲ. ಹೀಗಾಗಿ, ದೊಡ್ಡ ಮಟ್ಟದ ಭತ್ತದ ಬೆಳೆಗಾರರು ಭತ್ತ ಬೆಳೆಯುವುದರಿಂದ ವಿಮುಖಗೊಂಡು, ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದ್ದಾರೆ. ಇದರ ಪರಿಣಾಮವೇ ಈ ವರ್ಷ ಅಕ್ಕಿಯ ಬೆಲೆ ರೂ. 80ರವರೆಗೆ ತಲುಪಿರುವುದು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸರ್ಕಾರಕ್ಕೆ ಒಂದು ವರ್ಷ, ಸಮರ್ಥನೀಯವಲ್ಲದ ನಡೆ

ಈ ಹಂತದಲ್ಲಿ ರೈತರು ಹಾಗೂ ಕೃಷಿ ಅಧಿಕಾರಿಗಳಿಬ್ಬರೂ ಸಮನ್ವಯದೊಂದಿಗೆ ನೀರಿನ ಸಮರ್ಪಕ ನಿರ್ವಹಣೆಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕಿದೆ. ಒಂದು ಕಡೆ ಕೃಷಿ ಅಧಿಕಾರಿಗಳು ನೀರಿನ ಮಿತಿ ಮೀರಿದ ಬಳಕೆಯು ಫಲವತ್ತಾದ ಕೃಷಿ ಭೂಮಿಯನ್ನು ಹೇಗೆ ನಿಸ್ಸಾರಗೊಳಿಸುತ್ತದೆ ಎಂಬ ಕುರಿತು ರೈತರಲ್ಲಿ ಜಾಗೃತಿ ಮೂಡಿಸಬೇಕಿದ್ದರೆ, ನೀರಿನ ಅತಿಯಾದ ಅವಲಂಬನೆ ತಪ್ಪಿಸುವ ಏರಿಯಲ್ ಭತ್ತದ ತಳಿ ಬೆಳೆಯುವತ್ತ ರೈತರು ಮುಖ ಮಾಡಬೇಕಿದೆ. ಇದರೊಂದಿಗೆ ರಸಗೊಬ್ಬರದ ಬಳಕೆಯಿಂದಲೂ ನೀರಿನ ಅವಲಂಬನೆ ಏರಿಕೆಯಾಗುತ್ತಿರುವುದರಿಂದ, ರಸಗೊಬ್ಬರದ ಬಳಕೆಯನ್ನು ಹಂತಹಂತವಾಗಿ ಇಳಿಕೆ ಮಾಡುತ್ತಾ, ಸಾಂಪ್ರದಾಯಿಕ ಕೃಷಿಯತ್ತ ಮುಖ ಮಾಡಬೇಕಿದೆ.

ತಮ್ಮ ಕೃಷಿ ಭೂಮಿಗಳು ಜವುಳಾಗದಂತೆ ತಡೆಯಲು ರೈತರ ಬಳಿ ಇರುವ ಮತ್ತೊಂದು ಮುಖ್ಯ ದಾರಿ: ಗದ್ದೆಯ ಬದುಗಳಲ್ಲಿ ನೀರನ್ನು ಹಿಡಿದಿಟ್ಟುಕೊಂಡು ಭೂಮಿಯ ಸವಕಳಿಯನ್ನು ತಪ್ಪಿಸುವ ಹೊಂಗೆ, ಬೇವು, ಹಲಸು, ಹುಣಿಸೆ, ಸೀಬೆ, ಸೀತಾಫಲದಂಥ ಗಿಡಗಳನ್ನು ನೆಡುವುದು. ಇದರಿಂದ ಗದ್ದೆಯಲ್ಲಿರುವ ಮಿತಿಮೀರಿದ ನೀರನ್ನು ಇವುಗಳ ಬೇರುಗಳು ಹಿಡಿದಿಟ್ಟುಕೊಳ್ಳುವುದರಿಂದ ಅವರ ಕೃಷಿ ಭೂಮಿಗಳು ಜವುಳಾಗುವುದು ತಪ್ಪುತ್ತದೆ.

ಹನಿ ನೀರಾವರಿ

ನೀರಿನ ದುಂದುವೆಚ್ಚದಿಂದ ಕೃಷಿ ಭೂಮಿಗಳು ತಮ್ಮ ಫಲವತ್ತತೆ ಕಳೆದುಕೊಳ್ಳುವುದರೊಂದಿಗೆ ಭವಿಷ್ಯದಲ್ಲಿ ನೀರಿನ ಬಿಕ್ಕಟ್ಟು ಹಾಗೂ ಭೂಮಿಯ ತಾಪಮಾನ ಏರಿಕೆಯೂ ಆಗುತ್ತದೆ ಎಂದು ಪರಿಸರ ತಜ್ಞರು ಎಚ್ಚರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷಿ ವಿಜ್ಞಾನಿಗಳು ಹನಿ ನೀರಾವರಿ ವಿಧಾನವನ್ನು ಸಂಶೋಧಿಸಿದ್ದಾರೆ. ಈ ಹನಿ ನೀರಾವರಿ ವಿಧಾನವು ವಾಣಿಜ್ಯ ಬೆಳೆಗಳಾದ ತೆಂಗು, ಅಡಿಕೆ ಹಾಗೂ ತರಕಾರಿ ಬೆಳೆಗಳಿಗೆ ಹೆಚ್ಚು ಸೂಕ್ತವಾಗಿದೆ. ಈ ವಿಧಾನದಲ್ಲಿ ನೀರು ಹನಿ ರೂಪದಲ್ಲಿ ತೊಟ್ಟಿಕ್ಕುವುದರಿಂದ ನೀರಿನ ಪೋಲು ಇಲ್ಲವೇ ಇಲ್ಲ ಎನ್ನುವಷ್ಟು ಕನಿಷ್ಠ ಪ್ರಮಾಣದಲ್ಲಿರುತ್ತದೆ. ತುಂತುರು ಹನಿ ನೀರಾವರಿಗಿಂತ ಹನಿ ನೀರಾವರಿಯೇ ನೀರಿನ ಮಿತವ್ಯಯಕ್ಕೆ ಹೆಚ್ಚು ಪರಿಣಾಮಕಾರಿ ವಿಧಾನ ಎಂಬುದು ಇದೀಗ ವೈಜ್ಞಾನಿಕವಾಗಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ವಾಣಿಜ್ಯ ಬೆಳೆಗಾರರು ಹಾಗೂ ತರಕಾರಿ ಬೆಳೆಗಾರರು ಅಗತ್ಯವಾಗಿ ಹನಿ ನೀರಾವರಿ ವಿಧಾನವನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬೇಕಿದೆ. ಇದರಿಂದ ನೀರಿನ ಪೋಲೂ ತಪ್ಪಿ, ಭೂಮಿಯ ತಾಪಮಾನವೂ ತಹಬಂದಿಯಲ್ಲಿರುತ್ತದೆ (ಕೊಳವೆ ಬಾವಿ ಮೂಲಕ ನೀರನ್ನು ಮೇಲೆತ್ತುವುದರಿಂದ ಭೂಮಿಯ ಆರ್ದ್ರತೆ ಮರೆಯಾಗುತ್ತದೆ. ಭೂಮಿ ತನ್ನ ಆರ್ದ್ರತೆ ಕಳೆದುಕೊಂಡರೆ ಸಹಜವಾಗಿಯೇ ಭೂಮಿಯ ತಾಪಮಾನವೂ ಏರುತ್ತಾ ಹೋಗುತ್ತದೆ).

ತೆರೆದ ಬಾವಿ ಮತ್ತು ಕೃಷಿ ಹೊಂಡ

ಯಾವುದೇ ಆಡಳಿತಗಾರನಿಗೆ ತನ್ನ ಕಾಲಘಟ್ಟದ ತಲೆಮಾರನ್ನು ರಕ್ಷಿಸುವುದೇ ಪ್ರಮುಖ ಆದ್ಯತೆ ಮತ್ತು ಸವಾಲಾಗಿರುತ್ತದೆ. ಹೀಗಾಗಿಯೇ ಸಾಂಪ್ರದಾಯಿಕ ಕೃಷಿಯಿಂದ ಭಾರತವು ಆಹಾರ ಬಿಕ್ಕಟ್ಟಿನತ್ತ ಮುಖ ಮಾಡಿದ್ದಾಗ ಜಾರಿಗೊಂಡಿದ್ದೇ ರಸಗೊಬ್ಬರಗಳ ಬಳಸಿ ಕೃಷಿ ಮಾಡುವ ‘ಹಸಿರು ಕ್ರಾಂತಿ’ ಯೋಜನೆ. ಈ ಯೋಜನೆ ನಮ್ಮ ದೇಶವನ್ನು ಆಹಾರ ಸ್ವಾವಲಂಬಿಯನ್ನಾಗಿ ಮಾತ್ರ ಮಾಡಿಲ್ಲ; ಬದಲಿಗೆ ಆ ತಲೆಮಾರು ಹಸಿವಿನಿಂದ ಪಾರಾಗಿ ಉಳಿದಿದ್ದರಿಂದ ಈಗಿನ ತಲೆಮಾರು ಮುಂದುವರಿದಿದೆ. ಅದೇ ರೀತಿ 1990ರ ದಶಕದಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ತಲೆದೋರಿದಾಗ ಜಾರಿಗೆ ಬಂದಿದ್ದೇ ಸಾರ್ವಜನಿಕ ಕೊಳವೆ ಬಾವಿಗಳನ್ನು ಕೊರೆಯುವ ಯೋಜನೆ. ಈ ಯೋಜನೆಯಿಂದ ಕೋಟ್ಯಂತರ ಮಂದಿ ನೀರಿನ ಹಾಹಾಕಾರದಿಂದ ಪಾರಾಗಿದ್ದರು. ಆದರೆ, ಯಾವುದೇ ತಂತ್ರಜ್ಞಾನವನ್ನು ಸೂಕ್ತ ಶಿಕ್ಷಣದೊಂದಿಗೆ ಜಾರಿಗೊಳಿಸದಿದ್ದರೆ ಎಂಥ ಭೀಕರ ವಿಪತ್ತು ಸೃಷ್ಟಿಯಾಗುತ್ತದೊ ಅಂತಹುದೇ ಭೀಕರ ವಿಪತ್ತು ಈಗ ಕೊಳವೆ ಬಾವಿಗಳಿಂದ ಸೃಷ್ಟಿಯಾಗಿದೆ. ಹೀಗಾಗಿ ಅನೇಕ ಜಲ ತಜ್ಞರು ಮಳೆ ನೀರನ್ನು ಹಿಡಿದಿಡುವ ತೆರೆದ ಬಾವಿ ಹಾಗೂ ಕೃಷಿ ಹೊಂಡಗಳಿಗೆ ಮರಳಬೇಕು ಎಂದು ಸಲಹೆ ನೀಡುತ್ತಿದ್ದಾರೆ.

ಕೊಳವೆ ಬಾವಿಗಳು ಮುಂದೊಂದು ದಿನ ಭೂಮಿಯ ಪಾಲಿಗೆ ಟೈಂ ಬಾಂಬ್ ಆಗಲಿವೆ ಎಂದು ಅನೇಕ ಪರಿಸರ ತಜ್ಞರು ಎಚ್ಚರಿಸುತ್ತಿದ್ದಾರೆ. ಕಾರಣ: ಕೊಳವೆ ಬಾವಿಗಳ ಮಿತಿ ಮತ್ತು ಧಾರಣ ಶಕ್ತಿಯನ್ನು ಅರಿಯದೆ ರೈತರು ಹಾಗೂ ಸಾರ್ವಜನಿಕರು ಈ ಅಮೂಲ್ಯ ಸಂಪತ್ತನ್ನು ಪೋಲು ಮಾಡುತ್ತಿರುವುದು. ಮತ್ತೊಂದೆಡೆ ಉದ್ಯಮಪತಿಗಳು ನೀರಿನ ವ್ಯಾಪಾರಕ್ಕೂ ಇಳಿದು, ನೀರನ್ನು ವಾಣಿಜ್ಯೀಕರಣಗೊಳಿಸಿರುವುದು. ಹೀಗಾಗಿ, ಭೂಮಿಯ ಒಡಲಿಗೆ ಮತ್ತಷ್ಟು ಗಾಯ ಮಾಡುವ ಬದಲು ರೈತರು ಮತ್ತೆ ತೆರೆದ ಬಾವಿ ಹಾಗೂ ಕೃಷಿ ಹೊಂಡಗಳಿಗೆ ಮರಳಬೇಕಿದೆ. ಕೃಷಿ ಹೊಂಡಗಳನ್ನು ಕೇವಲ ರೂ. 50,000 ವೆಚ್ಚದಲ್ಲಿ ಪ್ರತಿ ರೈತನೂ ನಿರ್ಮಿಸಿಕೊಳ್ಳಬಹುದಾದ ಸಾಧ್ಯತೆ ಇದ್ದರೂ, ತೆರೆದ ಬಾವಿಗಳನ್ನು ನಿರ್ಮಿಸಲು ಈಗಿನ ಕಾಲಘಟ್ಟದಲ್ಲಿ ಕನಿಷ್ಠ ರೂ. 10 ಲಕ್ಷದವರೆಗೆ ತಗುಲಲಿದೆ. ಹೀಗಾಗಿ ಪ್ರತಿ ಭಾಗದ ರೈತರು ಸಹಕಾರ ತತ್ವದಲ್ಲಿ ತೆರೆದ ಬಾವಿಗಳನ್ನು ತೆರೆಯಲು ಮುಂದಾಗಬೇಕು. ಈ ಪ್ರಯತ್ನಕ್ಕೆ ಆಳುವ ಸರಕಾರವೂ ಸೂಕ್ತ ಅನುದಾನ ಒದಗಿಸಿ, ಈ ಪ್ರವೃತ್ತಿ ಕ್ರಾಂತಿಯ ರೂಪ ತಳೆಯುವಂತೆ ನೋಡಿಕೊಳ್ಳಬೇಕು. ಆಗ ಮಾತ್ರ ಜಲ ಬಿಕ್ಕಟ್ಟು ಹಾಗೂ ಕೃಷಿ ಬಿಕ್ಕಟ್ಟುಗಳೆರಡನ್ನೂ ಶಾಶ್ವತವಾಗಿ ಪರಿಹರಿಸಲು ಸಾಧ್ಯ.

ನದಿ ನೀರಿನ ರಾಷ್ಟ್ರೀಕರಣ

ಭಾರತ ಹೇಳಿ ಕೇಳಿ ಒಕ್ಕೂಟ ರಾಷ್ಟ್ರ. ಈ ಒಕ್ಕೂಟದ ಪರಿಕಲ್ಪನೆಯಡಿ ಪ್ರತಿ ರಾಜ್ಯಕ್ಕೂ ತನ್ನದೇ ಆದ ಸ್ವತಂತ್ರ ಅಸ್ತಿತ್ವವಿದೆ. ಹೀಗಾಗಿ ಪ್ರತಿ ರಾಜ್ಯಗಳಿಗೂ ತಮ್ಮ ರಾಜ್ಯಗಳಲ್ಲಿ ಹರಿಯುವ ನದಿಗಳ ಮೇಲೆ ನೈಸರ್ಗಿಕ ಹಕ್ಕು ಪ್ರಾಪ್ತವಾಗಿದೆ. ಆದರೆ, ಇಂತಹ ನೈಸರ್ಗಿಕ ಹಕ್ಕೇ ಅಂತರ್ ರಾಜ್ಯ ನದಿ ವಿವಾದಗಳಿಗೆ ಕಾರಣವಾಗಿದೆ. ನಮ್ಮ ರಾಜ್ಯದ ಮಟ್ಟಿಗೇ ಹೇಳುವುದಾದರೆ, ಗೋವಾದೊಂದಿಗಿನ ಮಹಾದಾಯಿ, ತಮಿಳುನಾಡಿನೊಂದಿಗಿನ ಕಾವೇರಿ ಹಾಗೂ ಆಂಧ್ರಪ್ರದೇಶದೊಂದಿಗಿನ ಕೃಷ್ಣಾ ನದಿ ನೀರು ಹಂಚಿಕೆ ವಿವಾದಗಳು ಇಂದಿಗೂ ಮುಂದುವರಿದಿವೆ. ಈ ಹಿನ್ನೆಲೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ನದಿ ನೀರು ರೈಲ್ವೆಯಂತೆ ರಾಷ್ಟ್ರೀಕರಣಗೊಳ್ಳಬೇಕು ಎಂದು ಸಲಹೆ ನೀಡಿದ್ದರು. ಆ ಸಲಹೆ ಎಷ್ಟು ವೈಜ್ಞಾನಿಕ ಎಂಬುದು ಕರ್ನಾಟಕದಲ್ಲಿ ಬರ ತಲೆದೋರಿದಾಗಲೆಲ್ಲ ತಮಿಳುನಾಡಿನ ನಡುವೆ ಉದ್ಭವಿಸುವ ನದಿ ನೀರು ಹಂಚಿಕೆ ವಿವಾದವೇ ಜ್ವಲಂತ ನಿದರ್ಶನ.

ಇದನ್ನು ಓದಿದ್ದೀರಾ?: ನಿಶ್ಚಿತಾರ್ಥ, ಮದುವೆ, ಸಂಬಂಧ ಮುರಿಯುವ ಆತಂಕದಲ್ಲಿ ಹಾಸನದ ಕುಟುಂಬಗಳು…

ನದಿ ನೀರಿನ ರಾಷ್ಟ್ರೀಕರಣವನ್ನೂ ಅತ್ಯಂತ ಸರಳವಾಗಿ ಹಾಗೂ ಪ್ರಜಾಸತ್ತಾತ್ಮಕವಾಗಿ ಮಾಡಲು ಸಾಧ್ಯವಿದೆ. ನದಿ ನೀರುಗಳ ನಿರ್ವಹಣೆಗೆ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿ, ಪ್ರತಿ ರಾಜ್ಯದ ಪ್ರತಿನಿಧಿಯೊಬ್ಬರನ್ನು ಆ ಸಮಿತಿಗೆ ನೇಮಿಸಬೇಕು. ಆ ಸಮಿತಿಯು ಬಹುಮತದ ಆಧಾರದಲ್ಲಿ ಬರಗಾಲದಂಥ ಪರಿಸ್ಥಿತಿಯಲ್ಲಿ ಯಾವ ರಾಜ್ಯಕ್ಕೆ ಹೆಚ್ಚು ನೀರಿನ ಅವಶ್ಯಕತೆ ಇದೆ ಎಂದು ವೈಜ್ಞಾನಿಕ ಸಮೀಕ್ಷೆ ನಡೆಸುವ ಮೂಲಕ ಅಂಥ ರಾಜ್ಯಗಳಿಗೆ ಅಧಿಕ ಪ್ರಮಾಣದ ನೀರನ್ನು ಹಂಚಿಕೆ ಮಾಡಬೇಕು. ಆಗ ಅಂತರ್ ರಾಜ್ಯ ನದಿ ನೀರು ವಿವಾದಗಳು ತಮಗೇ ತಾವೇ ಅಂತ್ಯಗೊಳ್ಳುತ್ತವೆ.

ಗ್ರಾಮೀಣ ಭಾಗದ ಕೆರೆ, ಕೊಳ್ಳಗಳನ್ನು ರಕ್ಷಿಸಿ, ಸುಸ್ಥಿತಿಯಲ್ಲಿಡದೆ, ಮೇಕೆದಾಟು, ಪಶ್ಚಿಮ ವಾಹಿನಿಯಂಥ ಯೋಜನೆಗಳನ್ನು ಜಾರಿಗೆ ತರಲು ಹೊರಡುವುದು ಖಂಡಿತ ಜನಪರ ನಿಲುವಲ್ಲ. ಇದರಿಂದ ಪ್ರಕೃತಿಯ ಸಮತೋಲನವು ಛಿದ್ರಗೊಂಡು, ಮುಂದೊಮ್ಮೆ ಜಗತ್ತಿನ ಇಡೀ ಜೀವ ಸಂಕುಲವೇ ನಾಶವಾಗುವ ಅಪಾಯವಿದೆ. ಹೀಗಾಗಿ, ಜನ ಸಮುದಾಯದಲ್ಲಿ ಕೆರೆ, ಕೊಳ್ಳಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ, ಆಳುವ ಸರಕಾರಗಳೂ ವೈಜ್ಞಾನಿಕ ನೀರು ನಿರ್ವಹಣೆ ವಿಧಾನಗಳನ್ನು ಪರಿಣಾಮಕಾರಿಯಾಗಿ ಪರಿಚಯಿಸಬೇಕಿದೆ. ಆಗ ಮಾತ್ರ ರೈತ ಮತ್ತು ನೀರಿನ ನಡುವೆ ಸಮತೋಲನ ಏರ್ಪಡಲು ಸಾಧ್ಯ.

ಸದಾನಂದ ಗಂಗನಬೀಡು
ಸದಾನಂದ ಗಂಗನಬೀಡು
+ posts

ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಸದಾನಂದ ಗಂಗನಬೀಡು
ಸದಾನಂದ ಗಂಗನಬೀಡು
ಪತ್ರಕರ್ತ, ಲೇಖಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

120 ತಾಲ್ಲೂಕುಗಳಲ್ಲಿ ಕ್ರೀಡಾಂಗಣಗಳಿಲ್ಲ; ಅಧಿಕಾರಿಗಳಿಂದ ಸಿಎಂ ಸಿದ್ದರಾಮಯ್ಯಗೆ ಮಾಹಿತಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ...

ಜುಲೈ12ರಂದು ವಿಧಾನಪರಿಷತ್ತಿನ ಒಂದು ಸ್ಥಾನಕ್ಕೆ ಉಪ ಚುನಾವಣೆ

ರಾಜ್ಯದಲ್ಲಿ ತೆರವಾಗಿರುವ ವಿಧಾನಪರಿಷತ್ತಿನ ಒಂದು ಸ್ಥಾನಕ್ಕೆ ಜುಲೈ12ರಂದು ಉಪ ಚುನಾವಣೆ ನಡೆಯಲಿದೆ.ಕೇಂದ್ರ...

ಲೈಂಗಿಕ ಹಗರಣ | ಪ್ರಜ್ವಲ್ ರೇವಣ್ಣಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ

ಲೈಂಗಿಕ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಮತ್ತೆ...

ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಳ; ಶಾಲೆಗಳಲ್ಲಿ ಲಿಂಗಸಮಾನತೆಯ ಪಾಠದ ಕೊರತೆ

2022 ರಲ್ಲಿ ಮಹಿಳೆಯರ ವಿರುದ್ಧದ 4,45,256 ಅಪರಾಧ ಪ್ರಕರಣಗಳು ದಾಖಲಾಗಿವೆ. ಇದು...