ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶೇ.87 ರಷ್ಟು ಪೊಲೀಸರು ಸ್ಥೂಲಕಾಯ, ಬೊಜ್ಜು ಅಥವಾ ಕಡಿಮೆ ತೂಕದಿಂದ ಬಳಲುತ್ತಿರುವುದು ಫಿಟ್ನೆಸ್ ಪರೀಕ್ಷೆಯಿಂದ ಬಹಿರಂಗಗೊಂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್, “ಈ ವಿಚಾರಕ್ಕೆ ಸಂಬಂಧಿಸಿದಂತೆ ಆಯಾ ವಿಭಾಗದ ಡಿಸಿಪಿಗಳಿಗೆ ಸೂಚನೆ ನೀಡಲಾಗಿದೆ. ಪೊಲೀಸ್ ಸಿಬ್ಬಂದಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಸ್ವಾಸ್ಥ್ಯಕ್ಕಾಗಿ ಕ್ರಮ ತೆಗೆದುಕೊಳ್ಳಲಾಗುತ್ತಿದ್ದು, ದೈಹಿಕ ಸಧೃಢರಲ್ಲದ ಸಿಬ್ಬಂದಿಗೆ ಸೂಚನೆ ನೀಡಬೇಕು ಎಂದು ಸೂಚಿಸಲಾಗಿದೆ. ಪೊಲೀಸ್ ಇಲಾಖೆಯಿಂದ ಹಲವು ಕಾರ್ಯಸೂಚಿ ರೂಪಿಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.
“ಮಾನಸಿಕವಾಗಿ ಮತ್ತು ದೈಹಿಕವಾಗಿ ಉತ್ತಮವಾಗಿರಬೇಕು. ಉತ್ತಮವಲ್ಲದ ಜೀವನ ಶೈಲಿ ದೈಹಿಕ ಸದೃಢತೆ ಇಲ್ಲದಿರಲು ಕಾರಣ. ಸಮಾಲೋಚಕರೊಂದಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ. ನಿಯಮಿತ ವ್ಯಾಯಾಮ, ಸರಿಯಾದ ಸಮಯಕ್ಕೆ ಆಹಾರ ಸೇವನೆ, ಒತ್ತಡ ನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು” ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಸಂಚಾರ ಮತ್ತು ರಸ್ತೆ ಸುರಕ್ಷತೆ ಎಡಿಜಿಪಿ ಅಲೋಕ್ ಕುಮಾರ್, “ಮಾನಸಿಕ ಸದೃಡತೆ ಮತ್ತು ದೈಹಿಕ ಸದೃಡತೆ ಈ ಎರಡೂ ಕೂಡ ಪೊಲೀಸ್ ಇಲಾಖೆಯಲ್ಲಿ ಮುಖ್ಯ. ಬಹಳಷ್ಟು ದೈಹಿಕ ಸದೃಢತೆ ಕಾಯ್ದುಕೊಳ್ಳಲು ಪೊಲೀಸ್ ಇಲಾಖೆಯಲ್ಲಿ ಕಾಲಾವಕಾಶ ಸಿಗುವುದಿಲ್ಲ” ಎಂದಿದ್ದಾರೆ.
“ನಮ್ಮ ಮಾನಸಿಕ ಮತ್ತು ಶಾರೀರಿಕ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬೇಕು. ಪೊಲೀಸ್ ಸಿಬ್ಬಂದಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಉತ್ತೇಜನ ಮತ್ತು ಪ್ರೋತ್ಸಾಹ ನೀಡಬೇಕು. ನಾವು ಸದೃಢವಾಗಿದ್ದರೇ, ಅದು ನಮಗೆ ಲಾಭ, ನಂತರ ನಮ್ಮ ಕುಟುಂಬಕ್ಕೆ ಆ ಬಳಿಕ ಪೊಲೀಸ್ ಇಲಾಖೆಗೆ” ಎಂದು ಹೇಳಿದ್ದಾರೆ.
“ಕೆಲಸದ ಜತೆಗೆ ದೇಹವನ್ನು ದಂಡಿಸುವ ಕೆಲಸ ಮಾಡಬೇಕು, ನಡೆದಾಡಬೇಕು. ಆಹಾರ ಕ್ರಮ ಬದಲಾವಣೆ ಮಾಡಬೇಕು. ವ್ಯಾಯಾಮ, ಆಹಾರ ಕ್ರಮ, ಜೀವನ ಶೈಲಿ ದೇಹದ ಸದೃಢತೆ ಮೇಲೆ ಪರಿಣಾಮ ಬೀರುತ್ತದೆ. ಆಹಾರ ತಜ್ಞರಿಂದ ಸಲಹೆ ಪಡೆದುಕೊಳ್ಳಬಹುದು. ಸರಿಯಾಗಿ ನಿದ್ದೆ ಮಾಡಬೇಕು. ಇವುಗಳನ್ನು ನಿರ್ವಹಣೆ ಮಾಡುವುದು ಅಸಾಧ್ಯವಾದುದಲ್ಲ. ನಮ್ಮ ಮನಸ್ಸಿಗೆ ನಾವು ದೇಹದ ಸದೃಡತೆ ಕಾಯ್ದುಕೊಳ್ಳಬೇಕು ಎಂದು ಬರಬೇಕು” ಎಂದಿದ್ದಾರೆ.
“ಪೊಲೀಸ್ ಸಮವಸ್ತ್ರದಲ್ಲಿ ಸ್ಮಾರ್ಟ್ ಆಗಿ ಕಾಣಬೇಕು. ಜನರಿಗೆ ಪೊಲೀಸರನ್ನು ನೋಡಿದರೆ ಹೆಮ್ಮೆ ಮೂಡುವಂತಾಗಬೇಕು ಎಂಬುದು ನನ್ನ ಅನಿಸಿಕೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಜ್ವಲ್‌ನ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಲು ಮೋದಿ ಸರ್ಕಾರ ಹಿಂದೇಟು ಹಾಕುತ್ತಿರುವುದೇಕೆ?
ಶೇ.87 ಪೊಲೀಸರು ಸ್ಥೂಲಕಾಯ, ಬೊಜ್ಜು ಅಥವಾ ಕಡಿಮೆ ತೂಕದಿಂದ ಬಳಲುತ್ತಿರುವುದು ಫಿಟ್ನಸ್ ಪರೀಕ್ಷೆಯಿಂದ ಬಹಿರಂಗಗೊಂಡಿದೆ. 16,296 ಪೊಲೀಸರಲ್ಲಿ 18,665 ಸಿಬ್ಬಂದಿ ಸ್ಥೂಲಕಾಯ, ಬೊಜ್ಜು ಅಥವಾ ಕಡಿಮೆ ತೂಕದಂತಹ ಅನಾರೋಗ್ಯಕರ ಬಾಡಿ ಮಾಸ್ ಇಂಡೆಕ್ಸ್(ಬಿಎಂಐ) ಹೊಂದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
16,226 ಮಂದಿ ಪೊಲೀಸರಲ್ಲಿ 7550 ಮಂದಿ ಬೊಜ್ಜು, 3746 ಮಂದಿ ಸ್ಥೂಲಕಾಯ ಹಾಗೂ 5000 ಮಂದಿ ಕಡಿಮೆ ತೂಕ ಹೊಂದಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
2369 ಪೊಲೀಸರು, ಅಂದರೆ ಕಾರ್ಯಪಡೆಯಲ್ಲಿರುವ ಶೇ.13 ರಷ್ಟು ಮಂದಿ ಮಾತ್ರ ಸಾಮಾನ್ಯ ತೂಕವನ್ನು ಹೊಂದಿದ್ದು,ದೈಹಿಕವಾಗಿ ಸದೃಢವಾಗಿದ್ದಾರೆ.