17 ವರ್ಷದ ಬಾಲಕನಿಂದ ಸಂಭವಿಸಿದ ಕಾರು ಅಪಘಾತ ಪ್ರಕರಣದಲ್ಲಿ ರಕ್ತದ ಮಾದರಿ ಮತ್ತು ಸಾಕ್ಷ್ಯ ನಾಶಪಡಿಸಿದ ಆರೋಪದ ಮೇಲೆ ಪುಣೆಯ ಸಸೂನ್ ಜನರಲ್ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಲ್ಲಿ ಆಸ್ಪತ್ರೆಯ ಫೋರೆನ್ಸಿಕ್ ವಿಭಾಗದ ಮುಖ್ಯಸ್ಥರೂ ಸೇರಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
“ಪ್ರಕರಣದಲ್ಲಿ ಆರೋಪಿ ಬಾಲಕನ ರಕ್ತದ ಮಾದರಿಯನ್ನು ತಿರುಚಿ ಮತ್ತು ಸಾಕ್ಷ್ಯ ನಾಶ ಮಾಡಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ. ಡಾ. ಅಜಯ್ ತಾವರೆ ಮತ್ತು ಶ್ರೀಹರಿ ಹಾರ್ನರ್ ಬಂಧಿತ ಆರೋಪಿಗಳು” ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 19ರ ಮುಂಜಾನೆ ಇಬ್ಬರು ಐಟಿ ಉದ್ಯೋಗಿಗಳು ತೆರಳುತ್ತಿದ್ದ ಬೈಕ್‌ಗೆ ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಅತಿ ವೇಗದ ಪೋರ್ಷೆ ಕಾರು ಢಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಇಬ್ಬರೂ ಐಟಿ ಉದ್ಯೋಗಿಗಳು ಸಾವನ್ನಪ್ಪಿದರು. ಅಪಘಾತವಾದ ಸಮಯದಲ್ಲಿ ಬಾಲಕ ಮದ್ಯಪಾನ ಮಾಡಿದ್ದನ್ನು ಎಂದು ಪೊಲೀಸರು ಹೇಳುತ್ತಾರೆ.
ಬಾಲಕನಿಗೆ ಜುವೆನೈಲ್ ಜಸ್ಟಿಸ್ ಬೋರ್ಡ್ ಜಾಮೀನು ನೀಡಿತ್ತು. ಬಳಿಕ, ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗಿತ್ತು. ನಂತರ, ಜೂನ್ 5ರವರೆಗೆ ಆತನನ್ನು ‘ಅಬ್ಸರ್ವೇಷನ್ ಹೋಮ್’ಗೆ ಕಳಿಸಲಾಗಿದೆ.
ಅಪಘಾತಕ್ಕೆ ಸಂಬಂಧಿಸಿದಂತೆ ಆರೋಪಿ ಬಾಲಕನ ತಂದೆ ಮತ್ತು ಆತನ ಅಜ್ಜನನ್ನು ಪೊಲೀಸರು ಬಂಧಿಸಿದ್ದಾರೆ.