ಲೈಂಗಿಕ ಹಗರಣಗಳ ಆರೋಪಿ ಹಾಗೂ ಜೆಡಿಎಸ್‌ನಿಂದ ಅಮಾನತುಗೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಜರ್ಮನಿಯ ಮ್ಯೂನಿಚ್‌ನಿಂದ ಬೆಂಗಳೂರಿಗೆ ಮೇ 30 ರಂದು ವಿಮಾನ ಕಾಯ್ದಿರಿಸಿದ್ದಾನೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಮೇ 31 ರಂದು ಮಧ್ಯರಾತ್ರಿ ಬರುವ ಸಂಭವವಿದೆ. ಈ ಬಗ್ಗೆ ಎಸ್‌ಐಟಿ ತಂಡ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಜ್ವಲ್ ರೇವಣ್ಣ ಬಂದಿಳಿದ ತಕ್ಷಣ ಆತನನ್ನು ಬಂಧಿಸಲು ಮೇಲ್ವಿಚಾರಣೆ ನಡೆಸುತ್ತಿದೆ.
ಪ್ರಜ್ವಲ್ ರೇವಣ್ಣನ ವಿರುದ್ಧ ಅತ್ಯಾಚಾರ ಪ್ರಕರಣ ಸೇರಿದಂತೆ ಎರಡು ಪ್ರಕರಣಗಳು ದಾಖಲಾಗಿವೆ. ಹಾಸನದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಈತ ಏ.26ರಂದು ಕರ್ನಾಟಕ ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ಮುಕ್ತಾಯಗೊಂಡ ನಂತರ ಹಾಸನದಿಂದ ಜರ್ಮನಿಗೆ ಪರಾರಿಯಾಗಿದ್ದ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಶಿಕ್ಷಣ ಕ್ಷೇತ್ರವನ್ನು ಖಾಸಗಿಯವರ ಸುಪರ್ದಿಗೊಪ್ಪಿಸುತ್ತಿದೆಯೇ ಸರಕಾರ?
ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯಗಳು ಸೇರಿದಂತೆ ನೂರಾರು ಹಗರಣಗಳು ಬೆಳಕಿಗೆ ಬಂದ ತಕ್ಷಣ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಶಿಫಾರಸ್ಸಿನ ಮನವಿಯ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್‌ಐಟಿ ತಂಡವನ್ನು ರಚಿಸಿದ್ದರು.
ಎರಡು ದಿನಗಳ ಹಿಂದಷ್ಟೆ ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದ ಪ್ರಜ್ವಲ್ ಮೇ 31 ರಂದು ತನಿಖಾ ತಂಡದ ಮುಂದೆ ಹಾಜರಾಗುವುದಾಗಿ ತಿಳಿಸಿದ್ದ. ಇದಕ್ಕೂ ಮೊದಲು ಎರಡು ಬಾರಿ ಬೆಂಗಳೂರಿಗೆ ಕಾಯ್ದಿರಿಸಿದ್ದ ವಿಮಾನದ ಟಿಕೆಟ್ ಅನ್ನು ರದ್ದುಗೊಳಿಸಿದ್ದ.
ಈ ನಡುವೆ ಎಸ್‌ಐಟಿ ತಂಡ ಹಾಸನದ ಪ್ರಜ್ವಲ್ ನಿವಾಸದಲ್ಲಿ ಮಂಗಳವಾರ ತನಿಖೆ ಕೈಗೊಂಡು ತಡರಾತ್ರಿಯವರೆಗೂ ಪರಿಶೋಧನೆ ನಡೆಸಿತು. ಈ ಸಂದರ್ಭದಲ್ಲಿ ಕೆಲವು ದೋಷಾರೋಪಣೆಯ ವಸ್ತುಗಳನ್ನು ಕೂಡ ಎಸ್‌ಐಟಿ ತಂಡ ವಶಪಡಿಸಿಕೊಂಡಿತು.
