ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಇನ್ಸ್‌ಪೆಕ್ಟರ್ ಚಂದ್ರಾಧರ್ ಎಂಬುವವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿ ಸೈಬರ್ ಕ್ರೈಂ ಠಾಣೆ ಇನ್ಸ್‌ಪೆಕ್ಟರ್ ಚಂದ್ರಾಧರ್. ಈ ಹಿಂದೆ ಬಿಟ್ ಕಾಯಿನ್ ಪ್ರಕರಣದ ತನಿಖೆ ನಡೆಸಿದ್ದರು. ಈ ಪ್ರಕರಣದಲ್ಲಿ ರಾಜಕಾರಣಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಸುಧೀರ್ಘ ವಿಚಾರಣೆ ನಡೆಸಿದ ಸಿಐಡಿ ಪೊಲೀಸರು ಚಂದ್ರಾಧರ್ ಅವರನ್ನು ಬಂಧನ ಮಾಡಿದ್ದಾರೆ.
ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನನ್ನು ಇತ್ತೀಚೆಗೆ ಸಿಐಡಿ ಬಂಧಿಸಿತ್ತು.
ಏನಿದು ಪ್ರಕರಣ?
2015ರಲ್ಲಿ ಕೆಂಪೇಗೌಡನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ಸ್ ಕೇಸ್‌ನಲ್ಲಿ ಶ್ರೀಕಿಯನ್ನು ಬಂಧಿಸಲಾಗಿತ್ತು. ಈ ಕೇಸ್ ತನಿಖೆ ವೇಳೆ ಬಿಟ್‌ಕಾಯಿನ್ ಹಗರಣ ಬೆಳಕಿಗೆ ಬಂದಿತ್ತು. 2017ರಲ್ಲಿ ತುಮಕೂರು ಪೊಲೀಸ್ ಠಾಣೆಯಲ್ಲಿ ಯುನೋ ಕಾಯಿನ್ ಕಳವು ಪ್ರಕರಣ ದಾಖಲಾಗಿತ್ತು. ಯೂನೋಕಾಯಿನ್ ಟೆಕ್ನಾಲಜೀಸ್ ಕಂಪನಿಯ ಸಹ ಸಂಸ್ಥಾಪಕ ಬಿ.ವಿ.ಹರೀಶ್ ಎಂಬವರು ಶ್ರೀಕಿ ವಿರುದ್ಧ ದೂರು ನೀಡಿದ್ದರು.
ಕಂಪನಿಯ 60.6 ಬಿಟ್ ಕಾಯಿನ್ಗಳನ್ನು ಕಳವು ಮಾಡಲಾಗಿದೆ. ಪ್ರತಿ ಬಿಟ್ ಕಾಯಿನ್ ಬೆಲೆ ₹1.67 ಲಕ್ಷದಂತೆ ಸುಮಾರು ₹1.14 ಕೋಟಿ ಮೌಲ್ಯದ ಬಿಟ್ ಕಾಯಿನ್ ಕಳವು ಮಾಡಲಾಗಿದೆ ಎಂದು ಆರೋಪಿಸಿ ಅವರು ಪ್ರಕರಣ ದಾಖಲಿಸಿದ್ದರು. 2020ರಲ್ಲಿ ಸುಮಾರು 1000 ಕೋಟಿ ಹಗರಣದ ಬಿಟ್‌ಕಾಯಿನ್ ಕೇಸ್‌ನಲ್ಲಿ ಶ್ರೀಕಿ ಬಂಧನವಾಗಿತ್ತು.
ಈ ಸುದ್ದಿ ಓದಿದ್ದೀರಾ? ‘ಯಾವುದು ಹಾಳಾಗಿಲ್ಲವೋ ಅದನ್ನು ಎಂದಿಗೂ ಸರಿಪಡಿಸಲು ಪ್ರಯತ್ನಿಸಬೇಡಿ’; ವಿದ್ಯಾರ್ಥಿನಿ ಪ್ರಾಚಿ ನಿಗಮ್
ಬಿಟ್ ಕಾಯಿನ್ ಹಗರಣದ ತನಿಖೆಯನ್ನು ಸಿಸಿಬಿ ಪೊಲೀಸರು ನಡೆಸಿ ಆರೋಪಿ ಬಂಧನ ಮಾಡಿದ್ದರು. ಆತ ಜಾಮೀನಿನ ಮೇಲೆ ಹೊರಗಡೆ ಬಂದಿದ್ದನು. ಈ ನಂತರ ಸಿಸಿಬಿ ಪೊಲೀಸರ ವಿರುದ್ಧ ದಾಖಲೆಗಳನ್ನು ತಿರುಚಿರುವ ಆರೋಪಗಳು ಕೇಳಿಬಂದಿತ್ತು. ಹಾಗಾಗಿ, ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು.