‘ಸಂಭಾವಿತನೊಬ್ಬ ನಾಪತ್ತೆಯಾಗಿದ್ದ’ ಎಂಬ ಸಾಮಾಜಿಕ ಮಾಧ್ಯಮಗಳ ಟ್ರೋಲ್‌ಗಳನ್ನು ಅಲ್ಲಗಳೆದಿರುವ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನಾವು ಯಾವಾಗಲು ಇಲ್ಲೇ ಇದ್ದೇವೆ ಎಂದು ತಿಳಿಸಿದ್ದಾರೆ.
ಏಳು ಹಂತದ ಲೋಕಸಭಾ ಚುನಾವಣೆಗಳು ಮುಗಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜೀವ್ ಕುಮಾರ್, ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮನ್ನು ‘ಲಾಪಟಾ ಜಂಟಲ್‌ಮೆನ್’(ಸಂಭಾವಿತನೊಬ್ಬ ನಾಪತ್ತೆಯಾಗಿದ್ದ)ಎಂದು ಕರೆದು ಟ್ರೋಲ್ ಮಾಡಲಾಗಿತ್ತು. ಆದರೆ ನಾವು ನಾಪತ್ತೆಯಾಗಿರಲಿಲ್ಲ. ನಾವು ಯಾವಾಗಲು ಇಲ್ಲೇ ಇದ್ದೇವೆ ಎಂದು ತಿಳಿಸಿದರು.
31.2 ಕೋಟಿ ಮಹಿಳೆಯರು ಸೇರಿ ಒಟ್ಟು 64.2 ಕೋಟಿ ಮಂದಿ ಭಾರತೀಯರು ಮತ ಚಲಾಯಿಸಿದ್ದಾರೆ. 68 ಸಾವಿರ ಮೇಲ್ವಿಚಾರಣ ತಂಡಗಳು ಹಾಗೂ 1.5 ಕೋಟಿ ಭದ್ರತಾ ಹಾಗೂ ಚುನಾವಣಾ ಅಧಿಕಾರಿಗಳು ವಿಶ್ವದ ಅತೀ ದೊಡ್ಡ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. 2024ನೇ ಸಾಲಿನ ಲೋಕಸಭಾ ಚುನಾವಣೆಯಲ್ಲಿ ಆಯೋಗವು 39 ಮರು ಚುನಾವಣೆಗಳನ್ನು ನಡೆಸಿದೆ. 2019ರಲ್ಲಿ 540 ಮರು ಚುನಾವಣೆಗಳನ್ನು ನಡೆಸಲಾಗಿತ್ತು ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.
ಬಿಸಿಲಿನ ಶಾಖದಿಂದ 33 ಚುನಾವಣಾ ಅಧಿಕಾರಿಗಳು ಮೃತಪಟ್ಟ ಕಾರಣ ಮುಂದಿನ ಲೋಕಸಭಾ ಚುನಾವಣೆಯನ್ನು ಏಪ್ರಿಲ್ ಅಂತ್ಯದ ವೇಳೆಗೆ ನಡೆಸಲಾಗುತ್ತದೆ ಎಂದು ಮುಖ್ಯ ಚುನಾವಣಾ ಆಯುಕ್ತರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹಣದ ಹರಿವು, ಆತ್ಮಹತ್ಯೆಗಳು, ಅಧಿಕಾರಸ್ಥರು ಮತ್ತು ಬಡವರು
ಒಟ್ಟಾರೆ ಮತದಾನ ಪ್ರಕ್ರಿಯೆಯು ಸಂಪೂರ್ಣ ಹುರುಪಿನಿಂದ ಕೂಡಿತ್ತು. ಎಲ್ಲ ಪಕ್ಷಗಳ ನಿಯೋಗಗಳು ತಮ್ಮ ಸಮಸ್ಯೆಗಳನ್ನು ದಾಖಲಿಸಿವೆ ಎಂದು ರಾಜೀವ್ ಕುಮಾರ್ ತಿಳಿಸಿದರು.
ಭಾರತೀಯ ಚುನಾವಣಾ ವ್ಯವಸ್ಥೆಯು ಚುನಾವಣೋತ್ತರ ಪರಿಶೀಲನೆಯನ್ನು ಅನುಮತಿಸುತ್ತದೆ. ಆದಾಗ್ಯೂ ಮತದಾರರ ಪಟ್ಟಿ ಹಾಗೂ ಚುನಾವಣಾ ಅಂಕಿಅಂಶಗಳ ಬಗ್ಗೆ ಕೆಲವರು ಸುಳ್ಳು ಮಾಹಿತಿಗಳನ್ನು ನೀಡಿದರು.
“ವ್ಯಸ್ಥೆಯಲ್ಲಿ ಒಂದು ಮಾದರಿಯಿದೆ, ಒಂದು ರಚನೆಯಿದೆ. ಆದರೆ ಟೂಲ್‌ಕಿಟ್ ಇದೆ ಎಂದು ನಾನು ಹೇಳುವುದಿಲ್ಲ.ನಾವು ಚುನಾವಣಾ ಅಂಕಿಅಂಶಗಳನ್ನು ಪ್ರಕಟಿಸಲು ತಡ ಮಾಡಲಿಲ್ಲ ಅಥವಾ ಅಂಕಿಅಂಶವನ್ನು ಬದಲಾಯಿಸಲಿಲ್ಲ.ಈಗಲೂ ಅಕ್ರಮ ಮತದಾರರ ಪಟ್ಟಿಗ ಬಗ್ಗೆ ಅಥವಾ 150 ಜಿಲ್ಲಾಧಿಕಾರಿಗಳಿಗೆ ಕರೆ ಮಾಡಲಾಗಿದೆ ಎಂದು ಮಾತನಾಡುತ್ತಿದ್ದಾರೆ. ಸುಳ್ಳು ವದಂತಿಯನ್ನು ಸರಿಪಡಿಸಲು ನಾವು ಹೋರಾಡುವುದು ಅಗತ್ಯವಾಗಿದೆ” ಎಂದು ರಾಜೀವ್ ಕುಮಾರ್ ಹೇಳಿದರು.
2024ರ ಲೋಕಸಭಾ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ವಿಚಾರವಾಗಿ 495 ದೂರುಗಳನ್ನು ಪರಿಹರಿಸಲಾಗಿದೆ. ಡೀಫ್ ಪೇಕ್ ಹಾಗೂ ಎಐ ನಿರ್ಮಿತ ಕೃತಕ ವಿಷಯಗಳ ಬೆದರಿಕೆಗಳನ್ನು ಚುನಾವಣಾ ಆಯೋಗವು ಯಶಸ್ವಿಯಾಗಿ ನಿಯಂತ್ರಿಸಿದೆ ಎಂದು ಆಯುಕ್ತರು ಹೇಳಿದರು.
