ಆರ್ಟಿಕಲ್ 370 ರದ್ದತಿ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಬಾರಿಗೆ ಚುನಾವಣೆ ನಡೆದಿದೆ. ಅದೂ, 370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ಮೇಲೆಯೇ ಜಮ್ಮು-ಕಾಶ್ಮೀರ ಮತದಾರರು ಮತ ಚಲಾಯಿಸಿದ್ದಾರೆ. ಈ ಲೋಕಸಭಾ ಚುನಾವಣೆಯ ಆ ರಾಜ್ಯಕ್ಕೆ ನಿರ್ಣಾಯಕ ಮತ್ತು ಮಹತ್ವದ್ದಾಗಿದೆ. ಚುನಾವಣಾ ಫಲಿತಾಂಶಗಳು ಆ ರಾಜ್ಯದ ರಾಜಕೀಯ ಕಾರ್ಯತಂತ್ರದಲ್ಲಿ ಬದಲಾವಣೆಯ ಅಗತ್ಯಗಳನ್ನು ಸೂಚಿಸುತ್ತಿವೆ. ಕೇಂದ್ರದಲ್ಲಿ ಎನ್‌ಡಿಎ ಅಥವಾ ‘ಇಂಡಿಯಾ’ ಒಕ್ಕೂಟ ಅಧಿಕಾರಕ್ಕೆ ಬಂದರೆ, ಅಲ್ಲಿನ ರಾಜಕೀಯ ಸಮೀಕರಣಗಳನ್ನು ವಿಭಿನ್ನವಾಗಿರಲಿವೆ. ಅಲ್ಲದೆ, ಮುಂದಿನ ವಿಧಾನಸಭಾ ಚುನಾವಣೆಯ ಭವಿಷ್ಯವೂ ನಿರ್ಧಾರವಾಗಲಿದೆ.
ಜಮ್ಮು ಮತ್ತು ಕಾಶ್ಮೀರವು ಐದು ಸಂಸದೀಯ ಸ್ಥಾನಗಳನ್ನು ಒಳಗೊಂಡಿದೆ – ಜಮ್ಮು ಪ್ರದೇಶದಲ್ಲಿ ಉಧಂಪುರ್ ಮತ್ತು ಜಮ್ಮು ಹಾಗೂ ಕಣಿವೆಯಲ್ಲಿ ಶ್ರೀನಗರ, ಬಾರಾಮುಲ್ಲಾ ಮತ್ತು ಅನಂತನಾಗ್-ರಜೌರಿ. 2019ರ ಚುನಾವಣೆಯಲ್ಲಿ, ಜಮ್ಮು ಪ್ರದೇಶದಲ್ಲಿ ಬಿಜೆಪಿ ಎರಡೂ ಸ್ಥಾನಗಳನ್ನು ಗೆದ್ದುಕೊಂಡರೆ, ಎನ್‌ಸಿ ಎಲ್ಲ ಮೂರು ಕಣಿವೆ ಸ್ಥಾನಗಳನ್ನು ಗೆದ್ದಿತ್ತು.
ಆದರೆ, 2019ರಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370ಯನ್ನು ರದ್ದುಗೊಳಿಸಿತು. ಇದು, ರಾಜ್ಯದಲ್ಲಿ ವಿರೋಧ ಮತ್ತು ಅಶಾಂತಿಯನ್ನು ಸೃಷ್ಠಿಸಿತ್ತು. ಅದಾಗ್ಯೂ, ಕಾಶ್ಮೀರಿ ಜನರು 370 ವಿಧಿಯ ರದ್ದತಿ ಪರವಾಗಿದ್ದಾರೆ. ನಮ್ಮನ್ನು ಬೆಂಬಲಿಸಿದ್ದಾರೆ ಎಂದು ಹೇಳಿಕೊಂಡಿತ್ತು. ಆದರೆ, ಈಗವರೆಗೆ ವಿಧಾನಸಭಾ ಚುನಾವಣೆ ಸೇರಿದಂತೆ ಯಾವುದೇ ಸ್ಥಳೀಯ ಚುನಾವನೆಗಳನ್ನೂ ನಡೆಸಲಾಗಿಲ್ಲ.
370ನೇ ವಿಧಿ ರದ್ದಾದ ಬಳಿಕ, ಮೊದಲ ಬಾರಿಗೆ ಚುನಾವಣೆ ನಡೆದಿದ್ದು, ಜನರು 370ನೇ ವಿಧಿ ರದ್ದತಿಗೆ ತಮ್ಮ ಸಮ್ಮತಿ ಇತ್ತೇ, ಇಲ್ಲವೇ ಎಂಬುದನ್ನು ತಮ್ಮ ಮತಗಳಲ್ಲಿ ಸೂಚಿಸಿದ್ದಾರೆ. ವಿಶೇಷವೆಂದರೆ, ಚುನಾವಣೆಗೂ ಮುನ್ನವೇ ಸೋಲೊಪ್ಪಿಕೊಂಡಿರುವ ಬಿಜೆಪಿ, ಶ್ರೀನಗರ ಕಣಿವೆ ಪ್ರದೇಶದ ಮೂರು ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿಲ್ಲ. ಮೈತ್ರಿ ಪಾಲುದಾರರಿಗೆ ಬೆಂಬಲ ಸೂಚಿಸುವುದಾಗಿ ಹೇಳಿ ಜಾರಿಕೊಂಡಿದೆ.
ಈ ನಡುವೆ, ಮೂರು ದಶಕಗಳ ಬಳಿಕ ಕಾಶ್ಮೀರದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ. J&K ಐದು ಸಂಸದೀಯ ಸ್ಥಾನಗಳಲ್ಲಿ ಒಟ್ಟು 58.11%ರಷ್ಟು ಮತದಾನ ನಡೆದಿದೆ. ಇದು ಕಳೆದ 35 ವರ್ಷಗಳಲ್ಲಿ ಅತ್ಯಧಿಕ ಮತದಾನವಾಗಿದೆ.
ಮಂಗಳವಾರ ಮತ ಎಣಿಕೆ ಆರಂಭವಾಗಿದ್ದು, ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಮತ್ತು ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಸೇರಿದಂತೆ 100 ಅಭ್ಯರ್ಥಿಗಳು ಕಣದಲ್ಲಿದ್ದು, ಯಾರು ಸಂಸತ್ ಪ್ರವೇಶಿಸಲಿದ್ದಾರೆ ಎಂಬುದು ನಿರ್ಧಾರವಾಗಿದೆ.
ಮೂರು ಕಣಿವೆ ಸ್ಥಾನಗಳ ಪೈಕಿ, ಮೂರನ್ನು ಎನ್‌ಸಿ ಗೆಲ್ಲಬಹುದು ಅಥವಾ ಎನ್‌ಸಿ ಎರಡು ಮತ್ತು ಪಿಡಿಪಿ ಒಂದನ್ನು ಗೆಲ್ಲಬಹುದು. ಈ ಎರಡೂ ಪಕ್ಷಗಳು ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿದ್ದು, ಮೂರೂ ಸ್ಥಾನಗಳು ಇಂಡಿಯಾ ಕೂಟದ ಪಾಲಾಗಲಿವೆ. ಜಮ್ಮುವಿನ 2 ಸ್ಥಾನಗಳಲ್ಲಿ ‘ಇಂಡಿಯಾ’ ಕೂಟದ ಅಭ್ಯರ್ಥಿಗಳೇ ಗೆಲ್ಲುವ ಸಾಧ್ಯತೆಗಳು ದಟ್ಟವಾಗಿವೆ.