ಆಂಧ್ರ ಪ್ರದೇಶದ ವಿಧಾನಸಭೆ ಚುನಾವಣೆಯ ಜೊತೆ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಸಾಧನೆ ಮಾಡಿರುವ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದಲ್ಲೇ ಉಳಿಯುವುದಾಗಿ ಪುನರುಚ್ಚರಿಸಿದ್ದಾರೆ.
ಮೂಲಗಳ ಪ್ರಕಾರ ಚಂದ್ರಬಾಬು ನಾಯ್ಡು ಇಂದು ನಡೆಯುವ ಉನ್ನತ ಮಟ್ಟದ ಎನ್‌ಡಿಎ ಸಭೆಯಲ್ಲಿ ನೂತನ ಸರ್ಕಾರದಲ್ಲಿ ಟಿಡಿಪಿ ಪಕ್ಷಕ್ಕೆ ಸ್ಪೀಕರ್ ಹುದ್ದೆ ಕೇಳುವ ಸಾಧ್ಯತೆಯಿದೆ.
ಇಲ್ಲಿಯವರೆಗೂ ಇಂಡಿಯಾ ಒಕ್ಕೂಡದ ಯಾವೊಬ್ಬ ನಾಯಕರು ನಾಯ್ಡು ಅವರೊಂದಿಗೆ ಮಾತುಕತೆ ನಡೆಸಿಲ್ಲ. ಆದಾಗ್ಯೂ ಕೆಲವರನ್ನು ಟಿಡಿಪಿ ಮುಖ್ಯಸ್ಥರ ಬಳಿ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ದೆಹಲಿಗೆ ಹೋಗುವ ಮುನ್ನ ಚಂದ್ರಬಾಬು ನಾಯ್ಡು ಅವರು ವಿಜಯವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. “ನಾನೊಬ್ಬ ಅನುಭವಿ. ನಾನು ಈ ದೇಶದಲ್ಲಿ ಹಲವು ಬದಲಾವಣೆಗಳನ್ನು ನೋಡಿದ್ದೇನೆ. ನಾನು ಎನ್‌ಡಿಎ ಜೊತೆಗಿರುತ್ತೇನೆ. ದೆಹಲಿಗೆ ಎನ್‌ಡಿಎ ಸಭೆಯಲ್ಲಿ ಪಾಲ್ಗೊಳ್ಳಲು ಹೋಗುತ್ತೇನೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವದ ಮೇಲೆ ಸವಾರಿ ಮಾಡುವವರಿಗೆ ಪಾಠ ಕಲಿಸಿದ ಫಲಿತಾಂಶ
“ಚುನಾವಣೆ ಮುಗಿದ ನಂತರ ದೆಹಲಿಗೆ ಹೋಗುವ ಮುನ್ನ ಇದು ನನ್ನ ಮೊದಲ ಪತ್ರಿಕಾಗೋಷ್ಠಿಯಾಗಿದೆ. ನಮ್ಮನ್ನು ಬೆಂಬಲಿಸಿದ್ದಕ್ಕೆ ಮತದಾರರಿಗೆ ಧನ್ಯವಾದ ತಿಳಿಸುತ್ತೇನೆ. ರಾಜಕೀಯದಲ್ಲಿ ಏರಿಳಿತಗಳು ಸಾಮಾನ್ಯ. ಇತಿಹಾಸದಲ್ಲಿ ಹಲವು ರಾಜಕೀಯ ನಾಯಕರು ಹಾಗೂ ಪಕ್ಷಗಳನ್ನು ತಿರಸ್ಕರಿಸಲಾಗಿದೆ. ಇದೊಂದು ಐತಿಹಾಸಿಕ ಚುನಾವಣೆ. ವಿದೇಶದಲ್ಲಿರುವ ಮತದಾರರು ಕೂಡ ತಮ್ಮ ಊರಿಗೆ ಆಗಮಿಸಿ ಮತ ಚಲಾಯಿಸಿದ್ದಾರೆ” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷಕ್ಕೂ ಟಿಡಿಪಿ ಮುಖ್ಯಸ್ಥರು ಧನ್ಯವಾದ ಸಲ್ಲಿಸಿದರು. ರಾಜ್ಯವನ್ನು ಉಳಿಸಲು ಜನಸೇನಾ ಮುಖ್ಯಸ್ಥರು ಜವಾಬ್ದಾರಿ ತೆಗೆದುಕೊಂಡಿದ್ದರು ಎಂದು ತಿಳಿಸಿದರು.
