ವಿಶ್ಲೇಷಣೆ | ಹಿಂದುತ್ವ ರಾಜಕಾರಣಕ್ಕೆ ಶ್ರೀರಾಮನ ಆಶೀರ್ವಾದವಿಲ್ಲ!

Date:

Advertisements
ಅಯೋಧ್ಯೆಯಲ್ಲಿ ಭವ್ಯ ಮಂದಿರವ ಕಟ್ಟಿ ಜಗವೆಲ್ಲಾ ಕೊಂಡಾಡಿದರೂ ಶ್ರೀರಾಮ ಒಲಿಯಲಿಲ್ಲವೇಕೆ? ನಾನೂರಕ್ಕೂ ಹೆಚ್ಚೆಂದು ಕಂಠಪಾಠ ಮಾಡಿಸಿದರೂ ಮತ ಹಾಕುವಾಗ ಜನ ಮರೆತುಬಿಟ್ಟರಲ್ಲ; ರಾಮ ರಾಮ!!


ಈಶ್ವರನೇ
ಆದ ಅಲ್ಲಾಹನ ಗುಡಿ ಕೆಡವಿ, ಒಂದು ಜನಾಂಗದ ನಂಬಿಕೆಯನಳಿಸಿದ ಪಳೆಯುಳಿಕೆಯ ಮೇಲೆ ನಿನಗೆ ಮಂದಿರವ ಕಟ್ಟಿ ಅಪಚಾರ ಮಾಡಿದರೆಂದು ಕೋಪವೇ? ಅಥವಾ ನಿನ್ನ ಜೈಕಾರದೊಂದಿಗೆ ಬಸುರಿಯನೊದ್ದು ಕೊಲೆಗೈದರೆಂದು ತಾಪವೇ ಪುರುಷೋತ್ತಮ? ನಿನ್ನ ನೆಲೆಯಲ್ಲಿಯೇ ನಿನ್ನ ಕೈಹಿಡಿದು ತಂದವರನ್ನು ಆಶೀರ್ವದಿಸಲಿಲ್ಲ – ಯಾಕೆ ರಾಮ?

ಈ ಪ್ರಶ್ನೆಗಳನ್ನು ಕೇಳಿಕೊಂಡು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿರುವುದು ಕೇವಲ ಗುಡಿ ಕೆಡವಿ ಕಟ್ಟಿದವರು ಮಾತ್ರವಲ್ಲ, ಅವರೊಂದಿಗೆ ಜೈಕಾರ ಮಾಡಿದ ನಾವೆಲ್ಲರೂ ಸಹ ಪಾಲು ಹೊಂದಿದ್ದೆವೆ.

ಸಂವಿಧಾನ ರಕ್ಷಣೆಯು 2024ರ ಲೋಕಸಭಾ ಚುನಾವಣೆಯ ಮುಖ್ಯ ಭೂಮಿಕೆಯಾಗಿ ಹಿಂದಿನ ಆಡಳಿತ ಸರ್ಕಾರ ಮತ್ತು ಜನರ ನಡುವಿನ ಕದನವಾಗಿ ಮಾರ್ಪಟ್ಟು ವಿಶೇಷತೆ ಪಡೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ, ಚುನಾವಣೆ ಫಲಿತಾಂಶ ಕುರಿತು ಜನರಲ್ಲಿ ವಿಶೇಷ ಕುತೂಹಲದ್ದರೂ, ಆ ದಿನಕ್ಕೆ ಜನ ಸಹನೆಯಿಂದ ಕಾದಿದ್ದರು. ಆದರೆ, ಈ ಸಹನೆ ಚುನಾವಣಾ ಫಲಿತಾಂಶದ ವಿಶ್ಲೇಷಣೆಯ ಪಂಡಿತರುಗಳಿಗೆ ಮತ್ತು ಪಕ್ಷಗಳಿಗೆ ಇಲ್ಲವಾಗಿತ್ತು. ಎಡ-ಬಲ ಪಂಥೀಯರೆನ್ನದೆ ಈ ಎಲ್ಲಾ ಪಂಡಿತರ ಅಂಕಿಮಗ್ಗಿಯ ಗೋಜಲಿನಲ್ಲಿ ಜನ ಹೈರಾಣಾದರು. ಕೆಲ ಮಹಾ ಪಂಡಿತರಂತೂ ಇದೇ ಗ್ಯಾರಂಟಿ ಸಂಖ್ಯೆ ಬರೆದಿಟ್ಟುಕೊಳ್ಳಿ ಎಂದರು. ಮತಪೆಟ್ಟಿಗೆ ತೆರೆದು ತೋರುವ ನಿಜ ಸಂಖ್ಯೆಗಿಂತ ಎಕ್ಕಸಕ್ಕ ಮಾಡಿದ ಮತಗಟ್ಟೆಯ ಖೊಟ್ಟಿ ಫಲಿತಾಂಶದಿಂದ ಉಪಯೋಗವೇನು ಇಲ್ಲವಾದರೂ, ಅದು ಆಡಳಿತರೂಢರು ಜನರ ದಿಕ್ಕು ತಪ್ಪಿಸಲು ಮಾಡಿದ ಕೊನೆ ಪ್ರಯತ್ನವಾಗಿತ್ತು.

ಅದೇನೆ ಇರಲಿ, ಮತದಾರರ ಮನಸ್ಸಿನಲ್ಲೇನಿದೆ ಎಂದು ಖಚಿತಪಡಿಸಲು ಪಂಡಿತರು ವಿಶ್ಲೇಷಿಸುವುದಾಗಲಿ ಅಥವಾ ಅವರನ್ನು ಧರ್ಮ ದೇವರ ಭಾವುಕತೆಯಲ್ಲಿ ನಿರಂತರ ಮುಳುಗಿಸಲು ಸಾಧ್ಯವಿಲ್ಲವೆಂದು ಈ ಚುನಾವಣಾ ಫಲಿತಾಂಶವು ಸಾಬಿತು ಮಾಡಿದೆ. 400ಕ್ಕಿಂತ ಹೆಚ್ಚು ಸ್ಥಾನಗಳು ನನ್ನದಾಗಿದೆಯೆಂದು ಬಿಜೆಪಿ ತನಗೆ ತಾನೇ ಘೋಷಿಸಿಕೊಂಡರೆ ಮುಗಿಯಲಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಭುವಾಗಿರುವ ಮತದಾರರು ಆ ಮತವನ್ನು ನೀಡುವ ಅಥವಾ ನೀಡದಿರುವ ಸ್ವಾತಂತ್ಯ್ರ ಹೊಂದಿದ ಕಾರಣಕ್ಕೆ ಹೊರಬಂದ ಫಲಿತಾಂಶ ಇದಾಗಿದೆ. ನಾಲ್ಕುನೂರಿರಲಿ, ಸರ್ಕಾರ ರಚಿಸಲು ಬೇಕಾದ ಕನಿಷ್ಠ ಮತಗಳೂ ಸಿಗದೆ, ಈಗ ಬೇರೆ ಪಕ್ಷಗಳ ಬೆಂಬಲ ಬೇಡುವ ಪರಿಸ್ಥಿತಿ ಎದುರಾಗಿದೆ ಬಿಜೆಪಿಗೆ. ಆಂದ್ರದ ತೆಲುಗು ದೇಶಂ ಮತ್ತು ಬಿಹಾರದ ಜೆಡಿಯು ಪಕ್ಷಗಳ ಕೃಪಾಕಟಾಕ್ಷ ಇವರಿಗಿದೆಯೇ ಅಥವಾ ಅವರು ಮನಸ್ಸು ಬದಲಾಯಿಸಿದರೆ ಬಿಜೆಪಿ ಸ್ಥಿತಿ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Advertisements
Bose Military School

ಜನರು ಧರ್ಮ-ರಾಜಕಾರಣವನ್ನು ಧಿಕ್ಕರಿಸಿದ ರೀತಿಯನ್ನು ಉತ್ತರ ಪ್ರದೇಶದ ಒಂದು ರಾಜ್ಯದಲ್ಲಿಯೇ ನೋಡಬಹುದಾಗಿದೆ. ಒಟ್ಟು 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶವು ದೇಶದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯ ಸಂಸದರನ್ನು ಹೊಂದಿರುವ ರಾಜ್ಯವಾಗಿದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರದ ರಚನೆಯಲ್ಲಿ ಉತ್ತರ ಪ್ರದೇಶವು ಮಹತ್ತರ ಪಾತ್ರವನ್ನು ವಹಿಸುತ್ತಾ ಬಂದಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಒಟ್ಟು 60 ಸ್ಥಾನಗಳನ್ನು ಗೆದ್ದಿತ್ತು. ಕಳೆದ ಹತ್ತು ವರ್ಷಗಳಲ್ಲಿ ಹಿಂದುತ್ವದ ಎಲ್ಲಾ ಮಾದರಿಗಳನ್ನು ಜಾರಿಗೊಳಿಸಿದ ಈ ರಾಜ್ಯದಲ್ಲಿ ಆರೆಸ್ಸೆಸ್‌ ಮತ್ತು ವಿಶ್ವ ಹಿಂದು ಪರಿಷತ್‍ನ ಕರಸೇವಕರು 1992 ರಲ್ಲಿ ಅಯೋಧ್ಯೆಯ (ಫೈಜಾಬಾದ್ ಲೋಕಸಭಾ ಕ್ಷೇತ್ರ) ಬಾಬ್ರಿ ಮಸೀದಿಯನ್ನು ದ್ವಂಸಗೊಳಿಸಿದ್ದರು. ಅದು ಹಿಂದಿನಿಂದಲೂ ಬಾಲ ರಾಮನ ದೇವಸ್ಥಾನವಾಗಿತ್ತೆಂದು ಅವರ ವಾದ. ಆ ಜಾಗದಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಬಾಲರಾಮನ ಭವ್ಯ ಮಂದಿರವನ್ನು ಕಟ್ಟಿ ಅದನ್ನು ಹಿಂದಿನ ಪ್ರಧಾನ ಮಂತ್ರಿಗಳಾದ ಮೋದಿಯವರು ಕಳೆದ ಜನವರಿಯಲ್ಲಿ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ್ದನ್ನು ಮಾಧ್ಯಮಗಳು ದೊಡ್ಡ ಸಾಧನೆಯೆಂದು ನಿರಂತರ ಬಿತ್ತರಿಸಿದ್ದವು.

ಇದು ಇಡೀ ಹಿಂದು ಸಮುದಾಯದಲ್ಲಿ ಹೊಸ ಸಂಚಲನವನ್ನು ಮೂಡಿಸಿ 2024ರ ಲೋಕಸಭಾ ಚುನಾವಣೆಯಲ್ಲಿ ಭಾರೀ ಯಶಸ್ಸನ್ನು ತಂದುಕೊಡುತ್ತದೆಂದು ಗೋದಿ ಮಾಧ್ಯಮಗಳು ಚುನಾವಣೆಯ ಮೊದಲೇ ಬಿಜೆಪಿ ಜಯಭೇರಿಯನ್ನು ಮೊಳಗಿಸಿದ್ದವು. ಇದರ ರಾಜಕೀಯ ಉಪಯೋಗ ಪಡೆದುಕೊಳ್ಳುವ ಸಲುವಾಗಿ ಮೋದಿಯವರು ‘ಈ ಸಾರಿ ನಾನೂರಕ್ಕು ಹೆಚ್ಚು’ ಸ್ಥಾನಗಳು ಎಂಬುದನ್ನು ಚುನಾವಣಾ ಘೋಷಣೆಯನ್ನಾಗಿ ಮಾಡಿಕೊಂಡರು. ಚುನಾವಣೆ ನಡೆಸುವ ಅವಶ್ಯಕತೆ ಇದೆಯೇ ಎಂಬಂತಹ ವಿಚಾರಗಳು ವಾಟ್ಸಪ್‌ನಲ್ಲಿ ಹರಿದಾಡಿದವು. ಸಂವಿಧಾನವನ್ನು ಬದಲಿಸಲು 400 ಸ್ಥಾನಗಳನ್ನು ಬೇಕು ಎಂಬ ಮಾತುಗಳೂ ಸಹ ವ್ಯಕ್ತಗೊಂಡವು. ಶ್ರೀರಾಮನನ್ನು ಬಹುವಾಗಿ ಚುನಾವಣಾ ಪ್ರಚಾರದಲ್ಲಿ ಬಳಸಿಕೊಳ್ಳುವ ಮೂಲಕ ಹಿಂದುಗಳನ್ನು ಭಾವನಾತ್ಮಕವಾಗಿ ಪ್ರಭಾವಗೊಳಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ, ಜನರು ಅವರ ನಂಬಿಕೆಯನ್ನು ಹುಸಿಗೊಳಿಸಿದ್ದು, ಧರ್ಮವನ್ನು ರಾಜಕೀಯದಿಂದ ಪ್ರತ್ಯೇಕಿಸುವಂತಹ ಸಂವಿಧಾನಾತ್ಮಕ ನೆಲೆಯ ತೀರ್ಮಾನ ನೀಡಿದ್ದಾರೆ.

ತಮ್ಮ ಹಿಂದುತ್ವ ಕಾರ್ಯಗಳಿಂದಾಗಿ ಈ ರಾಜ್ಯದಲ್ಲಿ ಸುಮಾರು 70ಕ್ಕೂ ಹೆಚ್ಚು ಸ್ಥಾನಗಳನ್ನು ನಿರೀಕ್ಷಿಸಿದ್ದ ಬಿಜೆಪಿಯು ಕೇವಲ 33 ಸ್ಥಾನಗಳನ್ನು ಮಾತ್ರ ಪಡೆದಿದ್ದರೆ, ಇಂಡಿಯಾ ಮೈತ್ರಿ ಕೂಟವು (ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ಸ್) ಒಟ್ಟು 44 ಸ್ಥಾನಗಳನ್ನು ಗಳಿಸಿರುತ್ತದೆ. ರಾಜಕೀಯದಲ್ಲಿ ಧರ್ಮವನ್ನು ತಂದು ಹಿಂದು ಮುಸ್ಲಿಂ ದ್ವೇಷದ ಹೆಚ್ಚು ಹಿಂಸೆಗಳು ನಡೆದ ಈ ರಾಜ್ಯದಲ್ಲಿ ಜನರು ನೀಡಿದ ತೀರ್ಪುಗಳು ಧರ್ಮವನ್ನು ರಾಜಕೀಯದಲ್ಲಿ ಬೆರೆಸುವುದು ಅವರಿಗೆ ಬೇಡವಾಗಿದೆ ಎನ್ನುವುದನ್ನು ಖಾತ್ರಿಗೊಳಿಸುತ್ತದೆ. ಈ ರಾಜ್ಯದಲ್ಲಿನ ಕೆಲವು ಫಲಿತಾಂಶಗಳನ್ನು ಅವಲೋಕಿಸಿದರೆ ಜನರಿಗೆ ಯಾವುದು ಮುಖ್ಯವಾಗಿತ್ತೆಂದು ತಿಳಿಯುತ್ತದೆ.

ಪಪ್ಪು ಎಂದು ಹೀಯಾಳಿಸಿಕೊಳ್ಳುತ್ತಿದ್ದ ಕಾಂಗ್ರೆಸ್ಸಿನ ರಾಹುಲ್ ಗಾಂಧಿಯವರು ಉತ್ತರ ಪ್ರದೇಶದ ರಾಯ್‍ಬರೇಲಿ ಕ್ಷೇತ್ರದಿಂದ ಸುಮಾರು 4.5 ಲಕ್ಷ ಮತಗಳ ಅಂತರದಲ್ಲಿ ಗೆದ್ದರೆ, ವಿಶ್ವಗುರುಗಳಾದ ನಮ್ಮ ದೇವಮಾನವ ಮೋದಿಜಿಯವರು 1.5 ಲಕ್ಷ ಅಂತರದಲ್ಲಿ ವಾರಣಾಸಿ ಕ್ಷೇತ್ರದಿಂದ ಗೆದ್ದಿರುವುದು ಹರನ ದಯವೋ ಹರಿಯ ದಯವೋ ತಿಳಿಯುತ್ತಿಲ್ಲ. ಅಂತೆಯೇ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದ ಬಿಜೆಪಿಯ ಅತ್ಯಂತ ಸಬಲಿತ ಮಹಿಳೆಯಾದ ಸ್ಮೃತಿ ಇರಾನಿಯವರು ರಾಹುಲ್ ಗಾಂಧಿಯವರನ್ನು ‘ಹೆದರಿ ಓಡದಿರಿ ನನ್ನನ್ನು ಎದುರಿಸಿ’ ಎಂದೆಲ್ಲಾ ಹಂಗಿಸಿ ಕೊನೆಗೆ ರಾಹುಲ್ ಅವರ ಸಹಾಯಕ ಕಿಶೋರಿ ಲಾಲ್ ಶರ್ಮಾ ಎದುರು ಹೆಚ್ಚು ಮತಗಳ ಅಂತರದಲ್ಲಿ ಸೋತಿದ್ದಾರೆ!. ಬಹುಶಃ ಅಲ್ಲಿನ ಮತದಾರರಿಗೆ ಇರಿಯುವಂತಹ ಭಾಷಣ ಮಾಡುವ ಇರಾನಿಯವರು ಅವರ ಬದುಕಿಗೊಂದು ಕಾಯಕದ ದಾರಿ ತೋರುವ ಕೆಲಸ ಮಾಡಲಿಲ್ಲವೆಂಬ ಕೊರಗು ಮತ ಹಾಕುವ ಸಮಯದಲ್ಲಿ ಕಾಡಿದ್ದಿರಬಹುದು.

ಉತ್ತರ ಪ್ರದೇಶದ ಫೈಜಾಬಾದ್ ಲೋಕಸಭಾ ಕ್ಷೇತ್ರದಡಿಯಲ್ಲಿ ಅಯೋಧ್ಯೆ ಇದೆ. ಹಿಂದೆ ಎರಡು ಬಾರಿ ಗೆದ್ದಿದ್ದ ಬಿಜೆಪಿಯ ಲಲ್ಲು ಸಿಂಗ್‍ರವರು ಈ ಕ್ಷೇತ್ರದಿಂದ ಸ್ಪರ್ಧಿಸಿ, ಸಮಾಜವಾದಿ ಪಕ್ಷದ ಅವಧೇಶ್ ಪ್ರಸಾದ್ ಎಂಬ ದಲಿತ ಉಮೇದುವಾರರ ಎದುರು ಸೋತಿದ್ದಾರೆ!. ಮೊದಲ ಬಾರಿಗೆ ಸಂಸದ ಸ್ಥಾನಕ್ಕೆ ಸ್ಪರ್ಧಿಸಿರುವ ಅವಧೇಶ್ ಪ್ರಸಾದ್ ಕುರಿತು ಗೋದಿ ಮೀಡಿಯಾಗಳು ಯಾವ ಪ್ರಚಾರ ನೀಡಿರಲಿಲ್ಲವಾದರೂ, ಜನರೇ ಇವರನ್ನು ಗುರುತಿಸಿ ಮತ ನೀಡಿರುವುದು ಅಯೋಧ್ಯೆಯ ಬಾಲ ರಾಮನ ಕೃಪಾಕಟಾಕ್ಷವೇ ಇರಬಹುದು.

ಅಂತೆಯೆ, ತೆಲ್ಲಾಂಗಾಣದ ಹೈದಾರಾಬಾದ್ ಕ್ಷೇತ್ರದ ಬಿಜೆಪಿಯ ಕೊಂಪೆಲ್ಲಾ ಮಾಧವಿ ಲತಾ ಇವರು ತಮ್ಮ ಪ್ರಚಾರದ ಸಮಯದಲ್ಲಿ ಮತದಾರರಿಗೆ ಹರಿಸಿದ ಕರುಣೆ, ಇವರ ಅಧ್ಯಾತ್ಮಿಕತೆಯ ಭಕ್ತಿಭಾವಗಳಲ್ಲಿ ಮತದಾರರು ಕರಗಿಯೇ ಹೋಗಿದ್ದರು ಎಂದುಕೊಂಡಿದ್ದವರಿಗೆ, ಮಾಧವಿಯವರ ಸೋಲು ದೊಡ್ಡ ಆಘಾತ ನೀಡಿದೆ. ಕರ್ನಾಟಕದಲ್ಲಿ ಮಹಿಳೆಯರನ್ನು ಗೌರವಿಸದ ಹಾಸನದ ಉಮೇದುವಾರನನ್ನು ಧಿಕ್ಕರಿಸುವ ಮೂಲಕ ಮತದಾರರು ಅಲ್ಲಿನ ನೊಂದ ಮಹಿಳೆಯರ ಪರವಿದ್ದಾರೆ ಎಂಬುದು ವ್ಯಕ್ತಗೊಂಡಿದೆ.

ಒಟ್ಟರೆಯಾಗಿ ಈ ಫಲಿತಾಂಶವು ಧರ್ಮ-ದೇವರು ಹೆಸರಿನಲ್ಲಿ ನಡೆಸುವ ರಾಜಕಾರಣವನ್ನು ಜನ ಒಪ್ಪುವುದಿಲ್ಲವೆಂದೂ, ಜನರ ಚಿಂತನೆಗಳು ನಮ್ಮ ಸಂವಿಧಾನದ ತತ್ವಗಳಾದ ಸಾರ್ವಭೌಮತ್ವ, ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯದ ಪರವಾಗಿದೆ ಎಂಬುದರ ಸಂಕೇತವಾಗಿದೆ. ದೇಶದ ಪ್ರಧಾನಿಗಳು ಧರ್ಮದ ಹೆಸರಿನಲ್ಲಿ ಮತ ಸೆಳೆಯಲು ಮಾಡಿದ ಸಣ್ಣತನದ ಭಾಷಣಗಳಿಂದ ಜನರು ಪ್ರಭಾವಿತರಾಗಲಿಲ್ಲ ಎನ್ನುವುದು ಭವಿಷ್ಯದ ಭರವಸೆಯಾಗಿದೆ. ಜನರಿಗೆ ದೇವರು ಪ್ರಸಾದಿಸಿದ ನಾಯಕ ಬೇಕಾಗಿಲ್ಲ, ಬದಲಿಗೆ ಸಹಜವಾಗಿ ತಾಯಿಯ ಗರ್ಭದಿಂದ ಜನಿಸಿದ ಮತ್ತು ಜನಹಿತ ಬಯಸುವ ನಾಯಕ ಬೇಕಾಗಿದ್ದಾನೆ ಎಂಬುದುನ್ನು ಸರಳವಾಗಿ ತಿಳಿಸಿದ್ದಾರೆ.

ಹತ್ತಾರು ಕ್ಯಾಮೆರಾಗಳ ಮುಂದೆ ಧ್ಯಾನ ಮಾಡಿ ಜನರನ್ನು ನಂಬಿಸಬಹುದು ಎನ್ನುವ ಕಲ್ಪನೆಯೇ ಮೂರ್ಖತನದ ಪರಮಾವಧಿ ಎಂಬುದನ್ನು ಜನ ತಮ್ಮ ಮತದಾನದ ಮೂಲಕ ಹೇಳಿದ್ದಾರೆ. ಸರ್ವಾಧಿಕಾರದ ಹವಣಿಕೆಯಲ್ಲಿರುವ ಒಂದು ಸರ್ಕಾರದ ಹಣ, ಆಮೀಷ, ಅಧಿಕಾರ, ದೌರ್ಜನ್ಯ, ಸ್ವಪ್ರಚಾರ, ಸುಳ್ಳುಗಳು – ಇವುಗಳೆಲ್ಲದರ ಒತ್ತಡ ಮತ್ತು ದಬ್ಬಾಳಿಕೆಗಳನ್ನು ಮೀರಿ ಜನತೆ ನಿಲ್ಲುತ್ತದೆ ಹಾಗೂ ತಮ್ಮಿ ಶಕ್ತಿಯಲ್ಲಿ ಸಂವಿಧಾನ ಸುರಕ್ಷಿತವಾಗಿರುತ್ತದೆ ಎಂಬುದನ್ನು ಈ ಫಲಿತಾಂಶವು ತೋರಿಸಿದೆ.

ಇದನ್ನೂ ಓದಿ ವಿಶ್ಲೇಷಣೆ | ಸಂವಿಧಾನದ ಮುಂದೆ ಧರ್ಮ ರಾಜಕಾರಣಕ್ಕೆ ತಾತ್ಕಾಲಿಕ ಸೋಲಾಗಿದೆ

ರಾಜಕಾರಣದಲ್ಲಿ ಧರ್ಮ ತರುವುದನ್ನು ಹಿಂದಿನ ಅನೇಕ ಸರ್ಕಾರಗಳು ಮಾಡಿವೆಯಾದರೂ, ಕಳೆದ ಹತ್ತು ವರ್ಷಗಳಲ್ಲಿ ಧರ್ಮ ಮತ್ತು ಜನರ ಭಾವನೆಯನ್ನು ಬಳಸಿಕೊಂಡು ಸಮಾಜದಲ್ಲಿ ದ್ವೇಷ ಬಿತ್ತಿ ಬೆಳೆಸಿರುವ ಒಡಕನ್ನು ಸರಿಪಡಿಸಲು ದಶಕಗಳೇ ಬೇಕಾಗಬಹುದು. 2024 ರ ಚುನಾವಣಾ ಫಲಿತಾಂಶವು ಜನರನ್ನು ನಿರಂತರ ಮೂರ್ಖರನ್ನಾಗಿಸಲು ಸಾಧ್ಯವಿಲ್ಲವೆಂದು ಮತ್ತು ಜನಸಾಮಾನ್ಯರಿಗೆ ಧರ್ಮ, ದೇವರು, ಮಂದಿರ ಇವೆಲ್ಲಕ್ಕಿಂತ ಹೆಚ್ಚಾಗಿ ತಮ್ಮ ಬದುಕಿನ ಮೂಲಭೂತ ಅವಶ್ಯಕತೆಗಳು ಮೊದಲ ಆದ್ಯತೆಯಾಗಿವೆ ಎಂಬುದನ್ನು ಸಾಬೀತುಪಡಿಸಿದೆ.

ಮುಂದಿನ ಸರ್ಕಾರವನ್ನು ರಚಿಸುವ ಯಾವುದೇ ಪಕ್ಷಗಳು ಈ ಫಲಿತಾಂಶದಿಂದ ಕಲಿಕೆಗಳನ್ನು ಪಡೆದುಕೊಳ್ಳಬೇಕಾಗಿದೆ; ‘ಧರ್ಮವು ಕುಟುಂಬ ಮತ್ತು ಸಮಾಜದೊಳಗಿರುತ್ತದೆ, ಅದನ್ನು ಸಂಸತ್ತಿನೊಳಗೆ ಅನಾವಶ್ಯಕ ತರಬೇಕಾಗಿಲ್ಲ’ ಎಂಬುದು ಮುಖ್ಯ ಕಲಿಕೆಯಾಗಿದೆ.

ಲತಾಮಾಲ
ಲತಾಮಾಲ
+ posts

ಗ್ರಾಮೀಣಾಭಿವೃದ್ಧಿ ತಜ್ಞರು ಮತ್ತು ಲೇಖಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಲತಾಮಾಲ
ಲತಾಮಾಲ
ಗ್ರಾಮೀಣಾಭಿವೃದ್ಧಿ ತಜ್ಞರು ಮತ್ತು ಲೇಖಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements
Advertisements
Advertisements

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಕೂಗು: ಏನದು ಸೆಪ್ಟೆಂಬರ್ ಕ್ರಾಂತಿ?

ಸೆಪ್ಟೆಂಬರ್ ಕ್ರಾಂತಿಯ ಕುತೂಹಲ ಹೆಚ್ಚಾಗಿದೆ. ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಕೂಗು ಕೇಳಿಬಂದಿದೆ....

ಸಿಇಟಿ ಸೀಟ್‌ ಬ್ಲಾಕಿಂಗ್‌: ಅರ್ಹರಿಗೆ ಅವಕಾಶ ತಪ್ಪಲು ವ್ಯವಸ್ಥೆಯೇ ಶಾಮೀಲು?

ಸೀಟ್‌ ಬ್ಲಾಕಿಂಗ್‌ ಸಮಸ್ಯೆಯು ಕೇವಲ ಆರ್ಥಿಕ ವಂಚನೆಯಷ್ಟೇ ಅಲ್ಲ, ಶಿಕ್ಷಣ ವ್ಯವಸ್ಥೆಯ...

ಇರಾನ್- ಇಸ್ರೇಲ್ ಕದನ; ಭಾರತದ ತಟಸ್ಥ ನಿಲುವು ಸರಿಯೇ?

ಜಗತ್ತು ಮೂರನೇ ಮಹಾಯುದ್ಧದಂಚಿನಲ್ಲಿದೆ ಎಂಬ ಆತಂಕದ ಸುದ್ದಿ ಹೆಚ್ಚು ಕೇಳಿಬರುತ್ತಿದೆ. ವಿಶೇಷವಾಗಿ...

Download Eedina App Android / iOS

X