ಸತತ ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಬಹುಮತ ಪಡೆದು ದಶಕಗಳ ಕಾಲ ಜನವಿರೋಧಿ ದುರಾಡಳಿತ ನಡೆಸಿದ್ದ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳಿಗೆ ಹಿನ್ನಡೆಯನ್ನುಂಟು ಮಾಡುವ ಮೂಲಕ ತಾನು ಪ್ರಜಾಪ್ರಭುತ್ವ ಮತ್ತು ಸಂವಿಧಾನ ಹಾಗೂ ಜನ ಜೀವನದ ಮೇಲಿನ ದಾಳಿಗಳನ್ನು ಸಹಿಸುವುದಿಲ್ಲವೆಂಬ ಸಂದೇಶದೊಟ್ಟಿಗೆ ಜನತಾ ತೀರ್ಪು ಬಂದಿರುವುದಾಗಿ ಸಿಪಿಐ(ಎಂ) ವಿಶ್ಲೇಷಿಸಿದೆ ಎಂದು ಸಿಪಿಐ(ಎಂ) ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಹೇಳಿದರು.
ಕಲಬುರಗಿ ನಗರದಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು, “ಜನತಾ ತೀರ್ಪು ಬಿಜೆಪಿ ಹಾಗೂ ನರೇಂದ್ರ ಮೋದಿಯವರಿಗೆ ಮುಖಭಂಗ ಉಂಟು ಮಾಡಿದೆ” ಎಂದು ಟೀಕಿಸಿದರು.
“ನಿರುದ್ಯೋಗ, ಬೆಲೆ ಏರಿಕೆ, ಕೃಷಿ ಸಂಕಷ್ಟ, ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೇಲಿನ ದಾಳಿ ಮತ್ತು ಕೋಮುದ್ವೇಷದ ವಿರುದ್ಧ ಇಂಡಿಯಾ ಒಕ್ಕೂಟ ನಿಂತಿದ್ದು, ಜತೆಗೆ ಜನತೆ ನಿಲ್ಲಲು ಕಾರಣವಾಗಿದೆ” ಎಂದು ಹೇಳಿದರು.
“ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ನರೇಂದ್ರ ಮೋದಿಯವರು ನೀತಿ ಸಂಹಿತೆಯನ್ನು ಉಲ್ಲಂಘಿಸಿ ಮಾಡಿದ ದ್ವೇಷ ಭಾಷಣದ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಂಡಿದ್ದಲ್ಲಿ ಖಂಡಿತವಾಗಿ ಬಿಜೆಪಿ ಮತ್ತಷ್ಟು ಹಿನ್ನಡೆ ಅನುಭವಿಸುತ್ತಿತ್ತು. ಈ ಬಾರಿ ಸಿಪಿಐ(ಎಂ) 04, ಸಿಪಿಐ ಹಾಗೂ ಸಿಪಿಐ(ಎಂ,ಎಲ್) ತಲಾ 02ಸೇರಿ ಒಟ್ಟಾಗಿ ಎಡಪಕ್ಷಗಳು 08 ಸ್ಥಾನಗಳನ್ನು ಪಡೆದು ಹಿಂದಿಗಿಂತ ಉತ್ತಮ ಸ್ಥಿತಿ ಹೊಂದಿವೆ” ಎಂದು ಸಮಾಧಾನ ಪಟ್ಟರು.
“ಕರ್ನಾಟಕದಲ್ಲಿಯೂ ಬಿಜೆಪಿ, ಜೆಡಿಎಸ್ ಹಾಗೂ ಜನಾರ್ಧನ್ ರೆಡ್ಡಿ ಜೊತೆ ಕೈ ಜೋಡಿಸಿಯೂ ಮತ್ತು ಲಿಂಗಾಯತ ಹಾಗೂ ಒಕ್ಕಲಿಗ ಜಾತಿ ಸಮೀಕರಣ ಮಾಡಿ, ಕೋಮುವಾದ ಅಪ್ಪಿಕೊಂಡಿದ್ದರೂ, ನರೇಂದ್ರ ಮೋದಿ ಹಾಗೂ ದೇವೇಗೌಡರ ಪ್ರಚಾರ ನಡೆಸಿಯೂ ಅದು ಹಿನ್ನಡೆ ಅನುಭವಿಸಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇ.5ರಷ್ಟು ಮತಗಳ ಹಿನ್ನಡೆ ಕಂಡಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಉಪಯೋಗಕ್ಕೆ ಬಾರದ ಬಸ್ ನಿಲ್ದಾಣ: ಅನೈತಿಕ ಚಟುವಟಿಕೆಗಳ ತಾಣ
“ಸಿಪಿಐ(ಎಂ) ಮತ್ತಿತರೆ ಪ್ರಜಾಸತ್ತಾತ್ಮಕ ಶಕ್ತಿಗಳ ಕರೆಗೆ ಓಗೊಟ್ಟು ಬಿಜೆಪಿಯನ್ನು ಹಿಮ್ಮೆಟ್ಟಿಸಿ, ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಮುಂದಾದದ ಜನತೆಯನ್ನು ಸಿಪಿಐ(ಎಂ) ಅಭಿನಂದಿಸುತ್ತದೆ” ಎಂದು ಹೇಳಿದರು.
