ಕೊಳಚೆ ನಿರ್ಮೂಲನಾ ಮಂಡಳಿ ನೀಡಿದ ಹಕ್ಕು ಪತ್ರ ವಿತರಣೆ ಕುರಿತು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಜೀವ ಬೆದರಿಕೆ ಆರೋಪ ಕೇಳಿಬಂದಿದ್ದು, ಬಿಜೆಪಿ ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಮೂವರ ವಿರುದ್ಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕ ಅರವಿಂದ ಬೆಲ್ಲದ, ಉಪ ಮೇಯರ್ ಸತೀಶ್ ಹಾನಗಲ್ ಹಾಗೂ ಲಕ್ಷ್ಮಣ ಭೋವಿ ವಿರುದ್ಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?
ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಕುಂದು ಕೊರತೆ ಸಭೆ 2023ರ ಡಿ.30 ರಂದು ನಡೆದಿತ್ತು.
ಸಭೆಯ ವೇಳೆ, ನಗರದ ಕೃಷ್ಣಾ ಕಾಲೊನಿಗೆ ಸಂಬಂಧಪಟ್ಟ ಖಾಲಿ ಜಾಗವನ್ನು ಕೊಳಚೆ ನಿರ್ಮೂಲನ ಮಂಡಳಿ ಅಕ್ರಮವಾಗಿ ಹಕ್ಕುಪತ್ರ ವಿತರಿಸಿದೆ ಎಂಬ ದೂರು ಕೇಳಿಬಂದಿತ್ತು. ಈ ಬಗ್ಗೆ ಪರಶುರಾಮ ದಾವಣಗೆರೆ ಎಂಬುವವರು ಅರ್ಜಿಯನ್ನು ಸಲ್ಲಿಸಿದ್ದರು.
ಪರಶುರಾಮ ದಾವಣಗೆರೆ ಅವರು ನೀಡಿದ ಅರ್ಜಿಯನ್ನು ಹಿಂಪಡೆಯುವಂತೆ ಲಕ್ಷ್ಮಣ ಭೋವಿ ಅವಾಚ್ಯ ಪದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.
ಲಕ್ಷ್ಮಣ ಭೋವಿ ಉಪ ಮೇಯರ್ ಸತೀಶ ಹಾನಗಲ್ ಹಾಗೂ ಶಾಸಕ ಅರವಿಂದ ಬೆಲ್ಲದ ಕುಮ್ಮಕ್ಕಿನಿಂದ ನನಗೆ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೋದಿಯ ಸಚಿವ ಸಂಪುಟ ಸೇರಲಿದ್ದಾರಾ ಮಹಾರಾಷ್ಟ್ರದ ಸಂಸದೆ ರಕ್ಷಾ ಖಡ್ಸೆ?
ದೂರು ನೀಡಿದ ಆಧಾರದ ಮೇಲೆ ಆರೋಪಿತರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಪರಶುರಾಮ ಅವರು 4ನೇ ಎಸಿಜಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ 4ನೇ ಎಸಿಜಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಬೇಕು ಎಂದು ಸೂಚನೆ ನೀಡಿದೆ. ಇದೀಗ, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.