ಕನ್ನಡ ಎಂಬುದು ಏಕಕಾಲದಲ್ಲಿ ಜ್ಞಾನ ಮಾರ್ಗ, ಅರಿವಿನ ಮಾರ್ಗ ಮತ್ತು ಅನ್ನದ ಮಾರ್ಗವಾಗುತ್ತದೆ. ಲೋಕಜ್ಞಾನ ಮೂಡಿಸುವ ಕನ್ನಡ ಸಾಹಿತ್ಯ ಬದುಕಿನ ಅಸ್ತಿತ್ವವನ್ನು ಹಾಗೂ ಸಾಂಸ್ಕೃತಿಕ ಪ್ರಜ್ಞೆಯನ್ನು ರೂಪಿಸುತ್ತದೆ ಎಂದು ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಹೇಳಿದರು.
ಬಸವಕಲ್ಯಾಣ ನಗರದ ಎಸ್.ಎಸ್.ಕೆ. ಬಸವೇಶ್ವರ ಪದವಿ ಕಾಲೇಜಿನಲ್ಲಿ ಬೀದರ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ ʼಕನ್ನಡ ಸಾಹಿತ್ಯ ಮತ್ತು ಉದ್ಯೋಗಾವಕಾಶಗಳುʼ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, “ವಸಾಹತುಶಾಹಿ ಮತ್ತು ಜಾಗತೀಕರಣ ನಮ್ಮ ನೆಲದ ಜ್ಞಾನ ಪರಂಪರೆಯನ್ನು ವಿಸ್ಮೃತಿಗೆ ತಳ್ಳುತಿವೆ. ತಾಯ್ನುಡಿ ಉಳಿದರೆ ಈ ನೆಲಕ್ಕೊಂದು ಅಸ್ತಿತ್ವ ಮತ್ತ ಅಸ್ಮಿತೆ ಇದೆ” ಎಂದು ಕಳವಳ ವ್ಯಕ್ತಪಡಿಸಿದರು.
“ಕನ್ನಡ ಭಾಷೆಯನ್ನು ಸಮಾಜೋ-ಸಾಂಸ್ಕೃತಿಕ ಮತ್ತು ಆರ್ಥಿಕ ನೆಲೆಯಲ್ಲಿ ಕಾಣುವ ಅಗತ್ಯ ಈ ಕಾಲದ್ದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ, ಕೆ.ಎ.ಎಸ್., ಐಎಎಸ್ ಗಳಲ್ಲಿ ಕನ್ನಡ ಸಾಹಿತ್ಯಕ್ಕೆ ನೀಡಿದ ಮಹತ್ವವನ್ನು ವಿದ್ಯಾರ್ಥಿಗಳು ಅರಿಯಬೇಕಿದೆ. ತಾಯ್ನುಡಿಯನ್ನು ಅನ್ನದ ಹಾಗೂ ಬದುಕಿನ ಮಾತಾಗಿಸುವ ಹೊಣೆಗಾರಿಕೆ ಸರಕಾರದ ಮೇಲಿದೆ. ಕನ್ನಡ ಒಂದು ಕಡೆಗೆ ಅನ್ನಕ್ಕೆ ಮೂಲವಾದರೆ, ಇನ್ನೊಂದು ಕಡೆಗೆ ವೈಚಾರಿಕ, ಬೌದ್ಧಿಕ, ಸಂಶೋಧನಾತ್ಮಕ, ವಿಮರ್ಶಾತ್ಮಕ ನಿಲುವುಗಳಿಗೆ ದಾರಿಯಾಗಿದೆ. ಲೋಕದ ಗ್ರಹಿಕೆಗೆ ಸಾಹಿತ್ಯದ ಅಗತ್ಯವಿದೆ. ವ್ಯಕ್ತಿಯ ಅಸ್ತಿತ್ವ, ಸಾಮಾಜಿಕ ಆಯಾಮ, ಬದುಕಿನ ಆತಂಕಗಳನ್ನು ಅರ್ಥೈಸಿಕೊಳ್ಳಲು ಕನ್ನಡ ಸಾಹಿತ್ಯ ಹಲವು ಒಳನೋಟಗಳು ರೂಪಿಸುತ್ತದೆ” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಪ್ರೊ. ಆರ್. ಡಿ. ಬಾಲಕಿಲೆ ಅವರು ಮಾತನಾಡಿ, “ಪ್ರತಿಯೊಂದು ಕೋರ್ಸ್‌ಗೂ ಅದರದೇ ಆದ ಅಸ್ತಿತ್ವವಿರುತ್ತದೆ. ಯಾವುದೇ ಕೋರ್ಸುಗಳ ಬಗೆಗೆ ಸಿನಿಕತೆ, ತಾತ್ಸಾರಗಳು ಇರಬಾರದು. ವಿದ್ಯಾರ್ಜನೆಗಾಗಿ
ಆಧುನಿಕ ತಂತ್ರಜ್ಞಾನಗಳ ಬಳಕೆಯಾಗಲಿ. ಬರೀ ಮನರಂಜನೆಯ ಪರಿಕರಗಳಾಗಿ ಮೊಬೈಲ್ ಬಳಕೆಯಾಗದಿರಲಿ. ಪ್ರತಿಯೊಂದು ಕೋರ್ಸಿನಲ್ಲಿ ಕೌಶಲ್ಯ ಪಡೆಯುವ ಮೂಲಕ ಜೀವನ ಸುಧಾರಿಸುತ್ತದೆ. ಧನಾತ್ಮಕ ಚಿಂತನೆಗಳು ಬದುಕು ರೂಪಿಸುವ ಶಕ್ತಿ ಪಡೆದಿವೆ” ಎಂದರು.
ಎನ್‌ಎಸ್‌ಎಸ್ ಶಿಬಿರಾಧಿಕಾರಿ ಪ್ರೊ. ವಿಠೋಬಾ ದೊಣ್ಣೆಗೌಡರು ಮಾತನಾಡಿ, “ಕನ್ನಡ ಭಾಷೆಯ ಜೀವಂತಿಕೆ ಇರುವುದೇ ಅದು ತಿಳಿಸಿದ ಮೌಲ್ಯಗಳಲ್ಲಿ. ಕನ್ನಡ ಪರಂಪರೆ ಎಂದಿಗೂ ಆತ್ಮವಿಶ್ವಾಸ, ಆತಂಕಗಳನ್ನು ಎದುರಿಸುವ ಸ್ಥೈರ್ಯ ಬೆಳೆಸಿದೆ. ಭಾಷೆ ಅನ್ನಕೊಡುವ ಗುಣದಿಂದ ಶ್ರೇಷ್ಠತೆ ಪಡೆದಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಆದೇಶ ಪಾಲಿಸದ ಕಲ್ಯಾಣ ಮಂಡಳಿ; ಹೈಕೋರ್ಟ್ ಅಸಮಾಧಾನ
ಕಾರ್ಯಕ್ರಮದಲ್ಲಿ ಎಸ್.ಎಸ್.ಕೆ.ಬಿ ಕಾಲೇಜು ಪ್ರಾಚಾರ್ಯ ಡಾ. ಬಸವರಾಜ ಎವಲೆ, ಪ್ರೊ. ಶಾಂತಕುಮಾರ ಬಾಬನಗೋಳ್, ಡಾ. ಸುರೇಶ ಎಚ್. ಆರ್, ಡಾ. ಶಿವಕುಮಾರ ಪಾಟೀಲ, ಶಾಂತಕುಮಾರ ಭುರೆ, ವಿನಾಯಕ ಮುಳ್ಳೂರು, ಲಕ್ಷ್ಮಿಬಾಯಿ ಭಂಕೂರ, ಕಲ್ಯಾಣಪ್ಪ ನಾವದಗಿ ಇದ್ದರು. ನೇತ್ರಾ ನಿರೂಪಿಸಿದರು, ಅಜಯ ಸ್ವಾಗತಿಸಿದರು, ಭಾಗ್ಯಶ್ರೀ ವಂದಿಸಿದರು.