ಬಿಜೆಪಿಯನ್ನು ನಿಯಂತ್ರಿಸುತ್ತಿದ್ದ ಆರ್ಎಸ್ಎಸ್, ಇತ್ತೀಚಿನ ದಿನಗಳಲ್ಲಿ ಮೌನಕ್ಕೆ ಶರಣಾಗಿತ್ತು. ಮೋದಿ-ಶಾ ಜೋಡಿಯ ಸರ್ವಾಧಿಕಾರಿ ಧೋರಣೆ ಮತ್ತು ಆಡಳಿತದಲ್ಲಿ ಸಂಘದ ಸಲಹೆ, ಸೂಚನೆಗಳಿಗೆ ಬೆಲೆ ಇಲ್ಲದಂತಾಗಿತ್ತು. ಮೋದಿ ನೇತೃತ್ವದಲ್ಲಿ ಬಿಜೆಪಿ ಸಂಘದ ಕೈತಪ್ಪಿತ್ತು. ಮೋದಿ-ಶಾ ಜೋಡಿ ಇಡೀ ಬಿಜೆಪಿಯನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದರು.
ಈ ಜೋಡಿ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾರಂಭಿಸಿತು. ಗುಜರಾತ್ನ ರಾಜಕೀಯವನ್ನು ಕೇಂದ್ರದಲ್ಲಿ ಹೇರಲಾರಂಭಿಸಿತು. ಗುಜರಾತ್ ಕಾರ್ಪೊರೇಟ್ ಕುಳಗಳಾದ ಅಂಬಾನಿ-ಅದಾನಿಗಳಿಗಾಗಿ ನೀತಿ-ನಿರೂಪಣೆಗಳನ್ನು ಜಾರಿಗೊಳಿಸಲಾರಂಭಿಸಿತು. ಮೋದಿ ತಾನೇ ವಿಶ್ವಗುರು, ತನ್ನನ್ನು ಬಿಟ್ಟರೆ ದೇಶಕ್ಕೆ ದಿಕ್ಕಿಲ್ಲವೆಂಬ ಪ್ರತಿಪಾದನೆಯೊಂದಿಗೆ ಅಬ್ಬರಿಸಲು ಆರಂಭಿಸಿದರು. ರೈತ, ಕಾರ್ಮಿಕ, ದಲಿತ, ಅಲ್ಪಸಂಖ್ಯಾತ ಹಾಗೂ ಮಹಿಳಾ ವಿರೋಧಿ ನೀತಿ, ಧೋರಣೆಗಳನ್ನು ಎಗ್ಗಿಲ್ಲದೆ ಹೇರಲಾರಂಭಿಸಿದರು.
ರೈತರ ಮೇಲೆ ಸರ್ಕಾರವೇ ನೇರವಾಗಿ ದಮನ ಮಾಡಿದರೆ, ಕಾರ್ಮಿಕರ ಮೇಲೆ ಕಾರ್ಪೋರೇಟ್ ಕುಳಗಳು ಸವಾರಿ ಮಾಡಲಾರಂಭಿಸಿದರು. ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಮೋದಿ-ಶಾ ಮೌನವಾದರೆ, ಅತ್ಯಾಚಾರಿಗಳ ಪರವಾಗಿ ಬಿಜೆಪಿ ಪ್ರತಿಭಟನೆ ನಡೆಸುವ ಹಂತಕ್ಕೆ ಹೋಯಿತು. ಇಡೀ ಆಡಳಿತ ಮೋದಿಯ ಮೂಗಿನ ನೇರಕ್ಕೆ ನಡೆಸುವ ಮೂಲಕ ಜನಾಭಿಪ್ರಾಯವನ್ನು ಹತ್ತಿಕ್ಕುವ ಕೆಲಸವನ್ನು ನಿರಂತರವಾಗಿ ಮಾಡಲಾರಂಭಿಸಿದರು. ವಿಪಕ್ಷಗಳ ನಾಯಕರು, ಪತ್ರಕರ್ತರು, ಮಾನವ ಹಕ್ಕು ಹೋರಾಟಗಾರರು ಸೇರಿದಂತೆ ತಮ್ಮನ್ನು ಪ್ರಶ್ನಿಸುವವರನ್ನು ಜೈಲಿಗಟ್ಟಿದರು. ರೈತರು, ಕಾರ್ಮಿಕರು, ಮಹಿಳಾ ಕುಸ್ತಿಪಟುಗಳು ಸೇರಿದಂತೆ ನಾನಾ ವರ್ಗದ ಜನರು ನಿರಂತರ ಪ್ರತಿಭಟನೆಗಳನ್ನು ನಡೆಸಿದರು. ಮಣಿಪುರ ಹತ್ತಿ ಉರಿಯಿತು.
ಆದರೆ, ಸಂಘವು ಎಂದಿಗೂ ಮೋದಿ-ಶಾಗಳ ವಿರುದ್ಧ ಮಾತನಾಡಲಿಲ್ಲ. ಅವರ ಧೋರಣೆಯನ್ನು ಖಂಡಿಸಲಿಲ್ಲ. ಇದೀಗ, ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದು, ಮೋದಿ ಗರ್ವ ಅಡಗಿದೆ. ಈಗ, ಆರ್ಎಸ್ಎಸ್ ಗೊಣಗಲು ಶುರು ಮಾಡಿದೆ. ನೇರವಾಗಿ ಮೋದಿ-ಶಾ ವಿರುದ್ಧ ಟೀಕೆಗಳನ್ನು ಮಾಡುತ್ತಿದೆ. ತನ್ನೊಳಗಿನ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದೆ. ಬಿಜೆಪಿಯನ್ನು ಮತ್ತೆ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ.
ಸೋಮವಾರ, ನಾಗ್ಪುರದಲ್ಲಿ ನಡೆದ ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಬಿಜೆಪಿ ವಿರುದ್ಧ ಅಸಹನೆ ಹೊರಹಾಕಿದ್ದಾರೆ. ಮಣಿಪುರದಲ್ಲಿ ಸಂಘರ್ಷ ಉಲ್ಬಣಗೊಂಡು ಒಂದು ವರ್ಷವಾದ ಮೇಲೆ ಅಲ್ಲಿನ ಹಿಂಸಾಚಾರವನ್ನು ಕೊನೆಗಾಣಿಸುವ ಬಗ್ಗೆ, ಸರ್ಕಾರ ಮತ್ತು ವಿಪಕ್ಷಗಳ ನಡುವಿನ ಒಮ್ಮತದ ಅಗತ್ಯತೆಗಳ ಬಗ್ಗೆ ಭಾಗವತ್ ಮಾತನಾಡಿದ್ದಾರೆ.
ಅಲ್ಲದೆ, “ನಿಜವಾದ ಸೇವಕ ಘನತೆಯನ್ನು ಕಾಯ್ದುಕೊಳ್ಳುತ್ತಾನೆ. ಆತ ತಾನು ಮಾಡುವ ಕೆಲಸವನ್ನು ಆನಂದಿಸುತ್ತಾನೆ. ನಾನು ಈ ಕೆಲಸ ಮಾಡಿದೆ ಎಂದು ಹೇಳಿಕೊಳ್ಳುವ ಅಹಂಕಾರವನ್ನು ಹೊಂದಿರುವುದಿಲ್ಲ. ಅಂತಹ ವ್ಯಕ್ತಿ ಮಾತ್ರ ನಿಜವಾದ ಸೇವಕನಾಗುತ್ತಾನೆ” ಎಂದು ಹೇಳುವ ಮೂಲಕ ತನ್ನನ್ನು ತಾನು ‘ಪ್ರಧಾನ ಸೇವಕ’ ಎಂದು ಹೇಳಿಕೊಳ್ಳುತ್ತಿದ್ದ ಮೋದಿಯವರ ಕಿವಿಯನ್ನು ಭಾಗವತ್ ಹಿಂಡಿದ್ದಾರೆ.
ಜನರ ಅಳಲಿಗೆ ಕಿವಿ ಕೊಡದೆ, ಜನಾಭಿಪ್ರಾಯಕ್ಕೆ ಮಣೆ ಹಾಕದೆ, ತಾನು ಮನುಷ್ಯನಲ್ಲ – ನನ್ನನ್ನು ದೇವರೇ ಕಳಿಸಿದ್ದಾನೆ ಎನ್ನುತ್ತಿದ್ದ, ಚುನಾವಣೆಯನ್ನು ಯುದ್ಧವಾಗಿ, ಪ್ರತಿಪಕ್ಷಗಳನ್ನು ದೇಶದ್ರೋಹಿಗಳಾಗಿ ಬಿಂಬಿಸಲು ಹೊರಟಿದ್ದ ಮೋದಿಗೆ ಭಾಗವತ್ ಬಿಸಿ ಮುಟ್ಟಿಸಿದ್ದಾರೆ.
ಭಾಗವತ್ ಟೀಕೆಯ ಬೆನ್ನಲ್ಲೇ, ಆರ್ಎಸ್ಎಸ್ ಮುಖವಾಣಿ ಆರ್ಗನೈಸರ್ ಕೂಡ, ”ಬಿಜೆಪಿಗರು ಅತಿಯಾದ ಆತ್ಮವಿಶ್ವಾಸ ಹೊಂದಿದ್ದರು. ಅವರು ಸಂಘದ ಸ್ವಯಂ ಸೇವಕರನ್ನು ಒಳಗೊಳ್ಳಲಿಲ್ಲ. ಸಾಮಾಜಿಕ ಮಾಧ್ಯಮದಲ್ಲಿನ ಪ್ರಚಾರಕ್ಕೆ ಜೋತುಬಿದ್ದ ಅವರು, ನೆಲಮಟ್ಟದಲ್ಲಿ ಕೆಲಸ ಮಾಡುತ್ತಿದ್ದವರನ್ನು ನಿರ್ಲಕ್ಷಿಸಿದರು. ಅದರ ಪರಿಣಾಮ ಫಲಿತಾಂಶದಲ್ಲಿ ಸ್ಪಷ್ಟವಾಗಿದೆ” ಎಂದು ಹೇಳಿದೆ.
ಭಾಗವತ್ ಟೀಕೆ – ಆರ್ಗನೈಸರ್ ವಿಮರ್ಶೆಗಳು ಕಳೆದ ಚುನಾವಣೆಯಲ್ಲಿ ಬಿಜೆಪಿಯನ್ನು ಆರ್ಎಸ್ಎಸ್ ಪೂರ್ಣ ಹೃದಯದಿಂದ ಬೆಂಬಲಿಸಲಿಲ್ಲವೇ? ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಅಲ್ಲದೆ, ಆರ್ಎಸ್ಎಸ್-ಬಿಜೆಪಿ (ಮೋದಿ-ಶಾ) ನಡುವೆ ಬೃಹತ್ ಕಂದಕ ನಿರ್ಮಾಣವಾಗಿದೆಯೇ? ಎಂಬ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ. ಅದು ಈಗ ಮತ್ತಷ್ಟು ಸ್ಪಷ್ಟವಾಗಿದೆ.
ಇದೀಗ, ಮಣಿಪುರ ಸಂಘರ್ಷವನ್ನು ಆದ್ಯತೆಯ ಮೇಲೆ ಕೊನೆಗಾಣಿಸಬೇಕು ಎಂದು ಆರ್ಎಸ್ಎಸ್ ಹೇಳುತ್ತಿದೆ. ಇದು ಮೋದಿ ತನ್ನ ಏಕಪಕ್ಷೀಯ ಧೋರಣೆಯನ್ನು ನಿಲ್ಲಿಸಬೇಕು ಎಂಬ ಸಂದೇಶವನ್ನು ನೀಡುತ್ತಿದೆ. ಮೋದಿಯ ಅಹಂಕಾರ, ಸರ್ವಾಧಿಕಾರಕ್ಕೆ ಕೊಕ್ಕೆ ಹಾಕಿ, ತನ್ನ ಸೂತ್ರದಂತೆ ಬಿಜೆಪಿ ಮತ್ತು ಮೋದಿ ಸರ್ಕಾರ ನಡೆಯಬೇಕು ಎಂಬ ಸಂದೇಶವನ್ನು ಮತ್ತೆ ರವಾನಿಸುತ್ತಿದೆ.
ಆದರೆ, ಕಳೆದ ಐದು ವರ್ಷಗಳಲ್ಲಿ ಮೋದಿ-ಶಾ ಜೋಡಿ ತೆಗೆದುಕೊಂಡ ಹಲವಾರು ಜನವಿರೋಧಿ ನೀತಿ-ನಿಲುವುಗಳ ಬಗ್ಗೆ ತುಟಿ ಬಿಚ್ಚದೆ ಮೌನವಾಗಿದ್ದ ಆರ್ಎಸ್ಎಸ್, ಈಗ ಗೊಣಗಲು ಶುರುವಿಟ್ಟಿರುವುದು ಏಕೆ ಎಂಬ ಪ್ರಶ್ನೆ ಎದುರಾಗುತ್ತದೆ. ಇಡೀ ಮಣಿಪುರವೇ ಹೊತ್ತಿ ಉರಿದರೂ, ಸಂಘ ಮಾತನಾಡಿರಲಿಲ್ಲ. ರೈತರು ನಡು ರಸ್ತೆಯಲ್ಲೇ ಕುಳಿತರೂ ಭಾಗವತ್ ತುಟಿಬಿಚ್ಚಿರಲಿಲ್ಲ. ಅಂದ ಮೇಲೆ ಈಗ ಅವರ ಗೊಣಗಾಟ ಜನಪರ ಕಾಳಜಿಯಿಂದ ಕೂಡಿದ್ದೇ ಎಂಬ ಅನುಮಾನ ಶುರುವಾಗುತ್ತದೆ.
ಇದೇ ಸಂದರ್ಭದಲ್ಲಿ, ಮೋದಿ ಈಗ ಎನ್ಡಿಎ ಸರ್ಕಾರದ ಭಾಗವಾಗಿದ್ದಾರೆ. ಮೋದಿ ಜುಟ್ಟು, ರೆಕ್ಕೆ-ಪುಕ್ಕಗಳು ನಿತೀಶ್-ನಾಯ್ಡು ಕೈಯಲ್ಲಿವೆ. ಹೀಗಾಗಿ, ಮೋದಿ ಸರ್ವಾಧಿಕಾರಿಯಾಗಿ ಆಡಳಿತ ನಡೆಸಲು ಸಾಧ್ಯವಿಲ್ಲ. ಇಂತಹ ಸಮಯದಲ್ಲಿ ಬಿಜೆಪಿಯನ್ನು ತನ್ನ ಹಿಡಿತಕ್ಕೆ ಪಡೆದುಕೊಂಡು, ಮತ್ತೆ ಹಿಂದುತ್ವದ ಮೇಲೆ ಜನರನ್ನು ಸಂಘಟಿಸುವ, ಧರ್ಮದ ಆಧಾರದಲ್ಲಿ ರಾಜಕೀಯವನ್ನು ಮತ್ತಷ್ಟು ಗಟ್ಟಿಗೊಳಿಸುವ, ತನ್ನ ಸಿದ್ಧಾಂತಗಳನ್ನು ಜನರಲ್ಲಿ ಬಿಜೆಪಿ ಮೂಲಕ ಬಲವಾಗಿ ಹರಡುವ ತಂತ್ರವನ್ನು ಆರ್ಎಸ್ಎಸ್ ಹೆಣೆದಿದೆ.
ಈ ವರದಿ ಓದಿದ್ದೀರಾ?: ಬಿಜೆಪಿ ಸೋಲು | ಅಯೋಧ್ಯೆ ಜನರನ್ನು ದೂಷಿಸುತ್ತಿರುವ ಮೂರ್ಖರು; ರಾಮನನ್ನೇ ಮರೆತ ಮೋದಿ
ಜೊತೆಗೆ, ಬಿಜೆಪಿಯ ನೂತನ ಅಧ್ಯಕ್ಷರ ಆಯ್ಕೆಯಲ್ಲಿ ಸಂಘವು ತನ್ನ ಪಾಳಯದ ವ್ಯಕ್ತಿಯನ್ನು ಕೂರಿಸುವ ಮೂಲಕ ತಾನೆಷ್ಟು ಸಮರ್ಥ ಎಂಬುದನ್ನು ಬಹಿರಂಗ ಪಡಿಸಲು ಹವಣಿಸುತ್ತಿದೆ. ನಾಗ್ಪುರ (ಆರ್ಎಸ್ಎಸ್) ಮತ್ತು ಅಹಮದಾಬಾದ್ (ಮೋದಿ-ಶಾ) ನಡುವಿನ ಅಧಿಕಾರದ ಸಮತೋಲನವನ್ನು ಮರುಹೊಂದಿಸಲು ಮುಂದಾಗಿದೆ.
ಒಂದಂತೂ ಖಚಿತ, ಭಾಗವತರದು ಬರಿ ನಾಟಕ. ಬಿಜೆಪಿ ಡಿಎನ್ಎಯಲ್ಲಿ ಆರ್ಎಸ್ಎಸ್ ಇದೆ. ಸಂಘ-ಬಿಜೆಪಿ ನಡುವೆ ಅಪಸ್ವರವೂ ಇಲ್ಲ, ಅಸಮಾಧಾನವೂ ಇಲ್ಲ. ಅವರೆಡೂ ಬೇರೆ ಬೇರೆಯೂ ಅಲ್ಲ. ಎರಡಕ್ಕೂ ಒಂದೇ ಸಿದ್ಧಾಂತ. ಅವುಗಳ ಅಜೆಂಡಾ ದೇಶದ ಮೇಲೆ ಮನುವಾದವನ್ನು ಹೇರುವುದು. ಹಿಂದುತ್ವವನ್ನು ಮುಂದೆ ಮಾಡಿ ಮತದಾರರನ್ನು ಮರುಳು ಮಾಡುವುದು. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕಿದೆ. ಆರ್ಎಸ್ಎಸ್-ಬಿಜೆಪಿಗಳ ಅಜೆಂಡಾವನ್ನು ಅರಿಯಬೇಕಿದೆ. ಆ ಎಚ್ಚರಿಕೆ ಸಮಾಜದಲ್ಲಿ ಸದಾ ಜಾಗೃತವಾಗಿರಬೇಕಿದೆ.