ಬಿಜೆಪಿ ಸೋಲು | ಅಯೋಧ್ಯೆ ಜನರನ್ನು ದೂಷಿಸುತ್ತಿರುವ ಮೂರ್ಖರು; ರಾಮನನ್ನೇ ಮರೆತ ಮೋದಿ

Date:

ಅಯೋಧ್ಯೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹೀನಾಯವಾಗಿ ಸೋಲುಂಡಿದೆ. ಈ ಸೋಲನ್ನು ಅವಮಾನಕರವೆಂದು ಬಣ್ಣಿಸಲಾಗಿದೆ. ಇತ್ತೀಚೆಗೆ ತೆರೆಯಲಾದ ರಾಮಮಂದಿರ ಮತ್ತು ಶ್ರೀರಾಮನ ನೆಲದ ಸೋಲಿನಿಂದ ಕಗ್ಗೆಟ್ಟಿರುವ ಬಿಜೆಪಿಗರು ಮತ್ತು ಬಲಪಂಥೀಯರು, ಹಿಂದು-ದಲಿತ ಮತ್ತು ಎಸ್‌ಪಿ ಅಭ್ಯರ್ಥಿಗೆ ಮತ ಹಾಕಿದ ಅಯೋಧ್ಯೆಯ ಜನರ ವಿರುದ್ಧ ತಿರುಗಿಬಿದ್ದಿದ್ದಾರೆ. ಅಲ್ಲಿನ ಮತದಾರರನ್ನು ನಿಂದಿಸುತ್ತಿದ್ದಾರೆ.

ಲೋಕಸಭಾ ಚುನಾವಣೆಯ ಸಮಯದಲ್ಲಿ ಮೋದಿ ನೇತೃತ್ವದ ಬಿಜೆಪಿ ಚುನಾವಣಾ ಮಾರ್ಗಸೂಚಿಗಳು ಮತ್ತು ರಾಜಕೀಯ ಸಭ್ಯತೆಯನ್ನು ಗಾಳಿಗೆ ತೂರಿ ರಾಮನ ಹೆಸರಿನಲ್ಲಿ ನಿರ್ಲಜ್ಜವಾಗಿ ಪ್ರಚಾರ ಮಾಡಿತು. ಆದಾಗ್ಯೂ, ಉತ್ತರ ಪ್ರದೇಶದಲ್ಲಿ ಹೀನಾಯ ಹಿನ್ನಡೆ ಅನುಭವಿಸಿತು. ಅವಮಾನಕರ ಸೋಲಿನಿಂದ ಪಕ್ಷವು ಹಿಂದು ದೇವತೆಗಳಿಂದ ದೂರ ಉಳಿದಂತೆ ಕಾಣುತ್ತಿದೆ. ಉದಾಹರಣೆಗೆ, ಜೂನ್ 4 ಫಲಿತಾಂಶ ಹೊರಬಂದ ಬಳಿಕ, ಬಿಜೆಪಿ ಪಾಳಯವು ರಾಮ ಮತ್ತು ಅಯೋಧ್ಯೆಯ ವಿಚಾರದಲ್ಲಿ ದಿಗ್ಭ್ರಮೆಗೊಂಡಂತೆ ಮೌನವಾಗಿದೆ.

ದಶಕಗಳಿಂದ ಯಾವುದೇ ಸಣ್ಣ ಅವಕಾಶವನ್ನು ಬಿಡದಂತೆ ರಾಮನ ಹೆಸರು ಹೇಳುತ್ತಿದ್ದ ಬಿಜೆಪಿ, ಚುನಾವಣಾ ಪೂರ್ವದಲ್ಲಿಯೂ ಎಗ್ಗಿಲ್ಲದೆ ರಾಮನ ಹೆಸರನ್ನು ಬಳಸಿಕೊಂಡಿತು. ಆದರೆ, ಸೋಲಿನ ಬಳಿಕ ಎಲ್ಲಿಯೂ ಶ್ರೀರಾಮ ಮತ್ತು ರಾಮಮಂದಿರದ ಬಗ್ಗೆ ಉಲ್ಲೇಖಿಸುತ್ತಿಲ್ಲ. ಆದರೆ, ಬಿಜೆಪಿ ಬೆಂಬಲಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಅಯೋಧ್ಯೆಯ ಜನರ ವಿರುದ್ಧ ದ್ವೇಷದ ಅಭಿಯಾನ ಆರಂಭಿಸಿದ್ದಾರೆ. ಆದಾಗ್ಯೂ, ಸೋಲಿನ ನಂತರ ಕೇಸರಿ ಪಕ್ಷವು ರಾಮನ ಹೆಸರನ್ನು ಕೈಬಿಟ್ಟಿರುವುದು, ಪಕ್ಷದ ಅವಕಾಶವಾದಿ ರಾಜಕಾರಣ ಎಂಬುದನ್ನು ಬಿಂಬಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

‘ಜೋ ರಾಮ್ ಕೋ ಲೇ ಹೈಂ, ಹಮ್ ಉಂಕೋ ಲಯೇಂಗೇ (ರಾಮನನ್ನು ಕರೆತಂದವರನ್ನು ನಾವು ಅಧಿಕಾರಕ್ಕೆ ತರುತ್ತೇವೆ)’ ಎಂಬುದು ಬಿಜೆಪಿಯ ಮತ ಗೀಳಿನ ಕರೆಯಾಗಿತ್ತು. ಅಯೋಧ್ಯೆಯಲ್ಲಿ 1992 ಡಿಸೆಂಬರ್ 6ರವರೆಗೆ ಇದ್ದ ಬಾಬ್ರಿ ಮಸೀದಿ ಸ್ಥಳದಲ್ಲಿ ರಾಮಮಂದಿರ ನಿರ್ಮಾಣದ ಪ್ರತಿಫಲವಾಗಿ ಬಿಜೆಪಿಯನ್ನು ಗೆಲ್ಲಿಸಬೇಕೆಂದು ಕೇಸರಿ ಪಡೆ ಭಾರೀ ಪ್ರಚಾರ ಮಾಡಿತ್ತು. ಆದರೆ, ಸಮಾಜವಾದಿ ಪಕ್ಷದ ಅಭ್ಯರ್ಥಿ, ದಲಿತ ನಾಯಕ ಅವಧೇಶ್ ಪ್ರಸಾದ್ ಅವರು ಬಿಜೆಪಿಯ ಹಾಲಿ ಸಂಸದರಾಗಿದ್ದ ಲಲ್ಲು ಸಿಂಗ್ ಅವರ ವಿರುದ್ಧ ಗೆದ್ದು, ಸಂಸತ್‌ ಪ್ರವೇಶಿಸಿದರು. ಅಲ್ಲಿ, ಬಿಜೆಪಿ ಸೋಲು ಬಲಪಂಥೀಯರು ಅಯೋಧ್ಯೆಯ ಜನರನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿದೆ.

ವಾಸ್ತವವಾಗಿ, ಜೂನ್ 4 ರಿಂದ, ಅಯೋಧ್ಯಾ ಪೊಲೀಸರ ಸೈಬರ್ ವಿಭಾಗವು ಹಲವಾರು ದೂರುಗಳಿಂದ ತುಂಬಿದೆ. ಆರೋಪಿಗಳಲ್ಲಿ ಹಲವರು ಬಲಪಂಥೀಯರು ಎಂದು ಗುರುತಿಸಲಾಗಿದೆ. ಅವರು ಅಯೋಧ್ಯೆ ಮತದಾರರನ್ನು ನಿಂದಿಸುವ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಅವರ ನಿಂದನೆಗಳು ಜಾತಿವಾದಿ ಮತ್ತು ಸ್ತ್ರೀದ್ವೇಷಿ ನಿರೂಪಣೆಗಳಿಂದ ಕೂಡಿವೆ. ಅಲ್ಲದೆ, ಆರ್ಥಿಕ ಬಹಿಷ್ಕಾರಕ್ಕೂ ಕರೆ ನೀಡುತ್ತಿವೆ. ವಿಪರ್ಯಾಸವೆಂದರೆ, ಕೇವಲ ನಾಲ್ಕು ತಿಂಗಳ ಹಿಂದೆ, ಜನವರಿ 22 ರಂದು, ಕೋಟ್ಯಂತರ ಭಾರತೀಯ ಹಿಂದುಗಳು ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ಆಚರಿಸುತ್ತಿದ್ದರು. ರಾಮಮಂದಿರವನ್ನು ಹಿಂದುತ್ವದ ಪ್ರಾಬಲ್ಯವಿರುವ ನವಭಾರತದ ಸೌಧ ಎಂದು ಮೋದಿಯವರು ಬಿಂಬಿಸಿದ್ದರು.

1980ರ ದಶಕದ ಉತ್ತರಾರ್ಧ ಮತ್ತು 1990ರ ದಶಕದ ಆರಂಭದಲ್ಲಿ ರಾಮಮಂದಿರ ಚಳವಳಿಯು ಬಿಜೆಪಿಯನ್ನು ಕೇಂದ್ರದಲ್ಲಿ ಮತ್ತು ಅನೇಕ ರಾಜ್ಯಗಳಲ್ಲಿ ಅಧಿಕಾರಕ್ಕೆ ತರಲು ಕಾರಣವಾಯಿತು ಎಂಬುದು ತಿಳಿದೇ ಇರುವ ಸಂಗತಿ. ರಾಮನಿಗೆ ಭವ್ಯವಾದ ಮಂದಿರವನ್ನು ನಿರ್ಮಿಸುವ ಭರವಸೆಯೊಂದಿಗೆ ಪಕ್ಷವು ಅನೇಕ ಚುನಾವಣೆಗಳನ್ನು ಎದುರಿಸಿತ್ತು ಮತ್ತು ಬಹುತೇಕ ಚುನಾವಣೆಗಳಲ್ಲಿ ಗೆಲುವು ಸಾಧಿಸಿತ್ತು.

2024ರ ಚುನಾವಣೆ ಸಮೀಪವಿದ್ದಾಗಲೇ, ಬಿಜೆಪಿಯು ಹಿಂದು ನಾಗರಿಕತೆಯ ಶ್ರೇಷ್ಠ ಸಾಧನೆಯ ಪ್ರದರ್ಶನವಾಗಿ ಅರ್ಧಂಬರ್ಧ ಕಟ್ಟಿದ್ದ ದೇವಾಲಯವನ್ನು ಉದ್ಘಾಟನೆ ಮಾಡಿತ್ತು. ಪ್ರಾಣ ಪ್ರತಿಷ್ಠ ಕಾರ್ಯಕ್ರಮದಲ್ಲಿ ಭಾಗಿಯಾಗದ ವಿಪಕ್ಷಗಳ ನಾಯಕರನ್ನು ರಾಕ್ಷಸರು ಎಂಬಂತೆ ಬಿಂಬಿಸಿತ್ತು. ಈ ಚುನಾವಣೆಯು ರಾಮಭಕ್ತರು ಮತ್ತು ರಾಮದ್ರೋಹಿಗಳ (ದೇಶದ್ರೋಹಿ) ನಡುವಿನ ಸ್ಪರ್ಧೆಯೆಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿಪಾದಿಸಿದ್ದರು. ಇದರಿಂದ ಚುನಾವಣೆಯನ್ನು ಗೆಲ್ಲಬಹುದು ಎಂದೂ ಭಾವಿಸಿತ್ತು. ಆದರೆ, ದೇವರೊಂದಿಗೆ ಬಿಜೆಪಿಯ ಸಂಬಂಧವು ಭಕ್ತಿಗಿಂತ ಹೆಚ್ಚಾಗಿ ರಾಜಕೀಯ ಮತ್ತು ವ್ಯವಹಾರವಾಗಿತ್ತು ಎಂಬುದನ್ನು ಅಲ್ಲಿನ ಜನರು ಸೂಕ್ಷ್ಮವಾಗಿ ಅರ್ಥೈಸಿಕೊಂಡಿರುವುದರ ಪರಿಣಾಮ ನಮ್ಮೆದುರಿಗಿದೆ.

80 ಸಂಸದ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ 2014 ಮತ್ತು 2019ರಲ್ಲಿ ಬಿಜೆಪಿ ಹೆಚ್ಚಿನ ಸಂಖ್ಯೆಗಳನ್ನು ಗೆದ್ದಿದ್ದ ಬಿಜೆಪಿ, ಈ ಬಾರಿ ಹೆಚ್ಚಿನ ಸಂಖ್ಯೆಗಳನ್ನು ಕಳೆದುಕೊಂಡಿತು. ಹೀಗಾಗಿ, ಸ್ವತಃ ಮೋದಿ ಉತ್ತರ ಪ್ರದೇಶದ ವಾರಣಾಸಿಯ ಸಂಸದರಾಗಿದ್ದರೂ, ಫಲಿತಾಂಶದ ದಿನ ತಮ್ಮ ವಿಜಯದ ಭಾಷಣದಲ್ಲಿ ರಾಮ ಅಥವಾ ಉತ್ತರ ಪ್ರದೇಶದ ಬಗ್ಗೆ ಪ್ರಸ್ತಾಪಿಸಲಿಲ್ಲ. ಎನ್‌ಡಿಎ ಸಭೆಯಲ್ಲೂ ಮಿತ್ರಪಕ್ಷಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಜಗನ್ನಾಥನನ್ನು ‘ಗರೀಬೋನ್ ಕಾ ದೇವತಾ’ (ಬಡವರ ದೇವರು) ಎಂದು ಶ್ಲಾಘಿಸಿದರು. ಆದರೆ, ರಾಮರಾಜ್ಯ ಅಥವಾ ಶ್ರೀರಾಮನ ಬಗ್ಗೆ ಉಲ್ಲೇಖಿಸಲಿಲ್ಲ.

ಇನ್ನು, ರಾಮ ಹೆಸರಿನಲ್ಲಿ ಭಾರೀ ಪ್ರಚಾರ ನಡೆಸಿದ್ದ ಯೋಗಿ ಕೂಡ ರಾಮ ಮತ್ತು ಫಲಿತಾಂಶ – ಎರಡರ ಬಗ್ಗೆಯೂ ಮೌನವಾಗಿದ್ದಾರೆ. ಬಿಜೆಪಿಯು ಅಯೋಧ್ಯೆ ಮತ್ತು ಸಮೀಪದ ಅಂಬೇಡ್ಕರ್ ನಗರ, ಬಸ್ತಿ ಹಾಗೂ ಬಾರಾಬಂಕಿ ಕ್ಷೇತ್ರಗಳನ್ನು ಯಾಕೆ ಕಳೆದುಕೊಂಡಿತು ಎಂಬುದನ್ನು ಪಕ್ಷವು ಇನ್ನೂ ವಿವರಿಸಿಲ್ಲ. ಸಾರ್ವಜನಿಕವಾಗಿ ಆ ಬಗ್ಗೆ ಮಾತನಾಡಿಲ್ಲ. 1980 ಮತ್ತು 1990ರ ದಶಕದ ರಾಮಮಂದಿರ ಆಂದೋಲನದಲ್ಲಿ ಪ್ರಮುಖನಾಗಿದ್ದ, ಬಿಜೆಪಿಯ ಒಬಿಸಿ ನಾಯಕ ಕಲ್ಯಾಣ್ ಸಿಂಗ್ ಅವರ ಪುತ್ರ ರಾಜವೀರ್ ಸಿಂಗ್ ಪ್ರತಿನಿಧಿಸುತ್ತಿದ್ದ ಎತಾಹ್ ಕ್ಷೇತ್ರವನ್ನೂ ಬಿಜೆಪಿ ಕಳೆದುಕೊಂಡಿದೆ. ಫೈಜಾಬಾದ್‌ (ಅಯೋಧ್ಯೆ)ಯಲ್ಲಿ ದಲಿತರ ಕಡೆಗಣನೆ, ಸರ್ಕಾರ ಮತ್ತು ಹಾಲಿ ಸಂಸದರ ವಿರುದ್ಧದ ಅಸಮಾಧಾನದಂತಹ ಅನೇಕ ಅಂಶಗಳಿಂದಾಗಿ ಬಿಜೆಪಿ ಸೋತಿರಬಹುದು. ಆದರೆ, ಇದು ಧರ್ಮದ ರಾಜಕೀಯೀಕರಣದ ದೊಡ್ಡ ಸೋಲಿನ ಸಂಕೇತವೂ ಆಗಿದೆ.

ಫಲಿತಾಂಶದ ನಂತರದಲ್ಲಿ ಮೋದಿ ತನ್ನ ಮೊದಲ ಭಾಷಣದಲ್ಲಿ ‘ಜೈ ಜಗನ್ನಾಥ’ ಎಂಬ ಘೋಷಣೆಯೊಂದಿಗೆ ತಮ್ಮ ಮಾತನ್ನು ಆರಂಭಿಸಿದರು. ಇದೂ ಕೂಡ ಧರ್ಮ ರಾಜಕಾರಣದ ಭಾಗವೇ ಆಗಿದೆ. ಜಗನ್ನಾಥ ದೇವಾಲಯ ಇರುವುದು ಒಡಿಶಾದಲ್ಲಿ. ಅದೇ ಒಡಿಶಾದಲ್ಲಿ ಒಟ್ಟು 21 ಸ್ಥಾನಗಳ ಪೈಕಿ ಬಿಜೆಪಿ 2 ಸ್ಥಾನಗಳನ್ನು ಗೆದ್ದುಕೊಂಡಿದೆ. ಮಾತ್ರವಲ್ಲದೆ, ವಿಧಾನಸಭೆಯಲ್ಲಿಯೂ ಬಹುಮತ ಪಡೆದುಕೊಂಡಿದೆ. ಈ ಸಾಧನೆಯ ಕಾರಣಕ್ಕಾಗಿಯೇ ಮೋದಿ ‘ಜಗನ್ನಾಥ’ನನ್ನು ನೆನೆದರು. ಆದರೆ, ಉತ್ತರ ಪ್ರದೇಶದಲ್ಲಿ ಸೋತಿದ್ದಕ್ಕೆ ‘ರಾಮ’ನನ್ನು ಕಡೆಗಣಿಸಿದರು.

ಬಿಜೆಪಿಗೆ ಜಗನ್ನಾಥ್ ಫಲಿತಾಂಶ ನೀಡಿದರು. ಆದರೆ, ರಾಮ ತನ್ನದೇ ರಾಜ್ಯದಲ್ಲಿ ಬಿಜೆಪಿಯನ್ನು ತಿರಸ್ಕರಿಸಿದರು. ಇದೀಗ, ಅಯೋಧ್ಯೆಯ ಜನರನ್ನು ನಿಂದಿಸುತ್ತಿರುವ ತಮ್ಮ ಬೆಂಬಲಿಗರನ್ನೂ ಬಿಜೆಪಿ ತಡೆಯುತ್ತಿಲ್ಲ. ಇದು, ಜನರಿಗೆ ಬಿಜೆಪಿಯ ಸಿನಿಕತನದ ಧೋರಣೆಯನ್ನು ಅರ್ಥ ಮಾಡಿಸಿದೆ.

ಉನ್ನಾವೋದ ಕೇಸರಿ ವಸ್ತ್ರಧಾರಿ, ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಅಯೋಧ್ಯೆಯ ಮತದಾರರನ್ನು ಕೃತಘ್ನತೆ ಇಲ್ಲದವರು ಎಂದು ಬಣ್ಣಿಸಿದರು. ‘ಅಯೋಧ್ಯೆಯ ಭೂಮಿ ರಾಮಭಕ್ತರ ರಕ್ತದಿಂದ ಕೆಂಪಾಗುವುದನ್ನು ನಾನು ನೋಡಿದ್ದೇನೆ. ಈ ಕೈಗಳಿಂದ ನಾನು ರಾಮಭಕ್ತರ ದೇಹಗಳನ್ನು ಹೊತ್ತಿದ್ದೇನೆ. ಆದರೆ, ಅದೇ ಅಯೋಧ್ಯೆ ಇಂದು ಎಸ್‌ಪಿ ಸಂಸದರನ್ನು ಆಯ್ಕೆ ಮಾಡಿದ್ದು ಎಂತಹ ದುರದೃಷ್ಟ’ ಎಂದು ಅವರು ಹೇಳಿದರು.

ಅಯೋಧ್ಯೆಯಲ್ಲಿ ಬಿಜೆಪಿ ಸೋತ ನಂತರ, ಸಾಮಾಜಿಕ ಜಾಲತಾಣವು ಒಂಬತ್ತು ಬಾರಿ ಶಾಸಕ, ಮಾಜಿ ಸಚಿವ ಮತ್ತು ಬಹು ಗೌರವಾನ್ವಿತ ರಾಜಕಾರಣಿ ಅವಧೇಶ್ ಪ್ರಸಾದ್ ವಿರುದ್ಧ ಜಾತಿ ನಿಂದನೆಗಳಿಂದ ತುಂಬಿದೆ. ಹೆಚ್ಚಿನ ದ್ವೇಷವು ಅಯೋಧ್ಯೆಯ ಹಿಂದುಗಳನ್ನು ಗುರಿಯಾಗಿಸಿಕೊಂಡಿದೆ.

ಹಲವರು ಅಯೋಧ್ಯೆ ದಲಿತರ ಜಾತಿ ನಿಂದನೆ, ಸ್ತ್ರೀದ್ವೇಷದ ಹೇಳಿಕೆ ನೀಡುತ್ತಿದ್ದಾರೆ. ರಾಮಮಂದಿರಕ್ಕೆ ಅವರನ್ನು ಬಹಿಷ್ಕರಿಸುವಂತೆ ಕರೆಕೊಡುತ್ತಿದ್ದಾರೆ. ಇಂತಹ ದ್ವೇಷಪೂರಿತ ಪೋಸ್ಟ್‌ಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ, ಮಂದಿರದ ಕಾರಣಕ್ಕಾಗಿ ಬಿಜೆಪಿಗೆ ಮತ ಹಾಕದವರನ್ನು ನಿಂದಿಸಿರುವ ವಿಡಿಯೋ ಹರಿಬಿಟ್ಟಿದ್ದ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ದಕ್ಷ್ ಚೌಧರಿ ಮತ್ತು ಅಣ್ಣು ಚೌಧರಿ ಎಂದು ಗುರುತಿಸಲಾಗಿದೆ. ಇವರು ‘ಹಿಂದೂ ರಕ್ಷಕ ದಳ’ ಎಂಬ ಉಗ್ರಗಾಮಿ ಶೈಲಿಯ ಸಂಘಟನೆಗೆ ಸೇರಿದವರು ಎಂದು ತಿಳಿದುಬಂದಿದೆ. ದಕ್ಷ್ ಚೌಧರಿ ಇತ್ತೀಚೆಗೆ ಚುನಾವಣಾ ಪ್ರಚಾರದ ವೇಳೆ ದೆಹಲಿಯ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯಾ ಕುಮಾರ್‌ಗೆ ಕೆನ್ನೆಗೆ ಹೊಡೆದಿದ್ದ ಆರೋಪಿಯಾಗಿದ್ದಾನೆ.

ಅಲ್ಲದೆ, ಮುಸ್ಲಿಂ ವಸ್ತ್ರ ಧರಿಸಿ ಹಿಂದುಗಳನ್ನು ನಿಂದಿಸುವ ವಿಡಿಯೋವನ್ನು ಇನ್ಸ್‌ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ಧೀರೇಂದ್ರ ರಾಘವ್ ಎಂಬಾತನನ್ನು ಆಗ್ರಾದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಅಯೋಧ್ಯೆ ಜನರ ವಿರುದ್ಧ ನಡೆಯುತ್ತಿರುವ ದ್ವೇಷದ ಅಭಿಯಾನವನ್ನು ಎಸ್‌ಪಿ ನಾಯಕ, ಶಾಸಕ ಓಂ ಪ್ರಕಾಶ್ ಸಿಂಗ್ ಖಂಡಿಸಿದ್ದಾರೆ. ಇಂತಹ ಪೋಸ್ಟ್‌ಗಳ ದಾಳಿಯು ಜಿಲ್ಲೆಯಲ್ಲಿ ಸಾಮಾಜಿಕ ಉದ್ವಿಗ್ನತೆಯನ್ನು ಸೃಷ್ಠಿಸುತ್ತವೆ ಎಂದಿದ್ದಾರೆ. ಬಿಜೆಪಿ ನಾಯಕಿ ಲಕ್ಷ್ಮಿ ಸಿಂಗ್ ಕೂಡ ಅಭಿಯಾನವನ್ನು ಖಂಡಿಸಿದ್ದು, ‘ಜನರು ತಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕಾರಣಕ್ಕಾಗಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿಲ್ಲ. ಅದು ಅವರ ಆಯ್ಕೆ. ಆ ಕಾರಣಕ್ಕಾಗಿ ಜನರನ್ನು ನಿಂದಿಸುವುದು ನ್ಯಾಯೋಚಿತವಲ್ಲ’ ಎಂದಿದ್ದಾರೆ.

ರಾಮಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ಅಯೋಧ್ಯೆಯ ಜನರನ್ನು ನಿಂದಿಸುವವರು ತಮ್ಮ ‘ಮೂರ್ಖತನ’ ಪ್ರದರ್ಶಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಯಾರು ಜನರನ್ನು ನಿಂದಿಸುತ್ತಿದ್ದಾರೆಯೋ ಅವರಿಗೆ ರಾಮನ ಭಕ್ತಿ ಅರ್ಥವಾಗುವುದಿಲ್ಲ. ಅವರು ರಾಮನನ್ನು ಕೇವಲ ಚುನಾವಣಾ ವಿಷಯವಾಗಿ ನೋಡುತ್ತಿದ್ದಾರೆ. ಇಂತಹ ಜನರು ಹೇಯ ಮನಸ್ಥಿತಿ ಉಳ್ಳವರು’ ಎಂದು ದಾಸ್ ಹೇಳಿದ್ದಾರೆ.

ಈ ವರದಿ ಓದಿದ್ದೀರಾ?: ಅಯೋಧ್ಯೆಯ ಜನರ ಅಳಲು ಮತ್ತು ಅಚ್ಚರಿಗೊಳಿಸದ ಚುನಾವಣಾ ಫಲಿತಾಂಶ

1992ರಿಂದಲೂ ಹಿಂದಿನ ತಾತ್ಕಾಲಿಕ ದೇವಾಲಯದಲ್ಲಿ ರಾಮನಿಗೆ ಪೂಜಾಕಾರ್ಯ ನಿರ್ವಹಿಸುತ್ತಿದ್ದ ಅರ್ಚಕರು, ರಾಮನನ್ನು ಚುನಾವಣಾ ವಿಷಯಕ್ಕೆ ಎಳೆಯುವುದು ತಪ್ಪು ಎಂದು ಹೇಳಿದ್ದಾರೆ. ‘ರಾಮನದು ನಂಬಿಕೆಯ ವಿಷಯವಾಗಿದೆ. ರಾಜಕೀಯದಲ್ಲಿ ಸೋಲು-ಗೆಲುವು ಇದ್ದೇ ಇರುತ್ತದೆ. ಆಟದ ಭಾಗವಾಗಿದೆ. ಸೋಲು-ಗೆಲುವಿನ ಸ್ಪರ್ಧೆಯನ್ನು ನಿರಂತರ ನಂಬಿಕೆಯ ವಿಷಯಗಳೊಂದಿಗೆ ಬೆರೆಸಬಾರದು. ರಾಮ ಎಲ್ಲರಿಗೂ ಸೇರಿದವನು’ ಎಂದು ಅವರು ಒತ್ತಿ ಹೇಳಿದರು.

ಅಂದಹಾಗೆ, ರಾಮಮಂದಿರ ಮತ್ತು ಅಯೋಧ್ಯೆ ಅಭಿವೃದ್ಧಿ ಹೆಸರಿನಲ್ಲಿ ನೂರಾರು ಜನರನ್ನು ತಮ್ಮ ಮನೆಗಳಿಗೆ ಒಕ್ಕಲೆಬ್ಬಿಸಲಾಗಿದೆ. ಅವರ ಮನೆಗಳು, ಜಮೀನುಗಳನ್ನು ಕಸಿದುಕೊಳ್ಳಲಾಗಿದೆ. ಸಾವಿರಾರು ಜನರು ಶೆಡ್‌ಗಳು, ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಪುನರ್ವಸತಿಯನ್ನೂ ಕಲ್ಪಿಸಲಾಗಿಲ್ಲ. ಪರಿಹಾರವನ್ನೂ ನೀಡಲಾಗಿಲ್ಲ. ಅನೇಕ ಜನರು ಮನೆ, ಜಮೀನು, ದುಡಿಮೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಅವರೆಲ್ಲರೂ, ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಅವರಾರಿಗೂ ಈವರೆಗೆ ಪರಿಹಾರ ದೊರೆತಿಲ್ಲ. ನ್ಯಾಯ ಸಿಕ್ಕಿಲ್ಲ. ರಾಮಮಂದಿರ ದೇಶದ ಜನರಿಗೆ ಸ್ವರ್ಗದಂತೆ ಕಂಡರೂ, ಅಲ್ಲಿನ ಜನರಿಗೆ ಅಯೋಧ್ಯೆ ರಾಮ ರಾಜ್ಯವಾಗಿಲ್ಲ. ನಿರುದ್ಯೋಗ, ಬಡತನ, ನಿರಾಶ್ರಿತ ಸ್ಥಿತಿಯಲ್ಲಿ ಬಳಲುತ್ತಿರುವ ಜನರು ರಾಮಮಂದಿರದಿಂದ ಖುಷಿಯಾಗಿಲ್ಲ. ಬಿಜೆಪಿ ಬಗ್ಗೆ ಒಲವನ್ನೂ ಹೊಂದಿಲ್ಲ. ಹೀಗಾಗಿಯೇ, ಬಿಜೆಪಿ ಸೋತಿದೆ, ಅಷ್ಟೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾಂಗ್ರೆಸ್ ಕಚೇರಿಯಲ್ಲಿ ಅಕಾಡೆಮಿ ಅಧ್ಯಕ್ಷರು ವರದಿ ಒಪ್ಪಿಸುವುದು – ಅರ್ವೆಲ್ ಮಾತನ್ನು ನೆನಪಿಸುತ್ತದೆ

'ದ್ವಂದಾಲೋಚನೆ ಎಂದರೆ ಏಕಕಾಲದಲ್ಲಿ ಮನಸ್ಸಿನಲ್ಲಿ ಎರಡು ತದ್ವಿರುದ್ಧ ನಂಬಿಕೆಗಳನ್ನು ಇಟ್ಟುಕೊಳ್ಳುವುದು ಮತ್ತು...

ಬಹುತ್ವದ ಪರವಾಗಿ ಇರುವವರನ್ನು ನಾವು ಸದಾ ಸ್ಮರಿಸುತ್ತಿರಬೇಕು: ಸಿಎಂ ಸಿದ್ದರಾಮಯ್ಯ

"ಅಂತರ್ಜಾತಿ, ಅಂತರ್ ಧರ್ಮೀಯ ಮದುವೆಗಳಿಂದ ಜಾತಿ ವ್ಯವಸ್ಥೆ ಅಳಿಸಲು ಸಾಧ್ಯ" ಎಂದು...

ಅಡುಗೆಮನೆಯಲ್ಲಿ ಪುರುಷ, ಫುಟ್‌ಬಾಲ್ ಮೈದಾನದಲ್ಲಿ ಬಾಲಕಿ; ಪಿತೃಪ್ರಭುತ್ವವನ್ನು ಛಿದ್ರಗೊಳಿಸುವ ಕೇರಳದ ಶಾಲಾ ಪಠ್ಯಗಳು

ಒಬ್ಬ ಪುರುಷ ಅಡುಗೆಮನೆಯಲ್ಲಿ ತೆಂಗಿನಕಾಯಿ ತುರಿಯುತ್ತಾನೆ. ಆತನ ಪತ್ನಿ ಅಡುಗೆ ಮಾಡುತ್ತಾರೆ....

ಲೋಕಸಭೆ ಸ್ಪೀಕರ್ ಚುನಾವಣೆ| ಟಿಡಿಪಿ ಸ್ಪರ್ಧಿಸಿದರೆ ‘ಇಂಡಿಯಾ’ ಒಕ್ಕೂಟ ಬೆಂಬಲಿಸುತ್ತೆ: ಸಂಜಯ್ ರಾವತ್

ಲೋಕಸಭೆ ಸ್ಪೀಕರ್ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಆಡಳಿತಾರೂಢ ಮಿತ್ರ ಪಕ್ಷವಾದ ತೆಲುಗು...