“ನನ್ನ ಮಗಳನ್ನು ಕೊಲೆ ಮಾಡಿರುವ ಅಪ್ರಾಪ್ತನಿಗೆ ಶಿಕ್ಷೆ ಕೊಡಿಸುವ ಮೂಲಕ ಬಾಲನ್ಯಾಯ ಕಾಯ್ದೆ ತಿದ್ದುಪಡಿಯಾಗಬೇಕು” ಎಂದು ಇತ್ತೀಚೆಗೆ ಕೊಲೆಗೀಡಾದ ವಿದ್ಯಾರ್ಥಿನಿ ಪ್ರಬುದ್ಧಳ ತಾಯಿ ಸೌಮ್ಯ ಕೆ ಆರ್ ಒತ್ತಾಯಿಸಿದರು.
ಬುಧವಾರ ಫ್ರೀಡಂ ಪಾರ್ಕಿನಲ್ಲಿ ಹೆಣ್ಣುಮಕ್ಕಳ ಕೊಲೆಗಳ ವಿರುದ್ಧ ಪ್ರಗತಿಪರ ಸಂಘಟನೆಗಳು ಆಯೋಜಿಸಿದ್ದ ಹಕ್ಕೊತ್ತಾಯ ಸಭೆಯಲ್ಲಿ ಅವರು ಭಾವುಕರಾಗಿ ಮಾತನಾಡಿದರು.
“ನನಗೆ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಕಾನೂನಿನ ಲೋಪದೋಷದಿಂದಾಗಿ ಇಂದು ನಾನು ಕಾನೂನು ಹೋರಾಟ ಮಾಡುವಂತಾಗಿದೆ. ಕೊಲೆಗಾರನನ್ನು ಕೊಲೆಗಾರ ಎನ್ನುವಂತೆ ಇಲ್ಲ. ಕೊಲೆಗಾರನ ಕುಟುಂಬದವರ ಹೆಸರೆತ್ತುವಂತಿಲ್ಲ. ಬಾಲಕ, ಅಪ್ರಾಪ್ತ ಎಂಬುದು ನಂಬರ್ ಅಷ್ಟೇ. ಆತನಿಗೆ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸುವ ಮನಸ್ಥಿತಿಯಿದೆ ಎಂಬುದನ್ನು ನೋಡಿದರೆ ಆತ ದೊಡ್ಡವರು ಮಾಡುವ ಅಪರಾಧ ಮಾಡಿದ್ದಾನೆ. ಆತನಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆ ಆಗಬೇಕು. ತಪ್ಪಿಸಿಕೊಳ್ಳಲು ಅವಕಾಶ ನೀಡಬಾರದು” ಎಂದು ಒತ್ತಾಯಿಸಿದರು.
“ಮಗಳ ಸಾವಿನ ನೋವು ಒಂದು ಕಡೆ, ಮತ್ತೊಂದು ಕಡೆ ಮಗಳ ಕೊಲೆಗಾರನಿಗೆ ಶಿಕ್ಷೆ ಕೊಡಿಸಲಾರದೇ ಒದ್ದಾಡುತ್ತಿದ್ದೇನೆ. ಅಪ್ರಾಪ್ತರು ಅಪಘಾತ ಮಾಡಿದಾಗ ಪೋಷಕರನ್ನು ಬಂಧಿಸುತ್ತಾರೆ. ನನ್ನ ಮಗಳನ್ನು ಕೊಲೆ ಮಾಡಿದವನಿಗೆ ಹತ್ತೇ ದಿನದಲ್ಲಿ ಜಾಮೀನು ಕೊಟ್ಟಿದ್ದಾರೆ. ಹಾಗಿದ್ದರೆ ಸಮಾಜಕ್ಕೆ ಯಾವ ಸಂದೇಶ ಕೊಟ್ಟಿದ್ದೇವೆ. ಆರೋಪಿಯ ಹಿಂದೆ ಯಾರಿದ್ದಾರೆ ಎಂದು ಪೊಲೀಸರು ತನಿಖೆ ಮಾಡಬೇಕು. ಕಳ್ಳತನ ಮಾಡಿದ್ದನ್ನು ಪೋಷಕರಿಗೆ ತಿಳಿಸುತ್ತೇನೆ ಎಂದ ಮಾತ್ರಕ್ಕೆ ಕೊಂದುಬಿಡುವುದಾ? ಹಾಗಿದ್ದರೆ, ಆ ಬಾಲಕನ ಪೋಷಕರು ಎಂತಹ ಸಂಸ್ಕಾರ ಕೊಟ್ಟಿದ್ದಾರೆ? ” ಎಂದು ಪ್ರಶ್ನಿಸಿದರು.
ಜ್ಯುವಿನಲ್ ಜಸ್ಟಿಸ್ ಕಾಯ್ದೆ (J J Act) ಪ್ರಕಾರ ಅಪ್ರಾಪ್ತ ಅಪರಾಧಿಗಳನ್ನು ಬಂಧಿಸಬಾರದು, ಶಿಕ್ಷಿಸಬಾರದು. ಆದಿವಾಸಿ ಮಕ್ಕಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಕಾಯ್ದೆಯಲ್ಲಿ ಕೆಲವು ತಿದ್ದುಪಡಿ ಮಾಡಲಾಗಿದೆ. ಆದರೆ, ಇದರಿಂದ ಸಮಾಜಕ್ಕೆ ಯಾವ ಸಂದೇಶ ಹೋಗುತ್ತದೆ? ಬಾಲಕರು ಕೊಲೆ, ಅತ್ಯಾಚಾರ ಏನೇ ಆದರೂ ಮಾಡಬಹುದಾ? ಇದರಿಂದ ಪ್ರೇರಣೆಯಾಗಿ ಹದಿನಾರು ವರ್ಷದೊಳಗಿನ ಬಾಲಕರಿಂದ ಕೊಲೆ ಮಾಡಿಸಬಹುದು. ನನ್ನ ಮಗಳ ಕೊಲೆಗಾರನಿಗೆ ಶಿಕ್ಷೆ ಆಗಲೇ ಬೇಕು. ಯಾವುದೇ ಕಾರಣದಿಂದ ಬಿಡುವ ಹಾಗಿಲ್ಲ. ಆ ಮೂಲಕವೇ ಕಾನೂನು ತಿದ್ದುಪಡಿಯಾಗಬೇಕು. ಅದಕ್ಕಾಗಿ ಹೋರಾಟ ಮಾಡೋಣ” ಎಂದು ಸೌಮ್ಯ ಒತ್ತಾಯಿಸಿದರು.
